ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮುಚ್ಚುವ ಭೀತಿಯಲ್ಲಿ ಗಂಗಜ್ಜಿ ಗುರುಕುಲ

Published 2 ಸೆಪ್ಟೆಂಬರ್ 2023, 5:08 IST
Last Updated 2 ಸೆಪ್ಟೆಂಬರ್ 2023, 5:08 IST
ಅಕ್ಷರ ಗಾತ್ರ

ನಾಗರಾಜ್‌ ಬಿ.ಎನ್‌.

ಹುಬ್ಬಳ್ಳಿ: ಗುರುಶಿಷ್ಯ ಪರಂಪರೆಯ ದೇಶದ ಏಕೈಕ ಸಂಗೀತ ಶಾಲೆ ಇಲ್ಲಿನ ‘ಡಾ. ಗಂಗೂಬಾಯಿ ಹಾನಗಲ್‌ ಗುರುಕುಲ’ ಅನುದಾನದ ಕೊರತೆಯಿಂದ ಮುಚ್ಚುವ ಭೀತಿಯಲ್ಲಿದೆ.

ಐದು ತಿಂಗಳಿನಿಂದ ಸಂಗೀತ ಗುರುಗಳಿಗೆ ಗೌರವ ಸಂಭಾವನೆ ಸಿಕ್ಕಿಲ್ಲ. ಸರ್ಕಾರಿ ಮತ್ತು ಹೊರಗುತ್ತಿಗೆ ನೌಕರರಿಗೆ ವೇತನವಾಗಿಲ್ಲ. ಕಟ್ಟಡಗಳು ಬಿರುಕು ಬಿಟ್ಟಿವೆ. ಕಲಿಕೆ ವಾತಾವರಣ ಕಮರುತ್ತಿದೆ. ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

7 ಅತಿಥಿ ಗೃಹಗಳು 12 ವರ್ಷಗಳಿಂದ ಪಾಳು ಬಿದ್ದರೆ, ಸಂಗೀತ ಗುರುಗಳು ಮತ್ತು ವಿದ್ಯಾರ್ಥಿಗಳಿಗೆ ಇರುವ ಕಟ್ಟಡಗಳು ಶಿಥಿಲವಾಗಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಚಾವಣಿಯ ಸಿಮೆಂಟ್‌ ಚೂರುಗಳು ಆಗಾಗ ಉದುರುತ್ತವೆ.  ಸಂಗೀತ ಕಛೇರಿಯ ಸಭಾಂಗಣದ ಗೋಡೆಗಳು ಮಳೆಗೆ ತೇವವಾಗಿದೆ. ಸ್ಟೀಲ್‌ ರೇಲಿಂಗ್ಸ್‌ ಹಾಗೂ ಮೆಟ್ಟಿಲುಗಳು ಹಾಳಾಗಿವೆ.

ಅನುದಾನದ ಕೊರತೆಯಿಂದ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಂತೆ ಸೂಚಿಸಲಾಗಿದೆ. ಸಿಬ್ಬಂದಿ ವೇತನಕ್ಕೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಗುರುಕುಲ ಮುಚ್ಚುವ ಬಗ್ಗೆ ಯಾವ ವಿಚಾರವೂ ಇಲ್ಲ.
ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ಗುರುಕುಲದಲ್ಲಿ 36 ಸಂಗೀತ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶವಿದೆ. ಅವರು ಊಟ, ವಸತಿ ಸಹಿತ ಉಚಿತವಾಗಿ ನಾಲ್ಕು ವರ್ಷ ಹಿಂದೂಸ್ತಾನಿ ಸಂಗೀತ ಕಲಿಯುತ್ತಾರೆ. ದೇಶಾದ್ಯಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ, ಜುಲೈ ತಿಂಗಳಲ್ಲಿ ಆಡಿಷನ್ ನಡೆಸಲಾಗುತ್ತದೆ. ಆದರೆ, ಅನುದಾನ ಕೊರತೆಯಿಂದ ಪ್ರಸಕ್ತ ವರ್ಷ ಪ್ರವೇಶ ಪ್ರಕ್ರಿಯೆ ನಡೆದಿಲ್ಲ. ಸದ್ಯ ಗುರುಕುಲದಲ್ಲಿ 19 ವಿದ್ಯಾರ್ಥಿಗಳಿದ್ದು, ಐವರು ಗುರುಗಳಿದ್ದಾರೆ.

‘ಗುರುಕುಲ ಸ್ಥಾಪನೆಯಾಗಿ 12 ವರ್ಷಗಳ ಅವಧಿಯಲ್ಲಿ ಸ್ಥಿತಿಗತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಒಮ್ಮೆಯೂ ಸಭೆ ನಡೆದಿಲ್ಲ. ಪ್ರತಿಯೊಂದಕ್ಕೂ ಪ್ರಾದೇಶಿಕ ಆಯುಕ್ತರ ಬಳಿ ಹೋಗಬೇಕು. ಗಂಗಜ್ಜಿ ಹೆಸರಿಗೆ ಕಪ್ಪು ಚುಕ್ಕೆ ಬಾರದಿರಲಿಯೆಂದು  ಸುಮ್ಮನಿದ್ದೇವೆ. ಗುರುಕುಲವನ್ನು ಕಂದಾಯ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಬೇಕು’ ಎಂದು ಗುರುಕುಲದ ಗುರು ಪಂಡಿತ ಕೈವಲ್ಯಕುಮಾರ ಗುರವ ‘ಪ್ರಜಾವಾಣಿ’ಗೆ ತಿಳಿಸಿದರು.

ವಸತಿಗೃಹದ ಗೋಡೆಗಳು ಬಿರುಕು ಬಿಟ್ಟಿವೆ. ಹೆಂಚುಗಳು ಚೂರಾಗಿವೆ. ಮಳೆಗಾಲದಲ್ಲಿ ಸೋರಿಕೆಯಾಗುತ್ತದೆ. ಕಟ್ಟಡ ದುರಸ್ತಿಗೆ ಹೇಳಿದರೆ ಜಿಲ್ಲಾಧಿಕಾರಿಯಿಂದ ಅನುಮತಿ ಸಿಕ್ಕಿಲ್ಲ ಎಂಬ ಉತ್ತರ ಸಿಗುತ್ತದೆ.
ಮಹೇಶ ಹುಂಡೇಕಾರ, ಸಂಗೀತ ವಿದ್ಯಾರ್ಥಿ

‘ಗುರುಕುಲಕ್ಕೆ ಉನ್ನತ ಶಿಕ್ಷಣ ಇಲಾಖೆ ಅನುದಾನ ನೀಡುತ್ತದೆ. ಆದರೆ, ಹಣಕಾಸಿನ ತೊಂದರೆಯಿಂದ ರಾಜ್ಯದ 15 ಸಂಸ್ಥೆಗಳನ್ನು ಮುಚ್ಚಬೇಕು ಎಂದು ಶಿಕ್ಷಣ ಇಲಾಖೆಗೆ ಹಣಕಾಸು ಇಲಾಖೆಯಿಂದ ಆದೇಶ ಬಂದಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಗುರುಕುಲ ಮುಚ್ಚಿದರೆ, ಸಂಗೀತಕ್ಕೆ ದೊಡ್ಡ ಅನ್ಯಾಯ ಮಾಡಿದಂತೆ ಆಗುತ್ತದೆ. ಅವರಿವರಲ್ಲಿ ದಾನ ಬೇಡಿ, ವಿದ್ಯಾರ್ಥಿಗಳಿಗೆ ಊಟ, ತಿಂಡಿ ನೀಡುತ್ತಿದ್ದೇವೆ. ವೇತನ ಇಲ್ಲದಿದ್ದರೂ ಸಂಗೀತ ಕಲಿಸುವುದು ನಾವು ಬಿಟ್ಟಿಲ್ಲ’ ಎಂದು ಗುರು ಪಂಡಿತ ಉಸ್ತಾದ ಫಯಾಜ್ ತಿಳಿಸಿದರು.

ರಾಜ್ಯದಲ್ಲಿ ಶಿಕ್ಷಣ ಸಂಸ್ಥೆ ಮುಚ್ಚುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು ತಮ್ಮ ಖರ್ಚುಗಳನ್ನು ನಿರ್ವಹಿಸಿಕೊಳ್ಳಲು ಸೂಚಿಸಲಾಗಿದೆ. ಗುರುಕುಲ ಮುಚ್ಚಲು ಅವಕಾಶ ನೀಡಲ್ಲ.
ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ

ಅನುದಾನ ಬಿಡುಗಡೆಗೆ ಶೆಟ್ಟರ್‌ ಸಿಎಂಗೆ ಪತ್ರ

‘ನಗರದ ಗಂಗೂಬಾಯಿ ಹಾನಗಲ್‌ ಗುರುಕುಲದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಅಗತ್ಯವಿದ್ದಷ್ಟು ಅನುದಾನ ತಕ್ಷಣ ಬಿಡುಗಡೆ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ‘ಗುರುಕುಲ ಸ್ಥಾಪನೆಯಾಗಿ 12 ವರ್ಷಗಳಾದರೂ ಅದರ ಅಧ್ಯಕ್ಷರಾದ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಒಂದೇ ಒಂದು ಸಭೆ ಸಹ ನಡೆದಿಲ್ಲ. ಗುರುಕುಲದಲ್ಲಿ ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಮತ್ತು ಅನುದಾನ ಕೊರತೆ ನೀಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ಸಿಗದ ಅನುದಾನ; ಆಗದ ವೇತನ

‘ಆಡಳಿತಾಧಿಕಾರಿ ಸೇರಿ ನಾಲ್ವರು ಸರ್ಕಾರಿ ಸಿಬ್ಬಂದಿ 13 ಹೊರಗುತ್ತಿಗೆ ಸಿಬ್ಬಂದಿ ಮತ್ತು ಐವರು ಸಂಗೀತ ಗುರುಗಳು ಸೇರಿ ಒಟ್ಟು 22 ಸಿಬ್ಬಂದಿ ಗುರುಕುಲದಲ್ಲಿ ಇದ್ದಾರೆ. 2020-21ರಲ್ಲಿ ₹20 ಲಕ್ಷ ಅನುದಾನ ಸಿಕ್ಕರೆ 2021-22ರಲ್ಲಿ ಅನುದಾನ ಬಿಡುಗಡೆ ಆಗಲಿಲ್ಲ. 2022-23ರಲ್ಲಿ ₹40 ಲಕ್ಷ ಸಿಕ್ಕರೆ ಪ್ರಸಕ್ತ ವರ್ಷ ಮಂಜೂರಾದ ₹46.46 ಲಕ್ಷದಲ್ಲಿ ₹30.95 ಲಕ್ಷ ಬಿಡುಗಡೆಯಾಗಿದೆ. ಅನುದಾನ ಕೊರತೆಯಿಂದ ಸಮಸ್ಯೆಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಗುರುಕುಲದ ಪಂ. ಕೈವಲ್ಯಕುಮಾರ ಅವರ ಸಂಗೀತ ಕೊಠಡಿಯ ಮೆಟ್ಟಿಲುಗಳು ಬಿರುಕು ಬಿಟ್ಟಿವೆ
–ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಗುರುಕುಲದ ಪಂ. ಕೈವಲ್ಯಕುಮಾರ ಅವರ ಸಂಗೀತ ಕೊಠಡಿಯ ಮೆಟ್ಟಿಲುಗಳು ಬಿರುಕು ಬಿಟ್ಟಿವೆ –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT