ಶನಿವಾರ, ಏಪ್ರಿಲ್ 17, 2021
23 °C

ಮುಂಗಾರು ಮಳೆಯಹನಿಗಳ ಲೀಲೆ...

ಈರಪ್ಪ ನಾಯ್ಕರ್‌ Updated:

ಅಕ್ಷರ ಗಾತ್ರ : | |

Prajavani

ಮುಂಗಾರಿನ ಮೊದಲ ಮಳೆಯ ಆಗಮನದಿಂದ ಊರಿನ ರಂಗು ಬದಲಿಸುವ ಸೃಷ್ಟಿಯ ನಾಕ ಅದೆಷ್ಟು ಚೆಂದ. ಜೂನ್‌ ತಿಂಗಳು ಬರುತ್ತಿದ್ದಂತೆ ಮಳೆಯ ಸ್ವಾಗತ ಆಗುವುದಷ್ಟೆ ತಡ; ಊರಿನಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆಯುತ್ತದೆ.

ಓಣಿಯ ಅಂಗಳದಾಗ ಮಳೆಯಲ್ಲಿ ‘ಕಳೆ, ಮಳೆ ಕಪಾಟ ಮಳೆ'ಎಂದು ಸ್ನೇಹಿತರೊಂದಿಗೆ ಹಾಡಿ, ತಿರುಗಾಡಿ ಮನೆಗೆ ಬಂದು ಅಮ್ಮನ ಕೈಯ ಬಿಸಿ ಬಿಸಿಯಾದ ತಿಂಡಿ ತಿನಿಸುಗಳನ್ನು ತಯಾರಿಸಿಕೊಂಡು ಸವಿದ ನೆನಪುಗಳನ್ನು ಎಲ್ಲರಲ್ಲೂ ಹೊತ್ತು ತರಲಿದೆ ವರ್ಷಧಾರೆ.

ಊರಿನ ಕೆರೆಗಳು ತುಂಬಿ ಹರಿಯುತ್ತಿದ್ದರೆ ಊರಿನ ಜನರೊಂದಿಗೆ ಸೇರಿ ಕೆರೆ ಉಬ್ಬು ನೋಡಿ ಸಂಭ್ರಮಿಸಿ, ಮೀನಿಗಾಗಿ ಗಾಳ ಹಾಕಿ ದಂಡೆಯ ಮೇಲೆ ಕುಳಿತ ನೆನಪುಗಳು ಮತ್ತೆ ಮರುಕಳಿಸುತ್ತವೆ.

ಮೊದಲ ಮಳೆಯ ಹನಿಗಳು ನೆಲದ ಮೇಲೆ ಬಿದ್ದಾಗಲಂತೂ ಮೂಗಿಗೆ ಅಡರುವ ಮಣ್ಣಿನ ಘಮಲು ಅವಿಸ್ಮರಣೀಯ. ಮಳೆಯ ಹನಿಗಳು ಬಿದ್ದರೆ ಸಾಕು ಊರಿನ ಹೊಲಗಳಲ್ಲಿ ವಿರಮಿಸುವ ನವಿಲುಗಳ ದಂಡು; ಕರಿ ಕೆಂಪು ಬಣ್ಣದ ಹೊಲದಲ್ಲಿ ಬಿತ್ತಿದ ಬೀಜಗಳ ಮೊಳಕೆಯೊಡೆದು ಕಂಗೊಳಿಸುವ ಹಚ್ಚ ಹಸಿರಿನ ಸಾಲು, ಹೊಲದ ಬದುವಿನ ಮ್ಯಾಲೆ ಬೆಳೆದು ನಿಂತ ಹುಲ್ಲುಗಾವಲು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು.

ಎಲ್ಲೆಲ್ಲೂ ಹಚ್ಚ ಹಸಿರಾಗಿ ಕಾಣುವ ಗಿಡ ಮರಗಳು, ಮಳೆಯಲ್ಲಿ ಮಿಂದೇಳುವ ಹಸಿರ ಸಿರಿ ಮಿನುಗಿದಾಗ ಮುತ್ತಿನ ಹನಿಗಳಂತೆ ಕಾಣುವುದು ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ. ಬರಿದಾದ ಕೆರೆ ಕಟ್ಟೆಗಳಿಗೆ ಜೀವಕಳೆ ತುಂಬಿ ತುಳುಕುವ ನೀರು, ಕೋಡಿ ಬಿದ್ದಾಗ ಕಾಣುವ ಸೊಬಗೇ ಅದ್ಭುತ. ಊರಿನ ಹೊರವಲಯದ ಆಸುಪಾಸಿನಲ್ಲಿ ಹಕ್ಕಿಗಳ ಕಲರವ ಮೀನು ಹಿಡಿಯಲು ಹೊಂಚು ಹಾಕಿ ನಿಂತ ಬೆಳ್ಳಕ್ಕಿಯ ಹಿಂಡು, ಮಳೆಯಲ್ಲಿ ನೆನೆದು ಮೈ ಒರೆಸಿಕೊಳ್ಳುವ ಹಕ್ಕಿಗಳು, ಮುಳ್ಳಿನ ಪೊದೆಯ ಮೇಲೆ ಚಿಲಿ ಪಿಲಿ ಎಂದು ಉಲಿಯುವ ಹಕ್ಕಿಗಳು, ಗೂಡಿನಲ್ಲಿ ಅಡಗಿ ಕುಳಿತ ಮರಿಗಳಿಗೆ ಆಹಾರ ನೀಡುವ ತಾಯಿ ಹಕ್ಕಿ ನೋಡುವುದೇ ಅಂದ.

ಈ ಮಳೆಗಾಲದಲ್ಲಿ ಹಸಿರುಡುವ ಭೂರಮೆಯನ್ನು ಕಂಡಷ್ಟು ಮನತಣಿಯದು. ನಿಸರ್ಗಕ್ಕೆ ಸಂಭ್ರಮ ಎಂದರೆ ತಪ್ಪಾಗಲಾರದು. ಗುಡುಗು, ಮಿಂಚು, ಸಿಡಿಲಿನ ಆರ್ಭಟಗಳು ಧರೆಯ ಮೇಲಿನ ಜೀವಿಗಳಿಗೆ ಮಳೆಯ ಆಹ್ವಾನ ನೀಡಿದಂತೆ. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ... ಹಾಡು ಮನದಲ್ಲಿ ಹಾದು ಹೋಗದೆ ಇರದು.

ಚಿತ್ರಗಳು: ಈರಪ್ಪ ನಾಯ್ಕರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.