ಗುರುವಾರ , ಜುಲೈ 29, 2021
21 °C
ಕುಬೇರಪ್ಪ ಪಶ್ಚಿಮ ಪದವೀಧರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

ಶಿಕ್ಷಣ ತಜ್ಞರ ಸಮಿತಿ ರಚಿಸಿ: ಕಾಂಗ್ರೆಸ್ ಮುಖಂಡ ಕುಬೇರಪ್ಪ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ 19 ಸಂಕಷ್ಟದ ಕಾಲದಲ್ಲಿ ಶಾಲೆಗಳನ್ನು ಯಾವಾಗ ಆರಂಭಿಸಬೇಕು, ಶಿಕ್ಷಕರು ಏನು ಮಾಡಬೇಕು ಎನ್ನುವುದರ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸಲು ರಾಜ್ಯ ಸರ್ಕಾರ ಶಿಕ್ಷಣ ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಪಶ್ಚಿಮ ಪದವೀಧರರ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ. ಆರ್‌.ಎಂ. ಕುಬೇರಪ್ಪ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಿಕ್ಷಣ ಸಚಿವರು ಅಧಿಕಾರಿಗಳ ಮಾತು ಕೇಳಿಕೊಂಡು ಶಿಕ್ಷಕರಿಗೆ ಶಾಲೆಗೆ ಬರುವಂತೆ ಹೇಳುತ್ತಿದ್ದಾರೆ. ಮುಂದೆ ಶಾಲೆಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳ ರಕ್ಷಣೆ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ? ಆದ್ದರಿಂದ ಸರ್ಕಾರ, ವಿಶ್ರಾಂತ ಕುಲಪತಿಗಳು, ನಿವೃತ್ತ ಶಿಕ್ಷಕರು ಮತ್ತು ಈ ಕ್ಷೇತ್ರದ ಸಾಧಕರನ್ನು ಒಳಗೊಂಡ ಸಮಿತಿ ರಚಿಸಿ ಶಾಲೆಗಳ ಪುನರಾರಂಭಕ್ಕೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು’ ಎಂದರು.

‘ರಾಜ್ಯದಲ್ಲಿ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡಿಲ್ಲ. ಶಾಲೆಗಳು ಆರಂಭವಾದರೆ ಗ್ರಾಮೀಣ ಭಾಗದಲ್ಲೂ ಸೋಂಕು ಹರಡುವ ಅಪಾಯವಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಆತಂಕಗೊಂಡಿದ್ದಾರೆ. ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುತ್ತಿದೆಯೇ’ ಎಂದು ಪ್ರಶ್ನಿಸಿದರು.

ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣದ ಬಗ್ಗೆಯೂ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಇಂದಿಗೂ ಬಹಳಷ್ಟು ಹಳ್ಳಿಗಳಲ್ಲಿ ಸರಿಯಾಗಿ ಇಂಟರ್ನೆಟ್‌ ಬರುವುದಿಲ್ಲ. ಹಳ್ಳಿಯ ವಿದ್ಯಾರ್ಥಿಗಳು ಏನು ಮಾಡಬೇಕು? ಶಿಕ್ಷಣ ಸಚಿವರು ಅಧಿಕಾರಿಗಳೊಂದಿಗೆ ಮಾತ್ರ ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬದಲು ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆಗೂ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲೂ ಕೇಂದ್ರ ಆರಂಭಿಸಿ:

ಪಿಯುಸಿ ವಿಜ್ಞಾನ ವಿಷಯದ ಮೌಲ್ಯಮಾಪನ ಮಾಡಲು ಉತ್ತರ ಕರ್ನಾಟಕ ಭಾಗದ ಉಪನ್ಯಾಸಕರು ಬೆಂಗಳೂರಿಗೆ ಹೋಗಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಹುಬ್ಬಳ್ಳಿಯಲ್ಲಿಯೂ ಮೌಲ್ಯಮಾಪನ ಕೇಂದ್ರ ಆರಂಭಿಸಬೇಕು. ವಿಜ್ಞಾನ ಪತ್ರಿಕೆಗಳ ಮೌಲ್ಯಮಾಪಕ ವಿಕೇಂದ್ರಿಕರಣ ಆಗಬೇಕು ಎಂದರು ಆಗ್ರಹಿಸಿದರು.

ಈ ವರ್ಷ ಶಾಲೆಗಳು ತಡವಾಗಿ ಆರಂಭವಾಗುವುದರಿಂದ ಆ ಅವಧಿಗೆ ಸೂಕ್ತವಾಗುವಂತೆ ಪಠ್ಯ ಕಡಿಮೆ ಮಾಡಿದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಒತ್ತಡ ಕಡಿಮೆಯಾಗುತ್ತದೆ ಎಂದರು.

ಏಕರೂಪದ ಪಠ್ಯಕ್ಕೆ ವಿರೋಧ:

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಏಕರೂಪದ ಪಠ್ಯ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸುತ್ತಿದೆ. ವಿಶ್ವವಿದ್ಯಾಲಯಗಳ ಅಸ್ಮಿತೆ ಇರುವುದೇ ಪ್ರಾದೇಶಿಕ ವಿಷಯಗಳ ಆಯ್ಕೆಯಲ್ಲಿ. ಈಗ ಅದನ್ನೂ ತೆಗೆದು ಹಾಕಿದರೆ ವಿ.ವಿ.ಗಳ ಮೌಲ್ಯ ಕಡಿಮೆಯಾಗುತ್ತದೆ. ಆದ್ದರಿಂದ ಸರ್ಕಾರ ಈ ನಿರ್ಧಾರ ಪುನರ್‌ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಶಿಕ್ಷಕರ ಹಾಗೂ ಪದವೀಧರರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಆರ್‌. ಕಲ್ಮಡಿ ಮತ್ತು ಘಟಕದ ಧಾರವಾಡ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಕಾಶ ಹಳ್ಯಾಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು