ಮಂಗಳವಾರ, ಏಪ್ರಿಲ್ 20, 2021
27 °C
ಅವಳಿನಗರದ ಕೈಗಾರಿಕಾ ಸ್ಥಳಗಳಿಗೆ ಭೇಟಿ

ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ: ಸಚಿವ ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ಒದಗಿಸಲು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‌ಎಸ್ಐಡಿಸಿ) ಮೂಲಕ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಅವಳಿನಗರದ ಕೈಗಾರಿಕಾ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಕೈಗಾರಿಕಾ ಪ್ರದೇಶಗಳಲ್ಲಿ ಸೌಕರ್ಯಗಳ ನಿರ್ವಹಣೆಗೆ ವಿಧಿಸುವ ತೆರಿಗೆ ಆಕರಣೆ ಹಾಗೂ ನಿರ್ವಹಣೆ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರ ಪರಿಹಾರ ಒದಗಿಸಲಾಗುವುದು’ ಎಂದರು.

ಟೌನ್‌ಶಿಫ್ ನಿರ್ಮಾಣ

‘ನೂತನ ಕೈಗಾರಿಕಾ ನೀತಿಯಲ್ಲಿ ಟೌನ್‌ಶಿಫ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅದರಂತೆ, ರಾಜ್ಯದ ನಾಲ್ಕೈದು ಕಡೆ ಯೋಜನೆ ರೂಪಿಸಲಾಗಿದ್ದು, ಹುಬ್ಬಳ್ಳಿಯ ತಾರಿಹಾಳದಲ್ಲಿ ಮೊದಲ ಟೌನ್‌ಶಿಫ್ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ನೂತನ ಕೈಗಾರಿಕಾ ನೀತಿಯಲ್ಲಿ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಧಾರವಾಡದಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಉಲ್ಲಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ವಿಜನ್ ಗ್ರೂಪ್ ರಚಿಸಲಾಗಿದೆ. ಈ ಸಮಿತಿ ಈಗಾಗಲೇ ಕಾರ್ಯ ಆರಂಭಿಸಿದೆ’ ಎಂದು ಹೇಳಿದರು.

ಏರಿಕೆಗೆ ಅಸಮಾಧಾನ

ಕೆಐಡಿಬಿ‌ ಮತ್ತು ಕೆಎಸ್‌ಎಸ್ಐಡಿಸಿ ಹಂಚಿಕೆ ಮಾಡಿರುವ ನಿವೇಶನಗಳ ತಾತ್ಕಾಲಿಕ ಬೆಲೆ ಮತ್ತು ಅಂತಿಮ ಬೆಲೆಯಲ್ಲಿ ಭಾರೀ ವ್ಯತ್ಯಾಸ, ಮೌಲ್ಯ ಪರಿಷ್ಕರಣೆ ಕುರಿತು ಸಭೆಯಲ್ಲಿದ್ದ ಉದ್ಯಮಿಗಳು ಹಾಗೂ ಕೈಗಾರಿಕಾ ಸಂಘಗಳ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆಐಡಿಬಿಯ ಸಿಇಒ ಡಾ.ಎನ್. ಶಿವಶಂಕರ್ ಮತ್ತು ಕೆಎಸ್‌ಎಸ್ಐಡಿಸಿಯ ವ್ಯವಸ್ಥಾಪಕ ನಿರ್ದೇಶಕ ಮಹೇಶ ಶಿರೂರ, ‘ಸರ್ಕಾರದ ಮಾನದಂಡದಂತೆಯೇ ನಿವೇಶನಕ್ಕೆ ಅಂದಾಜು ಬೆಲೆ ನಿಗದಿ ಮಾಡಲಾಗುತ್ತಿದೆ. ಇದು ಅವೈಜ್ಞಾನಿಕ ಎಂಬ ಮಾತುಗಳ ಕೇಳಿ ಬಂದಿದ್ದವು. ಹಾಗಾಗಿ, ತಾತ್ಕಾಲಿಕ ಬೆಲೆ ಬಳಿಕ ಎರಡು ವರ್ಷದೊಳಗೆ ಅಂತಿಮ ಬೆಲೆ ನಿಗದಿಪಡಿಸಬೇಕು. ಅದು ಶೇ 20ರಷ್ಟು ಮೀರಬಾರದು ಎಂಬ ನಿಯಮ ರೂಪಿಸಲಾಗಿದೆ. ಪ್ರತಿ ವರ್ಷ ನಿವೇಶನಗಳ ಮೌಲ್ಯ ಪರಿಷ್ಕರಿಸುವ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು’ ಎಂದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ‘ನಿಗಮವು ಹಂಚಿಕೆ ಮಾಡುವ ನಿವೇಶನಗಳ ದರವನ್ನು ನ್ಯಾಯಯುತವಾಗಿ ಪರಿಷ್ಕರಣೆ ಮಾಡಲಾಗುವುದು’ ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ, ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ, ವಿವಿಧ ಕೈಗಾರಿಕಾ ಸಂಘಗಳ ಪದಾಧಿಕಾರಿಗಳಾದ ಕವಿತಾ ನಾಯ್ಕರ್, ವಿಶ್ವನಾಥ ಗೌಡರ, ಬಿರಾದಾರ, ಆರ್.ಜೆ. ಭಟ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಮನೋಹರ ವಡ್ಡರ್ ಇದ್ದರು

***

ಭೂ ಸುಧಾರಣಾ ಕಾಯ್ದೆಗೆ ತಂದ ತಿದ್ದುಪಡಿ ಹಾಗೂ ನೂತನ ಕೈಗಾರಿಕಾ ನೀತಿಯು ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಬೆಳವಣಿಗೆ ಪೂರಕವಾಗಿದೆ
– ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ

‘ಮಹಿಳಾ ಉದ್ಯಮ ಪಾರ್ಕ್: ಶೀಘ್ರ ನಿವೇಶನ ಹಂಚಿಕೆ’

***

‘ಗಾಮನಗಟ್ಟಿಯಲ್ಲಿರುವ ಮಹಿಳಾ ಉದ್ಯಮ ಪಾರ್ಕ್‌ನಲ್ಲಿ 78 ಕೈಗಾರಿಕಾ ನಿವೇಶನಗಳಿದ್ದು, 400ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶೀಘ್ರವೇ ಹಂಚಿಕೆಯಾಗಲಿವೆ. ಅದೇ ರೀತಿ, ತಾರಿಹಾಳದಲ್ಲಿರುವ ವಸತಿ ಸಂಕೀರ್ಣದಲ್ಲಿರುವ ಪ್ಲಾಟ್‌ಗಳನ್ನು ಹಂಚುವ ಪ್ರಕ್ರಿಯೆಗೂ ಚಾಲನೆ ನೀಡಲಾಗುವುದು’ ಎಂದು ಸಚಿವ ಶೆಟ್ಟರ್ ಹೇಳಿದರು.

ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಬೈಪಾಸ್ ರಸ್ತೆಯಲ್ಲಿ ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದು ಉದ್ಯಮಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ‘ಬೈಪಾಸ್‌ನಲ್ಲಿ ಷಟ್ಫಥ ರಸ್ತೆ ನಿರ್ಮಾಣವಾಗಲಿದ್ದು, ಆಗ ಎಲ್ಲಾ ಸಮಸ್ಯೆ ಬಗೆಹರಿಯಲಿದೆ’ ಎಂದರು.

ಪಟ್ಟಿ...

ಜಿಲ್ಲೆಯ ಕೈಗಾರಿಕಾ ಪ್ರದೇಶ (ಎಕರೆಗಳಲ್ಲಿ)

ಬೇಲೂರು;2,897.48

ರಾಯಾಪುರ;370.28

ತಾರಿಹಾಳ;312.75

ಸತ್ತೂರು;52.37

ಗಾಮನಗಟ್ಟಿ;510.06

ಲಕ್ಕಮನಹಳ್ಳಿ;71.23

ಮುಮ್ಮಿಗಟ್ಟಿ;979.69

ಒಟ್ಟು;5,193.86

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು