ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಇಂಡಿಯಾ’ ಭ್ರಷ್ಟರ ಕೂಟ: ಜೆ.ಪಿ. ನಡ್ಡಾ ಟೀಕೆ

ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಸಭೆ; ಅಭ್ಯರ್ಥಿ ಪ್ರಲ್ಹಾದ ಜೋಶಿ ಪರ ಪ್ರಚಾರ
Published 21 ಏಪ್ರಿಲ್ 2024, 15:42 IST
Last Updated 21 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇಂಡಿಯಾ ಒಕ್ಕೂಟದಲ್ಲಿರುವ ಕೆಲವರು ಜೈಲಿನಲ್ಲಿದ್ದರೆ, ಇನ್ನೂ ಕೆಲವರು ಜಾಮೀನಿನ ಮೇಲೆ ಹೊರಗಿದ್ದಾರೆ. ಇದು ಭ್ರಷ್ಟರ ಕೂಟ’ ಎಂದು ಬಿಜೆಪಿ‌ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ. ನಡ್ಡಾ ಟೀಕಿಸಿದರು.

ನಗರದ ಸಾಖರೆ ಶಾಲೆ ಮೈದಾನದಲ್ಲಿ ಭಾನುವಾರ ನಡೆದ ಧಾರವಾಡ ಲೋಕಸಭಾ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

‘ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ಕಡಿತ ಮಾಡಿದೆ ಎಂದು ಇಲ್ಲಿನ ಕಾಂಗ್ರೆಸ್ ಸರ್ಕಾರ ಸುಳ್ಳು ಜಾಹೀರಾತು ನೀಡುತ್ತಿದೆ. ಆದರೆ,  ಕೇಂದ್ರದಿಂದ ರಾಜ್ಯಕ್ಕೆ ನೀಡಿದ ಅನುದಾನವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಕಾಂಗ್ರೆಸ್ ಹೇಳುತ್ತಿರುವುದು ಸುಳ್ಳುಗಳ ಕಂತೆ’ ಎಂದು ಹರಿಹಾಯ್ದರು.

‘ವಿಧಾನಸೌಧದ ಮುಂದೆ ಪಾಕಿಸ್ತಾನ್ ಜಿಂದಾಬಾದ್‌ ಎಂದೂ ಕೂಗಿದವರ ವಿರುದ್ಧ ಹಾಗೂ ತಮ್ಮದೇ ಪಕ್ಷದ ಹು–ಧಾ ಮಹಾನಗರ ಪಾಲಿಕೆ ಸದಸ್ಯರ ಮಗಳ ಹತ್ಯೆ ಮಾಡಿದವನ ವಿರುದ್ಧ ಕಾಂಗ್ರೆಸ್‌ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಕಡೇಪಕ್ಷ ಖಂಡನೆಯನ್ನೂ ವ್ಯಕ್ತಪಡಿಸದೆ, ಬೇಜವಾಬ್ದಾರಿ ಹೇಳಿಕೆ ನೀಡಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನವರಿಗೆ ನಾಚಿಕೆ ಆಗುವುದಿಲ್ಲವೇ?’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ.  ಹನುಮಾನ್ ಚಾಲೀಸಾ ಪಠಿಸಿದರೆ ಕಿಡಿಗೇಡಿಗಳು ಹಲ್ಲೆ ನಡೆಸುತ್ತಾರೆ. ರಾಜ್ಯ ಸರ್ಕಾರ ಹಿಂದೂ ದೇಗುಲಗಳಿಗೆ ತೆರಿಗೆ ವಿಧಿಸುತ್ತಿದೆ. ಪಿಎಫ್‌ಐ ಹಾಗೂ ಎಸ್‌ಎಫ್‌ಐ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತದೆ. ಭ್ರಷ್ಟಾಚಾರಿಗಳು, ಉಗ್ರರ ರಕ್ಷಣೆ ಮಾಡುತ್ತಿದೆ. ಈ ಮಟ್ಟದಲ್ಲಿ ತುಷ್ಟೀಕರಣ ಸಲ್ಲದು’ ಎಂದು ಹೇಳಿದರು.

ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ ಜೋಶಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ,  ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಕೇಂದ್ರ ಸಾಧನೆಗಳ ಬಗ್ಗೆ ವಿವರಿಸಿದರು.

ಇದಕ್ಕೂ ಮೊದಲು ನಗರದ ಖಾಸಗಿ ಹೋಟೆಲ್‌ನಲ್ಲಿ ವಿವಿಧ ಸಮುದಾಯಗಳ ಪ್ರಮುಖರ ಸಭೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT