ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃತಕ ಬುದ್ಧಿಮತ್ತೆ ದಾಪುಗಾಲು; ಮಾನವ ಶಕ್ತಿ ಬಳಕೆ ಇಳಿಕೆ: ಪತ್ರಕರ್ತ ರವಿ ಹೆಗಡೆ

ರಾಷ್ಟ್ರೀಯ ಸಮ್ಮೇಳನ, ಮಾಧ್ಯಮ ಹಬ್ಬ ಉದ್ಘಾಟನಾ ಸಮಾರಂಭ
Published 8 ಜುಲೈ 2024, 15:23 IST
Last Updated 8 ಜುಲೈ 2024, 15:23 IST
ಅಕ್ಷರ ಗಾತ್ರ

ಧಾರವಾಡ: ‘ಕೃತಕ ಬುದ್ಧಿಮತ್ತೆ (ಎಐ) ಪ್ರಸ್ತುತ ವೇಗವಾಗಿ ಬೆಳೆಯುತ್ತಿದೆ. ಕೃತಕ ಬುದ್ಧಿಮತ್ತೆಯ ಅತ್ಯುತ್ತಮ ಸಾಧನಗಳನ್ನು ಬಳಸಿಕೊಂಡು ಕೌಶಲ, ದಕ್ಷತೆಗಳನ್ನು ಹೆಚ್ಚಿಸಿಕೊಳ್ಳುವ ಮತ್ತು ಸಂಸ್ಥೆಯನ್ನು ಬೆಳೆಸುವ ಕಡೆಗೆ ಒಲವು ತೋರಬೇಕು’ ಎಂದು ಹಿರಿಯ ಪತ್ರಕರ್ತ ರವಿ ಹೆಗಡೆ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಮತ್ತು ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಮತ್ತು ಸಂವಹನ ಅಧ್ಯಾಪಕರ ಸಂಘದಿಂದ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮೂಹ ಸಂವಹನದ ಸವಾಲುಗಳು ಮತ್ತು ಅವಕಾಶಗಳು' ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ರೈನ್ ಬೋ ಮಾಧ್ಯಮ ಹಬ್ಬ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇನ್ನು ಕೆಲವು ವರ್ಷಗಳಲ್ಲಿ ಎಐ ಹೆಚ್ಚು ಪ್ರಚಲಿತಕ್ಕೆ ಬರಲಿದೆ. ಎಐ ಅವಿರ್ಭಾವವು ಉದ್ಯೋಗಗಳ ಮೇಲೆ ಪ್ರಭಾವಬೀರುತ್ತಿದೆ. ಮಾನವ ಶಕ್ತಿ ಬಳಕೆ ಕಡಿಮೆಗೊಳಿಸುತ್ತಿದೆ. ಡಿಜಿಟಲ್‌ ಕಂಪನಿಗಳಲ್ಲಿ ಶೇ 40 ರಷ್ಟು ಮಾನವ ಸಂಪನ್ಮೂಲ ಬಳಕೆ ಕಡಿಮೆಯಾಗಿದೆ. ಕೆಲವು ಸಂಸ್ಥೆಗಳಲ್ಲಿ ಅರ್ಧದಷ್ಟು ಕೆಲಸವು ಮಾನವರಿಂದ ಎಐಗೆ ವರ್ಗಾವಣೆಯಾಗಿದೆ ಎಂದು ವಿವರಿಸಿದರು.

‘ಡಿಜಿಟಲ್‌ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿವೆ. ರೀಲ್ಸ್‌ಗಳನ್ನು ಈಗ ಹೆಚ್ಚು ಜನರು ವೀಕ್ಷಿಸುತ್ತಾರೆ. 2025ರ ಹೊತ್ತಿಗೆ ದೇಶದಲ್ಲಿ ರೀಲ್ಸ್‌ ವೀಕ್ಷಕರ ಸಂಖ್ಯೆ 65 ಕೋಟಿ ತಲುಪುವ ಸಾಧ್ಯತೆ ಇದೆ. ಫ್ಯಾಕ್ಟ್‌ ಚೆಕ್‌’ (ಫೇಕ್‌ ನ್ಯೂಸ್‌), ಸಾರಾಂಶ ಬರಹ, ಸ್ಪೆಲ್‌ ಚೆಕ್‌, ಇಲ್‌ಸ್ಟೇಷನ್‌, ಆಟೊಮೇಷನ್‌ (ಚುನಾವಣೆ ದತ್ತಾಂಶ ಅಪ್ಡೇಟ್‌...) ಮೊದಲಾದ ವಿಷಯಗಳಲ್ಲಿ ಎಐ ಕಾಲಿಟ್ಟಿದೆ. ಎಐ ಆ್ಯಂಕರ್‌ ಅನ್ನು ನೋಡಿದ್ದೇವೆ’ ಎಂದರು.

‘ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಸವಾಲುಗಳು ಇವೆ. ಹಕ್ಕುಸ್ವಾಮ್ಯ, ಕೃತಿಚೌರ್ಯ ಉಲ್ಲಂಘನೆ, ‌ಅನುವಾದದಲ್ಲಿ ಸಮಸ್ಯೆಗಳು, ಸೃಜನಶೀಲತೆ ಅರ್ಥೈಸಿಕೊಳ್ಳುವ ತೊಡಕು ಮೊದಲಾದ ಸವಾಲುಗಳು ಇವೆ. ಮಾನವ ಸಂಪನ್ಮೂಲ ಪೂರ್ಣವಾಗಿ ಬಿಟ್ಟು ಎಐನಿಂದಲೇ‌ ಯಾವುದೇ ಕಂಪೆನಿ ನಿರ್ವಹಿಸುವುದು ‌ಈಗಂತೂ ಸಾಧ್ಯ ಇಲ್ಲ. ಹೊಸ ವರ್ಷಗಳ ಮೂಲಕ ಎಐ ಕಾರ್ಯಕ್ಷಮತೆ ವೃದ್ಧಿಸಿದಂತೆ ಮಾನವ ಸಂಪನ್ಮೂಲ ಬಳಕೆ ಕಡಿಮೆಯಾಗುತ್ತದೆ’ ಎಂದು ಹೇಳಿದರು.

‘ನ್ಯೂಸ್ ರೂಂಗಳಲ್ಲಿ ಒಂದು ಸಾಧನವಾಗಿ ಎಐ ಬಳಕೆಯಾಗುತ್ತಿದೆ. ಮಾನವ ಶಕ್ತಿಗೆ ಕೃತಕ ಬುದ್ಧಿಮತ್ತೆ ಶೇ 100 ರಷ್ಟು ಪರ್ಯಾಯವಾಗಲು ಎಂದಿಗೂ ಸಾಧ್ಯ ಇಲ್ಲ ಎಂಬ ವಾದವೂ ಇದೆ. ಮಾನವ ಬುದ್ಧಿಮತ್ತೆಯು ಯಂತ್ರಕ್ಕಿಂತ ಮಿಗಿಲು’ ಎಂದು ವಿಶ್ಲೇಷಿಸಿದರು.

‘ಕವಿವಿ ಪತ್ರಿಕೋದ್ಯಮ ವಿಭಾಗದ 40 ವರ್ಷ ನಡೆದುಬಂದ ಹಾದಿ’ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಅಪ್ಡೇಟ್‌ ಆಗಲು ಮಾಧ್ಯಮ ಶಿಕ್ಷಕರಿಗೆ ಸಲಹೆ

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ ‘ಕೃತಕ ಬುದ್ಧಿಮತ್ತೆ (ಎಐ) ಮಾಧ್ಯಮದಲ್ಲಿ ವಹಿಸುವ ಪಾತ್ರವನ್ನು ತಿಳಿದುಕೊಂಡು ಅದನ್ನು ಮಾಧ್ಯಮ ಶಿಕ್ಷಣದಲ್ಲಿ ಕಲಿಸುವ ಜವಾಬ್ದಾರಿಯನ್ನು ಮಾಧ್ಯಮ ಶಿಕ್ಷಕರು ನಿರ್ವಹಿಸಬೇಕು’ ಎಂದು ಹೇಳಿದರು. ‘ಕೃತಕ ಬುದ್ಧಿಮತ್ತೆಯಿಂದ ಮಾಧ್ಯಮ ಶಿಕ್ಷಕರು ದೂರ ಸರಿದರೆ ಮಾಧ್ಯಮ ಕ್ಷೇತ್ರ ಮತ್ತು ಮಾಧ್ಯಮ ಶಿಕ್ಷಣದ ನಡುವಿನ ಅಂತರ ಹೆಚ್ಚುತ್ತದೆ. ಪ್ರತಿನಿತ್ಯ ಬದಲಾಗುವ ತಂತ್ರಜ್ಞಾನವನ್ನು ಪತ್ರಕರ್ತರು ಅಳವಡಿಸಿಕೊಳ್ಳುವುದು ಅನಿವಾರ್ಯ. ಹಾಗೆಯೇ ಮಾಧ್ಯಮ ಶಿಕ್ಷಕರು ನವ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕು ಪ್ರತಿನಿತ್ಯ ಅಪ್ಡೇಟ್‌ ಆಗಿ ತಯಾರಾಗಬೇಕು. ಮಾಧ್ಯಮ ಕ್ಷೇತ್ರ ಮತ್ತು ಮಾಧ್ಯಮ ಶಿಕ್ಷಣದ ನಡುವಿನ ಅಂತರವನ್ನು ತುಂಬಬೇಕು‘ ಎಂದು ಸಲಹೆ ನೀಡಿದರು.

‘ಮಾಧ್ಯಮ; ಕನ್ನಡ ಪುಸ್ತಕ ಹೆಚ್ಚು ಪ್ರಕಟಿಸಿ’

ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಮಾತನಾಡಿ ‘ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಇಲ್ಲ ಎಂಬ ಕೊರಗು ಇದೆ. ಪ್ರೊ.ಎ.ಎಸ್ ಬಾಲಸುಬ್ರಹ್ಮಣ್ಯ ಅವರ ‘ಪತ್ರಿಕೋದ್ಯಮದ ಪಲ್ಲಟಗಳು’ ಮತ್ತು ಹಳೆಯ ವಿದ್ಯಾರ್ಥಿಗಳ ಲೇಖನ ಸಂಗ್ರಹ ‘ಮಾಧ್ಯಮ ಕ್ಷಿತಿಜ’ ಕೃತಿಗಳನ್ನು ಪ್ರಕಟಿಸಿರುವುದು ಒಳ್ಳೆಯ ಸಂಗತಿ’ ಎಂದು ಹೇಳಿದರು. ‘ಕನ್ನಡದಲ್ಲಿ ಇನ್ನಷ್ಟು ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಮಾಡಬೇಕು. ಭಾರತೀಯ ಮಾಧ್ಯಮ ಕ್ಷೇತ್ರ ಅಪಾರವಾಗಿ ವಿಸ್ತರಣೆಯಾಗಿದೆ. ‘ಅಭಿವೃದ್ಧಿ ಸಂವಹನ’ ‘ವಿಜ್ಞಾನ ಸಂವಹನ’ ಅಂತರರಾಷ್ಟ್ರೀಯ ಸಂವಹನ’ ಸಹಿತ ವಿವಿಧ ಕ್ಷೇತ್ರಗಳಿಗೆ ಭಾರತೀಯ ಮಾಧ್ಯಮಗಳು ಕೊಡುಗೆ ನೀಡಿವೆ. ಆ ನಿಟ್ಟಿನಲ್ಲಿ ನಮ್ಮದೇ ಸಿದ್ಧಾಂತ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲು ಗಮನಹರಿಸಬೇಕು’ ಎಂದು ಹೇಳಿದರು.

ತಂತ್ರಜ್ಞಾನದ ಬಳಕೆ ಅನಿವಾರ್ಯ. ನಮ್ಮ ಪ್ರತಿ ಚಲನವಲನಗಳನ್ನು ತಂತ್ರಜ್ಞಾನ ಗಮನಿಸುವ ಕಾಲಘಟ್ಟದ‌ಲ್ಲಿದ್ದೇವೆ. ಎಚ್ಚರಿಕೆ ಇರಬೇಕು
-ಕೆ.ಬಿ.ಗುಡಸಿ ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT