ಹುಬ್ಬಳ್ಳಿ: ಕೋಮು ಸಾಮರಸ್ಯದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸರ್ವಧರ್ಮೀಯರೆಲ್ಲ ಒಂದಾಗಿ 11 ದಿನಗಳ ಗಣಪನ ಹಬ್ಬ ಆಚರಣೆಗೆ ಅದ್ದೂರಿ ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದ ವಿವಿಧೆಡೆ ಮೂರ್ತಿ ಕಲಾವಿದರು ತಯಾರಿಸಿದ ಗಣೇಶಮೂರ್ತಿಯನ್ನು ತಂದು ಪೆಂಡಾಲ್‌ಗಳಲ್ಲಿ, ಮನೆಗಳಲ್ಲಿ ಪ್ರತಿಷ್ಠಾಪಿಸಲು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡರು.
ಹುಬ್ಬಳ್ಳಿ ವಾಣಿಜ್ಯ ವ್ಯವಹಾರಗಳಿಗೆ ಎಷ್ಟು ಪ್ರಸಿದ್ಧಿಯೋ, ವಿಭಿನ್ನ ರೂಪಗಳ, ಆಕರ್ಷಕ ಗಣೇಶಮೂರ್ತಿಗಳ ಪ್ರತಿಷ್ಠಾಪನೆಗೂ ಅಷ್ಟೇ ಪ್ರಖ್ಯಾತಿ. ರಾಮ, ಕೃಷ್ಣ, ಹನುಮ, ಶಿವ ಹಾಗೂ ಕೃಷ್ಣನ ದಶಾವತಾರಗಳ ಗಣೇಶಮೂರ್ತಿಯನ್ನು ತಯಾರಿಸಿ ಭಕ್ತರನ್ನು ಸೆಳೆಯಲಾಗುತ್ತದೆ. ಪೆಂಡಾಲ್‌ಗಳಲ್ಲಿ ವೈವಿಧ್ಯಮಯ ರೂಪಕಗಳನ್ನು ಮಾಡಿ ಹಬ್ಬಕ್ಕೆ ಮೆರಗು ಹಚ್ಚಲಾಗುತ್ತದೆ.
ಭರ್ಜರಿ ಖರೀದಿ: ಹಬ್ಬದ ಸಂಭ್ರಮ ಜನರಲ್ಲಿ ಮನೆಮಾಡಿದ್ದು, ನಗರದ ದುರ್ಗದ ಬೈಲ್, ಜನತಾ ಬಜಾರ್, ಕೇಶ್ವಾಪುರ, ಹಳೇಹುಬ್ಬಳ್ಳಿ, ಗೋಕುಲ ರಸ್ತೆ, ಉಣಕಲ್ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ಸಂಜೆಯಾಗುತ್ತಿದ್ದಂತೆ ಮಾರುಕಟ್ಟೆ ಪ್ರದೇಶ ಗ್ರಾಹಕರಿಂದ ತುಂಬಿ, ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿ ಜೋರಾಗಿ ನಡೆಯಿತು.
ಸಾಮಾನ್ಯ ದಿನಗಳಲ್ಲಿ ಕೆ.ಜಿ.ಗೆ ₹ 80ರಿಂದ ₹100 ಇರುತ್ತಿದ್ದ ಗುಲಾಬಿ ಹೂಗಳ ಬೆಲೆ ಹಬ್ಬದ ಕಾರಣಕ್ಕೆ ₹ 200 ಗಡಿ ದಾಟಿತ್ತು. ಸೇವಂತಿ ಮತ್ತು ಮಲ್ಲಿಗೆ ಹೂ ಮಾರಿಗೆ ತಲಾ ₹100, ₹80ರಂತೆ ಮಾರಾಟವಾದವು. ಮಾವಿನ ತಳಿರು ಜೋಡಿಗೆ ₹10, ಬಾಳೆಕಂಬ ಜೋಡಿಗೆ ₹80–₹100, ಗರಿಕೆ–ಬಿಲ್ವಪತ್ರೆ–ತುಳಸಿ ಒಂದು ಕಟ್ಟಿಗೆ ₹20 ನಿಗದಿ ಪಡಿಲಾಗಿತ್ತು. ಸೇಬು, ದಾಳಿಂಬೆ, ಸೀತಾಫಲ, ಚಿಕ್ಕು, ಮೋಸುಂಬಿ ಪ್ರತಿ ಕೆ.ಜಿ.ಗೆ ₹150 ರಿಂದ ₹200ಕ್ಕೆ ಮಾರಾಟವಾಯಿತು.
ಗಣಪನಮೂರ್ತಿ ಮುಂದೆ ಕಟ್ಟುವ ಫಲಾವಳಿ ಸಾಮಗ್ರಿಗಳಾದ ಗಂಗೆ ಮುತ್ತು, ಅಡಿಕೆ ಹಾಗೂ ಹಣ್ಣು–ತರಕಾರಿಗಳ ಖರೀದಿಯೂ ಜೋರಾಗಿತ್ತು. ಪೂಜಾ ಸಾಮಗ್ರಿಗಳ ಅಂಗಡಿ ಎದುರು ಜನರು ಮುಗಿಬಿದ್ದಿದ್ದರು. ನೈವೇದ್ಯಕ್ಕಾಗಿ ಐದು ಬಗೆಯ ಹಣ್ಣುಗಳು ಮತ್ತು ಮೋದಕ ಸೇರಿ ಐದು ಬಗೆಯ ಸಿಹಿ ತಿನಿಸುಗಳನ್ನು ಖರೀದಿಸಿದರು. ವೈವಿಧ್ಯಮಯ ಅಲಂಕಾರಿಕ ಸಾಮಗ್ರಿಗಳು, ಬಗೆಬಗೆಯ ಬಣ್ಣದ ವಿದ್ಯುತ್ ದೀಪಗಳು ಭರ್ಜರಿಯಾಗಿ ಮಾರಾಟವಾದವು. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿಗಳ ಖರೀದಿಯೂ ಹೆಚ್ಚಾಗಿತ್ತು.
ಪ್ರತಿವರ್ಷದ ಆಕರ್ಷಕ ಕೇಂದ್ರ ಬಿಂದುವಾದ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 23 ಅಡಿ ಎತ್ತರದ ದಾಜೀಬಾನ್ ಪೇಟೆಯ ‘ಹುಬ್ಬಳ್ಳಿ ಕಾ ರಾಜಾ’ ಮತ್ತು ಮರಾಠಗಲ್ಲಿಯ ‘ಹುಬ್ಬಳ್ಳಿ ಕಾ ಮಹಾರಾಜ’ ಗಣಪನ ದರ್ಶನಕ್ಕೆ ಭಕ್ತರಲ್ಲಿ ಕಾತುರ ಹೆಚ್ಚಾಗಿದೆ. ಎಂ.ಜಿ. ಮಾರುಕಟ್ಟೆ, ಕೋಯಿನ್ ರಸ್ತೆ, ಸ್ಟೇಷನ್ ರಸ್ತೆಗಳಲ್ಲೂ 15 ಅಡಿಯಿಂದ 20 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪೆಂಡಾಲ್ ಹಾಕಿ ಗಣೇಶನ ಸ್ವಾಗತಕ್ಕೆ ಸಿದ್ಧತೆ ನಡೆಸಿವೆ. ಮೇದಾರ ಓಣಿಯ 18 ಅಡಿ ಎತ್ತರದ ಗಣೇಶಮೂರ್ತಿಯನ್ನು ಮರಾಠಗಲ್ಲಿಯಿಂದ ಶುಕ್ರವಾರ ಸಂಜೆಯೇ ಬೃಹತ್ ಮೆರವಣಿಗೆ ಮೂಲಕ ತರಲಾಯಿತು.
ಹಾಲುಗಂಬ ಪೂಜೆ: ಈದ್ಗಾ ಮೈದಾನದಲ್ಲಿ ಮೂರುದಿನ ಗಣೇಶೋತ್ಸವಕ್ಕೆ ಅನುಮತಿ ಪಡೆದಿರುವ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಶುಕ್ರವಾರ, ಹಾಲುಗಂಬ ಪೂಜೆ ನಡೆಸಿ ಪೆಂಡಾಲ್ ನಿರ್ಮಾಣಕ್ಕೆ ಚಾಲನೆ ನೀಡಿತು. ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಮಹಾಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೌರಿ ಪೂಜೆ ಸಂಭ್ರಮ: ಶುಕ್ರವಾರ ನಗರದ ವಿವಿಧೆಡೆ ಗೌರಿಪೂಜೆ ಸಂಭ್ರಮ–ಸಡಗರದಿಂದ ನಡೆಯಿತು. ಮಹಿಳೆಯರು ಮನೆಯಲ್ಲಿ ಗೌರಿ ಮೂರ್ತಿಗೆ ಅಲಂಕಾರ ಮಾಡಿ, ಕಡುಬಿನ ಹಾರ, ಕರ್ಚಿಕಾಯಿ–ಚಕ್ಕಲಿ ಹಾರ ಮಾಡಿ ಅಲಂಕರಿಸಿದ್ದರು.
‘ಚೌತಿಗೆ ಒಂದು ದಿನ ಮೊದಲು ಗೌರಿ ಹಬ್ಬ ಆಚರಿಸುತ್ತೇವೆ. ಚತುರ್ಥಿಯಂದು ಗೌರಿಯನ್ನು ಹೊರಗಡೆ ಕಳುಹಿಸಿ, ಗಣಪನ ಮೂರ್ತಿಯನ್ನು ಒಳಗೆ ತಂದು ಪೂಜಿಸುವ ಸಂಪ್ರದಾಯ. ಕೆಲವರು, ಗೌರಿ ಕಳಿಸದೆ ಪಕ್ಕವೇ ಗಣೇಶಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ’ ಎಂದು ವೀರಾಪುರ ಓಣಿಯ ಶಾಂತಲಾ ಕಣವಿ ಹೇಳಿದರು.
ಕಮಿಷನರ್ ಪರಿಶೀಲನೆ: ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿ– ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ನಗರದಲ್ಲಿ ಹಾಕಿರುವ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪೆಂಡಾಲ್‌ಗಳನ್ನು ಪರಿಶೀಲಿಸಿದರು. ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನೆಹರೂ ಮೈದಾನದಲ್ಲಿ ಪಟಾಕಿ ಮಳಿಗೆ: ಗೌರಿ ಗಣೇಶ ಹಬ್ಬದ ಪ್ರಯುಕ್ತ ಪರವಾನಗಿ ಪಡೆದ ಸಿಡಿಮದ್ದು ವ್ಯಾಪಾರಸ್ಥರಿಗೆ ಪಟಾಕಿಗಳನ್ನು ಮಾರಾಟ ಮಾಡಲು ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ನಗರದ ನೆಹರೂ ಮೈದಾನದಲ್ಲಿ ಅವಕಾಶ ಕಲ್ಪಿಸಿದೆ. ಐದು ದಿನಗಳವರೆಗೆ ವ್ಯಾಪಾರಕ್ಕೆ ತಾತ್ಕಾಲಿಕ ಅನುಮತಿ ನೀಡಿದ್ದು, ಶುಕ್ರವಾರದಿಂದಲೇ ವ್ಯಾಪಾರ ಆರಂಭವಾಗಿದೆ.
ಟ್ರಾಫಿಕ್ ನಿರ್ವಹಣೆಗೆ ಬೆಂಗಳೂರು ಪೊಲೀಸರು!
ಅವಳಿನಗರದಲ್ಲಿ ಗಣೇಶಮೂರ್ತಿ ವಿಸರ್ಜನೆ ಸಂದರ್ಭ ಉಂಟಾಗುವ ವಾಹನಗಳ ಸಂಚಾರ ದಟ್ಟಣೆ ನಿರ್ವಹಣೆಗೆ ಬೆಂಗಳೂರು ನಗರ ಸಂಚಾರ ವಿಭಾಗದ 50 ಪೊಲೀಸ್ ಸಿಬ್ಬಂದಿ ನಗರಕ್ಕೆ ಆಗಮಿಸಲಿದ್ದಾರೆ. ಅವರಲ್ಲಿ ಒಬ್ಬರು ಇನ್‌ಸ್ಪೆಕ್ಟರ್ ಇಬ್ಬರು ಎಎಸ್‌ಐ ಇರಲಿದ್ದಾರೆ. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಭದ್ರತೆಗೆ ನಗರದಾದ್ಯಂತ 805 ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜೊತೆಗೆ 500 ಗೃಹರಕ್ಷಕ ಸಿಬ್ಬಂದಿಯೂ ಇರಲಿದ್ದಾರೆ. ಈದ್ಗಾ ಮೈದಾನ ಸೇರಿ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆಯಾ ಠಾಣಾ ಇನ್‌ಸ್ಪೆಕ್ಟರ್‌ಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈವಿಧ್ಯಮಯ ರೂಪಕ ಗಣೇಶ ಮಾದರಿ
ನಗರದ ದುರ್ಗದ ಬೈಲ್‌ನಲ್ಲಿ ಅಯೋಧ್ಯೆಯ ರಾಮ ಮಂದಿರದ ಮಾದರಿ ಪೆಂಡಾಲ್ ಸಿದ್ಧವಾಗಿದ್ದು ಅಯೋಧ್ಯಾ ರಾಮನ ಮೂರ್ತಿಯ ರೂಪದ ಗಣೇಶಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಸ್ಟೇಷನ್ ರಸ್ತೆಯಲ್ಲಿ ಮಾರಿಕಾಂಬಾ ಗುಡಿ ಮಾದರಿಯಲ್ಲಿ ಪೆಂಡಾಲ್ ನಿರ್ಮಿಸಿ ಮಾರಿಕಾಂಬಾ ದೇವಿಯ ಚರಿತ್ರೆ ಸಾರುವ ರೂಪಕ ಪ್ರಸ್ತುತ ಪಡಿಸಲು ತಯಾರಿ ನಡೆದಿದೆ. ಶೀಲವಂತರ ಓಣಿಯ ಶ್ರೀ ವರಸಿದ್ದಿ ವಿನಾಯಕ ಮಂಡಳ ಸದ್ಗುರು ಬಾಲ ಸಿದ್ಧಾರೂಢಸ್ವಾಮಿ ಮಹಿಮೆ ಸಾರುವ ಮೂರು ನಿಮಿಷದ ರೂಪಕ ಪ್ರಸ್ತುತಪಡಿಸಲು ತಯಾರಿ ನಡೆದಿದೆ. ಅಲ್ಲಿ 50 ಕೆ.ಜಿ. ಬೆಳ್ಳಿ ಗಣೇಶಮೂರ್ತಿಗೆ 1.25 ಕೆ.ಜಿ. ಚಿನ್ನಾಭರಣ ಧಾರಣೆ ಮಾಡಲು ಯೋಜಿಸಲಾಗಿದೆ. ಸರಾಫ್ ಗಟ್ಟಿ ಗಣೇಶೋತ್ಸವ ಮಂಡಳಿಯಿಂದ 121 ಕೆ.ಜಿ. ಬೆಳ್ಳಿ ಗಣಪ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.