ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರಂತರ ಮಳೆ, ಹವಾಮಾನ ವೈಪರೀತ್ಯದಿಂದ ಸಂಕಷ್ಟ: ರಾಷ್ಟ್ರಧ್ವಜಕ್ಕೆ ತಗ್ಗಿದ ಬೇಡಿಕೆ

Published : 3 ಆಗಸ್ಟ್ 2024, 5:55 IST
Last Updated : 3 ಆಗಸ್ಟ್ 2024, 5:55 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ರಾಜ್ಯಗಳಿಗೆ ಖಾದಿ ರಾಷ್ಟ್ರಧ್ವಜವನ್ನು ತಯಾರಿಸಿ ತಲುಪಿಸುವ ದೇಶದ ಏಕೈಕ ಕೇಂದ್ರ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (ಕೆಕೆಜಿಎಸ್‌ಎಸ್‌) ರಾಷ್ಟ್ರಧ್ವಜಗಳ ಬೇಡಿಕೆ ಶೇ 50ರಷ್ಟು ಕುಸಿದಿದೆ. ಇದಕ್ಕೆ ನಿರಂತರ ಮಳೆ, ಹವಾಮಾನ ವೈಪರೀತ್ಯ, ಪ್ರವಾಹ ಮತ್ತು ರಸ್ತೆ ಸಂಚಾರ ಸಮಸ್ಯೆ ಕಾರಣವಾಗಿದೆ.

‘ಕಳೆದ ಸಲ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದಾಖಲೆಯ ವಹಿವಾಟು ನಡೆದಿತ್ತು. ಪ್ರತಿ ವರ್ಷ ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಯುತ್ತದೆ. ಆದರೆ, ಈ ಸಲ ಜುಲೈ ವರೆಗೆ ₹97 ಲಕ್ಷ ಮೊತ್ತದ ವಹಿವಾಟು ಮಾತ್ರ ನಡೆದಿದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭಾರತೀಯ ಮಾನಕ ಸಂಸ್ಥೆ (ಬಿಐಎಸ್‌) ಪ್ರಕಾರ 9 ವಿವಿಧ ಅಳತೆಯ ಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. 21x14, 12x8, 9x6, 6x4, 4.5x3, 3x2, 1.5 1, 9x6 ಹಾಗೂ 6x4 ಅಳತೆಯ ಧ್ವಜಗಳನ್ನು ಸಿದ್ಧಪಡಿಸಿ, ಮಾರುತ್ತೇವೆ. ಅಳತೆಗೆ ತಕ್ಕಂತೆ ₹ 250 ರಿಂದ ₹ 30 ಸಾವಿರವರೆಗೆ ದರವಿದೆ’ ಎಂದರು.

‘ಇಲ್ಲಿ ಉತ್ಪಾದನೆಯಾಗುವ ಖಾದಿ ಅಂಗಿ, ಪ್ಯಾಂಟ್, ಟವೆಲ್, ಕರವಸ್ತ್ರ, ಟೊಪ್ಪಿಗೆ, ಜಮಖಾನಿಯಂತಹ ವಸ್ತುಗಳಿಗೂ ಬೇಡಿಕೆ ತಗ್ಗಿದೆ. ನಗರ ಪ್ರದೇಶ ಮತ್ತು ಖಾದಿ ಬಗೆಗೆ ತಿಳಿದವರು ಮಾತ್ರ ಖರೀದಿಸುತ್ತಾರೆ’ ಎಂದು ಅವರು ತಿಳಿಸಿದರು.

ಶೇ 50ರಷ್ಟು ಸಿಬ್ಬಂದಿ ಕೊರತೆ:

‘ವೀವಿಂಗ್, ಸ್ಪಿನ್ನಿಂಗ್ ಕೆಲಸಕ್ಕೆ ಸಿಬ್ಬಂದಿ ಬೇಕು. ಆದರೆ, ಕೆಲಸಕ್ಕೆ ಜನ ಬರುತ್ತಿಲ್ಲ. ಬಾಗಲಕೋಟೆ, ಬಾದಾಮಿ, ಬೀಳಗಿಯಲ್ಲಿ 21 ಹಳ್ಳಿಗಳಲ್ಲಿ ಸಂಘದ ಕಚೇರಿಗಳಿವೆ. ಧ್ವಜ ಉತ್ಪಾದನೆಗೆ ಬಳಸುವ ಕೆಲ ಕಚ್ಚಾ ಸಾಮಗ್ರಿಗಳ ಮೇಲಿನ  ಜಿಎಸ್‌ಟಿಯಿಂದ ಆರ್ಥಿಕ ಹೊರೆ ಹೆಚ್ಚಿದೆ. ಆಯಾ ವಸ್ತುಗಳ ಮೇಲೆ ತೆರಿಗೆ ಮುಕ್ತಗೊಳಿಸಿದರೆ ಅನುಕೂಲ’ ಎಂದರು.

ಉತ್ಪಾದನೆ ಮೇಲೆ ಹೊಡೆತ:

‘ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಗರಗ ಕೇಂದ್ರಕ್ಕೆ 2023ರ ಜುಲೈ 23ರಿಂದ 2/3 ಅಳತೆಯ ಧ್ವಜ ತಯಾರಿಕೆಗೆ ಅನುಮತಿ ಸಿಕ್ಕಿದ್ದು, ಈವರೆಗೆ ಅಂದಾಜು ₹10 ಲಕ್ಷ ವಹಿವಾಟು ಆಗಿದೆ. ಅಲ್ಲಿಯೂ ಹವಾಮಾನ ವೈಪರೀತ್ಯ, ಕಚ್ಚಾ ಸಾಮಗ್ರಿ ಪೂರೈಕೆ ಮತ್ತು ಸಿಬ್ಬಂದಿ ಕೊರತೆಯಿಂದ ಉತ್ಪಾದನೆಗೆ ಸಮಸ್ಯೆಯಾಗಿದೆ.

‘ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಹವಾಮಾನ ತಂಪಾಗಿ ನೂಲು, ಬಟ್ಟೆಗೆ ಹಾಕಿದ್ದ ಮಸಿ ಒಣಗುತ್ತಿಲ್ಲ. ಇದರಿಂದ ಉತ್ಪಾದನೆ ನಿಧಾನವಾಗಿದೆ’ ಎಂದು ಧಾರವಾಡದ ಗರಗದ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರದ ಚೇರ್‌ಮನ್ ಈಶ್ವರಪ್ಪ ತಿಳಿಸಿದರು.

‘ಶಕ್ತಿ’ ಪರಿಣಾಮ: ‘ಕೌಶಲ ಆಧಾರಿತ ಸಿಬ್ಬಂದಿಯ ಅಗತ್ಯವಿದೆ. ಆದರೆ ಇಲ್ಲಿ ಸಿಬ್ಬಂದಿಗೆ ಸಿಗುವ ಸಂಬಳವೂ ಕಡಿಮೆ. ದಿನಕ್ಕೆ ಅಂದಾಜು ₹ 230 ರಿಂದ ₹250 ಸಿಗಬಹುದು.‌ ಅದಕ್ಕೆ ಕೆಲಸಕ್ಕೆ ಬರಲು ಜನರು ಜನ ಹಿಂದೇಟು ಹಾಕುತ್ತಾರೆ. ಮಹಿಳೆಯರು ಶಕ್ತಿ ಯೋಜನೆಯಡಿ ಕೆಲಸಕ್ಕೆಂದು ಪರ ಊರುಗಳಿಗೆ ಹೋಗುತ್ತಾರೆ. ಇಲ್ಲಿ ಕೆಲಸಕ್ಕೆ ಬರುವವರು ಇಲ್ಲದಂತಾಗಿದೆ’ ಎಂದರು.

ಪ್ಲಾಸ್ಟಿಕ್ ಸಿಂಥೆಟಿಕ್ ಧ್ವಜಗಳ ತಯಾರಿಕೆ ನಿಲ್ಲಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರಾಷ್ಟ್ರಧ್ವಜದ ಬಗ್ಗೆ ಗೌರವ ಮೂಡಿಸುವ ಪಠ್ಯವನ್ನು 5ನೇ ತರಗತಿಯಿಂದ ಪಿಯುಸಿವರೆಗೆ ಅಳವಡಿಸಬೇಕು.
–ಈಶ್ವರಪ್ಪ ಅಧ್ಯಕ್ಷ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ ಗರಗ ಧಾರವಾಡ
ಛತ್ತೀಸಗಢ ಕೋಲ್ಕತ್ತಾ ಉತ್ತರ ಪ್ರದೇಶ ಪಶ್ಚಿಮ ಬಂಗಾಳ ರಾಜ್ಯದಿಂದ ರಾಷ್ಟ್ರಧ್ವಜಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ಸಲ ಆ ರಾಜ್ಯಗಳಿಂದಲೂ ಹೆಚ್ಚಿನ ಬೇಡಿಕೆ ಬಂದಿಲ್ಲ.
–ಶಿವಾನಂದ ಮಠಪತಿ ಕಾರ್ಯದರ್ಶಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆ ಬೆಂಗೇರಿ ಹುಬ್ಬಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT