ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ನಿರ್ವಹಣೆ ಕೊರತೆ: ಪಾಳುಬಿದ್ದ 150ಕ್ಕೂ ಹೆಚ್ಚು ಗರಡಿಮನೆ

Published 8 ಏಪ್ರಿಲ್ 2024, 6:29 IST
Last Updated 8 ಏಪ್ರಿಲ್ 2024, 6:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಧಾರವಾಡದ ಪೈಲ್ವಾನ್ರ ಅಂದ್ರ ಹಗರಂತ ಮಾಡಿದ್ರೇನ..? ಕೊಲ್ಹಾಪುರ, ಪುಣಾ, ಬಾಂಬೆ.. ಹಿಂಗ ಎಲ್ಲಿಗೇ ಕುಸ್ತಿ ಆಡಾಕ ಹೋದ್ರ ಕಣದಾಗ ನಂಬರ್ ಹಚ್ಚಲಾರದ ಬರ್ತಿರಲಿಲ್ಲ. ಕುಸ್ತಿಗಿ ರಾಜ್ಯದಾಗ ಧಾರವಾಡ ಜಿಲ್ಲಾ ಹೆಸರಾಗಿತ್ತ.. ಆದ್ರ ಈಗ ಹಂಗ ಉಳಿದಿಲ್ಲರೀ’...!

ಹೀಗೆ ನೋವಿನಿಂದ ಹೇಳುತ್ತಾರೆ ಕುಸ್ತಿ ಪೈಲ್ವಾನರು. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದು ಇತಿಹಾಸದ ಪುಟ ಸೇರುತ್ತಿರುವ ಗರಡಿ ಮನೆಗಳೇ ಇದಕ್ಕೆ ಕಾರಣ ಎಂಬುದು ಅವರ ಬೇಸರ.

ಗ್ರಾಮೀಣ ಪ್ರದೇಶದಲ್ಲಿ ಈ ಹಿಂದೆ ಮನೆಗೊಬ್ಬರು ಪೈಲ್ವಾನರು, ಓಣಿಗೊಂದು ಗರಡಿ ಮನೆ ಇತ್ತು. ಆದರೆ ಆಧುನಿಕತೆ ಪ್ರಭಾವದಿಂದ ಈ ಸಂಖ್ಯೆ ಕ್ರಮೇಣ ಕ್ಷೀಣಿಸಿದೆ. ಇದೀಗ ತಾಲ್ಲೂಕಿಗೆ ಒಂದಿಬ್ಬರು ಪೈಲ್ವಾನರ ಹೆಸರು ಕೇಳಿಬಂದರೆ, ಅಲ್ಲೊಂದು, ಇಲ್ಲೊಂದು ಗರಡಿಮನೆಗಳು ಮಾತ್ರ ಬಳಕೆಗೆ ಯೋಗ್ಯವಾಗಿವೆ.

ಗರಡಿ ಮನೆಗಳಿಗೇ ಹೆಸರುವಾಸಿ ಯಾಗಿದ್ದ ಹುಬ್ಬಳ್ಳಿಯ ಉಣಕಲ್ ಗ್ರಾಮದಲ್ಲಿ ಈ ಹಿಂದೆ 13 ಗರಡಿ ಮನೆಗಳಿದ್ದವು. ಆದರೆ, ಈ ಪೈಕಿ ಒಂದೇ ಉಳಿದಿದೆ. ಹೀಗೆ ಜಿಲ್ಲೆಯಲ್ಲಿನ 150ಕ್ಕೂ ಹೆಚ್ಚು ಗರಡಿ ಮನೆಗಳಲ್ಲಿ ಸದ್ಯ ತಾಲೀಮು ಸದ್ದು ನಿಂತುಹೋಗಿದೆ. 50 ರಿಂದ 60 ಗರಡಿಮನೆಗಳು ಮಾತ್ರ ಬಳಕೆಯಲ್ಲಿವೆ.

ಹುಬ್ಬಳ್ಳಿಯ ಗೋಪನಕೊಪ್ಪ, ಹಳೇ ಹುಬ್ಬಳ್ಳಿ, ಉಣಕಲ್‌, ಗೋಕುಲ, ಬೈರಿದೇವರಕೊಪ್ಪ, ಕಲ್ಲೂರು, ಗಾಮನಗಟ್ಟಿ, ಮಲ್ಲಿಗವಾಡ, ನವಲೂರು, ಗರಗ, ತಡಸಿನಕೊಪ್ಪ, ಕುಂದಗೋಳ, ಉಪ್ಪಿನಬೆಟಗೇರಿ ಹಾಗೂ ಜಿಲ್ಲೆಯ ಕುಸ್ತಿ ಪರಂಪರೆಯ ಕೊಂಡಿ ಎನಿಸಿರುವ ಕರ್ನಾಟಕ ವ್ಯಾಯಾಮ ಶಾಲೆ ಜ್ಯೋತಿ ತಾಲೀಮು, ಮಾರುತಿ ಕುಸ್ತಿ ವಿದ್ಯಾಲಯ, ಹೊಸ ಯಲ್ಲಾಪುರದಲ್ಲಿರುವ ಠಾಕೂರ್ ತಾಲೀಮು ಗರಡಿಮನೆಯಲ್ಲಿ ಮಾತ್ರ ನಿತ್ಯ ತಾಲೀಮು ನಡೆಯುತ್ತಿದೆ.

‘ಈ ಮುಂಚೆ ಗರಡಿಮನೆಗೆ ಉಸ್ತಾದ್, ಖಲೀಫ್, ಲೈಸೆನ್ಸ್‌ದಾರ ಇರುತ್ತಿದ್ದರು. ಇವರ ಉಸ್ತುವಾರಿಯಲ್ಲಿ ಗರಡಿಮನೆಯ ಚಟುವಟಿಕೆ, ಅಭ್ಯಾಸ ನಡೆಯುತ್ತಿದ್ದವು. ಆದರೆ, ಇಂದಿನ ಜನ ಗರಡಿ ಮನೆಗಳತ್ತ ಆಸಕ್ತಿ ತೋರದ ಕಾರಣ ಅವು ಪಾಳುಬಿದ್ದಿವೆ. ಮಳೆ ಬಂದರೆ ಸೋರುತ್ತವೆ. ಪಾಳುಬಿದ್ದ ಬಹುತೇಕ ಗರಡಿಮನೆಗಳಲ್ಲಿನ ವಸ್ತುಗಳೆಲ್ಲಾ ಕಳ್ಳರ ಪಾಲಾಗಿವೆ. ಶಿಸ್ತು, ಶ್ರದ್ಧೆಯ ಪಾಠ ಹೇಳಿಕೊಡುತ್ತಿದ್ದ ಗರಡಿ ಮನೆಗಳು, ರಾತ್ರಿಯಾದರೆ ಜೂಜಾಟ, ಕುಡುಕರ ಮೋಜು– ಮಸ್ತಿಯ ತಾಣ ಗಳಾಗಿವೆ’ ಎನ್ನುತ್ತಾರೆ ಹುಬ್ಬಳ್ಳಿಯ ಹೊಸೂರು ನಿವಾಸಿ, ಕ್ರೀಡಾಪ್ರೇಮಿ ಶಿವಪುತ್ರಪ್ಪ.

ಯುವಜನರಲ್ಲಿ ನಿರಾಸಕ್ತಿ: ಇತ್ತೀಚಿನ ದಿನಗಳಲ್ಲಿ ಗರಡಿಮನೆಗಳ ಕುರಿತು ಯುವಜನರಲ್ಲಿ ನಿರಾಸಕ್ತಿ ಮೂಡಿದೆ. ಈಗ ಕುಸ್ತಿಗಳೆಲ್ಲ ಜಿಮ್‌ಗಳ ವಿರುದ್ಧವೇ ನಡೆಯುವಂತಾಗಿವೆ. ಗರಡಿ ಮನೆಗಳು ವೈಭವ ಕಳೆದುಕೊಳ್ಳುತ್ತಿದ್ದು, ಜಿಮ್ ಸಾಮಗ್ರಿಗಳು ನಿಧಾನವಾಗಿ ಗರಡಿ ಮನೆಗಳು ಪ್ರವೇಶಿಸುತ್ತಿವೆ.

‘ಯುವಜನತೆ ಉತ್ತಮ ಶರೀರ ಹೊಂದಲು ಗರಡಿ ಮನೆಗಳ ಬದಲಿಗೆ ಜಿಮ್‌ಗಳ ಮೊರೆ ಹೋಗುತ್ತಿದ್ದಾರೆ. ಇದು ಶರೀರವನ್ನು ಬೇಗ ಮುಪ್ಪುಗೊಳಿಸುತ್ತದೆ. ಆರೋಗ್ಯದ ಮೇಲೆ ತೊಂದರೆ ಬೀರುತ್ತದೆ. ಜಿಮ್ ಬದಲಿಗೆ ಗರಡಿಮನೆಗಳತ್ತ ಯುವಜನತೆ ಒಲವು ಬೆಳೆಸಿಕೊಂಡು, ಸಾಂಪ್ರದಾಯಿಕ ಕ್ರೀಡೆ ಕುಸ್ತಿ ಉಳಿಸಬೇಕಿದೆ’ ಎಂಬುದು ಪೈಲ್ವಾನರ ಒತ್ತಾಸೆ.

ಬಡಕುಸ್ತಿ ಪಟುಗಳ ಪಾಲಿಗೆ ವರದಾನ: ‘ಗರಡಿಮನೆ ಗಳು ಬಡ ಕುಸ್ತಿಪಟುಗಳ ಪಾಲಿಗೆ ವರದಾನವಾಗಿದೆ. ಹಲವೆಡೆ ಕುಸ್ತಿ ತರಬೇತಿಗೆ ಖಾಸಗಿ ಕೇಂದ್ರಗಳಿವೆ. ಇಲ್ಲಿ ಒಬ್ಬರ ತರಬೇತಿಗೆ ತಿಂಗಳಿಗೆ ಕನಿಷ್ಠ ₹10 ಸಾವಿರದಿಂದ ₹15 ಸಾವಿರ ಪಡೆಯಲಾಗುತ್ತಿದೆ. ಆದರೆ ಗರಡಿ ಮನೆಗಳಲ್ಲಿ ಯಾವುದೇ ಶುಲ್ಕ ಪಡೆಯದೇ ಮಾಜಿ ಪೈಲ್ವಾನರೇ ಕುಸ್ತಿ ಪಟ್ಟುಗಳನ್ನು ಹೇಳಿಕೊಡುತ್ತಾರೆ. ಅಲ್ಲದೆ, ವಿಶೇಷ ಮುತುವರ್ಜಿ ವಹಿಸುತ್ತಾರೆ’ ಎನ್ನುತ್ತಾರೆ ಯುವ ಕುಸ್ತಿಪಟು ಧ್ರುವಕುಮಾರ ಕೋಟಿ.

ಹಬ್ಬ– ಆಚರಣೆಗಳಿಗಷ್ಟೇ ಸೀಮಿತವಾದ ಕುಸ್ತಿ: ದಸರಾ, ಯುಗಾದಿ, ಜಾತ್ರೆ, ಗಣ್ಯರ ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಿಗಷ್ಟೇ ಕುಸ್ತಿ ಪಂದ್ಯಾವಳಿ ಸೀಮಿತ ಎನ್ನುವಂತಾಗಿದೆ. ಆಗ ಹೊರತುಪಡಿಸಿ ಬೇರಾವ ಸಂದರ್ಭಗಳಲ್ಲಿ ನಡೆಯುವುದು, ನಡೆಸುವುದು ತುಂಬಾ ವಿರಳ.

ಗರಡಿ ಮನೆಯಿಂದ ಕುಸ್ತಿ ಕಲಿತು ಅದರಿಂದಲೇ ಬದುಕು ಕಟ್ಟಿಕೊಂಡ ಪೈಲ್ವಾನರು ಇಂದು ಜೀವನ ಸಾಗಿಸಲು ಹೆಣಗಾಡುತ್ತಿದ್ದಾರೆ. ತುಂಬಾ ಕಡೆಗಳಲ್ಲಿ ಕುಸ್ತಿ ಪ್ರದರ್ಶನ ನಿಲ್ಲಿಸಿರುವುದು ಅವಕಾಶ ವಂಚಿತರನ್ನಾಗಿ ಮಾಡಿದೆ.

ಪೂರಕ ಮಾಹಿತಿ: ಬಸನಗೌಡ ಪಾಟೀಲ, ರಮೇಶ ಓರಣಕರ

ನಿರ್ವಹಣೆಗೆ ಬೇಕು ಅಪಾರ ಹಣ

ಗರಡಿ ಮನೆಗಳಲ್ಲಿ ಅಂಗ ಸಾಧನೆ ಮಾಡಲು ಮುಖ್ಯವಾಗಿ ಬೇಕಿರುವುದು ಮಟ್ಟಿ (ಮಣ್ಣು). ಶುದ್ಧ ಕೆಮ್ಮಣ್ಣು, ಕರ್ಪೂರ, ಅರಿಸಿನ, ಕುಂಕುಮ, ಗಂಧದಪುಡಿ, ಹಾಲು, ಮೊಸರು, ತುಪ್ಪ, ಎಳ್ಳೆಣ್ಣೆ, ಲಿಂಬೆಹಣ್ಣಿನ ರಸ ಹಾಕಿ ಮಟ್ಟಿ ತಯಾರಿಸಲಾಗುತ್ತದೆ. ಇದು ಆಯುರ್ವೇದದ ಔಷಧದ ಗುಣ ಹೊಂದಿದ್ದು, ತಾಲೀಮು ವೇಳೆ ಗಾಯಗೊಂಡರೆ ‘ಮುಲಾಮಿನಂತೆ’ ಹಚ್ಚಲಾಗುತ್ತದೆ.

‘ಈ ಮುಂಚೆ ಗರಡಿ ಮನೆಗಳಿಗೆ ಆರ್ಥಿಕ ಸ್ಥಿತಿವಂತರು ಹಣಕಾಸಿನ ನೆರವು ನೀಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇದೂ ನಿಂತಿದೆ. ಈ ಮುಂಚೆ ವರ್ಷದಲ್ಲಿ ಎರಡು ಬಾರಿ ಮಟ್ಟಿ ಮಾಡಲಾಗುತ್ತಿತ್ತು. ಇದಕ್ಕೆ ದುಬಾರಿ ಖರ್ಚು ತಗುಲುವ ಕಾರಣ ಕೈಯಿಂದಲೇ ಖರ್ಚು ಮಾಡಿ ವರ್ಷಕ್ಕೊಮ್ಮೆ ಮಾತ್ರ ಮಟ್ಟಿ ಮಾಡಲಾಗುತ್ತಿದೆ’ ಎನ್ನುತ್ತಾರೆ ಪೈಲ್ವಾನರಾದ ಅಶೋಕ ಚಿಲ್ಲನ್ನವರ.

ತಾಲೀಮು ಸಾಮಾನ್ಯವಲ್ಲ

ಗರಡಿ ಮನೆಗಳಲ್ಲಿ ಅಭ್ಯಾಸ ನಡೆಸಲು ಬಳಕೆಯಾಗುವುದು ನೈಸರ್ಗಿಕ ಉಪಕರಣಗಳಷ್ಟೇ. ಗದೆ, ಗರ್ದನ್ ಕಲ್ಲು, ಸಾಮ್ರಾಣಿ ಕಲ್ಲು, ರೌಂಡ್‌ಕಲ್ಲು, ಕೊಂಬು, ಗುದ್ದಲಿ, ಹನುಮಾನ್ ದಂಡೆ, ಗದೆ ಬಳಸಿ ತಾಲೀಮು ಮಾಡಲಾಗುತ್ತದೆ.

ಕುಸ್ತಿಪಟುಗಳು ಸೊಂಟಕ್ಕೆ ಜರತಾರಿ ನಡಪಟ್ಟಿ, ಹಣೆಗೆ ಕುಂಕುಮದ ತಿಲಕ, ಬಿಗಿಯಾದ ಕಾಸೆ(ಕಿರುಪಂಚೆ) ಧರಿಸಿ ನಿತ್ಯ ತಾಲೀಮು ನಡೆಸುತ್ತಾರೆ. ಗುಂಡು ಕಲ್ಲು ಎತ್ತುವುದು, ಗದೆ ಬೀಸುವುದು, ಸಾಮು ತೆಗೆಯುವಲ್ಲಿ ನಿರತರಾಗಿರುತ್ತಾರೆ.

ಒಮ್ಮೆಗೆ 100 ಬಸ್ಕಿ ಹೊಡೆಯುವುದು, ಮಣ್ಣಿನ ಬೆಟ್ಟ ಹತ್ತುವುದು, ಟೈಗರ್ ವಾಕ್ ಮಾಡುವುದು, ಮಲಗಿಕೊಂಡು ಕೈಕಾಲುಗಳನ್ನು ನೆಲಕ್ಕೆ ಭಾರಕೊಟ್ಟು ಮುಂದೆ ಸಾಗುವುದು, ಸೇರಿದಂತೆ ಹಲವು ಕಸರತ್ತು ಮಾಡಿ ದೇಹ ಹುರಿಗೊಳಿಸುತ್ತಾರೆ.

‘ಪೈಲ್ವಾನರಿಗೆ ಮಾಸಾಶನ ಕೊಡಲಿ’

ಕುಸ್ತಿಪಟು, ಪೈಲ್ವಾನರ ಸಾಮರ್ಥ್ಯ ಹಾಗೂ ನಡೆಸುವ ಅಭ್ಯಾಸಕ್ಕೆ ತಕ್ಕಂತೆ ಊಟದ ಪ್ರಮಾಣ ನಿರ್ಧಾರವಾಗುತ್ತದೆ. ಹಾಲು, ತುಪ್ಪ, ಬಾದಾಮಿ, ಚಪಾತಿ, ಸಜ್ಜಿಗೆ, ಹಣ್ಣಿನ ರಸ, ತರಕಾರಿ, ಕೊಬ್ಬಿನಾಂಶವುಳ್ಳ ತರಹೇವಾರು ಕಾಳು ಸೇರಿದಂತೆ ಪೌಷ್ಟಿಕ ಆಹಾರ ಸೇವಿಸಬೇಕಾಗುತ್ತದೆ. ಇದಕ್ಕೆ ಒಬ್ಬರಿಗೆ  ತಿಂಗಳಿಗೆ ಕನಿಷ್ಠ ₹10 ಸಾವಿರವಾದರೂ ಬೇಕೇ ಬೇಕು. ಆರ್ಥಿಕವಾಗಿ ದುರ್ಬಲರಾದವರು ಹಣ ಹೊಂದಿಸಿಕೊಳ್ಳುವುದೇ  ಸವಾಲಿನ ಕೆಲಸವಾಗಿದೆ. ಆರ್ಥಿಕ ಸಮಸ್ಯೆಯಿಂದ ಅನಿವಾರ್ಯವಾಗಿ ಕ್ರಮೇಣ ಈ ರೀತಿಯ ಆಹಾರ ಪದ್ಧತಿಯ ಸೇವನೆ ಕೈಬಿಡುವಂತಾಗಿದೆ. ಸರ್ಕಾರವು ಬೆರಳೆಣಿಕೆಯಷ್ಟು ಪೈಲ್ವಾನರಿಗೆ ಮಾತ್ರ ಮಾಸಾಶನ ನೀಡುತ್ತದೆ. ಗ್ರಾಮೀಣ ಭಾಗದಲ್ಲಿನ ಪೈಲ್ವಾನರನ್ನೂ ಗುರುತಿಸಿ ಮಾಸಾಶನ ಸೌಲಭ್ಯ ಒದಗಿಸಿ ಪ್ರೋತ್ಸಾಹಿಸಬೇಕು’ ಎನ್ನುತ್ತಾರೆ ಪೈಲ್ವಾನ್‌ ಪರಶುರಾಮ ಮುಳಗುಂದ.

‘ಉದ್ಯೋಗಾವಕಾಶ ನೀಡಲಿ’

ಕರ್ನಾಟಕದಿಂದ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕುಸ್ತಿಪಟುಗಳಿಗೆ ಮಾತ್ರ ಕ್ರೀಡಾ ಕೋಟಾದಡಿ ಉದ್ಯೋಗಾವಕಾಶ ಸಿಗುತ್ತಿವೆ. ಆದರೆ, ‘ಮಹಾರಾಷ್ಟ್ರ ಕೇಸರಿ’ ಪ್ರಶಸ್ತಿ ಪಡೆದರೆ ಅಲ್ಲಿನ ಸರ್ಕಾರ ಪೊಲೀಸ್‌ ಇಲಾಖೆಯಲ್ಲಿ ಉನ್ನತ ಹುದ್ದೆ ನೀಡುತ್ತದೆ. ಆದರೆ, ರಾಜ್ಯದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ದೊಡ್ಡ ಹುದ್ದೆಗಳಲ್ಲಿ ಅವಕಾಶವೇ ಸಿಗುವುದಿಲ್ಲ. ಕುಸ್ತಿ ಪಂದ್ಯಾವಳಿಯಲ್ಲಿ ನೀಡುವ ಪ್ರಮಾಣಪತ್ರಗಳು ಪ್ರಯೋಜನಕ್ಕೆ ಬರುತ್ತಿಲ್ಲ.ಇದರಿಂದ ಬೇಸತ್ತು ಅನೇಕರು ಕುಸ್ತಿಯಿಂದಲೇ ಹಿಂದೆ ಸರಿಯುತ್ತಿದ್ದಾರೆ. ಇದು ಕುಸ್ತಿ ಬೆಳವಣಿಗೆಗೆ ಹಿನ್ನಡೆಯನ್ನುಂಟು ಮಾಡಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಕುಸ್ತಿ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ಶಾಸ್ತ್ರಿ.

ಸಮುದಾಯ ಭವನ, ಅಂಗನವಾಡಿ ಕೇಂದ್ರಗಳಾಗಿ ಮಾರ್ಪಾಡು

ಉಪ್ಪಿನಬೆಟಗೇರಿಯಲ್ಲಿ ಏಳು ಗರಡಿ ಮನೆಗಳಿದ್ದು, ಆ ಜಾಗದಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವನ್ನು ಅತಿಕ್ರಮಿಸಿಕೊಂಡು ಕಟ್ಟಿಗೆ, ಡ್ರಮ್, ಮನೆ ಬಳಕೆ ವಸ್ತು ಇಡಲಾಗಿದೆ.

‘ಯುಗಾದಿ, ಜಾತ್ರೆ ಸಂದರ್ಭದಲ್ಲಿ ಬೇರೆ ಊರಿನ ಪೈಲ್ವಾನರನ್ನು ಕರೆಸಿ ಕುಸ್ತಿ ಆಡಸಲಾಗುತ್ತಿದೆ. ಗರಡಿ ಮನೆಗಳ ಜೀರ್ಣೋದ್ಧಾರ ಮಾಡಿದರೆ ಸ್ಥಳೀಯ ಕುಸ್ತಿಗಳಿಗೆ ಅನುಕೂಲ ಆಗಲಿದೆ’ ಎನ್ನುತ್ತಾರೆ ಕಲ್ಲೂರ ಗ್ರಾಮದ ಮಾಜಿ ಪೈಲ್ವಾನ್ ನಿಂಗರಾಜ ಸಹದೇವಪ್ಪ ಹಡಪದ.

ಕುಂದಗೋಳ ಬಳಿಯ ಯರಗುಪ್ಪಿ ಗ್ರಾಮದಲ್ಲಿ₹10 ಲಕ್ಷ ವೆಚ್ಚದಲ್ಲಿ ಗರಡಿ ಮನೆ ಅಭಿವೃದ್ಧಿ ಮಾಡಿದ್ದರೂ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿವೆ. ವರ್ಷಕ್ಕೊಮ್ಮೆ ಗಣಪತಿ ಕೂರಿಸಲು ಬಳಕೆ ಆಗುತ್ತಿದೆ.

ಪೈಲ್ವಾನರ ಬೇಡಿಕೆ....

  • ಜಿಲ್ಲೆಯಲ್ಲಿರುವ ಎಲ್ಲ ಗರಡಿ ಮನೆಗಳ ಜೀರ್ಣೋದ್ಧಾರ

  • ಗರಡಿ ಮನೆಗಳ ಅಭಿವೃದ್ಧಿಗೆ ₹20 ಲಕ್ಷ ಅನುದಾನ

  • ಮಾಜಿ ಪೈಲ್ವಾನರನ್ನು ತರಬೇತುದಾರರನ್ನಾಗಿಸಿ, ಗೌರವಧನ ನೀಡಿ

  • ಜಿಲ್ಲೆಯಲ್ಲಿ ನಿರಂತರವಾಗಿ ಕುಸ್ತಿ ಪಂದ್ಯಾವಳಿಗಳ ಆಯೋಜನೆ

  • ಕರ್ನಾಟಕದಿಂದಲೂ ರೈಲ್ವೆ ಕುಸ್ತಿ ತಂಡ ರಚನೆ

  • ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕ್ರೀಡಾ ತರಬೇತಿ ಶಾಲೆ

  • ಸಾಂಪ್ರದಾಯಿಕ ಕುಸ್ತಿಗೆ ಒಲಿಂಪಿಕ್‌ನಲ್ಲಿ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT