ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಚಟುವಟಿಕೆಗೆ ಬೀಜ, ರಸಗೊಬ್ಬರ ವಿತರಣೆಗೆ ಕ್ರಮ: ಸಚಿವ ಜಗದೀಶ ಶೆಟ್ಟರ್

ಹೋಬಳಿ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರ
Last Updated 24 ಮೇ 2021, 11:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಹೋಬಳಿ ಮಟ್ಟದಲ್ಲೂ ಕೋವಿಡ್ ಕಾಳಜಿ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಸೋಮವಾರ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಊಹೆಗೂ ಮೀರಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರೊಂದಿಗೆ ಕಪ್ಪು ಶಿಲೀಂಧ್ರ ರೋಗದ ಆತಂಕವೂ ಶುರುವಾಗಿರುವುದರಿಂದ ಸ್ಥಳೀಯ ಮಟ್ಟದಲ್ಲೇ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

ಆಮ್ಲಜನಕ ಕೊರತೆ ಇಲ್ಲ:

‘ಕೋವಿಡ್ ಚಿಕಿತ್ಸೆಗೆ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ಇಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಜಿಲ್ಲೆಯಲ್ಲಿ ಅಗತ್ಯಕ್ಕಿಂತ ಹೆಚ್ಚುವರಿ ದಾಸ್ತಾನು ಇಟ್ಟುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ನಿರ್ವಹಣೆಯ ಕಾರಣಕ್ಕೆ ಜಿಂದಾಲ್‌ ಕಾರ್ಖಾನೆಯಲ್ಲಿ ಒಂದು ದಿನದ ಮಟ್ಟಿಗೆ ಉತ್ಪಾದನೆ ಸ್ಥಗಿತಗೊಂಡಿತ್ತು’ ಎಂದು ತಿಳಿಸಿದರು.

‘ಈ ಕುರಿತು ಜಿಂದಾಲ್‌ನವರ ಜತೆ ಮಾತನಾಡಿದ್ದೇನೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆಗೆ ಮೊದಲ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲಿಂದ ನಿತ್ಯ ಆಮ್ಲಜನಕ ಪೂರೈಕೆಯಾಗುತ್ತಿದೆ. ಒಡಿಶಾದಿಂದ ಮೂರು ದಿನಕ್ಕೊಮ್ಮೆ ಸರಬರಾಜು ಆಗುತ್ತಿದ್ದ ಆಮ್ಲಜನಕ ಈಗ ನಿತ್ಯ ಬರುತ್ತಿದೆ. ಕೋವಿಡ್ ಚಿಕಿತ್ಸೆಗೆ ಸಮರೋಪಾದಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ’ ಎಂದು ಹೇಳಿದರು.

ಮತ್ತಷ್ಟು ಯಂತ್ರಗಳಿಗೆ ಮನವಿ:

‘ಸದ್ಯ ರಾಜ್ಯದಲ್ಲಿ 103 ಕಪ್ಪು ಶಿಲಿಂಧ್ರ ಪ್ರಕರಣಗಳು ಕಂಡುಬಂದಿದ್ದು, ಧಾರವಾಡದಲ್ಲಿ 23 ಪತ್ತೆಯಾಗಿವೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಯಂತ್ರಗಳ ಕೊರತೆ ಇದ್ದು, ಮತ್ತಷ್ಟು ಯಂತ್ರಗಳನ್ನು ಕಳಿಸುವಂತೆ ಸಚಿವರಾದ ಡಾ. ಕೆ. ಸುಧಾಕರ್ ಮತ್ತು ಕೋವಿಡ್ ಕಾರ್ಯಪಡೆ ಮುಖ್ಯಸ್ಥರಾದ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಜನ ಕೋವಿಡ್ ಲಸಿಕೆ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಅಂತರ ಮರೆತು ಮುಗಿಬೀಳುತ್ತಿರುವುದು ಸೋಂಕು ಹರಡಲು ಕಾರಣವಾಗಿದೆ. ಲಸಿಕೆಗೆ ನೋಂದಣಿ ಮಾಡಿಕೊಂಡವರಿಗೆ ನಿಗದಿಯಾಗಿರುವ ದಿನದಂದೇ ಆಸ್ಪತ್ರೆಗೆ ತೆರಳಿ ಪಡೆಯಬೇಕು. ಆದರೆ, ಎಷ್ಟೋ ಮಂದಿ ಹಾಗೆಯೇ ಆಸ್ಪತ್ರೆಗೆ ಹೋಗಿ ಗುಂಪುಗೂಡುತ್ತಿದ್ದಾರೆ. ಜನರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.

ಶಾಸಕ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

‘ಕೃಷಿ ಚಟುವಟಿಕೆಗೆ ಸೂಕ್ತ ಸಮಯ’

‘ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಇದು ಸೂಕ್ತ ಸಮಯವಾಗಿದೆ. ರೈತರು ಬಿತ್ತನೆ ಚಟುವಟಿಕೆಗಳಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ, ಬೀಜ ಮತ್ತು ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶೆಟ್ಟರ್ ಹೇಳಿದರು.

‘ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಎರಡು ದಿನದೊಳಗೆ ಬೀಜ ಮತ್ತು ಗೊಬ್ಬರ ವಿತರಿಸಲು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನಸಂದಣಿ ತಪ್ಪಿಸುವುದಕ್ಕಾಗಿ ಪ್ರತಿ ದಿನ ಒಂದೊಂದು ಊರಿನವರಿಗೆ ಸಮಯ ನಿಗದಿಪಡಿಸಿ ವಿತರಿಸಲಾಗುವುದು. ಈ ಕುರಿತು ಗ್ರಾಮಗಳಲ್ಲಿ ಡಂಗೂರ ಸಾರಿಸಿ ರೈತರಿಗೆ ಮಾಹಿತಿ ನೀಡಲಾಗುವುದು’ ಎಂದರು.

‘ಕೃಷಿ ಚಟುವಟಿಕೆಗೆ ಪೂರಕವಾಗಿ ಶೀಘ್ರದಲ್ಲೇ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುವುದು. ಬೀಜ ಮತ್ತು ಗೊಬ್ಬರ ಖರೀದಿಗೆ ಬರುವ ರೈತರಿಗೆ ಪೊಲೀಸರಿಂದ ತೊಂದರೆಯಾಗುವ ಬಗ್ಗೆ ದೂರುಗಳಿವೆ. ಈ ಕುರಿತು ಪೊಲೀಸ್ ಇಲಾಖೆ ಜತೆಗೂ ಚರ್ಚಿಸಲಾಗುವುದು. ಮಾರ್ಗಸೂಚಿ ಪಾಲಿಸಿ ಕೃಷಿ ಚಟುವಟಿಕೆಗೆ ತೆರಳುವವರಿಗೆ ಪೊಲೀಸರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT