ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಹೆಚ್ಚುತ್ತಿವೆ ಕಳವು ಪ್ರಕರಣ, ಬೇಕಿದೆ ಕಡಿವಾಣ

Published : 18 ಮಾರ್ಚ್ 2024, 4:37 IST
Last Updated : 18 ಮಾರ್ಚ್ 2024, 4:37 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿ ದೊಡ್ಡ ನಗರ, ಸ್ಮಾರ್ಟ್‌ ಸಿಟಿ, ವಾಣಿಜ್ಯನಗರಿ, ವಿದ್ಯಾಕಾಶಿ ಎಂದೆಲ್ಲ ಕರೆಸಿಕೊಳ್ಳುತ್ತಿರುವ ಹುಬ್ಬಳ್ಳಿ–ಧಾರವಾಡ ಮಹಾನಗರಕ್ಕೆ ಈ ಹಿಂದೆ ‘ಛೋಟಾ ಮುಂಬೈ’ ಎಂದು ಕರೆಯುತ್ತಿದ್ದರು. ಮುಂಬೈನಲ್ಲಿ ಅಪರಾಧ ಚಟುವಟಿಕೆಗಳು ನಡೆಯುವಂತೆ, ಇಲ್ಲಿಯೂ ಮಿತಿಮೀರಿ ನಡೆಯುತ್ತಿತ್ತು! ಇಲ್ಲಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಲ್ಲಿಯ ಸಂಪರ್ಕವೂ ಇರುತ್ತಿತ್ತು.

ಕಳೆದ ಎರಡು ದಶಕಗಳ ಹಿಂದೆ ಅವಳಿನಗರ ‘ಛೋಟಾ ಮುಂಬೈ’ ಕುಖ್ಯಾತಿಯ ಹಣೆಪಟ್ಟಿ ಕಳಚಿಕೊಂಡಿದೆಯಾದರೂ, ಬೆಟ್ಟಿಂಗ್‌, ಗಾಂಜಾ ಮತ್ತು ಡ್ರಗ್ಸ್‌ ಸಾಗಾಟ, ಮಾರಾಟದಂಥ ಅಪರಾಧ ಚಟುವಟಿಕೆಗಳಿಗೆ ಈಗಲೂ ನಂಟು ಇಟ್ಟುಕೊಂಡಿದೆ. ಈ ದಂಧೆಯ ಸೂತ್ರದಾರರು ಮುಂಬೈ ಅಪರಾಧ ಜಗತ್ತಿನ ಕಿಂಗ್‌ಪಿನ್‌ಗಳು ಎನ್ನುವುದು ಪೊಲೀಸರ ಅಭಿಪ್ರಾಯ.

ಆಗಾಗ ಅವಳಿನಗರದಲ್ಲಿ ಕೆಲವು ಗಂಭೀರ ಪ್ರಕರಣಗಳು ನಡೆದು, ರಾಷ್ಟ್ರ, ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತವೆ. ಕೊಲೆ, ಹಲ್ಲೆ, ದರೋಡೆ, ಸುಲಿಗೆ, ಕಳವು ಪ್ರಕರಣಗಳು ನಿತ್ಯ ನಿರಂತರ. ಸಿಸಿಟಿವಿ ಕ್ಯಾಮೆರಾಗಳು ಇದ್ದರೂ, ಬೈಕ್‌ ಕಳವು, ಮಹಿಳೆಯರ ಮೈಮೇಲಿನ ಚಿನ್ನಾಭರಣ ಕಿತ್ತು ಪರಾರಿಯಾಗುವುದು ಸಾಮಾನ್ಯ. ಮಾರುಕಟ್ಟೆ ಪ್ರದೇಶಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಪಿಕ್‌ ಪಾಕೆಟ್‌ ಮಾಡುವವರ ತಂಡ ಸಕ್ರಿಯವಾಗಿದೆ. ಆದರೆ, ಎರಡು ತಿಂಗಳ ಈಚೆಗೆ ಮೊಬೈಲ್‌ ಕಳವು ಪ್ರಕರಣಗಳ ಸಂಖ್ಯೆ ಮಾತ್ರ ಕಡಿಯಾಗುತ್ತಿದೆ.

ನಗರದಲ್ಲಿರುವ ಕೆಲವು ರೌಡಿಗಳು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳದೆ, ತಮ್ಮ ಸಹಚರರ ಅಥವಾ ಹಿಂಬಾಲಕರ ಮುಖಾಂತರ ಪರೋಕ್ಷವಾಗಿ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಕೆಲವರು ಗುಂಪುಕಟ್ಟಿಕೊಂಡು ಹಲ್ಲೆ ನಡೆಸುವುದು, ಜೀವ ಬೆದರಿಕೆ ಹಾಕುವುದು, ಕೋರ್ಟ್‌ನಲ್ಲಿ ಸುಳ್ಳು ಸಾಕ್ಷಿ ಹೇಳುವಂತೆ ಬೆದರಿಸುವುದು, ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಓಡಾಡುವುದು, ಸಾರ್ವಜನಿಕ ಸ್ಥಳದಲ್ಲಿ ಅಶಾಂತಿ ಉಂಟು ಮಾಡುವುದನ್ನು ಸಹ ಮಾಡುತ್ತಿದ್ದಾರೆ. ಪದೇಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಆರು ರೌಡಿಗಳನ್ನು ಕಳೆದ ಆರು ತಿಂಗಳಿನಲ್ಲಿ ಬೇರೆಬೇರೆ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಇಲಾಖೆಯ ಅಂಕಿ–ಸಂಖ್ಯೆ ಪ್ರಕಾರ ಕೋವಿಡ್‌ ನಂತರ ಅವಳಿನಗರದಲ್ಲಿ ಮನೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಮೂರು ವರ್ಷಗಳ ಅವಧಿಯಲ್ಲಿ 1,194 ಕಳವು ಪ್ರಕರಣಗಳು ದಾಖಲಾಗಿದ್ದು, ₹2 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಆಗಿದೆ.

‘ಮನೆಗೆ ಬೀಗ ಹಾಕಿ ನಾಲ್ಕು–ಐದು ದಿನ ಹೊರಗಡೆ ಹೋಗುವಾಗ ಅಕ್ಕಪಕ್ಕದ ನಿವಾಸಿಗಳಿಗೆ ಅಥವಾ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಜಾಗೃತಿ ಮೂಡಿಸುತ್ತಿದ್ದರೂ, ಸಾರ್ವಜನಿಕರು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಪೊಲೀಸರು ದೂರಿದರೆ, ‘ಕಾಟಾಚಾರಕ್ಕೆನ್ನುವಂತೆ ರಾತ್ರಿ ಪೊಲೀಸ್‌ ಗಸ್ತು ನಡೆಯುತ್ತಿದೆ. ಸ್ಮಾರ್ಟ್‌ ಬೀಟ್‌ ಬಂದ ನಂತರ ಪೊಲೀಸರಿಗೆ ‘ಬೀಟ್‌ ಪಂಚ್‌’ ಗುರಿ ಸಾಧಿಸುವುದೇ ದೊಡ್ಡ ಕರ್ತವ್ಯವಾಗಿದೆ’ ಎನ್ನುವುದು ಸಾರ್ವಜನಿಕರ ಪ್ರತ್ಯಾರೋಪ.

ಒಂದೊಂದು ಠಾಣೆಯಲ್ಲಿ ಐದು–ಆರು ರಾತ್ರಿ ಬೀಟ್‌ಗಳಿದ್ದು, ನಿಗದಿತ ಸಮಯಕ್ಕೆ ನಿಗದಿತ ಸ್ಥಳದಲ್ಲಿ ಇಟ್ಟಿರುವ ಬೀಟ್‌ ಪಂಚ್‌ ಮಾಡಬೇಕು. ಮೊಬೈಲ್‌ನಲ್ಲಿ ಅಳವಡಿಸಿಕೊಂಡಿರುವ ಸ್ಮಾರ್ಟ್‌ ಬೀಟ್‌ನ ಆ್ಯಪ್‌, ಜಿಪಿಎಸ್‌ ಮೂಲಕ ಕಾರ್ಯ ನಿರ್ವಹಿಸುವುದರಿಂದ, ಯಾವ ಸ್ಥಳಕ್ಕೆ, ಯಾವ ಸಿಬ್ಬಂದಿ ಯಾವ ಸಮಯಕ್ಕೆ ತಲುಪಿ ಪಂಚ್‌ ಮಾಡಿದ್ದಾರೆ ಎನ್ನುವ ಮಾಹಿತಿ ನಿಖರವಾಗಿ ದೊರೆಯುತ್ತದೆ. ಪಂಚ್‌ ಮಿಸ್‌ ಮಾಡಿದರೆ, ಠಾಣಾಧಿಕಾರಿ ತರಾಟೆಗೆ ತೆಗೆದುಕೊಳ್ಳುತ್ತಾರೆ ಎನ್ನುವ ಭಯದಿಂದ, ಸಿಬ್ಬಂದಿ ಪಂಚ್‌ ಗುರಿ ಸಾಧಿಸುವ ಕಡೆ ಗಮನ ಹರಿಸಿರುತ್ತಾರೆ. ಇದರಿಂದ ಮೊದಲು ಪಂಚ್‌ ಮಾಡಿದ ಸ್ಥಳದಲ್ಲಿ ಕಳವು, ದರೋಡೆ ನಡೆದರೂ ಅವರ ಗಮನಕ್ಕೆ ಬರುವುದಿಲ್ಲ. ಆರು ತಿಂಗಳ ಹಿಂದೆ ಗೋಕುಲ ರಸ್ತೆಯ ಬಸವೇಶ್ವರ ನಗರದಲ್ಲಿ ನಡೆದ ದರೋಡೆ ಪ್ರಕರಣ ಇದಕ್ಕೆ ನಿದರ್ಶನ.

‘ಬಸವೇಶ್ವರ ನಗರದ ಉದ್ಯಮಿ ಉಲ್ಲಾಸ ದೊಡ್ಡಮನಿ ಅವರ ಮನೆಯ ಕಿಟಕಿಯ ಸರಳು ಮುರಿದು, ಒಳಗಿದ್ದವರನ್ನು ಕಟ್ಟಿ ಹಾಕಿ ₹70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಸೆ. 20ರ ತಡರಾತ್ರಿ 1.30ರಿಂದ 3.30ರ ಒಳಗೆ ಪ್ರಕರಣ ನಡೆದಿದೆ. ಗೋಕುಲ ಠಾಣೆಯ ಬೀಟ್‌ ನಂ. 3ರ ಸಿಬ್ಬಂದಿ ರಾತ್ರಿ 1.20ಕ್ಕೆ ಇಲ್ಲಿಯೇ ಇರುವ ಎಸಿಪಿ ಒಬ್ಬರ ಮನೆ ಬಳಿ ಬೀಟ್‌ ಪಂಚ್‌ ಮಾಡಿದ್ದಾರೆ. ಆ ವೇಳೆ ಕಳವು ಆರೋಪಿಗಳು ದೊಡ್ಡಮನಿ ಅವರ ಮನೆ ಎದುರು ಇರುವ ಉದ್ಯಾನದಲ್ಲಿ ಇದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಈ ಮಾಹಿತಿ ಪೊಲೀಸರಿಗೆ ತಿಳಿದು ಬಂದಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಇತ್ತೀಚಿಗೆ ಲಿಂಗರಾಜನಗರದ ಜೋಶಿ ಅವರ ಮನೆ ಬಾಗಿಲು ಮುರಿದು 80 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ. ಅವರು ಕುಟುಂಬ ಸಮೇತ ಮನೆಗೆ ಬೀಗ ಹಾಕಿ ಪುಣೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸುವ ಕಳ್ಳರು, ಸಮಯ ನೋಡಿ ಕಳವು ಮಾಡುತ್ತಾರೆ. ಹಗಲಿನ ವೇಳೆ ಅವರ ವೇಷಭೂಷಣ ಬೇರೆ ಇದ್ದರೆ, ಕಳವು ಮಾಡುವ ಸಂದರ್ಭವೇ ಬೇರೆ ಇರುತ್ತದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ, ನಿಖರವಾದ ಚಹರೆ ಸಿಗಬಾರದು ಎಂದು ಹೀಗೆ ಮಾಡುತ್ತಾರೆ’ ಎಂದು ಪೊಲೀಸರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT