ಹುಬ್ಬಳ್ಳಿ: ‘ಉಗ್ರವಾದಿ ಕಸಬ್‌ಗೆ ಗಲ್ಲುಶಿಕ್ಷೆ ನೀಡಿ, ದೇಹವನ್ನು ಮಣ್ಣು ಮಾಡಲಾಗಿದೆ. ಆದರೆ, ಸಮಾಜದ ಹಿತ ಕಾಯುತ್ತಿದ್ದ ಚಿಕ್ಕೋಡಿಯ ಕಾಮಕುಮಾರ ಜೈನ ಮುನಿಗಳ ಸಾವು ಅದಕ್ಕಿಂತ ಕ್ರೂರವಾಗಿದೆ. ಇದೊಂದು ಅಮಾನುಷ ಕೃತ್ಯ’ ಎಂದು ವರೂರಿನ ನವಗೃಹ ತೀರ್ಥಕ್ಷೇತ್ರದ ಗುಣಧರನಂದಿ ಮಹಾರಾಜ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ತೀರ್ಥಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕಾಮಕುಮಾರ ಮುನಿಗಳಿಗೆ ವಿದ್ಯುತ್ ಶಾಕ್ ನೀಡಿ, ದೇಹವನ್ನು ತುಂಡು–ತುಂಡಾಗಿ ಕತ್ತರಿಸಿ ಬೋರ್‌ವೆಲ್‌ನಲ್ಲಿ ಹಾಕಲಾಗಿದೆ. ನಾಪತ್ತೆ ಪ್ರಕರಣ ದಾಖಲಾಗಿದ್ದರೂ, ತನಿಖೆ ಕೈಗೊಳ್ಳಲು ಸರ್ಕಾರ ವಿಳಂಬ ಮಾಡಿತು. ನಮ್ಮ ಸಮುದಾಯದ ಮತಗಳು ಹೆಚ್ಚಿಗೆಯಿಲ್ಲ ಎಂದು ವೋಟ್ ಬ್ಯಾಂಕ್ ರಾಜಕಾರಣ ಮಾಡಿದೆ. ಇದು ಜೈನ ಸಮುದಾಯಕ್ಕೆ ಮಾಡಿರುವ ಅನ್ಯಾಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಜೈನ ಮುನಿಗಳು ಒಂದುಕಡೆಯಿಂದ ಮತ್ತೊಂದೆಡೆಗೆ ಧರ್ಮಪ್ರಚಾರಕ್ಕಾಗಿ ಕಾಲ್ನಡಿಗೆಯಲ್ಲಿ ವಿಹಾರ ಮಾಡುತ್ತಾರೆ. ಆ ಸಂದರ್ಭದಲ್ಲಿ ಅವರು ದೈನಂದಿನ ವೆಚ್ಚಕ್ಕಾಗಿ ಗಂಟನ್ನು ಕೊಂಡೊಯ್ಯುತ್ತಾರೆ. ಹಣದ ಆಸೆಯಿಂದ ಅವರನ್ನು ಹತ್ಯೆಮಾಡಿದರೆ ಯಾರು ಹೊಣೆ? ಈ ಹಿನ್ನೆಲೆಯಲ್ಲಿ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿಹಾರಕ್ಕೆ ಬಂದಾಗ, ಅವರಿಗೆ ಪೊಲೀಸ್ ಭದ್ರತೆ ನೀಡಬೇಕು. ರಾಜ್ಯದಲ್ಲಿನ ಎಲ್ಲ ಜೈನ ಮುನಿಗಳಿಗೂ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಆಮರಣಾಂತ ಉಪವಾಸ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ, ಇಂದು (ಭಾನುವಾರ) ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಕ್ಷೇತ್ರಕ್ಕೆ ಬಂದು ಉಪವಾಸ ಕೈಬಿಡುವಂತೆ ವಿನಂತಿಸಿದ್ದರು. ಗೃಹಸಚಿವ ಜಿ. ಪರಮೇಶ್ವರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿಸಿದ್ದಾರೆ. ಗೃಹಸಚಿವರು ಮುನಿಗಳಿಗೆ ರಕ್ಷಣೆ ನೀಡುವ ಭರವಸೆ ನೀಡಿ, ಕ್ಷೇತ್ರಕ್ಕೆ ಬಂದು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಅವರ ಮಾತಿಗೆ ಗೌರವ ನೀಡಿ, ಉಪವಾಸ ಕೈಬಿಟ್ಟಿದ್ದೇನೆ’ ಎಂದು ತಿಳಿಸಿದರು.
‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಮನವಿ ನೀಡಲಾಗಿದೆ’ ಎಂದು ಗುಣಧರ ನಂದಿ ಮಹಾರಾಜರು ಹೇಳಿದರು.
ಮುನಿಗಳ ಬೇಡಿಕೆಗಳೇನು?: ‘ಜೈನ ಸಾಧು, ಸಂತರು ಕಾಲ್ನಡಿಗೆಯಲ್ಲಿ ವಿಹಾರ ಮಾಡುವ ಸಂದರ್ಭದಲ್ಲಿ ಪೊಲೀಸ್ ರಕ್ಷಣೆ ನೀಡಬೇಕು. ವಿಹಾರ ಸಂದರ್ಭದಲ್ಲಿ ಶಾಲಾ, ಕಾಲೇಜು, ಪ್ರವಾಸಿ ಮಂದಿರಗಳಲ್ಲಿ ವಸತಿಗೆ ವ್ಯವಸ್ಥೆ ಕಲ್ಪಿಸಬೇಕು. ಜೈನ ಮಂದಿರಗಳಲ್ಲಿ ನಡೆಯುವ ಅತಿಕ್ರಮಣ, ದಬ್ಬಾಳಿಕೆ ತಡೆಯಬೇಕು’ ಎಂದು ಸಚಿವ ಜೋಶಿ ಮತ್ತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.
ಕಂಡು ಕೇಳರಿಯದ ಕೃತ್ಯ
‘ಚಿಕ್ಕೋಡಿಯ ಕಾಮಕುಮಾರ ಜೈನ ಮುನಿ ಹತ್ಯೆ ಖಂಡನೀಯ. ವಿದ್ಯುತ್ ಶಾಕ್ ನೀಡಿ ದೇಹವನ್ನು ಕತ್ತರಿಸಿ ಬೋರ್‌ವೆಲ್‌ನಲ್ಲಿ ಹಾಕಿರುವುದು ಇತಿಹಾಸ ಕಂಡು ಕೇಳರಿಯದ ಕ್ರೂರ ಕೃತ್ಯವಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಜೈನ ಮುನಿ ಹತ್ಯೆ ಖಂಡಿಸಿ ವರೂರಿನ ನವಗೃಹತೀರ್ಥ ಕ್ಷೇತ್ರದ ಗುಣಧರ ನಂದಿ ಮಹಾರಾಜರು ಆಮರಣಾಂತ ಉಪವಾಸ ಕೈಗೊಂಡ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಭೇಟಿ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ‘ಜಿಲ್ಲಾಡಳಿತ ಹಾಗೂ ಸಚಿವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಗುಣಧರ ನಂದಿ ಮಹಾರಾಜರು ಉಪವಾಸ ಕೈಬಿಟ್ಟಿದ್ದಾರೆ’ ಎಂದರು.
‘ಜೈನ ಮುನಿಗಳು ಸರ್ವಸಂಘ ಪರಿತ್ಯಾಗಿಯಾಗಿ ಕಾಲ್ನಡಿಗೆಯಲ್ಲಿ ಊರೂರು ವಿಹರಿಸುತ್ತಾರೆ. ಇನ್ನೊಬ್ಬರಿಗೆ ಕೇಡು ಬಗೆಯದ ಆ ಧರ್ಮದ ಮುನಿಯೊಬ್ಬರನ್ನು ಹತ್ಯೆ ಮಾಡಿರುವುದು ಹೇಯ ಕೃತ್ಯ. ಮುನಿ ನಾಪತ್ತೆಯಾಗಿದ್ದಾಗ ಅವರನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ ವಿಳಂಬ ಮಾಡಿ ನಿರ್ಲಕ್ಷ್ಯವಹಿಸಿತು. ಬೆಳಗಾವಿಯ ಬಿಜೆಪಿ ಶಾಸಕರು ಪ್ರತಿಭಟನೆಗೆ ಮುಂದಾದಾಗ ಗಂಭೀರವಾಗಿ ತೆಗೆದುಕೊಂಡಿತು. ಆಶ್ರಮದಲ್ಲಿ ಮುನಿಗಳು ಕಟ್ಟಡ ನಿರ್ಮಿಸುತ್ತಿದ್ದರು ಸಹಜವಾಗಿಯೇ ಅವರ ಬಳಿ ಹಣವಿತ್ತು. ಅದನ್ನೇ ಮುಂದಿಟ್ಟುಕೊಂಡು ಬಡ್ಡಿ ವ್ಯವಹಾರದ ಆರೋಪ ಹೊರಿಸುವ ಯತ್ನ ನಡೆಯುತ್ತಿದೆ. ಅಪರಾಧಿಗಳನ್ನು ರಕ್ಷಿಸಲು ಸರ್ಕಾರ ಮುಂದಾಗುತ್ತಿದೆ’ ಎಂದು ಆರೋಪಿಸಿದರು.
‘ರಾಜಕೀಯ ಮತ್ತು ಸರ್ಕಾರದ ಬೆಂಬಲ ಇದ್ದಾಗಲೇ ಇಂಥಹ ಕೃತ್ಯ ನಡೆಯುವುದು. ಸರ್ಕಾರ ಹೇಗೆ ತನಿಖೆ ನಡೆಸುತ್ತದೆ ನೋಡೋಣ. ಇಲ್ಲದಿದ್ದರೆ ಎಲ್ಲರೂ ಸೇರಿ ಹೋರಾಡೋಣ. ಮುನಿಗಳು ನೊಂದುಕೊಂಡಾಗ ಸರ್ಕಾರಕ್ಕೆ ಶಾಪ ತಟ್ಟುತ್ತದೆ’ ಎಂದರು. ನಾಗರಾಜ ಛಬ್ಬಿ ವಿಮಲ ತಾಳಿಕೋಟೆ ಮಹೇಂದ್ರ ಸಿಂಘಿ ಸುಭಾಶ್ಚಂದ್ರ ಡಂಕ ಇದ್ದರು.
ನಾಳೆ ಗೃಹ ಸಚಿವ ಭೇಟಿ
ಗುಣಧರ ನಂದಿ ಮಹಾರಾಜರ ಆಮರಣಾಂತ ಉಪವಾಸ ಹಿನ್ನೆಲೆಯಲ್ಲಿ ವರೂರು ನವಗೃಹ ತೀರ್ಥ ಕ್ಷೇತ್ರಕ್ಕೆ ಗೃಹಸಚಿವ ಜಿ. ಪರಮೇಶ್ವರ ಅವರು ಜೂನ್ 10ರಂದು ಬೆಳಿಗ್ಗೆ 8.30ಕ್ಕೆ ಭೇಟಿ ನೀಡಲಿದ್ದಾರೆ. ಜೈನ ಮುನಿಗಳ ರಕ್ಷಣೆಯ ಬೇಡಿಕೆ ಇಟ್ಟಿರುವ ಗುಣಧರ ನಂದಿ ಮಹಾರಾಜರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಬೆಳಿಗ್ಗೆ 7ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.