ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣ ಗೋಡೆ ಪಕ್ಕದಲ್ಲಿ ಹಾಗೂ ಗೋಡೆಗೆ ಹೊಂದಿಕೊಂಡ ಖಾಲಿ ನಿವೇಶನಗಳಲ್ಲಿ ನಿಯಮ ಬಾಹಿರವಾಗಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಇದರಿಂದ ಪಕ್ಷಿಗಳ ಹಾರಾಟ ಹೆಚ್ಚುತ್ತಿದೆ!

ಅಪಾಯಕ್ಕೆ ಆಹ್ವಾನ ನೀಡುವ ತ್ಯಾಜ್ಯ ಸುರಿಯುವ ಈ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ, ವಾಸ್ತವದಲ್ಲಿ ಈ ಸಮಸ್ಯೆ ಸಂಪೂರ್ಣ ಪರಿಹಾರವಾಗಿಲ್ಲ.

650 ಎಕರೆಗೂ ಹೆಚ್ಚು ವಿಸ್ತಾರವಾಗಿರುವ ಇಲ್ಲಿನ ವಿಮಾನ ನಿಲ್ದಾಣಕ್ಕೆ ಸಂಪೂರ್ಣ ಆವರಣಗೋಡೆ ನಿರ್ಮಿಸಲಾಗಿದೆ. ಇದರ ಎರಡೂ ಭಾಗದಲ್ಲಿ ಜನವಸತಿ ಇರುವ ಹಲವು ಬಡಾವಣೆಗಳಿವೆ. ನಿಲ್ದಾಣದ ಮುಂಭಾಗ ಆವರಣದ ಗೋಡೆಗೆ ವಿಶಾಲವಾದ ಗೋಕುಲ ರಸ್ತೆ ಇದೆ. ತಾರಿಹಾಳ ಟೋಲ್ನಿಂದ ಉಣಕಲ್ ಕ್ರಾಸ್ ಸಂಪರ್ಕಿಸುವ ಸುಮಾರು 7 ಕಿ.ಮೀ ಉದ್ದದ ಕಚ್ಚಾರಸ್ತೆಯು ವಿಮಾನ ನಿಲ್ದಾಣದ ಇನ್ನೊಂದು ಭಾಗದ ಆವರಣ ಗೋಡೆಗೆ ಹೊಂದಿಕೊಂಡಿದೆ.

ಉಣಕಲ್ ಕ್ರಾಸ್ ಸಂಪರ್ಕಿಸುವ ಈ ರಸ್ತೆಯ ಒಂದು ಪಕ್ಕದಲ್ಲಿ ವಿಮಾನ ನಿಲ್ದಾಣದ ಗೋಡೆ ಇದ್ದರೆ ಇನ್ನೊಂದು ಭಾಗದಲ್ಲಿ ಕೃಷಿ ಜಮೀನುಗಳಿವೆ. ಜೊತೆಗೆ ಅಲ್ಲಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ವಾಹನ ಹಾಗೂ ಜನ ಸಂಚಾರ ವಿರಳವಾಗಿರುವ ಈ ಮಾರ್ಗದುದ್ದಕ್ಕೂ ಕಟ್ಟಡದ ಅವಶೇಷ ಸೇರಿದಂತೆ ಅಡುಗೆ ಮನೆ ಕಸ ತಂದು ಸುರಿಯಲಾಗುತ್ತಿದೆ. ಈ ತ್ಯಾಜ್ಯ ರಾಶಿಯ ಸುತ್ತಮುತ್ತ ಬೀದಿನಾಯಿಗಳ ಹಿಂಡು ಮುಗಿ ಬೀಳುತ್ತವೆ. ಇದೇ ತಾಣಕ್ಕೆ ಪಕ್ಷಿಗಳು ಕೂಡಾ ಆಹಾರ ಅರಸಿಕೊಂಡು ಬರುತ್ತಿವೆ.

ವಿಮಾನ ಹಾರಾಟಕ್ಕೆ ಅಪಾಯ ತಂದೊಡ್ಡುವ ಈ ಪಕ್ಷಿಗಳ ಹಾರಾಟದ ಮೇಲೆ ವಿಮಾನ ನಿಲ್ದಾಣದ ಸಿಬ್ಬಂದಿ ನಿಗಾ ಇರಿಸುತ್ತಿದ್ದಾರೆ. ಆದರೆ ಪಕ್ಷಿಗಳಿಗೆ ಆಹ್ವಾನ ನೀಡುವ ಯಾವುದೇ ತ್ಯಾಜ್ಯ ಎಸೆಯದಂತೆ ನಿರ್ಬಂಧಿಸುವುದು ಸುರಕ್ಷತೆ ದೃಷ್ಟಿಯಿಂದ ಅಗತ್ಯವಿದೆ ಎನ್ನುವುದು ವಿಮಾನ ನಿಲ್ದಾಣದ ಅಧಿಕಾರಿಗಳ ವಿವರಣೆ.

‘ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವುದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ‘ಏರೊಡ್ರೋಮ್ ಎನ್ವಿರಾನ್ಮೆಂಟಲ್ ಮ್ಯಾನೇಜಮೆಂಟ್ ಕಮಿಟಿ (ಎಇಸಿ)’ ಸಭೆ ನಡೆಸಲಾಗುತ್ತದೆ. ಈ ಹಿಂದೆ ನಡೆದ ಪ್ರತಿ ಸಭೆಯಲ್ಲೂ ತ್ಯಾಜ್ಯ ತಂದು ಸುರಿಯುವ ವಿಷಯದ ಕುರಿತು ಪ್ರಸ್ತಾಪಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡ ಜನವಸತಿಗಳಿರುವ ಕಡೆ ಸಮಸ್ಯೆ ಹೆಚ್ಚಾಗಿದೆ. ಇಂತಹ ಕಡೆ ಯಾವುದೇ ತ್ಯಾಜ್ಯ ಬೀಳದಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ’ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ್ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

ಎಇಎಂಸಿ ಸಭೆ ನಡೆಸಲು ಸಮಯ ನೀಡುವಂತೆ ಜಿಲ್ಲಾಧಿಕಾರಿ ಅವರನ್ನು ಕೋರಲಾಗಿದೆ. ತ್ಯಾಜ್ಯ ಸುರಿಯುತ್ತಿರುವ ವಿಷಯ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಗುವುದು
ರೂಪೇಶಕುಮಾರ್ ಹುಬ್ಬಳ್ಳಿ, ವಿಮಾನ ನಿಲ್ದಾಣದ ನಿರ್ದೇಶಕ

ಗೋಕುಲದ ಚಿಕ್ಕೇರಿ ಪಕ್ಕದಲ್ಲಿ ಕಟ್ಟಡದ ತ್ಯಾಜ್ಯ ಸುರಿಯುವುದನ್ನು ನಿಷೇಧಿಸಬೇಕು. ಕೆರೆ ಅಭಿವೃದ್ಧಿ ಮಾಡಿದರೆ ಎಲ್ಲ ರೀತಿಯ ಅಪಾಯಗಳನ್ನು ತಪ್ಪಿಸಬಹುದು
ಕಲ್ಲಪ್ಪ ಅರಳಿಕಟ್ಟಿ ಗೋಕುಲ ನಿವಾಸಿ

ಈ ಹಿಂದೆ ಗೋಕುಲಕ್ಕೆ ಆಧಾರವಾಗಿದ್ದ ಕೆರೆ ಈಗ ಚರಂಡಿ ರೀತಿಯಲ್ಲಿ ಬದಲಾಗಿದೆ. ಅದರಲ್ಲಿ ಯಾವುದೇ ಗಲೀಜು ಹರಿ ಬರದಂತೆ ಕ್ರಮ ವಹಿಸಬೇಕು
ಭೀಮಪ್ಪ ಬಡಪ್ಪನವರ ಗೋಕುಲ ನಿವಾಸಿ

ಗೋಕುಲದ ಚಿಕ್ಕೇರಿಯಲ್ಲಿ ಪಕ್ಷಿಗಳ ಗುಂಪು!

ಹುಬ್ಬಳ್ಳಿ ವಿಮಾನ ನಿಲ್ದಾಣ ಮುಂಭಾಗ ಕೂಗಳತೆ ದೂರದಲ್ಲಿ ಗೋಕುಲ ಗ್ರಾಮದ ಚಿಕ್ಕೇರಿ (ಚಿಕ್ಕ ಕೆರೆ) ಇದೆ. ಈ ಮೊದಲು ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿದ್ದ ಕೆರೆಯಲ್ಲೀಗ ಚರಂಡಿಯಿಂದ ಕೊಳಚೆ ನೀರು ಹರಿಬಿಡಲಾಗುತ್ತಿದೆ. ಸ್ವಚ್ಛಂದವಾಗಿದ್ದ ಕಂಗೊಳಿಸುತ್ತಿದ್ದ ಕೆರೆಯು ಈಗ ಕಟ್ಟಡಗಳ ಅವಶೇಷದ ಉರುಳಿನಲ್ಲಿ ನರಳುತ್ತಿದೆ. ಇದರಲ್ಲಿನ ಗಲೀಜು ಅರಿಸಿಕೊಂಡು ಪಕ್ಷಿಗಳು ನಿತ್ಯ ಮುಗಿಬೀಳುತ್ತವೆ. ಕೆರೆಯಲ್ಲಿ ವರ್ಷವಿಡೀ ನೀರಿನ ಸಂಗ್ರಹ ಇದ್ದರೂ ಜನ ಜಾನುವಾರುಗಳಿಗೆ ಬಳಸಲು ಯೋಗ್ಯವಿಲ್ಲ. ಗೋಕುಲ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಕಟ್ಟಡ ಸಮುಚ್ಛಯಗಳ ಕೊಳಚೆ ಯಥೇಚ್ಛವಾಗಿ ಕೆರೆಗೆ ಸೇರುವಂತೆ ಮಾಡಲಾಗಿದೆ. ಈ ಕೆರೆಯಲ್ಲಿನ ಮೀನು ಹಾಗೂ ಗಲೀಜಿಗಾಗಿ ರಣಹದ್ದುಗಳು ಕೂಡಾ ಬರುತ್ತವೆ. ಗೋಕುಲ ರಸ್ತೆ ಪಕ್ಕದ ಲೋಹಿಯಾ ನಗರದಿಂದ ಗೋಕುಲ ಗ್ರಾಮದ ಬೈಪಾಸ್ ಉದ್ದಕ್ಕೂ ರಣಹದ್ದುಗಳ ಹಿಂಡು ಇರುತ್ತದೆ. ಗೋಕುಲ ಕೆರೆಯ ಸುತ್ತಲೂ ಕಟ್ಟಡಗಳ ಅವಶೇಷ ಸುರಿಯಲಾಗುತ್ತಿದೆ. ಕೆರೆ ಪಕ್ಕದ ರೇವಡಿಹಾಳ ತಾರಿಹಾಳ ಗ್ರಾಮ ಸಂಪರ್ಕಿಸುವ ರಸ್ತೆಯುದ್ದಕ್ಕೂ ಕಟ್ಟಡ ಅವಶೇಷ ಹಾಗೂ ಜೈವಿಕ ತ್ಯಾಜ್ಯ ರಾಶಿಗಳು ಎದ್ದು ಕಾಣುತ್ತವೆ. ‘ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕೆರೆ ಅಭಿವೃದ್ಧಿಗೆ ಕ್ರಮ ವಹಿಸಬೇಕು. ಕೆರೆ ಸುತ್ತಮುತ್ತಲು ತ್ಯಾಜ್ಯ ತಂದು ಹಾಕುವುದಕ್ಕೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ಗೋಕುಲ ಗ್ರಾಮದ ಯುವಕ ಮಾರುತಿ ಶಿಂತ್ರಿ ಅವರು.

ನಾಗರಿಕರು ಅನುಸರಿಸಬೇಕಾದ ಕ್ರಮ

ವಿಮಾನಗಳ ಸುರಕ್ಷತೆ ದೃಷ್ಟಿಯಿಂದ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಬಡಾವಣೆ ನಾಗರಿಕರು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವುದು ವಿಮಾನ ನಿಲ್ದಾಣ ಅಧಿಕಾರಿಗಳ ಕೋರಿಕೆ. ಯಾವುದೇ ರೀತಿಯ ತ್ಯಾಜ್ಯವನ್ನು ಬಯಲು ಪ್ರದೇಶಗಳಲ್ಲಿ ತಂದು ಸುರಿಯುವುದನ್ನು ಕೈ ಬಿಡಬೇಕು. ಮುಖ್ಯವಾಗಿ ಅಡುಗೆ ಮನೆ ತ್ಯಾಜ್ಯವಾದ ಅಳಿದುಳಿದ ಆಹಾರ ಪದಾರ್ಥಗಳು ಹಾಗೂ ತರಕಾರಿ ತುಣುಕುಗಳನ್ನು ಹೊರಗಡೆ ಎಸೆಯಬಾರದು. ಕಸಾಯಿಖಾನೆ ಹಾಗೂ ಮಾಂಸ ಮಾರಾಟ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ತ್ಯಾಜ್ಯವನ್ನು ಹೊರಗಡೆ ಎಸೆಯಬಾರದು. ಈ ರೀತಿಯ ತ್ಯಾಜ್ಯವು ರಣಹದ್ದು ಸೇರಿದಂತೆ ಬೇರೆಬೇರೆ ಪಕ್ಷಿಗಳನ್ನು ಆಕರ್ಷಿಸುತ್ತದೆ. ಪಕ್ಷಿ ಪ್ರಿಯರು ವಿಮಾನ ನಿಲ್ದಾಣ ಅಕ್ಕಪಕ್ಕದ ಬಯಲು ಪ್ರದೇಶಗಳಲ್ಲಿ ಧಾನ್ಯ ತಂದು ಹಾಕುವುದನ್ನು ಕೈ ಬಿಡಬೇಕು.

ಪಕ್ಷಿಗಳ ನಿಯಂತ್ರಣಕ್ಕಾಗಿ ಬಂದೂಕಿನ ಸದ್ದು

ವಿಮಾನ ನಿಲ್ದಾಣದೊಳಗೆ ಪಕ್ಷಿಗಳು ಹಾರಿ ಬರುವುದನ್ನು ತಡೆಯಲು ಬಂದೂಕಿನ ಸದ್ದು ಹೊಮ್ಮುವಂತೆ ಯಾಂತ್ರಿಕ ವ್ಯವಸ್ಥೆ ಅಳವಡಿಸಲಾಗಿದೆ. ಎಲ್ಪಿಜಿ ಗ್ಯಾಸ್ ಆಧಾರಿತ ಈ ಯಾಂತ್ರಿಕ ವ್ಯವಸ್ಥೆಯನ್ನು ಒಟ್ಟು ಆರು ಕಡೆಗಳಲ್ಲಿ ಮಾಡಿದ್ದಾರೆ. ಇದಲ್ಲದೆ ವಿಮಾನ ನಿಲ್ದಾಣದ ಆವರಣ ಗೋಡೆಗೆ ಅಲ್ಲಲ್ಲಿ ಒಟ್ಟು 17 ಭದ್ರತಾ ನಿಗಾ ಗೋಪುರ ನಿರ್ಮಿಸಲಾಗಿದೆ. ‘ಸಣ್ಣ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಘಟನೆಗಳು ಪ್ರತಿವರ್ಷವೂ 3ರಿಂದ 4ರಷ್ಟು ನಡೆಯುತ್ತಿವೆ. ಸಣ್ಣ ಪಕ್ಷಿಗಳಿಂದ ಯಾವುದೇ ಅಪಾಯವಿಲ್ಲ. ಆದರೆ ದೊಡ್ಡ ಪಕ್ಷಿಗಳು ಕೆಲವೊಮ್ಮೆ ನುಗ್ಗುತ್ತವೆ. ಇವುಗಳ ನಿಯಂತ್ರಣಕ್ಕಾಗಿ ‘ಲೇಸರ್ ಗನ್’ ಒದಗಿಸಲು ಮತ್ತು ಅನುಮತಿ ಕೋರಲಾಗಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ್ ತಿಳಿಸಿದರು.

ಪಕ್ಷಿಗಳ ಅಧ್ಯಯನ ತಂಡ

ಹುಬ್ಬಳ್ಳಿ ವಿಮಾನ ನಿಲ್ದಾಣದ ಸುತ್ತಮುತ್ತ ಬರುವ ಪಕ್ಷಿಗಳ ಬಗ್ಗೆ ವರದಿ ಸಿದ್ಧಪಡಿಸಲು ಅಧ್ಯಯನ ತಂಡವೊಂದು ಬಂದಿದೆ. ಈ ತಂಡವು ಒಂದು ವರ್ಷ ಅಧ್ಯಯನ ಮಾಡಿ ಪಕ್ಷಿಗಳ ವಿವರ ಈ ಪ್ರದೇಶಕ್ಕೆ ಬರಲು ಕಾರಣ ಹಾಗೂ ಅವುಗಳನ್ನು ನಿಯಂತ್ರಿಸುವ ಕ್ರಮದ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.