ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಧಾರವಾಡ ಒಂದೆಡೆ ಅಲೆದಾಟ; ಇನ್ನೊಂದೆಡೆ ಬಳಕೆಯಾಗದ ವ್ಯವಸ್ಥೆ

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕೊರೊನಾ ಸೋಂಕಿತರ ಚಿಕಿತ್ಸೆಗೆಂದು ಸಿದ್ಧಪಡಿಸಿದ ರೈಲ್ವೆ ಬೋಗಿಗಳು
Last Updated 17 ಸೆಪ್ಟೆಂಬರ್ 2020, 4:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌–19 ದೃಢಪಟ್ಟವರಿಗೆ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಹಾಸಿಗೆ ದೊರೆಯುತ್ತಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆಗೆಂದೇ ನೈರುತ್ಯ ರೈಲ್ವೆ ವಲಯ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈಲ್ವೆ ಬೋಗಿಗಳಲ್ಲಿ ಸಿದ್ಧಪಡಿಸಿದ ಹಾಸಿಗೆಗಳನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿಲ್ಲ.

ನೈರುತ್ಯ ರೈಲ್ವೆಯು 312 ಬೋಗಿಗಳನ್ನು ಐಸೊಲೇಷನ್ (ಪ್ರತ್ಯೇಕಿಸಲಾದ ವಾರ್ಡ್‌) ಮತ್ತು ತೀವ್ರ ನಿಗಾ ಘಟಕಗಳನ್ನಾಗಿ (ಐಸಿಯು) ಪರಿವರ್ತಿಸಿದೆ. ಸೋಂಕಿತರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿ ಒಟ್ಟು 2,496 ಮಂದಿ ಈ ಬೋಗಿಗಳಲ್ಲಿರಬಹುದಾಗಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೋಗಿಗಳನ್ನು ಕೋವಿಡ್‌– 19 ರೋಗಿಗಳಿಗೆ ಬೇಕಾದಂತೆ ಸಿದ್ಧಪಡಿಸಲು ಪ್ರತಿ ಬೋಗಿಗೆ ಅಂದಾಜು ₹ 30 ಸಾವಿರ ಖರ್ಚು ಮಾಡಲಾಗಿದೆ. ಏಪ್ರಿಲ್‌ನಲ್ಲಿಯೇ ಬೋಗಿಗಳು ಸಿದ್ಧವಾಗಿವೆ. ಇದುವರೆಗೆ ರಾಜ್ಯದ ಆರೋಗ್ಯ ಇಲಾಖೆ ಬೋಗಿಗೆ ಬೇಡಿಕೆ ಸಲ್ಲಿಸಿಲ್ಲ. ಸಲ್ಲಿಸಿದರೆ, ನೀಡಲಾಗುವುದು’ ಎಂದರು.

‘ರೈಲ್ವೆ ಬೋಗಿಗಳಲ್ಲಿ ಸ್ಲೀಪರ್ ಸೀಟುಗಳನ್ನೇ ಹಾಸಿಗೆಗಳನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ ಚಿಕಿತ್ಸೆ ನೀಡುವುದು ಕಷ್ಟ. ವೈದ್ಯಕೀಯ ಸಾಮಗ್ರಿಗಳ ಕೊರತೆ ಇದೆ. ಚಿಕಿತ್ಸೆ ನೀಡುವುದು ಸುಲಭವಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ವೈದ್ಯರೊಬ್ಬರು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ ಕಿಮ್ಸ್‌ ಸೇರಿದಂತೆ ಜಿಲ್ಲಾಡಳಿತ ಕೊರೊನಾ ಸೋಂಕಿತರಿಗೆಂದು ಸಿದ್ಧಪಡಿಸಿಕೊಂಡಿದ್ದ ಆಸ್ಪತ್ರೆಗಳ ಹಾಸಿಗೆಗಳೆಲ್ಲ ಭರ್ತಿಯಾಗಿವೆ. ಸಮಾಜ ಕಲ್ಯಾಣ ಇಲಾಖೆ ಆಸ್ಪತ್ರೆ, ಖಾಸಗಿ ವಸತಿ ನಿಲಯಗಳನ್ನು ವಶಕ್ಕೆ ತೆಗೆದುಕೊಂಡು ಅಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಜಾಗವಿಲ್ಲದ್ದರಿಂದ ಕೆಲವರನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ. ದುಬಾರಿ ವೆಚ್ಚ ಭರಿಸಲಾಗುವುದಿಲ್ಲ ಎಂಬ ಕಾರಣಕ್ಕೆ ಕೆಲವರು ತಪಾಸಣೆಗೂ ಮುಂದಾಗುತ್ತಿಲ್ಲ. ಸೋಂಕು ಹರಡಲು ಇದೂ ಒಂದು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಜಿಲ್ಲಾಡಳಿತ ವಿವಿಧೆಡೆ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿದೆ. ರೈಲ್ವೆ ಇಲಾಖೆ ಸಿದ್ಧಪಡಿಸಿರುವ ಐಸೋಲೇಷನ್‌ ಬೋಗಿಗಳಿಗೆ ಬೇಡಿಕೆ ಸಲ್ಲಿಸಿಲ್ಲ. ಪರಿಸ್ಥಿತಿ ನೋಡಿಕೊಂಡು ಬೇಡಿಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT