ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟರ್ ಸೋಲಿಸಲು ಬಿಜೆಪಿಯಿಂದ ಕುತಂತ್ರದ ರಾಜಕಾರಣ: ಕಾಂಗ್ರೆಸ್‌

ಹು–ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್‌ಗೆ ಸೋಲು - ಬೆದರಿಕೆ, ಒಗ್ಗಟ್ಟಿನ ಕೊರತೆ ಸೋಲಿಗೆ ಕಾರಣ: ಕಾಂಗ್ರೆಸ್‌
Published 30 ಮೇ 2023, 12:47 IST
Last Updated 30 ಮೇ 2023, 12:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮತದಾರರಿಗೆ ಹಣ ಹಂಚಿಕೆ, ಮುಖಂಡರ ಮನೆ ಮೇಲೆ ಐಟಿ ದಾಳಿ, ತೆರೆಮರೆಯಲ್ಲಿ ಬೆದರಿಕೆ, ಪದಾಧಿಕಾರಿಗಳಲ್ಲಿಲ್ಲದ ಒಗ್ಗಟ್ಟು, ಸೀಮಿತ ಕಾಲಾವಧಿ... ಹು–ಧಾ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿಗೆ ಕಾರಣಗಳು’ - ಕೇಶ್ವಾಪುರದ ರಾಯ್ಕರ್ ಅತಿಥಿಗೃಹದಲ್ಲಿ ಮಂಗಳವಾರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಹು–ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣದ ಕುರಿತು ಆತ್ಮಾವಲೋಕನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು. ಸೆಂಟ್ರಲ್‌ ಕ್ಷೇತ್ರದಲ್ಲಿ ಶೆಟ್ಟರ್‌ ಗೆಲ್ಲುವ ಎಲ್ಲ ಸಾಧ್ಯತೆಗಳು ಇರುವುದನ್ನು ಅರಿತ ಬಿಜೆಪಿ, ಕುತಂತ್ರದ ರಾಜಕಾರಣ ನಡೆಸಿತು ಎಂದು ಮುಖಂಡರು ಸೋಲಿಗೆ ವ್ಯಾಖ್ಯಾನ ನೀಡಿದರು.

‘ಆರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದೇನೆ. ಆದರೆ, ಒಂದು ಬಾರಿಯೂ ಮತದಾರರಿಗೆ ಹಣ ನೀಡಿಲ್ಲ. ನನ್ನನ್ನು ಸೋಲಿಸಬೇಕೆಂದು ಪಣತೊಟ್ಟ ಬಿಜೆಪಿ, ಹಣದ ಪ್ರಭಾವ ನಡೆಸಿತು. ಬೆಂಬಲಿಗರ, ಮುಖಂಡರ ಮನೆ ಮೇಲೆ ಐಟಿ ದಾಳಿ ನಡೆಸಿ ಹೆದರಿಸಿದರು. ಕೆಲವು ಮುಖಂಡರ ಮನೆಗೆ ತೆರಳಿ ದಾರಿ ತಪ್ಪಿಸಿದರು. ಪಕ್ಷದಲ್ಲಿ ಸಂಘಟನೆ ಹಾಗೂ ಹೊಂದಾಣಿಕೆ ಕೊರತೆ ಸಹ ಎದ್ದು ಕಾಣುತ್ತಿತ್ತು. ಬಿಜೆಪಿಯಲ್ಲಿದ್ದಾಗ ನನ್ನನ್ನು ಬೆಂಬಲಿಸುತ್ತಿದ್ದವರ ಮನಸ್ಸು ಬದಲಿಸಲು ಸಮಯದ ಕೊರತೆಯಿತ್ತು. ಇವೆಲ್ಲ ಕಾರಣಗಳಿಂದ ಸೋಲುವಂತಾಯಿತು’ ಎಂದು ಜಗದೀಶ ಶೆಟ್ಟರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಾನೇ ಸಂಘಟನೆ ಮಾಡಿರುವ ಸದಸ್ಯರು ಬಿಜೆಪಿಗೆ ಮತ ಚಲಾಯಿಸಿದರು. ಶೀಘ್ರ ಅವರೆಲ್ಲ ನಮ್ಮ ಕಡೆಗೆ ಬರಲಿದ್ದಾರೆ. ಮಾಡಿರುವ ತಪ್ಪುಗಳನ್ನೆಲ್ಲ ಸರಿಪಡಿಸಿಕೊಂಡು ಒಂದಾಗಿ ಕೆಲಸ ಮಾಡೋಣ. ಸೆಂಟ್ರಲ್ ಕ್ಷೇತ್ರವನ್ನು ಬಿಜೆಪಿ ಕಪಿಮುಷ್ಠಿಯಿಂದ ಕಾಂಗ್ರೆಸ್ ವಶಕ್ಕೆ ತರಲು ತಂಡವಾಗಿ ಕೆಲಸ ಮಾಡಬೇಕಿದೆ’ ಎಂದರು.

ನಾಗೇಶ ಕಲಬುರ್ಗಿ ಮಾತನಾಡಿ, ‘ಪಕ್ಷದ ಪದಾಧಿಕಾರಿಗಳು ಮನೆ–ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸಿಲ್ಲ. ಬಲಿಷ್ಠ ಪಡೆಯೊಂದು ಸಿದ್ಧಪಡಿಸಬೇಕಿತ್ತು. ಬೂತ್, ವಾರ್ಡ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಬೇಕಿತ್ತು. ಬಿಜೆಪಿಯಲ್ಲಿದ್ದಾಗ ನಾವೇ ಸಂಘಟಿಸಿದ ಬಲಿಷ್ಠ ಪಡೆ, ಬಿಜೆಪಿಗೆ ವರದಾನವಾಯಿತು. ಅಲ್ಲಿರುವ ಕುತಂತ್ರಿಗಳು ಕಾರ್ಯಕರ್ತರನ್ನು ಕಟ್ಟಿ ಹಾಕಿದರು. ಪಾಲಿಕೆ‌ ಸದಸ್ಯರಿಗೆ ಬೆದರಿಸುವ ಕಾರ್ಯ ಮಾಡಿದರು. ಯಾರಿಗೂ ಹೆದರುವ ಅಗತ್ಯವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಕುತಂತ್ರಿಗಳಿಗೆ ಉತ್ತರ ಕೊಡೋಣ’ ಎಂದರು.

ಮುಖಂಡ ಐ.ಜಿ.‌ ಸನದಿ,‌ ‘ನಮ್ಮವರು ಎನ್ನುವವರು ಒಮ್ಮೊಮ್ಮೆ ಕೈ ಕೊಟ್ಟುಹೋಗುತ್ತಾರೆ. ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೆಲವರಿಗೆ ಅಧಿಕಾರ ಲಾಲಸೆ, ಭಯ ಕಾಡುತ್ತಿರುತ್ತದೆ. ಅದಕ್ಕಾಗಿ, ಆಗಾಗ ಐಟಿ ದಾಳಿಗಳು ನಡೆಯುತ್ತವೆ’ ಎಂದರು.

ಮುಖಂಡರಾದ ಅನಿಲಕುಮಾರ ಪಾಟೀಲ, ಎಫ್.ಎಚ್. ಜಕ್ಕಪ್ಪವರ, ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ಪಾರಸ್ಮಲ್ ಜೈನ್, ಅಲ್ತಾಫ್ ಕಿತ್ತೂರ, ವಸಂತ‌ ಲದ್ವಾ, ಎಂ.ಎಂ. ಗೌಡರ, ಪಿ.ಕೆ. ರಾಯನಗೌಡ, ಮಲ್ಲಿಕಾರ್ಜುನ ಸಾವಕಾರ, ಯೂಸೂಫ್ ಸವಣೂರು, ಮೆಹಬೂಬ್ ಪಾಷಾ ಇದ್ದರು.

ಹಿಟ್ಲರ್‌ಗೆ ಮನೆಗೆ ಕಳುಹಿಸಿ: ಹಳ್ಳೂರ

‘ಧಾರವಾಡದ ಹಿಟ್ಲರ್ ಅವರನ್ನು ಮನೆಗೆ ಕಳಿಸಲು, ಶೆಟ್ಟರ್ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು, ಪದಾಧಿಕಾರಿಗಳು ಶಕ್ತಿ ತುಂಬಬೇಕು. ಭಯ ಸೃಷ್ಟಿಸುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಶೆಟ್ಟರ್‌ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಠರಾವು ಪಾಸು ಮಾಡಿ, ಕೆಪಿಸಿಸಿ ಅಧ್ಯಕ್ಷರಿಗೆ ನೀಡೋಣ’ ಎಂದು ಹು–ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಹೇಳಿದರು.

ಅದಕ್ಕೆ ಧ್ವನಿಗೂಡಿಸಿದ ಅನ್ವರ ಮುಧೋಳ, ‘ಶೆಟ್ಟರ್‌ಗೆ ಸೂಕ್ತ ಸ್ಥಾನ ನೀಡುವಂತೆ ದೆಹಲಿಗೆ ನಿಯೋಗ ಕೊಂಡೊಯ್ದು, ವರಿಷ್ಠರನ್ನು ಭೇಟಿ ಮಾಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT