ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka elections 2023 | ಕುಂದಗೋಳ ಕ್ಷೇತ್ರದ ಅಭ್ಯರ್ಥಿಗಳ ಸಂದರ್ಶನ

Published 1 ಮೇ 2023, 4:58 IST
Last Updated 1 ಮೇ 2023, 4:58 IST
ಅಕ್ಷರ ಗಾತ್ರ

ಕುಸುಮಾವತಿ ಶಿವಳ್ಳಿ, ಕಾಂಗ್ರೆಸ್ ಅಭ್ಯರ್ಥಿ

‘ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಗುರಿ’

* ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದ ನೀವು, ಎರಡನೇ ಚುನಾವಣೆ ಎದುರಿಸುತ್ತಿದ್ದೀರಿ. ಈ ಸಲ ಜನರ ಪ್ರತಿಕ್ರಿಯೆ ಹೇಗಿದೆ?

ಜನರು ನನ್ನ ಪತಿ ಸಿ.ಎಸ್. ಶಿವಳ್ಳಿ ಅವರ ಮೇಲಿಟ್ಟಿದ್ದ ಅಭಿಮಾನವನ್ನೇ ನನ್ನ ಮೇಲೂ ತೋರುತ್ತಿದ್ದಾರೆ. ಹಾಗಾಗಿಯೇ, ರಾಜಕೀಯದ ಗಂಧ–ಗಾಳಿ ಗೊತ್ತಿಲ್ಲದ ನನ್ನನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿದರು. ಅದೇ ವಿಶ್ವಾಸದ ಮೇಲೆ ಪಕ್ಷ ಮತ್ತೆ ಟಿಕೆಟ್ ಕೊಟ್ಟಿದೆ. ಕ್ಷೇತ್ರದಾದ್ಯಂತ ಎಲ್ಲಾ ಸಮುದಾಯದವರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

* ನಿಮಗೆ ಟಿಕೆಟ್ ವಿರೋಧಿಸಿದ್ದ ಇತರ ಆಕಾಂಕ್ಷಿಗಳು, ಪ್ರಚಾರದಿಂದ ದೂರ ಉಳಿದಿದ್ದಾರೆ. ಇದು ನಿಮಗೆ ಮುಳುವಾಗಿಲ್ಲವೆ?

ಆಕಾಂಕ್ಷಿಗಳು ನನಗೆ ಟಿಕೆಟ್ ಕೊಡಬಾರದು ಎಂದು ಅಸಮಾಧಾನಗೊಂಡಿದ್ದು ನಿಜ. ಪಕ್ಷದ ನಾಯಕರು ಅವರೊಂದಿಗೆ ಮಾತನಾಡಿ ಎಲ್ಲವನ್ನೂ ಬಗೆಹರಿಸಿದ್ದಾರೆ. ಒಂದಿಬ್ಬರನ್ನು ಹೊರತುಪಡಿಸಿದರೆ ಎಲ್ಲರೂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

* ಕಾಂಗ್ರೆಸ್ ಅವಧಿಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ನಿಮ್ಮ ಎದುರಾಳಿಗಳು ಪ್ರಚಾರ ಮಾಡುತ್ತಿದ್ದಾರೆ?

ಕ್ಷೇತ್ರದ ಅಭಿವೃದ್ಧಿಗೆ ಸಿ.ಎಸ್. ಶಿವಳ್ಳಿ ಅವರ ಕೊಡುಗೆ ದೊಡ್ಡದು. ರಸ್ತೆ, ಗಟಾರ,  ಶೌಚಾಲಯಗಳ ನಿರ್ಮಾಣ, ಸಮುದಾಯ ಭವನ, ಶಾಲೆಗಳ ಅಭಿವೃದ್ಧಿ, ಕುಡಿಯುವ ನೀರು, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದಾಗ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಕನಸು ಹೊಂದಿದ್ದರು. ಆದರೆ, ಅಕಾಲಿಕವಾಗಿ ನಿಧನರಾದರು. ನಾನು ಶಾಸಕಿಯಾದ ನಂತರ, ಕಳೆದ ನಾಲ್ಕು ವರ್ಷಗಳಲ್ಲಿ ಎರಡೂವರೆಗೆ ವರ್ಷ ಕೋವಿಡ್‌ ಇತ್ತು. ಯಾವುದೇ ಕೆಲಸಗಳಾಗಲಿಲ್ಲ. ಉಳಿದ ಅವಧಿಯಲ್ಲಿ ಸಾಧ್ಯವಾದಷ್ಟು ಕೆಲಸಗಳನ್ನು ಮಾಡಿದ್ದೇನೆ. ನನಗೆ ರಾಜಕೀಯ ಅನುಭವವಿಲ್ಲ ಎಂಬ ಕಾರಣಕ್ಕೆ, ಎದುರಾಳಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಜನರೇ ಉತ್ತರ ಕೊಡುತ್ತಾರೆ.

* ಜನರಿಗೆ ನಿಮ್ಮ ಅಭಿವೃದ್ಧಿಯ ಭರವಸೆಗಳೇನು?

ರಾಜ್ಯದ ಜನರಿಗೆ ಪಕ್ಷವು ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ 10 ಕೆ.ಜಿ ಅಕ್ಕಿ ವಿತರಣೆ, ಯುವ ನಿಧಿ ಎಂಬ ನಾಲ್ಕು ಗ್ಯಾರಂಟಿ ಕಾರ್ಡ್‌ಗಳನ್ನು ಕೊಟ್ಟಿದೆ. ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿದೆ. ಇವುಗಳ ಜೊತೆಗೆ, ಕುಂದಗೋಳ ಕ್ಷೇತ್ರದಲ್ಲಿ ಎಪಿಎಂಸಿ ಮೇಲ್ದರ್ಜೆಗೇರಿಸುವುದು, ಮೆಣಸಿನಕಾಯಿ ಸಂಸ್ಕರಣಾ ಘಟಕ ಆರಂಭ, ಕೈಗಾರಿಕೆಗಳ ಸ್ಥಾಪನೆ, ಯುವಜನರಿಗೆ ಕೌಶಲಾಭಿವೃದ್ಧಿ ತರಬೇತಿ, ಗ್ರಾಮಗಳಿಗೆ ಬಸ್ ಸೌಲಭ್ಯ ಹೆಚ್ಚಳ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಹಲವು ಯೋಜನೆಗಳನ್ನು ಹಾಕಿಕೊಂಡಿರುವೆ.

* ಎಂ.ಆರ್. ಪಾಟೀಲ, ಬಿಜೆಪಿ ಅಭ್ಯರ್ಥಿ

ಬದಲಾವಣೆ ಬಯಸಿರುವ ಮತದಾರ

* ಕ್ಷೇತ್ರದಲ್ಲಿ ಬಿಜೆಪಿ ಅಲೆ ಹೇಗಿದೆ?

ಕ್ಷೇತ್ರದಲ್ಲಿ ಬಿಜೆಪಿಯ ಬಿರುಗಾಳಿ ಎದ್ದಿದೆ. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಜನರು ಬದಲಾವಣೆಗಾಗಿ ಹಾತೊರೆಯುತ್ತಿರುವುದು ಕಂಡುಬರುತ್ತಿದೆ. ಇದು ನನ್ನ ಆತ್ಮ ವಿಶ್ವಾಸ ಹೆಚ್ಚಿಸಿದೆ.

* ಎಸ್‌.ಐ. ಚಿಕ್ಕನಗೌಡ್ರ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿರುವುದರಿಂದ ಪಕ್ಷದ ಮೇಲಾಗಿರುವ ಪರಿಣಾಮವೇನು?

ಚಿಕ್ಕನಗೌಡ್ರ ಅವರು ಪಕ್ಷ ತೊರೆದಿರುವುದರಿಂದ ಯಾವುದೇ ಹಾನಿಯಾಗಿಲ್ಲ. ಇಷ್ಟಕ್ಕೂ ಅವರ ಹಿಂದೆ ಪಕ್ಷದ ಯಾವ ಪದಾಧಿಕಾರಿಗಳೂ ಹೋಗಿಲ್ಲ. ನಮ್ಮಲ್ಲಿ ಪಕ್ಷ ಮುಖ್ಯವೇ ಹೊರತು, ವ್ಯಕ್ತಿಯಲ್ಲ. ಕಾರ್ಯಕರ್ತರು ಬಿಜೆಪಿ ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಈ ಸಲ ಕ್ಷೇತ್ರದಲ್ಲಿ ಕಮಲ ಗೆಲ್ಲುವುದು ಖಚಿತ.

* ಮತ ವಿಭಜನೆಯ ಸವಾಲನ್ನು ಹೇಗೆ ಎದುರಿಸುವಿರಿ?

ಕ್ಷೇತ್ರದಲ್ಲಿ ಈ ಸಲ ಅಭಿವೃದ್ದಿಯೇ ಚುನಾವಣೆಯ ಮುಖ್ಯ ವಿಷಯ. ಮತದಾರರು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೋಡುತ್ತಿಲ್ಲ. ಅವರಿಗೆ ಬೇಕಿರುವುದು ಕ್ಷೇತ್ರದ ಅಭಿವೃದ್ಧಿ. ಲಿಂಗಾಯತರು ಬಿಜೆಪಿಯ ಸಾಂಪ್ರದಾಯಿಕ ಮತದಾರರು. ಜೊತೆಗೆ, ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಮುದಾಯದವರು ಸಹ ಬದಲಾವಣೆಗಾಗಿ ಬಿಜೆಪಿ ಬೆಂಬಲಿಸಲು ನಿರ್ಧರಿಸಿರುವುದರಿಂದ, ಮತ ವಿಭಜನೆಯೇ ಸವಾಲು ಎದುರಾಗದು.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ನೀಲನಕ್ಷೆ ಏನು?

ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಶಾಸಕರು ಕೇವಲ ಭರವಸೆ ನೀಡುತ್ತಾ ಬಂದರು. ಕೆಲಸಗಳನ್ನೇ ಮಾಡಲಿಲ್ಲ. ನನ್ನ ಕೈಯಲ್ಲಿ ಅಧಿಕಾರ ಇಲ್ಲದಿದ್ದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ₹350 ಕೋಟಿಯಿಂದ ₹400 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ರಸ್ತೆ, ಶಾಲಾ–ಕಾಲೇಜುಗಳ ಕಟ್ಟಡಗಳ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ, ಹೆಣ್ಣು ಮಕ್ಕಳಿಗೆ ಹೊಲಿಗೆ ತರಬೇತಿ ಮತ್ತು ಯಂತ್ರ ವಿತರಣೆ ಸೇರಿದಂತೆ ಹಲವು ಕೆಲಸಗಳಾಗಿವೆ. ಮುಂದೆ, ಜಲಜೀವನ ಮೀಷನ್‌ ಯೋಜನೆಯಡಿ ಮನೆಮನೆಗೆ ಕುಡಿಯುವ ನೀರು ತಲುಪಿಸುವೆ. ಅಧಿಕಾರ ಸಿಕ್ಕರೆ, ಈಗಾಗಲೇ ಮಾಡಿರುವ ಕೆಲಸಗಳನ್ನು ಇನ್ನು ದೊಡ್ಡ ಮಟ್ಟದಲ್ಲಿ ಮಾಡುವೆ.

* ಜನ ನಿಮಗೆ ಯಾಕೆ ಮತ ಹಾಕಬೇಕು?

ಅಭಿವೃದ್ಧಿಗಾಗಿ ನನಗೆ ಮತ ಕೊಡಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ಬಿಜೆಪಿಯನ್ನು ಆರಿಸಬೇಕು.

* ಎಸ್‌.ಐ. ಚಿಕ್ಕನಗೌಡ್ರ ಪಕ್ಷೇತರ ಅಭ್ಯರ್ಥಿ

ಸ್ವಾಭಿಮಾನದ ಸ್ಪರ್ಧೆಗೆ ಗೆಲುವು ಖಚಿತ

* ಬಿಜೆಪಿ ತೊರೆಯುವ ಅನಿವಾರ್ಯತೆ ಏಕೆ ಬಂತು?

ತಾಲ್ಲೂಕಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸಿದ್ದೇನೆ. ಮೂರು ಸಲ ಶಾಸಕನಾಗಿದ್ದ ನಾನು ಕುಂದಗೋಳದಲ್ಲಿ ಮೊದಲ ಸಲ ಕಮಲವನ್ನು ಅರಳಿಸಿದ್ದೇನೆ. ಕಾಂಗ್ರೆಸ್‌ ನೆಲೆಯಲ್ಲಿ ವೈಯಕ್ತಿಕ ವರ್ಚಸ್ಸಿನ ಮೇಲೆ ಬಿಜೆಪಿಯನ್ನು ಗಟ್ಟಿಗೊಳಿಸಿರುವ ನಾನು ಸತತ  ಮೂರು ಚುನಾವಣೆಗಳಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಸೋತಿದ್ದೇನೆ. ಕಡೆಯದಾಗಿ ಒಮ್ಮೆ ಅವಕಾಶ ಕೊಡಿ ಎಂದರೂ ಪಕ್ಷದವರು ಕೊಡಲಿಲ್ಲ. ನನ್ನ ವಿರುದ್ಧ ಹಲವರು ಷಡ್ಯಂತ್ರ ನಡೆಸಿ ಟಿಕೆಟ್ ತಪ್ಪಿಸಿದರು. ಇದು ನನ್ನ ಸ್ವಾಭಿಮಾನವನ್ನು ಕೆಣಕಿತು. ಬೆಂಬಲಿಗರನ್ನು ರೊಚ್ಚಿಗೆಳಿಸಿತು. ಅವರ ಸಲಹೆ ಮೇರೆಗೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಪಕ್ಷೇತರವಾಗಿ ಕಣಕ್ಕಿಳಿದಿದ್ದೇನೆ.

* ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?

ನಾನು ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ ಇಷ್ಟರ ಮಟ್ಟಿಗೆ ಜನ ಬೆಂಬಲ ಸಿಗುತ್ತಿರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಒಳ–ಹೊರಗೆ ಏನೆಲ್ಲಾ ನಡೆಯುತ್ತಿದೆ ಎಂಬುದು ಜನರಿಗೆ ಗೊತ್ತಿದೆ. ಹಾಗಾಗಿಯೇ ಪಕ್ಷೇತರವಾಗಿ ಕಣಕ್ಕಿಳಿದಿರುವ ನನಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎರಡೂ ಪಕ್ಷಗಳಲ್ಲಿ ಅಸಮಾಧಾನಗೊಂಡವರು ನನ್ನ ಜೊತೆ ಗುರುತಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಈ ಅಲೆ ನೋಡಿದರೆ ಮತದಾರರು ಎರಡೂ ಪಕ್ಷಗಳನ್ನು ತಿರಸ್ಕರಿಸಿ ನನ್ನನ್ನು ಗೆಲ್ಲಿಸುವುದರಲ್ಲಿ ಎರಡು ಮಾತಿಲ್ಲ.

* ಲಿಂಗಾಯತ ಸಮುದಾಯದ ಮತ ವಿಭಜನೆಯಿಂದ ಮೂರನೇಯವರಿಗೆ ಲಾಭವಾಗುವುದಿಲ್ಲವೆ?

ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಯ ಮುಖ ನೋಡಿ ಮತದಾರ ಮಣೆ ಹಾಕುತ್ತಾ ಬಂದಿದ್ದಾನೆ. ನನ್ನ ರಾಜಕೀಯ ಜೀವನ ಹಾಗೂ ಶಾಸಕನಾಗಿದ್ದಾಗ ಮಾಡಿರುವ ಕೆಲಸಗಳನ್ನು ಜನ ನೋಡಿದ್ದಾರೆ. ನನ್ನ ಲಿಂಗಾಯತ ಸಮುದಾಯವಷ್ಟೇ ಅಲ್ಲದೆ ಕುರುಬರು ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಸಮುದಾಯಗಳ ಜನ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಅಭಯ ನೀಡಿದ್ದಾರೆ. ಹೀಗಿರುವಾಗ ಮತ ವಿಭಜನೆಯ ಪ್ರಶ್ನೆಯೇ ಉದ್ಭವಿಸದು.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆಗಳೇನು?

ವಸತಿ ಇಲ್ಲದವರಿಗೆ ಆಶ್ರಯ ಮನೆಗಳ ನಿರ್ಮಾಣ ತಾಲ್ಲೂಕಿನಲ್ಲಿ 10 ಎಕರೆ ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸ್ಥಳೀಯರಿಗೆ ಉದ್ಯೋಗಾವಕಾಶಕ್ಕಾಗಿ ಕೈಗಾರಿಕೆಗಳ ಸ್ಥಾಪನೆ ಅಗತ್ಯವಿರುವೆಡೆ ಪ್ರೌಢಶಾಲೆ ಮತ್ತು ಕಾಲೇಜು ಸ್ಥಾಪನೆ ಮಹಿಳೆಯರಿಗೆ ಸ್ವಾವಲಂಬನೆಗಾಗಿ ಕೌಶಲಾಭಿವೃದ್ಧಿ ತರಬೇತಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT