ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರ ಸ್ಫೂರ್ತಿಯ ಮಾತುಗಳಿಗೆ ತಲೆದೂಗಿದರು...

ಕರಜಗಿ ಅವರಿಂದ ಬದುಕಿನ ಮೌಲ್ಯಗಳ ಕಿವಿಮಾತು
Last Updated 1 ಜೂನ್ 2019, 14:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಮ್ಮ ಶೈಕ್ಷಣಿಕ ಭವಿಷ್ಯದ ಬಗ್ಗೆ ಬೆರುಗುಗಣ್ಣುಗಳಿಂದ ನೋಡುತ್ತಿದ್ದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರ ಸ್ಫೂರ್ತಿಯ ಮಾತುಗಳಿಗೆ ತಲೆದೂಗಿದ ಕ್ಷಣಕ್ಕೆ ‘ಎಡ್ಯುವರ್ಸ್: ಜ್ಞಾನದೇಗುಲ’ದ 11ನೇ ವರ್ಷದ ಶೈಕ್ಷಣಿಕ ಮಾರ್ಗದರ್ಶಿ ಮೇಳ ಸಾಕ್ಷಿಯಾಯಿತು.

ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ತಮ್ಮ ಸ್ವ ಅನುಭವಗಳ ಜತೆಗೆ, ಹಲವು ನಿದರ್ಶನಗಳ ಮೂಲಕ ಶಿಕ್ಷಣ, ಸಂಸ್ಕಾರ ಹಾಗೂ ಬದುಕಿನ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ವ ಅರಿವಿನ ಅನುಭೂತಿ ಮೂಡಿಸಿದರು.

ಹೃದಯದ ಮಾತು ಕೇಳಿ:

‘ಅಪ್ಪ– ಅಮ್ಮ ಅಥವಾ ಇನ್ಯಾರದೊ ಒತ್ತಾಯಕ್ಕಾಗಿ ಇಷ್ಟವಿಲ್ಲದ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಸೇರಬೇಡಿ. ಮೊದಲು ನಿಮ್ಮ ಹೃದಯದ ಮಾತು ಕೇಳಿ. ಅದು ಹೇಳುವುದನ್ನು ತಂದೆ– ತಾಯಿಗೆ ಧೈರ್ಯದಿಂದ ತಿಳಿಸಿ, ಸರಿಯಾದ ದಾರಿ ಆರಿಸಿಕೊಳ್ಳಿ. ಆಗ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಇಲ್ಲದಿದ್ದರೆ, ಸಾಯುವವರೆಗೆ ಕೊರಗಬೇಕಾಗುತ್ತದೆ’ ಎಂದು ಕೋರ್ಸ್ ಆಯ್ಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಎಂತಹ ಸಂದರ್ಭದಲ್ಲೂ ವಿಚಲಿತರಾಗದೆ ಗುರಿಯತ್ತ ಚಿತ್ತ ನೆಟ್ಟರೆ ಯಶಸ್ಸು ಖಂಡಿತ ಸಿಗುತ್ತದೆ’ ಎಂದ ಕರಜಗಿ, ‘keeping a small aim is a crime’ ಎಂಬ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮಾತುಗಳನ್ನು ನೆನಪಿಸಿಕೊಂಡು, ಬದುಕಿನಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು’ ಎಂದು ಹುರಿದುಂಬಿಸಿದರು.

ಪ್ರಕೃತಿ– ಸಂಸ್ಕೃತಿ– ವಿಕೃತಿ:

‘ಪ್ರಕೃತಿ ತನ್ನಷ್ಟಕ್ಕೆ ತಾನೇ ಸಂಸ್ಕೃತಿಯಾಗುವುದಿಲ್ಲ. ಯಾರಾದರೂ ತಮ್ಮ ಜ್ಞಾನವನ್ನು ಧಾರೆ ಎರೆದಾಗ ಅದು ಸಂಸ್ಕೃತಿಯಾಗುತ್ತದೆ. ಅದೇ ರೀತಿ, ಪ್ರಕೃತಿಯಾಗಿ ಹುಟ್ಟುವ ಮಗು ಕ್ರಮೇಣ ಬೆಳೆಯುತ್ತಾ ಸಂಸ್ಕೃತಿ ಮೈಗೂಡಿಸಿಕೊಳ್ಳುತ್ತದೆ. ಸಂಸ್ಕೃತಿಯ ಸಂಸ್ಕಾರ ಸಿಗದಿದ್ದಾಗ ಮಕ್ಕಳು ವಿಕೃತಿಯಾಗುತ್ತಾರೆ. ಮಕ್ಕಳಿಗೆ ಸರಿಯಾದ ಸಂಸ್ಕೃತಿ– ಸಂಸ್ಕಾರವನ್ನು ಕಲಿಸಿಕೊಡುವ ಜವಾಬ್ದಾರಿ ತಂದೆ ತಾಯಿ ಮೇಲಿದೆ’ ಎಂದು ನುಡಿದರು.

‘ಶಿಕ್ಷಣವೆಂದರೆ ಸರ್ಟಿಫಿಕೇಟ್ ಅಲ್ಲ!’

‘ಶಿಕ್ಷಣವೆಂದರೆ ಹಲವರು ಸರ್ಟಿಫಿಕೇಟ್‌ ಅಂದುಕೊಂಡಿದ್ದಾರೆ. ಆದರೆ, ನಿಜವಾದ ಶಿಕ್ಷಣವೇ ಬೇರೆ’ ಎಂದ ಗುರುರಾಜ ಕರಜಗಿ ಅದಕ್ಕಾಗಿ ತಮ್ಮ ಅನುಭವವೊಂದನ್ನು ಹಂಚಿಕೊಂಡರು.

‘ನನ್ನ ಸ್ನೇಹಿತನೊಬ್ಬ ಪಿಎಚ್.ಡಿ.ಗಾಗಿ ಅಮೆರಿಕಕ್ಕೆ ಹೋಗಲು ನಿರ್ಧರಿಸಿದ. ಹಳ್ಳಿಯಲ್ಲಿ ಮೇಷ್ಟ್ರ ಕೆಲಸ ಮಾಡಿಕೊಂಡಿದ್ದ ಆತನ ಅಪ್ಪ, ಹೊಲ ಮಾರಿ ಮಗನನ್ನು ಅಮೆರಿಕಕ್ಕೆ ಕಳಿಸಿದರು. ಪಿಎಚ್‌.ಡಿ ಮುಗಿಸಿದ ಆತ, ಮನೆಯವರಿಗೆ ತಿಳಿಸದೆ ಅಲ್ಲಿಯ ಹುಡುಗಿಯೊಬ್ಬಳ್ಳನ್ನು ಮದುವೆಯಾದ.

‘ಐದು ವರ್ಷದ ನಂತರ ಆತ ಭಾರತಕ್ಕೆ ಬರುತ್ತಿರುವ ವಿಷಯ ಗೊತ್ತಾಯಿತು. ಭೇಟಿಯಾಗಲು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೋದೆ. ಆತನ ತಂದೆ ಕೈಯಲ್ಲಿ ಗುಲಾಬಿ ಹಿಡಿದು, ಮಗನನ್ನು ಸ್ವಾಗತಿಸಲು ನಿಲ್ದಾಣದ ಮೂಲೆಯಲ್ಲಿ ಕಾದು ಕುಳಿತಿದ್ದರು. ನಾನು ಅವರ ಕುಶಲೋಪರಿ ವಿಚಾರಿಸುವ ಹೊತ್ತಿಗೆ, ಸ್ನೇಹಿತ ಬಂದ. ಆತನ ಜತೆಯಲ್ಲಿ ಮಾಡರ್ನ್ ಯುವಕ– ಯುವತಿಯರಿದ್ದರು. ನಾನು ಆತನನ್ನು ಮಾತನಾಡಿಸಿ, ಅವರ ತಂದೆಯನ್ನು ಹುಡುಕಾಡಿದೆ. ಆದರೆ, ಎಲ್ಲೂ ಕಾಣಲಿಲ್ಲ.

‘ಸ್ನೇಹಿತನ ಮನೆಗೆ ಬಂದು ನಿಲ್ದಾಣದಲ್ಲಿ ನೀವು ಕಾಣಲಿಲ್ಲವಲ್ಲಾ ಎಂದು ತಂದೆಯನ್ನು ವಿಚಾರಿಸಿದಾಗ, ‘ವಿದೇಶಕ್ಕೆ ಹೋದ ಬಳಿಕ ಮಗ ಚನ್ನಾಗಿ ಬೆಳೆದಿದ್ದಾನೆ. ನಾನೂ ಆತನನ್ನು ನೋಡಿದೆ. ಆತನೂ ನೋಡಿದ. ಆದರೆ, ಆತನ ಜತೆಗಿರುವವರೆಲ್ಲರೂ ದೊಡ್ಡವರು. ಅವರೆದುರು ನನ್ನಂತಹ ಬಡಪಾಯಿ ಅಪ್ಪ ಮಾತನಾಡಿಸಿದರೆ, ಆತನ ಗೌರವ ಕಮ್ಮಿಯಾಗುತ್ತದೆ ಅನ್ನಿಸಿತು. ಹೇಗಿದ್ದರೂ ಮನೆಗೆ ಬರುತ್ತಾನಲ್ಲ, ಅಲ್ಲೇ ಮಾತನಾಡಿಸೋಣ ಅಂದುಕೊಂಡು ಬಸ್ ಹತ್ತಿ ಮನೆಗೆ ಬಂದೆ’ ಎಂದರು.

‘ನನ್ನ ಸ್ನೇಹಿತ ನಿಲ್ದಾಣದಲ್ಲಿ ತಂದೆಯನ್ನು ನೋಡಿದ ತಕ್ಷಣ ಅವರ ಕಾಲಿಗೆರಗಿ ಆಶೀರ್ವಾದ ಪಡೆಯಬೇಕಾಗಿತ್ತು. ಆದರೆ, ಹಾಗೆ ಮಾಡಲಿಲ್ಲ. ಆತನ ಬಳಿ ಕೇವಲ ಸರ್ಟಿಫಿಕೇಟ್‌ ಇತ್ತು. ಆದರೆ, ನಿಜವಾದ ಶಿಕ್ಷಣ ಇದ್ದದ್ದು ಅವನ ಅಪ್ಪನ ಬಳಿ. ಅದಕ್ಕಾಗಿಯೇ, ಸರ್ಟಿಫಿಕೇಟ್‌ ಶಿಕ್ಷಣವಲ್ಲ. ಶಿಕ್ಷಣದ ಮೌಲ್ಯ ಇರುವುದು ಸಂಸ್ಕಾರದಲ್ಲಿ’ ಎಂದು ಕರಜಗಿ ಕಿವಿಮಾತು ಹೇಳಿದರು.

ವೈವಿಧ್ಯಮಯ ಕೋರ್ಸ್‌ಗಳು

ಆಧುನಿಕ ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಕ್ಷೇತ್ರದ ಬದಲಾವಣೆಗಳ ಬಗ್ಗೆಯೂ ಗಮನ ಸೆಳೆದ ಕರಜಗಿ, ಹೊಸ ಕೋರ್ಸ್‌ಗಳ ಬಗ್ಗೆಯೂ ಹಂಚಿಕೊಂಡರು. ಕೆಲ ಕೋರ್ಸ್‌ಗಳ ಮಾಹಿತಿ ಹೀಗಿದೆ.

* ಇಂಟಿಗ್ರೇಟೆಡ್ ಸಿಎ ಫೌಂಡೇಷನ್ ಕೋರ್ಸ್

* ಇಂಟಿಗ್ರೇಟೆಡ್ ಸಿಎಸ್ ಫೌಂಡೇಷನ್ ಕೋರ್ಸ್

* ಬಿ.ಇಡಿ ಇಂಟಿಗ್ರೇಟೆಡ್ ಕೋರ್ಸ್

* ಬಿ.ಲಿಬ್ (ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್)

* ಇಂಪೋರ್ಟ್‌– ಎಕ್ಸ್‌ಪೋರ್ಟ್‌ ಡಿಪ್ಲೊಮಾ

* ಎಂ.ಬಿ.ಎ ಇನ್ ಡೇರಿ ಟೆಕ್ನಾಲಜಿ

* ಎಂ.ಬಿ.ಎ ಇನ್ ಫಾರ್ಮಸಿ

* ಎಂ.ಬಿ.ಎ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್

* ಡಿಪ್ಲೊಮಾ ಇನ್ ಜೆಮಾಲಜಿ (ವಜ್ರ ಹಾಗೂ ಮುತ್ತುಗಳ ಕೆಲಸ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT