ಗುರುವಾರ , ಏಪ್ರಿಲ್ 22, 2021
25 °C
ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ

ಭಕ್ತರಿಂದ ಉತ್ತಮ ಪ್ರತಿಕ್ರಿಯೆ: ಮಿಲಿಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ನಡೆಯುತ್ತಿರುವ ನಿಧಿ ಸಮರ್ಪಣಾ ಅಭಿಯಾನಕ್ಕೆ ರಾಮಭಕ್ತರಿಂದ ಅಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ಕೇಂದ್ರೀಯ ಕಾರ್ಯದರ್ಶಿ ಮಿಲಿಂದ್‌ ಪರಾಂಡೆ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಮ ಮಂದಿರವನ್ನು ಸಂಪೂರ್ಣವಾಗಿ ರಾಮನ ಭಕ್ತರಿಂದಲೇ ನಿರ್ಮಿಸಲಾಗುವುದು. ಸರ್ಕಾರದಿಂದ ನಯಾ ಪೈಸೆಯೂ ಪಡೆಯುವುದಿಲ್ಲ. ಜ. 15ರಂದು ನಿಧಿ ಸಂಗ್ರಹ ಅಭಿಯಾನ ಆರಂಭವಾಗಿದ್ದು, ವಿಎಚ್‌ಪಿ ಕಾರ್ಯಕರ್ತರು ದೇಶದಾದ್ಯಂತ ಐದು ಲಕ್ಷ ಹಳ್ಳಿಗಳ 13.5 ಕೋಟಿ ಹಿಂದೂಗಳ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಕರ್ನಾಟಕದಲ್ಲಿ 29 ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ’ ಎಂದರು.

‘ವಿಎಚ್‌ಪಿ ಕಾರ್ಯಕರ್ತರು ನಿಧಿ ಸಂಗ್ರಹಕ್ಕಾಗಿ ಹಿಂದೂಗಳ ಮನೆಗಳಿಗಷ್ಟೇ ಹೋಗುತ್ತಿದ್ದಾರೆ. ಬೇರೆ ಸಮುದಾಯದವರು ಆನ್‌ಲೈನ್‌ ಮೂಲಕ ಪಾವತಿಸಬಹುದು; ಅಥವಾ ಅವರೇ ವಿಎಚ್‌ಪಿಯವರನ್ನು ಸಂಪರ್ಕಿಸಿ ಹಣ ನೀಡಬಹುದು. ಭಾರತದಲ್ಲಿ ಶೇ 80ರಷ್ಟು ಹಿಂದೂಗಳಿದ್ದಾರೆ. ಇದರಿಂದ ನಮಗೆ ಸಾಕಷ್ಟು ನಿಧಿ ಸಂಗ್ರಹವಾಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ರಾಮ ಮಂದಿರ ಧಾರ್ಮಿಕ ಸಂಕೇತವಷ್ಟೇ ಅಲ್ಲ; ಭಾರತದ ಸಂಸ್ಕೃತಿಯ ಪ್ರತಿಬಿಂಬ. ಆದ್ದರಿಂದ ಪ್ರತಿಯೊಬ್ಬ ಹಿಂದೂ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಬೇಕು’ ಎಂದು ಕೋರಿದರು.

ವಿಎಚ್‌ಪಿ ಪ್ರಮುಖರಾದ ಸಂಜೀವ ಬಾಡಸ್ಕರ್‌, ಡಾ. ಎಸ್‌.ಆರ್‌. ರಾಮನಗೌಡರ, ಕೇಶವ ಹೆಗಡೆ, ಮನೋಹರ ಮಠದ, ಗೋವರ್ಧನ ರಾವ್, ವಿನಾಯಕ ತಳಕೇರಿ ಪಾಲ್ಗೊಂಡಿದ್ದರು.

ನಿಧಿ ಸಂಗ್ರಹ: ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ವಿಎಚ್‌ಪಿ ಕಾರ್ಯಕರ್ತರಿಂದ ನಿಧಿ ಸಂಗ್ರಹಣಾ ಅಭಿಯಾನ ನಡೆಯಿತು.

ಮಿಲಿಂದ್‌ ಅವರು ಉಣಕಲ್‌ನ ಪಾಟಿದಾರ ಸಭಾಭವನ, ಸಾಯಿನಗರ ಹೀಗೆ ವಿವಿಧೆಡೆ ಸಭೆಗಳನ್ನು ನಡೆಸಿ ನಿಧಿ ಸಂಗ್ರಹಕ್ಕೆ ನೆರವಾಗಬೇಕು ಎಂದು ಕೋರಿದರು.

ವಾರ್ಡ್ ಸಂಖ್ಯೆ 47ರಲ್ಲಿ ಬಿಜೆಪಿ ಮುಖಂಡರು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು. ಮಲ್ಲಿಕಾರ್ಜುನ ಸಾವುಕಾರ್, ಸೆಂಟ್ರಲ್ ಕ್ಷೇತ್ರ ಅಧ್ಯಕ್ಷ ಸಂತೋಷ ಚೌಹಾಣ್‌, ಪೊಲೀಸ್‌ ಇನ್‌ಸ್ಟೆಕ್ಟರ್‌ ಸುರೇಶ್ ಕುಂಬಾರ ಚಾಲನೆ ನೀಡಿದರು. ಪರಿಶಿಷ್ಟ ಜಾತಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಹೇಂದ್ರ ಕೌತಾಳ್, ಹನುಮಂತಪ್ಪ ಚಲವಾದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು