ಗುರುವಾರ , ಅಕ್ಟೋಬರ್ 17, 2019
24 °C
ಹೈದರಾಬಾದ್‌ ಎದುರಾಳಿ

ವಿಜಯ ಮರ್ಚಂಟ್‌ ಕ್ರಿಕೆಟ್‌: ಶುಭಾರಂಭದ ನಿರೀಕ್ಷೆಯಲ್ಲಿ ಕರ್ನಾಟಕ

Published:
Updated:
Prajavani

ಹುಬ್ಬಳ್ಳಿ: ಕರ್ನಾಟಕ ತಂಡದವರು ಶುಕ್ರವಾರ ಇಲ್ಲಿ ಆರಂಭವಾಗಲಿರುವ 16 ವರ್ಷದ ಒಳಗಿನವರ ವಿಜಯ್‌ ಮರ್ಚಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ದಕ್ಷಿಣ ವಲಯದ ತಮ್ಮ ಮೊದಲ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು ಎದುರಿಸಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮೂರು ದಿನ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೂ ಈ ಬಾರಿಯ ಟೂರ್ನಿಯ ಚೊಚ್ಚಲ ಪಂದ್ಯ ಇದಾಗಿದೆ. ರಾಜ್ಯ ತಂಡದ ಆಟಗಾರರು ಗುರುವಾರ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ಭಾರಿ ಮಳೆ ಸುರಿಯಿತು. ಇದರಿಂದ ಅಭ್ಯಾಸ ಮೊಟಕುಗೊಳಿಸಿದರು. ಆದ್ದರಿಂದ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ದಕ್ಷಿಣ ವಲಯದಲ್ಲಿ ಒಟ್ಟು ಏಳು ತಂಡಗಳಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳು ನಾಕೌಟ್‌ ಪ್ರವೇಶಿಸಲಿವೆ. ರಾಜ್ಯ ತಂಡ ತನ್ನ ಮುಂದಿನ ಪಂದ್ಯವನ್ನು ಅ. 17ರಿಂದ ಬೆಳಗಾವಿಯಲ್ಲಿ ಗೋವಾ ಎದುರು ಆಡಲಿದೆ. ನಂತರದ ಪಂದ್ಯಗಳಲ್ಲಿ ಕ್ರಮವಾಗಿ ಪುದುಚೇರಿ, ಆಂಧ್ರ, ತಮಿಳುನಾಡು ಮತ್ತು ಕೇರಳ ತಂಡಗಳ ಸವಾಲು ಎದುರಿಸಲಿದೆ. ಆದ್ದರಿಂದ ಟೂರ್ನಿಯ ಮೊದಲ ಪಂದ್ಯದಲ್ಲಿ ಗೆಲುವಿನ ಆರಂಭ ಪಡೆದು ವಿಶ್ವಾಸ ಹೆಚ್ಚಿಸಿಕೊಳ್ಳಲು ಕಾಯುತ್ತಿದೆ.

ಬೆಂಗಳೂರಿನ ಸೋಷಿಯಲ್‌ ಕ್ರಿಕೆಟರ್ಸ್‌ ಕ್ಲಬ್‌ ಪ್ರತಿನಿಧಿಸುವ ಅಶ್ವಿನ್‌ ಸಂತೋಷ್ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಹೈದರಾಬಾದ್‌ ತಂಡಕ್ಕೆ ಅಮನರಾವ್‌ ನಾಯಕರಾಗಿದ್ದಾರೆ.

‘ಟೂರ್ನಿಯ ಮೊದಲ ಪಂದ್ಯ ನಮಗೆ ಯಾವಾಗಲೂ ವಿಶೇಷ. ಗೆಲುವಿನ ಆರಂಭ ಪಡೆದರೆ ಉಳಿದ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡ ಬಲಿಷ್ಠವಾಗಿದೆ’ ಎಂದು ಕರ್ನಾಟಕ ತಂಡದ ಕೋಚ್‌ ಸಿ. ರಘು ಹೇಳಿದರು.

ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ.

Post Comments (+)