ಭಾನುವಾರ, ನವೆಂಬರ್ 29, 2020
20 °C

‘ಅವತಾರ್ ಶೈಲಿಯಲ್ಲಿ ಹುಬ್ಬಳ್ಳಿಯವ ಸಿನಿಮಾ’

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ನಾರ್ಥ್ ಕರ್ನಾಟಕ ಮೋಷನ್ ಪಿಕ್ಚರ್ಸ್ ಸಂಸ್ಥೆಯಿಂದ ‘ಹುಬ್ಬಳ್ಳಿಯವ’ ಎಂಬ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಮೋಷನ್ ಕ್ಯಾಪ್ಚರ್, ವಿಎಫ್‌ಎಕ್ಸ್, ಅನಿಮೇಷನ್, ಗ್ರಾಫಿಕ್ಸ್ ತಂತ್ರಜ್ಞಾನದಡಿ ಹಾಲಿವುಡ್‌ನ ‘ಅವತಾರ್’ ಚಿತ್ರದ ಶೈಲಿಯಲ್ಲಿ ಚಿತ್ರ ಮೂಡಿ ಬರಲಿದೆ’ ಎಂದು ನಿರ್ದೇಶಕ ಬಾಬಾ ಹೇಳಿದರು.

ತಮ್ಮ ಚೊಚ್ಚಿಲ ಸಿನಿಮಾ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕ 400 ವರ್ಷಗಳ ಹಿಂದೆ ಹೇಗಿತ್ತೆಂಬುದನ್ನು ಇಟ್ಟುಕೊಂಡು ಸಿದ್ಧಾಂತ್ ಛಾತ್ರೆ ಮತ್ತು ಮುಜಾಫರ್ ಚಾಂದ್‌ಶಾ ಕಥೆ ಬರೆದಿದ್ದಾರೆ. ಕುಗ್ರಾಮದ ಯುವಕನೊಬ್ಬ ಆಗಿನ ಪ್ರತಿಷ್ಠಿತ ನಗರ ಹುಬ್ಬಳ್ಳಿಗೆ ಕೆಲಸ ಅರಸಿಕೊಂಡು ಬರುತ್ತಾನೆ. ಆದರೆ, ಅಲ್ಲಿ ನಡೆಯುವ ಅನ್ಯಾಯ ಮತ್ತು ಅಧರ್ಮಗಳ ವಿರುದ್ಧ ಸಿಡಿದೇಳುವುದು ಚಿತ್ರದ ತಿರುಳು’ ಎಂದು ಕಥೆಯ ಎಳೆಯನ್ನು ಹಂಚಿಕೊಂಡರು.

‘ತಂತ್ರಜ್ಞಾನವನ್ನು ಬಳಸಿಕೊಂಡು ಅಂದಿನ ಹುಬ್ಬಳ್ಳಿ ನಗರ ಹಾಗೂ ಜನಜೀವನವನ್ನು ತೆರೆ ಮೇಲೆ ತರಲಾಗುವುದು. ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದ್ದು, ಪಾತ್ರಗಳಿಗೆ ಈ ಭಾಗದ ಜಿಲ್ಲೆಗಳಲ್ಲಿ ಆಡಿಷನ್ ಮಾಡಲಾಗುವುದು. ಚಿತ್ರಕ್ಕೆ ಸಮರ್ಥ್ ಎಂ. ಛಾಯಾಗ್ರಹಣ ಇರಲಿದೆ’ ಎಂದು ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿರುವ ಅವರು ತಿಳಿಸಿದರು.

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹಾಗೂ ಈ ಚಿತ್ರತಂಡಕ್ಕೆ ಮಾರ್ಗದರ್ಶಕರಾದ ಶಂಕರ ಸುಗತೆ ಮಾತನಾಡಿ, ‘ಅಂದಾಜು ₹4 ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿದ್ದು, ಶೇ 70ರಷ್ಟು ಚಿತ್ರೀಕರಣ ಉ.ಕ.ದಲ್ಲಿ ನಡೆಯಲಿದೆ’ ಎಂದರು.

ಸಿನಿಮಾ ವಿತರಕ ಅಹ್ಮದ್ ಕುಲಮಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.