ಗುರುವಾರ , ಜುಲೈ 7, 2022
23 °C

ಖಾದರ್‌, ರಮೇಶ ಕುಮಾರ್‌ ವಿರುದ್ಧ ತನಿಖೆಗೆ ಹಿರೇಮಠ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಯು.ಟಿ. ಖಾದರ್‌ ಹಾಗೂ ಕೆ.ಆರ್‌. ರಮೇಶ ಕುಮಾರ್‌ ಆರೋಗ್ಯ ಸಚಿವರಾಗಿದ್ದಾಗ ಕಳಪೆ ಗುಣಮಟ್ಟದ ಔಷಧಿ ಖರೀದಿಸಲಾಗಿತ್ತು ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ಸ್ವತಂತ್ರ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಂದಿನ ಆರೋಗ್ಯ ಸಚಿವರುಗಳ ತಪ್ಪು ನಡೆಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹ 535.22 ಕೋಟಿ ನಷ್ಟವಾಗಿದೆ. 2014ರಿಂದ 2017ರ ಅವಧಿಯಲ್ಲಿ ಔಷಧಿಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲಾಗಿದೆ. ಕರ್ನಾಟಕ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿಯು 14,209 ಬ್ಯಾಚ್‌ಗಳಲ್ಲಿ 1,110 ವಿವಿಧ ನಮೂನೆಯ ಔಷಧಿಗಳನ್ನು ಖರೀದಿಸಿತ್ತು. ಇವುಗಳಲ್ಲಿ 7,433 ಬ್ಯಾಚ್‌ಗಳ ಔಷಧಿಗಳ ಗುಣಮಟ್ಟ ಪರಿಶೀಲಿಸದೇ ರೋಗಿಗಳಿಗೆ ಕೊಡಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಜನರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ’ ಎಂದು ಆರೋಪಿಸಿದರು.

‘ರಮೇಶ ಕುಮಾರ್‌ ಸ್ಪೀಕರ್‌ ಆಗಿದ್ದಾಗಲೇ ಈ ಅವ್ಯವಹಾರ ಹೊರಬಂದಿದೆ. ಸಂವಿಧಾನ ಬದ್ಧ ಹುದ್ದೆಯಲ್ಲಿದ್ದ ರಮೇಶ ಕುಮಾರ್‌ ವಿಧಾನಸಭೆಯಲ್ಲಿ ಇದರ ಬಗ್ಗೆ ಯಾಕೆ ಚರ್ಚೆ ಮಾಡಲಿಲ್ಲ; ಔಷಧಿ ಖರೀದಿ ವೇಳೆ ಇದ್ದ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು. ಔಷಧಗಳನ್ನು ಬಳಸಿರುವುದರಿಂದ ರೋಗಿಗಳ ಮೇಲೆ ಆಗಿರುವ ಪರಿಣಾಮಗಳ ಬಗ್ಗೆಯೂ ತನಿಖೆ ನಡೆಯಬೇಕು’ ಎಂದರು.

‘2013ರ ಮಾರ್ಚ್‌ 19ರಿಂದ 2014ರ ಮೇ 7ರ ಅವಧಿಯಲ್ಲಿ ರಾಜ್ಯ ಸರ್ಕಾರ ಖರೀದಿಸಿದ 398 ಆಂಬುಲೆನ್ಸ್‌ಗಳ ವ್ಯವಹಾರದಲ್ಲಿ ಅವ್ಯವಹಾರವಾಗಿದೆ. ಇದಕ್ಕೆ ಒಟ್ಟು ₹ 42.69 ಕೋಟಿ ವೆಚ್ಚವಾಗಿದ್ದು, ಇದರಲ್ಲಿ ₹ 76 ಲಕ್ಷ ಅವ್ಯವಹಾರವಾಗಿದೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು