ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲತಾಣ ಬಳಕೆ: ತಗ್ಗಿದ ಸಾಹಿತ್ಯಾಸಕ್ತಿ-ಉರ್ದು ಕವಿ ಹೈದರ್ ಮಜಾರಿ ಅಭಿಪ್ರಾಯ

Last Updated 24 ಜುಲೈ 2021, 4:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಾಮಾಜಿಕ ತಾಲತಾಣಗಳ ಬಳಕೆಯಿಂದಾಗಿ, ಜನರಲ್ಲಿ ಸಾಹಿತ್ಯದ ಬಗೆಗಿನ ಆಸಕ್ತಿ ನಿಧಾನವಾಗಿ ಕಡಿಮೆಯಾಗುತ್ತಿದೆ.ಹೊಸ ಸಾಹಿತ್ಯ ಹುಟ್ಟಬೇಕಾದರೆ ಸಾಹಿತ್ಯದ ಅಭಿರುಚಿ ಜತೆಗೆ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದುಬಳ್ಳಾರಿಯಕವಿ ಹೈದರ್ ಮಜಾರಿ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ನಡೆದ ಸಾಹಿತ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಯುವ ಜನಾಂಗದ ಆಸಕ್ತಿಯನ್ನು ಸಾಹಿತ್ಯದತ್ತ ಸೆಳೆಯುವ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಸಾಹಿತ್ಯವನ್ನು ಜೀವಂತವಾಗಿಡುವಲ್ಲಿ ಹಿರಿಯ ಸಾಹಿತಿಗಳ ಪಾತ್ರ ಮುಖ್ಯವಾಗಿದೆ. ಇದರಿಂದಾಗಿ ಭವಿಷ್ಯದ ಕವಿ ಮತ್ತು ಸಾಹಿತಿ ಹುಟ್ಟಲು ಸಹಾಯವಾಗುತ್ತದೆ’ ಎಂದರು.

‘ತಂತ್ರಜ್ಞಾನದ ಈ ಆಧುನಿಕ ಯುಗದಲ್ಲಿಯೂ ಸಾಹಿತ್ಯವನ್ನು ಬೆಳೆಸಿ ಬೆಳೆಸಿ, ಉಳಿಸುವ ಪ್ರಯತ್ನ ನಿರಂತರವಾಗಿರಬೇಕು. ಸಾಹಿತ್ಯದಿಂದ ಆರೋಗ್ಯ, ಮನೋಸ್ಥೈರ್ಯ ಹಾಗೂ ಒಳ್ಳೆಯ ಮನೋಭಾವವನ್ನು ಸಂಪಾದಿಸಬಹುದು’ ಎಂದು ತಿಳಿಸಿದರು.

ಕವಿ ಹಾಗೂ ಉರ್ದು ಅಕಾಡೆಮಿ ಮಾಜಿ ಸದಸ್ಯವೆಂಕಪ್ಪ ಕಲಾದಗಿ ಮಾತನಾಡಿ, ‘ಯಾವುದೇ ಭಾಷೆಯು ಒಂದು ಸೀಮಿತ ವರ್ಗಕ್ಕೆ ಸೇರಿರುವುದಿಲ್ಲ. ಮುಸಲ್ಮಾನರಲ್ಲದ ಮುನ್ಷಿ ಪ್ರೇಮಚಂದ್, ಕ್ರಿಶನ್ ಚಂದೆರ, ರಾಮಪ್ರಸಾದ ಬಿಸ್ಮಿಲ್ಲಾ, ದಯಾಶಂಕರ ನಸೀಮ, ರಾಜೇಂದ್ರಸಿಂಗ್ ಬೇಡಿ, ಫಿರಾಕ್ ಗೋರಖಪುರಿ, ಜಗನ್ನಾಥ ಆಜಾದ್, ಆನಂದ ನಾರಾಯಣ ಮುಲ್ಲಾ, ಉಪೇಂದ್ರನಾಥ ಅಶ್ಕ, ಪಂಡಿತ್ ಬ್ರೀಜ್ ಮೋಹನ ಕೈಫಿ ಇವರೆಲ್ಲರೂ ಉರ್ದು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.

‘ಪ್ರತಿ ಭಾಷೆಗೂ ತನ್ನದೇ ಆದ ಅಸ್ತಿತ್ವ, ಮಹತ್ವ, ಸೊಗಡು ಹಾಗೂ ಇತಿಹಾಸ ಇರುತ್ತದೆ. ಉರ್ದು ಭಾಷೆಗೆ ಶೀರೀನ್ ಭಾಷೆ ಎಂದೂ ಹೇಳಲಾಗುತ್ತದೆ. ಅಂದರೆ, ಅತ್ಯಂತ ಸೊಗಸಾದ ಭಾಷೆ ಇದಾಗಿದೆ’ ಎಂದು ಹೇಳಿದರು.

ಟಿಪ್ಪು ಷಹೀದ್ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಎಂ.ಎಸ್. ಮುಲ್ಲಾ, ‘ಉರ್ದು ಸಾಹಿತ್ಯ ಕ್ಷೇತ್ರಕ್ಕೆಕವಿ ಹೈದರ್ ಮಜಾರಿ ಅವರ ಕೊಡುಗೆ ದೊಡ್ಡದು. 80ನೇ ವಯಸ್ಸಿನಲ್ಲೂ ಅವರು ಸಕ್ರಿಯರಾಗಿದ್ದಾರೆ. ವೆಂಕಪ್ಪ ಕಲಾದಗಿ ಅವರ ಮಾತೃಭಾಷೆ ಕನ್ನಡವಾಗಿದ್ದರೂ, ಅವರೊಬ್ಬ ಉರ್ದು ಸಾಹಿತಿಯಾಗಿದ್ದಾರೆ. ಉರ್ದು ಯಾವುದೇ ಒಂದು ಧರ್ಮಕ್ಕೆ ಸೇರಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ’ ಎಂದರು.

ಲಿಪಿ ಬರಹಗಾರ ಗಯಾಸುದ್ದೀನ ಖಾಜಿ ಹಾಗೂ ಅಬ್ದುಲ್ ಅಜೀಜ್ ಬುರುಜವಾಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT