ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಗೃಹ ಜ್ಯೋತಿ: ಹೆಸ್ಕಾಂ ವ್ಯಾಪ್ತಿಯ 29.09 ಲಕ್ಷ ಕುಟುಂಬಗಳಿಗೆ ಲಾಭ

ರಶೀದಿ ಹಿಂಬದಿ ಸಿ.ಎಂ ಸಿದ್ದರಾಮಯ್ಯ ಫೋಟೊ ಪ್ರಕಟ
Published 5 ಆಗಸ್ಟ್ 2023, 6:24 IST
Last Updated 5 ಆಗಸ್ಟ್ 2023, 6:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’ ಯೋಜನೆಗೆ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗಿದೆ. ಯೋಜನೆಗೆ ಅರ್ಹವಾದ 35.90 ಲಕ್ಷ ಕುಟುಂಬಗಳ ಪೈಕಿ 29.09 ಲಕ್ಷ ಕುಟುಂಬಗಳು (ಶೇ 81.03) ನೋಂದಣಿ ಮಾಡಿಕೊಂಡಿವೆ. 

ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಸರ್ಕಾರವು ಜೂನ್‌ನಲ್ಲಿ ಆರಂಭಿಸಿತ್ತು. ಜುಲೈ ತಿಂಗಳಿನಿಂದ ಯೋಜನೆಯನ್ನು  ಅನುಷ್ಠಾನಗೊಳಿಸಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಹವಾದ ಒಟ್ಟು 35,90,841 ಗೃಹ  ಬಳಕೆದಾರ (ಬಿಜೆ/ಕೆಜೆ ಸೇರಿಸಿ) ಕುಟುಂಬಗಳಿವೆ. ಇವುಗಳಲ್ಲಿ 29,09,824 ಕುಟುಂಬಗಳು ನೋಂದಣಿ ಮಾಡಿಕೊಂಡಿವೆ. ಇವುಗಳಿಗೆ ಜುಲೈ ತಿಂಗಳ ವಿದ್ಯುತ್‌ ಶುಲ್ಕ ‘ಶೂನ್ಯ’ ಬಂದಿದೆ. ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಯಾವುದೇ ಅಂತಿಮ ದಿನಾಂಕವಿಲ್ಲ. ಇನ್ನುಳಿದವರು ಕೂಡ ಹಂತಹಂತವಾಗಿ ನೋಂದಣಿ ಮಾಡಿಕೊಳ್ಳಬಹುದು ಎನ್ನುತ್ತಾರೆ ಹೆಸ್ಕಾಂ ಅಧಿಕಾರಿಗಳು.

ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಲ್ಲಿ 8.42 ಲಕ್ಷ  ಗ್ರಾಹಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಅತಿ ಕಡಿಮೆ ನೋಂದಣಿಯು, ಗದಗ ಜಿಲ್ಲೆಯಲ್ಲಿ 2.39 ಲಕ್ಷ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.

ರಶೀದಿ ಹಿಂಬದಿ ಸಿದ್ದರಾಮಯ್ಯ ಫೋಟೊ: ವಿದ್ಯುತ್‌ ಉಚಿತವಾಗಿದ್ದರೂ ಬಿಲ್‌ ರಶೀದಿಯನ್ನು ಗ್ರಾಹಕರಿಗೆ ಎಂದಿನಂತೆ ನೀಡಲಾಗುತ್ತಿದೆ. ಇದರೊಳಗೆ ಅವರು ಬಳಸಿದ ವಿದ್ಯುತ್‌ ವಿವರ, ಶುಲ್ಕದ ವಿವರ ಹಾಗೂ ಬಾಕಿಯ ವಿವರ ನೀಡಲಾಗಿದೆ. ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡ ದಿನಾಂಕವನ್ನು ರಶೀದಿಯಲ್ಲಿ ನಮೂದು ಮಾಡಲಾಗಿದೆ. ಇದರ ಜೊತೆಗೆ, ಸರಾಸರಿ ವಿದ್ಯುತ್‌ ಯುನಿಟ್‌ ಬಳಕೆ ಹಾಗೂ ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು ಯೋಜನೆಯ ಲಾಭದ ಮಿತಿಯನ್ನು ನಮೂದು ಮಾಡಲಾಗಿದೆ.

ರಶೀದಿಯ ಹಿಂಬದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರ ಭಾವಚಿತ್ರಗಳನ್ನು ಪ್ರಕಟಿಸಲಾಗಿದೆ. ಜೊತೆಗೆ ಗ್ರಾಹಕರಿಗೆ ಒಂದಿಷ್ಟು ಸೂಚನೆಗಳನ್ನು ನೀಡಲಾಗಿದೆ.   

ಸೆಪ್ಟೆಂಬರ್‌ ತಿಂಗಳೊಳಗೆ ಬಾಕಿ ಪಾವತಿ: ‘ಗೃಹ ಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಕುಟುಂಬಗಳಿಗೆ ಜುಲೈ ತಿಂಗಳು ಬಳಸಿದ ನಿಗದಿತ ವಿದ್ಯುತ್‌ಗೆ ‘ಶೂನ್ಯ’ ಶುಲ್ಕ ವಿಧಿಸಲಾಗಿದೆ. ಅದರ ಹಿಂದಿನ ತಿಂಗಳಲ್ಲಿ ಶುಲ್ಕ ಬಾಕಿ ಉಳಿದಿದ್ದರೆ ಅಂತಹ ಶುಲ್ಕದ ಮೊತ್ತ ಮಾತ್ರ ರಶೀದಿಯಲ್ಲಿ ನೀಡಲಾಗಿದೆ. ಬಾಕಿ ವಿದ್ಯುತ್‌ ಶುಲ್ಕವನ್ನು ಪಾವತಿಸಲು ಸರ್ಕಾರವು ಸೆಪ್ಟೆಂಬರ್‌ ಅಂತ್ಯದವರೆಗೆ ಸಮಯಾವಕಾಶ ನೀಡಿದೆ. ಅಷ್ಟರೊಳಗೆ ಬಾಕಿ ವಿದ್ಯುತ್‌ ಶುಲ್ಕ ಭರಿಸಬೇಕು. ಇಲ್ಲದಿದ್ದರೆ ಅಂತಹ ಗ್ರಾಹಕರನ್ನು ಯೋಜನೆಯಿಂದ ಕೈಬಿಡಲಾಗುವುದೆಂದು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ’ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್‌ ರೋಷನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT