ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಬೆಳಗಾವಿ ಮಾರ್ಗ; ದಾಖಲೆ ಸಲ್ಲಿಕೆ

ಬೆಂಗಳೂರು ತನಕ ಜೋಡಿ ಮಾರ್ಗ ಮಾರ್ಚ್‌ನಲ್ಲಿ ಪೂರ್ಣ: ಸಂಜೀವ್‌
Last Updated 7 ಏಪ್ರಿಲ್ 2022, 14:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿತ್ತೂರು ಮಾರ್ಗದ ಮೂಲಕ ಹುಬ್ಬಳ್ಳಿ–ಬೆಳಗಾವಿ ನಡುವಿನ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಹೇಳಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಭೂ ಸ್ವಾಧೀನ ಕಾರ್ಯವನ್ನು ರಾಜ್ಯಸರ್ಕಾರ ಮಾಡಿಕೊಡಬೇಕು. ಈ ಕುರಿತು ಸರ್ಕಾರದ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಒಟ್ಟು 927 ಎಕರೆ ಭೂಮಿ ಬೇಕಾಗುತ್ತದೆ’ ಎಂದರು.

‘ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 91 ರೈಲುಗಳು ವಿದ್ಯುತ್‌ ನೆರವಿನಿಂದ ಸಂಚರಿಸುತ್ತಿದ್ದು, ಇಲಾಖೆಗೆ ಇಂಧನದ ಹೊರೆ ತಪ್ಪಿದೆ. 2021–22ರ ಆರ್ಥಿಕ ವರ್ಷದಲ್ಲಿ ನಾವು ಸರಕು ಸಾಗಣೆ, ಪ್ರಯಾಣಿಕರ ರೈಲು, ಗುಜರಿ ವಸ್ತುಗಳ ಮಾರಾಟ, ಜಾಹೀರಾತು, ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಿದ್ದವರಿಂದ ದಂಡ ವಸೂಲಿ ಸೇರಿದಂತೆ ವಿವಿಧ ಮೂಲಗಳಿಂದ ಇಲಾಖೆಗೆ ಉತ್ತಮ ಆದಾಯ ಬಂದಿದೆ’ ಎಂದು ಹೇಳಿದರು.

‘ಪ್ರಯಾಣಿಕರ ಅನುಕೂಲಕ್ಕೆ ಪೇಟಿಎಂ, ಫ್ರೀಚಾರ್ಜ್‌ ಸೇರಿದಂತೆ ಹಲವು ಆನ್‌ಲೈನ್ ಮೂಲಕ ಆ್ಯಪ್‌ಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

ಮಾರ್ಚ್‌ನಲ್ಲಿ ಪೂರ್ಣ: ಹುಬ್ಬಳ್ಳಿ–ಬೆಂಗಳೂರು ನಡುವಿನ ಜೋಡಿ ರೈಲು ಮಾರ್ಗ ಕಾಮಗಾರಿ 2023ರ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

‘ಚಿಕ್ಕಜಾಜೂರು, ಅರಸೀಕೆರೆ, ತುಮಕೂರು ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಹುಬ್ಬಳ್ಳಿ–ಕುಂದಗೋಳ ತಾಲ್ಲೂಕಿನ ಸಂಶಿ ನಡುವೆ 25 ಕಿ.ಮೀ. ಮತ್ತು ಹಾವೇರಿ–ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡ ಮಾರ್ಗದ ನಡುವೆ 15 ಕಿ.ಮೀ. ಜೋಡಿ ಮಾರ್ಗ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಈ ಕೆಲಸ ಪೂರ್ಣಗೊಂಡರೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ಒಟ್ಟು ಪ್ರಯಾಣದ ಅವಧಿಯಲ್ಲಿ 45 ನಿಮಿಷ ಕಡಿಮೆಯಾಗಲಿದೆ. ಮೇ ವೇಳೆಗೆ ಇದೇ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯೂ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ದಾಖಲೆಯ ಆದಾಯ: ‘ಕೋವಿಡ್‌ ಸವಾಲಿನ ನಡುವೆಯೂ 2021–22ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 511.7 ರೂಟ್‌ ಕಿ.ಮೀ. ವಿದ್ಯುದ್ದೀಕರಣ ಪೂರ್ಣಗೊಳಿಸಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆಯ ಮೂಲಕ ಒಟ್ಟು ₹4,160 ಕೋಟಿ ಆದಾಯ ಗಳಿಸಲಾಗಿದ್ದು, ಇದು 2020–21ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 27.34ರಷ್ಟು ಹೆಚ್ಚು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT