ಬುಧವಾರ, ಅಕ್ಟೋಬರ್ 28, 2020
28 °C

ಹುಬ್ಬಳ್ಳಿ: ಒಂದೇ ಯೋಜನೆಗೆ ಮತ್ತೆ ಮತ್ತೆ ಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಇಂದಿರಾ ಗಾಜಿನ ಮನೆ ಅಭಿವೃದ್ಧಿಗೆ ಹಿಂದೆ ₹4.5 ಕೋಟಿ ನೀಡಲಾಗಿತ್ತು. ಈಗ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹13 ಕೋಟಿ ನೀಡಲಾಗಿದೆ. ಉಣಕಲ್‌, ತೋಳನಕೆರೆ ಅಭಿವೃದ್ಧಿಗೂ ಮತ್ತೆ ಹಣ ಕೊಡಲಾ ಗಿದೆ. ಒಂದೇ ಯೋಜನೆಗೆ ಪದೇ ಪದೇ ಅನುದಾನ ಬಿಡುಗಡೆ ಮಾಡುವುದ ರಿಂದ ಏನೂ ಪ್ರಯೋಜನವಿಲ್ಲ’

ಹೀಗೆಂದು ಸ್ಮಾರ್ಟ್‌ ಸಿಟಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದರು. ‘ನಿರ್ವಹಣೆ ಕೊರತೆಯಿಂದ ಮಾಡಿದ್ದ ಅಭಿವೃದ್ಧಿ ಕಾರ್ಯ ಹಾಳಾಗಿದೆ. ಮತ್ತೆ ಅಲ್ಲಿಯೇ ಹಣ ಹಾಕಿದರೆ ಹೇಗೆ?’ ಎಂಬ ಪ್ರಶ್ನೆಯೇ ಅವಳಿ ನಗರದ ನಾಗರಿಕದ್ದರೂ ಆಗಿದೆ.

ಸ್ಮಾರ್ಟ್‌ ಸಿಟಿ ಯೋಜನೆ ಜಾರಿಗೆ ಕೆಲವು ನಿಯಮಾವಳಿಗಳನ್ನು ರೂಪಿಸ ಲಾಗಿದೆ. ಅದರ ಪಾಲನೆಗಾಗಿಯೇ ಜನರಿಗೆ ಅಗತ್ಯವಿಲ್ಲದಿರುವ ಯೋಜನೆಗಳೂ ಸೇರಿಕೊಂಡಿವೆ. ಗ್ರೀನ್‌ ಕಾರಿಡಾರ್ ನಿರ್ಮಾಣ ಮಾಡಬೇಕು ಎಂಬ ನಿಯಮಾವಳಿಯಿಂದಾಗಿ, ಈಗಾಗಲೇ ಅಭಿವೃದ್ಧಿ ಪಡಿಸಿರುವ ಉಣಕಲ್‌, ತೋಳನಕೆರೆಗಳ ಅಭಿವೃದ್ಧಿಗೆ ₹72 ಕೋಟಿ ಖರ್ಚು ಮಾಡಲಾಗುತ್ತಿದೆ.

ಅವಳಿ ನಗರದಲ್ಲಿ ವಾಹನಗಳ ಪಾರ್ಕಿಂಗ್‌ ಬಹುದೊಡ್ಡ ಸಮಸ್ಯೆ ಯಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಒಂದು ಕಡೆ ಮಾತ್ರ ₹50 ಕೋಟಿ ವೆಚ್ಚದಲ್ಲಿ ಮಲ್ಟಿ ಪಾರ್ಕಿಂಗ್‌ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇವುಗಳ ಸಂಖ್ಯೆ ಹೆಚ್ಚಬೇಕಿತ್ತು ಎನ್ನುತ್ತಾರೆ ವ್ಯಾಪಾರಸ್ಥರು.

57 ಕಾಮಗಾರಿಗಳಲ್ಲಿ ಕೇವಲ 10 ಕಾಮಗಾರಿಗಳು ಪೂರ್ಣಗೊಂಡಿವೆ. ಇವುಗಳ ಒಟ್ಟು ಮೊತ್ತ ₹11.87 ಕೋಟಿ. 41 ಕಾಮಗಾರಿ ಪ್ರಗತಿಯಲ್ಲಿವೆ. ಎರಡು ಟೆಂಡರ್ ಹಂತದಲ್ಲಿದ್ದರೆ, ಮೂರು ಡಿಪಿಆರ್‌ ಹಂತದಲ್ಲಿವೆ.

ಇದನ್ನೂ ಓದಿ...ಭಾನುವಾರದ ವಿಶೇಷ: ‘ಸ್ಮಾರ್ಟ್‌ ಸಿಟಿ’ಗೆ ಗ್ರಹಣ

ರಾಜ್ಯಕ್ಕೆ ಐದನೇ ಸ್ಥಾನ: ರಾಜ್ಯದಲ್ಲಿ ಏಳು ನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಗೆ 5ನೇ ಸ್ಥಾನ ಲಭಿಸಿದೆ.

ಹತ್ತು ಎಂ.ಡಿ: ಸ್ಮಾರ್ಟ್‌ ಸಿಟಿ ಯೋಜನೆ ಜಾರಿಗೊಂಡ ಮೂರು ವರ್ಷಗಳಲ್ಲಿ ಹತ್ತು ಮಂದಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಮೇಲಿಂದ ಮೇಲೆ ಅವರ ಬದಲಾವಣೆಯೂ ಪ್ರಗತಿಗೆ ಅಡ್ಡಿಯಾಗಿದೆ. ಈಗಿರುವ ಶಕೀಲ್‌ ಅಹ್ಮದ್‌ ಅವರೇ ನಾಲ್ಕನೇ ಬಾರಿಗೆ ಎಂ.ಡಿ. ಆಗಿದ್ದಾರೆ.

₹47 ಕೋಟಿ ಬಡ್ಡಿ
ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿದ ಅನುದಾನ ಖರ್ಚು ಮಾಡದೇ ಬ್ಯಾಂಕಿನಲ್ಲಿಟ್ಟಿರುವ ಠೇವಣಿಯಿಂದ ₹47 ಕೋಟಿ ಬಡ್ಡಿ ಬಂದಿದೆ!

ಯೋಜನೆ ಆರಂಭದಿಂದಲೂ ಠೇವಣಿ ಇಡಲಾಗುತ್ತಿತ್ತು. ಈಗ ₹300 ಕೋಟಿ ಮೊತ್ತವನ್ನು ಬ್ಯಾಂಕ್‌ನಲ್ಲಿಟ್ಟು, ಬಡ್ಡಿ ಪಡೆಯಲಾಗುತ್ತಿದೆ.

*
ಭವಿಷ್ಯ ಗಮನದಲ್ಲಿಟ್ಟುಕೊಂಡು ಸಮಗ್ರ ಯೋಜನೆ ರೂಪಿಸಬೇಕಿತ್ತು. ಬಿಡಿಬಿಡಿಯಾದ ಕಾಮಗಾರಿಗಳಿಂದ ಅಭಿವೃದ್ಧಿಯ ಪ್ರಯೋಜನ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭಿಸುವುದಿಲ್ಲ.
–ಅಶೋಕ ಶೆಟ್ಟರ್, ಉಪಾಧ್ಯಕ್ಷ, ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ವೇದಿಕೆ

*
ಸ್ಮಾರ್ಟ್‌ ಸಿಟಿ ಯೋಜನೆ ಸಮಿತಿಯಲ್ಲಿ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳಿಗೆ ಅವಕಾಶವಿಲ್ಲ. ಅಧಿಕಾರಿಗಳು ಮಾತ್ರ ಇದ್ದಾರೆ. ಕೆಸಿಸಿಐ ವತಿಯಿಂದ ಸಲಹೆ ನೀಡಲಾಗಿತ್ತು. ಅದರಲ್ಲಿ ಕೆಲವನ್ನು ಪರಿಗಣಿಸಿಲ್ಲ
–ಮಹೇಂದ್ರ ಲದ್ದಡ, ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು