ಶನಿವಾರ, ಆಗಸ್ಟ್ 13, 2022
26 °C
ಕೋವಿಡ್‌ ನೆಪ: ಸಂಬಳವೂ ಇಲ್ಲ; ಉದ್ಯೋಗ ಭದ್ರತೆಯೂ ಇಲ್ಲ

ಹುಬ್ಬಳ್ಳಿ: ಖಾಸಗಿ ಶಾಲಾ ಶಿಕ್ಷಕರಿಗೆ ಅಭದ್ರತೆ ಆತಂಕ

ಗೋವರ್ಧನ ಎಸ್‌.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್ ಲಾಕ್‍ಡೌನ್‍ನಿಂದ ಉದ್ಯೋಗ, ವೇತನವಿಲ್ಲದೆ ತೊಂದರೆಗೀಡಾದ ಖಾಸಗಿ ಶಾಲಾ ಶಿಕ್ಷಕರಿಗೆ ಉದ್ಯೋಗ ಅಭದ್ರತೆಯ ಭೀತಿ ಎದುರಾಗಿದೆ.

‘ಲಾಕ್‍ಡೌನ್ ತೆರವುಗೊಂಡಿದ್ದರೂ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಬಹುಪಾಲು ಶಿಕ್ಷಕರಿಗೆ ವೇತನ ನೀಡುತ್ತಿಲ್ಲ. ಕೋವಿಡ್‌ನಿಂದ ನಷ್ಟ ಉಂಟಾಗಿದೆ ಎಂಬುದನ್ನೇ ನೆಪವಾಗಿಟ್ಟುಕೊಂಡು ಕೆಲ ಸಂಸ್ಥೆಗಳು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ ಐನೂರಕ್ಕೂ ಹೆಚ್ಚು ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಅನುದಾನ ರಹಿತ ಇಂಗ್ಲಿಷ್ ಮಾಧ್ಯಮ ಶಾಲಾ ಶಿಕ್ಷಕರ ಕಲ್ಯಾಣ ಸಂಘದ ಅಧ್ಯಕ್ಷ ಆರ್. ರಂಜನ್.

‘ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ನೀಡುವಂತೆ 18 ವರ್ಷಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದ್ದರೂ ಈವರೆಗೂ ಜಾರಿಯಾಗಿಲ್ಲ. ಶಿಕ್ಷಣ ಇಲಾಖೆ ಸಹ ನಿರ್ಲಕ್ಷ್ಯ ತೋರುತ್ತಿದೆ. ಈ ಅಂಶಗಳನ್ನು ಜಾರಿಗೊಳಿಸಿದ್ದರೆ ಮಾತ್ರ, ಶಾಲೆಗಳ ಮಾನ್ಯತೆ ನವೀಕರಣ ಮಾಡಬೇಕೆಂಬ ನಿಯಮವನ್ನೂ ಗಾಳಿಗೆ ತೂರಲಾಗಿದೆ’ ಎಂದು ದೂರಿದರು

‘ಲಾಕ್‍ಡೌನ್ ಸಮಯದಲ್ಲಿ ಕೆಲಸ ಮಾಡಿಲ್ಲವೆಂದು ಸಂಸ್ಥೆಗಳು ಸಂಬಳ ನೀಡಲಿಲ್ಲ. ಆ ಬಳಿಕ ಆನ್‍ಲೈನ್ ಪಾಠ ಮಾಡುತ್ತಿರುವ ಶಿಕ್ಷಕರಿಗಷ್ಟೇ ಅರ್ಧ ಸಂಬಳ ನೀಡುತ್ತಿವೆ. ಉಳಿದವರು ಜೀವನ ನಿರ್ವಹಣೆಗಾಗಿ ತರಕಾರಿ ಮಾರಾಟ ಸೇರಿದಂತೆ ಸಣ್ಣ ಪುಟ್ಟ ಉದ್ಯೋಗಗಳಲ್ಲಿ ತೊಡಗಿಕೊಳ್ಳುವಂತಾಗಿದೆ’ ಎಂದು ಸಮಸ್ಯೆ ಬಿಚ್ಚಿಟ್ಟರು.

‘ಸದ್ಯ ಪೋಷಕರಿಂದ ಅಧಿಕ ಶುಲ್ಕ ಪಡೆಯುತ್ತಿದ್ದರೂ, ಶಿಕ್ಷಕರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಉದ್ಯೋಗ ಭದ್ರತೆಯನ್ನೂ ನೀಡಿಲ್ಲ. ಶಿಕ್ಷಕರನ್ನು ಮನಬಂದಂತೆ ತೆಗೆದುಹಾಕುತ್ತಿದ್ದಾರೆ. ಕೊನೆಪಕ್ಷ ಅಂಥವರಿಗೆ ಕೆಲ ತಿಂಗಳ ಸಂಬಳವನ್ನೂ ಕೊಟ್ಟಿಲ್ಲ. ಇದರಿಂದ ತೀವ್ರವಾಗಿ ನೊಂದ ಶಿಕ್ಷಕರು ಆತ್ಮಹತ್ಯೆ ಯತ್ನವನ್ನೂ ಮಾಡಿದ್ದಾರೆ’ ಎಂದು ಅಲವತ್ತುಕೊಂಡರು.

ಸಚಿವರ ಭರವಸೆಯೂ ಈಡೇರಿಲ್ಲ: ‘ಖಾಸಗಿ ಶಾಲಾ ಶಿಕ್ಷಕರಿಗೆ ನೆರವು ನೀಡುವ ಉದ್ದೇಶದಿಂದ ₹10,000 ನೀಡುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ್ದರು. ನಾಲ್ಕೈದು ತಿಂಗಳು ಕಳೆದರೂ ಈಡೇರಿಲ್ಲ’ ಎನ್ನುತ್ತಾರೆ ಆರ್.ರಂಜನ್.

‘ಆರ್ಥಿಕ ಸಂಕಷ್ಟ ಎಂದು ಹೇಳುವ ಸಂಸ್ಥೆಗಳು ಡೊನೇಷನ್, ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಈ ಹಿಂದಿನ ವರ್ಷಗಳಲ್ಲಿ ಪಡೆದಿದ್ದ ಹಣವನ್ನು ಏನು ಮಾಡಿದವು? ನಿಜವಾಗಿ ಆರ್ಥಿಕ ಸಂಕಷ್ಟವಿದ್ದರೆ ಎಲ್ಲಾ ಶಾಲೆಗಳನ್ನು ರಾಷ್ಟ್ರೀಕರಣ ಮಾಡಲಿ’ ಎಂದು ಅವರು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು