ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್‌ ಭರ್ಜರಿ ಚಾಲನೆ

ಭಾನುವಾರ, ಮೇ 26, 2019
28 °C
ಸಂಶಿ ಗ್ರಾಮದಲ್ಲಿ ಕುಸುಮಾವತಿ ಪರ ಅನುಕಂಪದ ಅಲೆ

ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್‌ ಭರ್ಜರಿ ಚಾಲನೆ

Published:
Updated:
Prajavani

ಸಂಶಿ(ಹುಬ್ಬಳ್ಳಿ): ಮೇ 19ರಂದು ನಡೆಯಲಿರುವ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ಸಂಜೆ ಸಂಶಿ ಗ್ರಾಮದಲ್ಲಿ ಕಾಂಗ್ರೆಸ್‌ ಭರ್ಜರಿ ಚಾಲನೆ ನೀಡಿತು.

ಕ್ಷೇತ್ರದ ಮೂಲೆ,ಮೂಲೆಯಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರ ಜಯಘೋಷಗಳ ನಡುವೆ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಗಿಡಕ್ಕೆ ನೀರೆರೆಯುವ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದರು.

ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಸಚಿವ ಡಿ.ಕೆ. ಶಿವಕುಮಾರ್‌ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು.

‘ಪತಿ ಹಾಕಿಕೊಟ್ಟ ಮಾರ್ಗದಲ್ಲಿ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಮಾಡಿ ಕೊಡಿ’ ಎಂದು ಸೆರಗೊಡ್ಡಿ ಬೇಡಿದರು. ಈ ಸಂದರ್ಭದಲ್ಲಿ ಅವರು ಕಣ್ಣೀರಾದರು. ವೇದಿಕೆ ಮೇಲೆ ಉಪಸ್ಥಿತರಿದ್ದ ದಿ.ಸಿ.ಎಸ್‌.ಶಿವಳ್ಳಿ ಅವರ ಪುತ್ರ ಅಮರಶಿವ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.

‘ಕುಂದಗೋಳ ಉಪಚುನಾವಣೆ ಸ್ವಾಭಿಮಾನದ ಚುನಾವಣೆಯಾಗಿದೆ. ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸುವ ಮೂಲಕ ದಿವಂಗತ ಸಿ.ಎಸ್.ಶಿವಳ್ಳಿ ಅವರ ಆತ್ಮಕ್ಕೆ ಶಾಂತಿ ಕೋರಬೇಕಾಗಿದೆ’ ಎಂದು ಸಿದ್ದರಾಮಯ್ಯ ಕರೆ ನೀಡಿದರು.

‘ಕುಸುಮಾವತಿ ಯಾರ ಬಳಿಯೂ ಪಕ್ಷದ ಟಿಕೆಟ್‌ ಕೇಳಿರಲಿಲ್ಲ. ಪಕ್ಷದ ವರಿಷ್ಠರು ಮತ್ತು ಕಾರ್ಯಕರ್ತರು ಒಂದುಗೂಡಿ ಅವರನ್ನು ಕಣಕ್ಕಿಳಿಸಿದ್ದೇವೆ. ಅವರು ಗೆದ್ದರೆ ಕ್ಷೇತ್ರದ ಬಡವರ ಅಭಿವೃದ್ಧಿಯಾಗುತ್ತದೆ’ ಎಂದರು.

‘ಸದಾ ಕಾಲ ಬಡವರ ಬಗ್ಗೆ ಚಿಂತಿಸುತ್ತಿದ್ದ, ಬಡವರ ಪರ ಕಾರ್ಯನಿರ್ವಹಿಸುತ್ತಿದ್ದ ಸಿ.ಎಸ್‌.ಶಿವಳ್ಳಿ ಅವರು ಆರೋಗ್ಯದ ಕಡೆ ಗಮನ ಕೊಡದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ಜೀವ ಕಳೆದುಕೊಳ್ಳಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಎಲೆಕ್ಷನ್‌ ಕುಸುಮಾವತಿ ಶಿವಳ್ಳಿ ಅವರದಲ್ಲ. ಡಿ.ಕೆ.ಶಿವಕುಮಾರ್‌ ಎಲೆಕ್ಷನ್‌’ ಎಂದು ಹೇಳುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್‌  ನೆರೆದಿದ್ದ ಕಾರ್ಯಕರ್ತರನ್ನು ಹುರಿದುಂಬಿಸಿದರು.

‘ಹೆಣ್ಣು ಮಗುವಿಗೆ ವೋಟ್‌ ತಪ್ಪಿಸದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ’ ಎಂದು ಜೆಡಿಎಸ್‌ ಹಿರಿಯ ಮುಖಂಡ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸತೀಶ ಜಾರಕಿಹೊಳಿ, ಆರ್‌.ಬಿ.ತಿಮ್ಮಾಪುರ, ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ, ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ವಿನಯ ಕುಲಕರ್ಣಿ, ಪುಷ್ಪಾ ಅಮರನಾಥ್‌, ಪ್ರೊ.ಐ.ಜಿ.ಸನದಿ, ಎ.ಎಂ.ಹಿಂಡಸಗೇರಿ, ವೀರಣ್ಣ ಮತ್ತಿಕಟ್ಟಿ, ಎನ್‌.ಎಚ್‌.ಕೋನರಡ್ಡಿ, ಎಂ.ಎಸ್‌.ಅಕ್ಕಿ, ಅನಿಲ್‌ ಕುಮಾರ್‌ ಪಾಟೀಲ ಪ್ರಚಾರಕ್ಕೆ ಸಾಥ್ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !