ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಎಸ್‌ಡಿಎಂನಲ್ಲಿ ಕೋವಿಡ್‌ ಸ್ಫೋಟ: ಸೋಂಕು ಹರಡಿದ್ದು ಎಲ್ಲಿಂದ?

ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಶಂಕೆ ಏನು?
Last Updated 27 ನವೆಂಬರ್ 2021, 4:03 IST
ಅಕ್ಷರ ಗಾತ್ರ

ಧಾರವಾಡ: ‘ಇಲ್ಲಿನ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ 281 ಜನರಿಗೆ ಕೋವಿಡ್–19 ದೃಢಪಟ್ಟಿದೆ. ನಾಲ್ಕು ವಿದ್ಯಾರ್ಥಿ ನಿಲಯಗಳಿಗೆ ಒಂದೇ ಊಟದ ಸಭಾಂಗಣವಿದ್ದು, ಇಲ್ಲಿಂದಲೇ ಸೋಂಕು ವೇಗವಾಗಿ ಪ್ರಸರಣವಾಗಿರುವ ಸಾಧ್ಯತೆ ಇದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹೇಳಿದರು.

‘ಕಾಲೇಜಿನ ಪಕ್ಕದ ಡಾ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನ.17ರಂದು ನಡೆದ ಕಾರ್ಯಕ್ರಮದ ನಂತರದಲ್ಲಿ ಕೆಲವರಲ್ಲಿ ಸೋಂಕು ಲಕ್ಷಣಗಳು ಕಂಡುಬಂದಿದ್ದವು. ಅದಾದ ಕೆಲವೇ ದಿನಗಳಲ್ಲಿ ಸೋಂಕು ವೇಗವಾಗಿ ಹರಡಿತ್ತು. ಸೋಂಕಿತರು ಒಂದೇ ಕಡೆ ಸೇರುತ್ತಿದ್ದುದರಿಂದ ವೇಗವಾಗಿ ಪ್ರಸರಣವಾಗಿರುವ ಸಾಧ್ಯತೆ ಇದೆ. ಆದರೆ, ಇವರು ಕಾಲೇಜು ಮತ್ತು ವಿದ್ಯಾರ್ಥಿ ನಿಲಯಗಳಿಗೆ ಸೀಮಿತವಾಗಿದ್ದರಿಂದ ಸೋಂಕು ಹೊರಗೆ ವ್ಯಾಪಿಸಿಲ್ಲ. ಜತೆಗೆ ಆಸ್ಪತ್ರೆ ರೋಗಿಗಳಿಗೂ ಸೋಂಕು ತಗುಲಿರುವ ಸಾಧ್ಯತೆ ಕಡಿಮೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಶುಕ್ರವಾರ ರಾತ್ರಿ ವೇಳೆಗೆಸೋಂಕು ದೃಢಪಟ್ಟಿದ್ದು 204 ಜನರಲ್ಲಿ. ಈ ಪೈಕಿ ಸಿಬ್ಬಂದಿ ಹಾಗೂ ವೈದ್ಯರ ಸಂಖ್ಯೆ 25. ಒಟ್ಟು ಸೋಂಕಿತರಲ್ಲಿ ಆರು ಜನರಲ್ಲಿ ಮಾತ್ರ ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆ. ಈಗಾಗಲೇ ಕಾಲೇಜು ಹಾಗೂ ಆಸ್ಪತ್ರೆಯ 3,500 ಸಿಬ್ಬಂದಿಯ ಮೂಗು ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ. ಹುಬ್ಬಳ್ಳಿಯ ಕಿಮ್ಸ್‌ ಹಾಗೂ ಡಿಮ್ಹಾನ್ಸ್‌ನ ತಲಾ 5 ಹಾಗೂ ಎಸ್‌ಡಿಎಂ ಒಂದು ತಂಡ ಇಲ್ಲಿ ಮಾದರಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದೆ. ಸೋಂಕು ಹೊರಗೆ ವ್ಯಾಪಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ. ಆದರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಹೊರಗೆ ಹೋಗುವವರ ಕೋವಿಡ್ ತಪಾಸಣೆ ನಡೆಸಲು ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಎಸ್‌ಡಿಎಂ ಕಾಲೇಜು ಹಾಗೂ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಸ್ಪತ್ರೆಯ 3,500 ಜನರ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಶನಿವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಎಸ್‌ಡಿಎಂ ಆಸ್ಪತ್ರೆಯ ಹೊರರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿ ತುರ್ತು ಸೇವೆಗಳು ಮಾತ್ರ ಲಭ್ಯ. ಆಸ್ಪತ್ರೆಗೆ ಬರುವ ಹೊರರೋಗಿಗಳು ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿ ಕಿಮ್ಸ್ ಹಾಗೂ ಇನ್ನಿತರೆಡೆ ಚಿಕಿತ್ಸೆ ಪಡೆಯಬಹುದು. ಈ ಕುರಿತಂತೆ ವಿವಿಧ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಎಸ್‌ಡಿಎಂ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನಿರಂತರವಾಗಿ ಮಾಹಿತಿ ನೀಡಿ, ಮಾರ್ಗದರ್ಶನ ಪಡೆಯಲಾಗುತ್ತಿದೆ’ ಎಂದು ಹೇಳಿದರು.

ಇಂದು ಸ್ಪಷ್ಟ ಚಿತ್ರಣ ಸಾಧ್ಯತೆ

‘ಎಸ್‌ಡಿಎಂ ಕಾಲೇಜು ಹಾಗೂ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತರ ಪ್ರಯಾಣ ಮಾಹಿತಿ ಹಾಗೂ ಇದು ವೈರಾಣುವಿನ ಹೊಸ ತಳಿಯೇ ಎಂದು ತಿಳಿಯಲು ಜಿನೋಮ್ ಅನುಕ್ರಮ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಲಯಕ್ಕೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಎಂಗೆ ಸಾರ್ವಜನಿಕರ ಅನಗತ್ಯ ಭೇಟಿ, ದಾಖಲಾಗಿರುವ ರೋಗಿಗಳ ಸಹಾಯಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಾಲೇಜು ಸುತ್ತ 500 ಮೀಟರ್‌ ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಸ್ಪತ್ರೆಯ 3,500 ಜನರ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಶನಿವಾರದ ಹೊತ್ತಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT