ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಜಿಮ್‌ ಆರಂಭಕ್ಕೆ ಅನುಮತಿ ನೀಡಲು ಒತ್ತಾಯ

ಬೀದಿಗೆ ಬೀಳುವ ಪರಿಸ್ಥಿತಿ: ಮಾಲೀಕರು, ತರಬೇತುದಾರರ ಆತಂಕ
Last Updated 26 ಜೂನ್ 2020, 7:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್ ತೆರವಾದ ಬಳಿಕ ರಾಜ್ಯಸರ್ಕಾರ ಎಲ್ಲ ಚಟುವಟಿಕೆಗಳಿಗೂ ಅನುಮತಿ ನೀಡಿದೆ. ಆದರೆ, ಮೂರು ತಿಂಗಳು ಕಳೆದರೂ ಜಿಮ್‌ಗಳನ್ನು ಆರಂಭಿಸಲು ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಇದರಿಂದ ನಾವು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ ಎಂದು ಧಾರವಾಡ ಜಿಲ್ಲಾ ಜಿಮ್‌ ಮಾಲೀಕರು, ಟ್ರೈನರ್ಸ್‌ ಮತ್ತು ಸದಸ್ಯರ ಸಂಘದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಅನಿಲಕುಮಾರ ಪಾಟೀಲ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಜಿಮ್‌ಗಳಿವೆ. ಪ್ರತಿ ಜಿಮ್‌ನಲ್ಲಿ ಸರಾಸರಿ 20 ಸಿಬ್ಬಂದಿ ಕೆಲಸ ಮಾಡುತ್ತಿದ್ದು, 400ರಿಂದ 500 ಜನ ನಿತ್ಯ ದೈಹಿಕ ಕಸರತ್ತು ಮಾಡಲು ಬರುತ್ತಾರೆ. ಲಾಕ್‌ಡೌನ್‌ ಬಳಿಕ ಜಿಮ್‌ಗಳ ಮಾಲೀಕರ ಪರಿಸ್ಥಿತಿ ಶೋಚನಿಯವಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯ ಬಳಿಕ ಸಂಘದ ಪದಾಧಿಕಾರಿಗಳು, ದೇಹದಾರ್ಢ್ಯ ಕ್ರೀಡಾಪಟುಗಳು ಮತ್ತು ವೇಟ್‌ಲಿಫ್ಟರ್‌ಗಳು ಸೇರಿ ಹುಬ್ಬಳ್ಳಿ ತಹಶೀಲ್ದಾರ್‌ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

‘ಜಿಮ್‌ಗಳನ್ನು ನಡೆಸಲು ಬಹುತೇಕ ಮಾಲೀಕರು ಸಾಲ ಮಾಡಿದ್ದಾರೆ. ಅನೇಕರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ಪ್ರತಿ ತಿಂಗಳು ಕಂತು ಪಾವತಿಸಬೇಕಾಗಿದೆ. ಮೂರು ತಿಂಗಳಿಂದ ಜಿಮ್‌ನಲ್ಲಿ ಚಟುವಟಿಕೆಗಳು ನಡೆಯದ ಕಾರಣ ಸಿಬ್ಬಂದಿಗೆ ವೇತನ ಕೊಡಲು ಕೂಡ ಸಾಧ್ಯವಾಗುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಜಿಮ್‌ನಲ್ಲಿ ಸಾಮಗ್ರಿಗಳು ತುಕ್ಕು ಹಿಡಿದು ಹೋಗುತ್ತವೆ. ಮಾಲೀಕರು ಜಿಮ್‌ ಸಲಕರಣೆಗಳನ್ನು ಮಾರಾಟ ಮಾಡಬೇಕಾಗುತ್ತದೆ’ ಎಂದು ‌ಹೇಳಿದರು.

‘ಈಗ ಎಲ್ಲೆಡೆಯೂ ಕೊರೊನಾ ಸೋಂಕು ಇರುವ ಕಾರಣ ರೋಗ ನಿರೋಧಕ ಶಕ್ತಿ ಹೆಚ್ಚು ಬೇಕಾಗುತ್ತದೆ. ಇದಕ್ಕೆ ನಿತ್ಯ ವ್ಯಾಯಾಮ, ಜಿಮ್‌ನಲ್ಲಿ ಕಸರತ್ತು ಮಾಡಬೇಕಾಗುತ್ತದೆ. ಈ ದೃಷ್ಟಿಯಿಂದಲಾದರೂ ಜಿಮ್‌ ಆರಂಭಿಸಲು ಅನುಮತಿ ಕೊಡಬೇಕು. ಸರ್ಕಾರ ಸೂಚಿಸುವ ಎಲ್ಲಾ ಷರತ್ತುಗಳನ್ನು ಪಾಲಿಸಲು ನಾವು ಸಿದ್ಧರಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT