ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಅಪೂರ್ಣ ಕಾಮಗಾರಿ: ಸಂಚಾರ ದುಸ್ತರ

Published 15 ಫೆಬ್ರುವರಿ 2024, 6:56 IST
Last Updated 15 ಫೆಬ್ರುವರಿ 2024, 6:56 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ವಾರ್ಡ್ ಸಂಖ್ಯೆ 54ರ ವ್ಯಾಪ್ತಿಯ ಹೆಗ್ಗೇರಿ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ಕುಡಿಯುವ ನೀರಿನ ಪೈಪ್ ದುರಸ್ತಿಗಾಗಿ ತೋಡಿದ್ದ ಗುಂಡಿಯಿಂದ ವಾಹನ ಸವಾರರು ಹೈರಾಣ ಆಗಿದ್ದಾರೆ. ಬೀದಿ ಬದಿಯ ವಿವಿಧ ಅಂಗಡಿಯವರು ವಾಹನಗಳ ಸದ್ದಿನಿಂದ ಕಿರಿಕಿರಿ ಅನುಭವಿಸುವಂತಾಗಿದೆ.

ವಾರದ ಹಿಂದೆ ಕುಡಿಯುವ ನೀರಿನ ಪೈಪ್ ದುರಸ್ತಿಗೆ ಗುಂಡಿ ತೋಡಲಾಗಿತ್ತು. ಆದರೆ, ಅಗತ್ಯ ಸಾಮಗ್ರಿ ಕೊರತೆಯಿಂದ ದುರಸ್ತಿ ಕಾರ್ಯ ಸ್ಥಗಿತಗೊಳಿಸಲಾಗಿದೆ. ಸಂಚಾರಕ್ಕೆ ತೊಂದರೆ ಆಗದಿರಲಿ ಎಂದು ಪೊಲೀಸರು ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಿ, ಅದರ ಮುಂದೆ ಬ್ಯಾರಿಕೇಡ್‌ ನಿಲ್ಲಿಸಿದ್ದಾರೆ. ಇದನ್ನು ಸುತ್ತಿ ಬಳಸಿ ವಾಹನಗಳು ಸಂಚರಿಸಬೇಕಿದೆ.

ಇದು ಇಂಡಿ ಪಂಪ್, ಸಿದ್ಧಾರೂಢ ಮಠ, ಕಾರವಾರ ರಸ್ತೆ, ನಗರ ಆರೋಗ್ಯ ಕೇಂದ್ರ ಸಂಪರ್ಕಿಸುವ ಪ್ರಮುಖ ರಸ್ತೆ ಆಗಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ, ವಾಹನ ದಟ್ಟಣೆ ಸಮಸ್ಯೆ ಉಂಟಾಗಿದೆ. ಏಕಕಾಲಕ್ಕೆ ನಾಲ್ಕು ರಸ್ತೆಗಳಿಂದ ವಾಹನಗಳು ಬರುವ ಕಾರಣ ಸುಗಮ ಸಂಚಾರಕ್ಕೆ ತೊಡಕಾಗಿದೆ. ಇದರ ಮಧ್ಯೆ ಭಾರಿ ವಾಹನಗಳು ಬಂದರೆ ಕೆಲಕಾಲ ಸಂಚಾರ ಸ್ಥಗಿತವೂ ಆಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಶಾಲಾ–ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಸಾರ್ವಜನಿಕರ ಓಡಾಟವೂ ಹೆಚ್ಚಿರುತ್ತದೆ.

‘ಮುಖ್ಯರಸ್ತೆಯ ಮಧ್ಯೆಯೇ ಹೀಗಿರು ವುದರಿಂದ ವ್ಯಾಪಾರ ಆಗುತ್ತಿಲ್ಲ. ಗ್ರಾಹಕರು ವಾಹನ ನಿಲ್ಲಿಸಲು ಸ್ಥಳವಿಲ್ಲದೆ ಹಿಂದಿರುಗುತ್ತಿದ್ದಾರೆ. ಬಿಸಿ ಲಿನ ತಾಪದ ಜೊತೆ ವಾಹನಗಳ ಸದ್ದು, ಕಿರಿಕಿರಿ ಆಗುತ್ತಿದೆ. ಸಂಜೆ 4ರಿಂದ ರಾತ್ರಿ 9ರವರೆಗೆ ವಾಹನ ದಟ್ಟಣೆ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ವಯೋವೃದ್ಧರು ರಸ್ತೆ ಮಧ್ಯೆ ಓಡಾಡುವುದು ಕಷ್ಟಕರ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು’ ಎಂದು ರಸ್ತೆಬದಿ ವಾಹನ ರಿಪೇರಿ ಮಾಡುವ ವಿಷ್ಣು ಪವಾರ ತಿಳಿಸಿದರು.

‘ವಾಹನಗಳ ಸಂಚಾರ ಹೆಚ್ಚಾಗಿದ್ದು, ಅಂಗಡಿಗೆ ಬರುವ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ವಾಹನ ನಿಲ್ಲಿಸಿ ಒಂದೆರೆಡು ವಸ್ತು ಖರೀದಿಸುವಷ್ಟರಲ್ಲೇ ಬೇರೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಇದರಿಂದ ಗ್ರಾಹಕರು ಹಿಂತಿರುಗುತ್ತಿದ್ದು, ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ’ ಎಂದು ರೇಣುಕಾ ಫ್ಯಾನ್ಸಿ ಸ್ಟೋರ್‌ ಮಾಲೀಕ ಮಂಜು ನಾಥ ಆಲೂರ ಹೇಳಿದರು.

‘ಭಾರಿ ಗಾತ್ರದ ವಾಹನಗಳು ತಗ್ಗಿನಲ್ಲಿ ಸಿಕ್ಕಿಕೊಳ್ಳುತ್ತಿದ್ದು, ಅದರಿಂದ ಹೊರಬರಲು ವಾಹನ ಚಾಲಕರು ಹರಸಾಹಸ ಪಡುತ್ತಿದ್ದಾರೆ. ರಸ್ತೆ ದುರಸ್ತಿ ಆಗುವವರೆಗೆ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಬೇಕು. ಇಲ್ಲವೇ ತಾತ್ಕಾಲಿಕವಾಗಿ ಬೇರೆ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದರು.

ಕುಡಿಯುವ ನೀರಿನ ಪೈಪ್ ಒಡೆದು ರಸ್ತೆ ಮೇಲೆ ನೀರು ಹರಿಯುತ್ತಿದ್ದರಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಅಗತ್ಯ ಸಾಮಗ್ರಿ ಕೊರತೆಯಿಂದ ದುರಸ್ತಿ ಕಾರ್ಯ ಸ್ಥಗಿತಗೊಳಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿಯವರು ದುರಸ್ತಿ ಮಾಡುವುದಾಗಿ ಹೇಳಿದ್ದಾರೆ’ ಎಂದು ವಾರ್ಡ್‌ ಸದಸ್ಯೆ ಸರಸ್ವತಿ ವಿನಾಯಕ ದೊಂಗಡಿ ತಿಳಿಸಿದರು.

ಶೇ 80ರಷ್ಟು ಕಾಮಗಾರಿ ಮುಗಿದಿದೆ. ಅಗತ್ಯ ಪೈಪ್‍ ಬೇಕಾಗಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸುತ್ತೇವೆ
ರಾಮ್ ಕುಂಜ, ಎಲ್ ಆ್ಯಂಡ್‌ ಟಿ ಕಂಪನಿ ಉಸ್ತುವಾರಿ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT