ಬುಧವಾರ, ಜುಲೈ 28, 2021
23 °C
ಕೊರೊನಾ ಸೋಂಕು ಪತ್ತೆ ಪರೀಕ್ಷೆಗೆ ಅಕ್ಕ–ಪಕ್ಕದ ಜಿಲ್ಲೆಗಳಿಂದ ಹೆಚ್ಚುತ್ತಿವೆ ಸ್ವಾಬ್‌ ಸ್ಯಾಂಪಲ್‌ಗಳು

ಧಾರವಾಡ: ಸ್ಥಳೀಯರ ಕೊರೊನಾ ಪರೀಕ್ಷಾ ವರದಿ ವಿಳಂಬ

ಪ್ರಮೋದ‌ Updated:

ಅಕ್ಷರ ಗಾತ್ರ : | |

Coronavirus

ಹುಬ್ಬಳ್ಳಿ: ಅವಳಿ ನಗರಗಳಲ್ಲಿರುವ ಕೊರೊನಾ ಸೋಂಕು ಪರೀಕ್ಷಾ ಕೇಂದ್ರಗಳಿಗೆ ಹೊರ ಜಿಲ್ಲೆಗಳಿಂದಲೇ ಹೆಚ್ಚು ಸ್ವಾಬ್‌ ಮಾದರಿಗಳು ಬರುತ್ತಿರುವ ಕಾರಣ ಜಿಲ್ಲೆಯ ಶಂಕಿತರ ಪರೀಕ್ಷಾ ವರದಿಗಳು ಬರುವುದು ತಡವಾಗುತ್ತಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.

ನಗರದಲ್ಲಿರುವ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆ (ಕಿಮ್ಸ್‌)ಯಲ್ಲಿ ನಿತ್ಯ 400ರಿಂದ 500 ಸ್ಯಾಂಪಲ್‌ಗಳ ಪರೀಕ್ಷೆ ಮಾಡಲಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಗುಜರಾತ್ ಮತ್ತು ರಾಜಸ್ಥಾನದಿಂದ ಜಿಲ್ಲೆಗೆ ಜನ ಮರಳಿದ ಬಳಿಕವಂತೂ ಪರೀಕ್ಷೆಗೆ ಒಳಪಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ವಿಜಯಪುರ, ಗದಗ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಿಂದ ಕಿಮ್ಸ್‌ ಮತ್ತು ಡಿಮ್ಹಾನ್ಸ್‌ಗೆ ಸ್ವಾಬ್‌ ಮಾದರಿಗಳು ಬರುತ್ತಿವೆ. ಭಾನುವಾರದಿಂದ ಡಿಮಾನ್ಸ್‌ಗೆ ಕೊಪ್ಪಳದಿಂದಲೂ ಮಾದರಿಗಳು ಬರಲಿವೆ. ಕಳೆದ ವಾರ ಒಂದೇ ದಿನ ವಿಜಯಪುರದಿಂದ 2,069 ಮಾದರಿಗಳು ಪರೀಕ್ಷೆಗಾಗಿ ಬಂದಿದ್ದವು.

ವರದಿಗೂ ಮೊದಲೇ ಮನೆಗೆ: ಹೊರ ರಾಜ್ಯಗಳಿಂದ ಬಂದವರ ಎರಡನೇ ಪರೀಕ್ಷಾ ವರದಿ ಬರುವ ಮೊದಲೇ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ನಿಂದ ಹೋಂ ಕ್ವಾರಂಟೈನ್‌ಗೆ ಕಳುಹಿಸುತ್ತಿರುವುದು ಕೂಡ ಜನರಲ್ಲಿ ಆತಂಕ ಉಂಟು ಮಾಡುತ್ತಿದೆ. ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡರೂ ‘ಎರಡನೇ ಪರೀಕ್ಷಾ ವರದಿ ಬರುವ ಮೊದಲೇ ಮನೆಗೆ ಕಳುಹಿಸುವುದು ಸರಿಯೇ’ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಇತ್ತೀಚೆಗೆ ರಾಜಸ್ಥಾನದ ಅಜ್ಮೀರ್‌ನಿಂದ ಧಾರವಾಡಕ್ಕೆ ಮರಳಿದ್ದ ಮಹಿಳೆಯೊಬ್ಬರ ಮೊದಲ ಪರೀಕ್ಷಾ ವರದಿ ನೆಗೆಟಿವ್‌ ಬಂದಿತ್ತು. ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಗಿದ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಮನೆಗೆ ಬಂದ ಮರುದಿನವೇ ಅವರಲ್ಲಿ ಕೋವಿಡ್‌ 19 ದೃಢಪಟ್ಟಿದ್ದು, ಅಕ್ಕಪಕ್ಕದ ಮನೆಯವರನ್ನು, ಮನೆಯ ಸದಸ್ಯರನ್ನು ಈಗ ಕ್ವಾರಂಟೈನ್‌ ಮಾಡಲಾಗಿದೆ.

ದೆಹಲಿಯಿಂದ ಹುಬ್ಬಳ್ಳಿಗೆ ಇತ್ತೀಚಿಗೆ ಬಂದ ಪ್ರಭಂಜನ್‌ ಅವರ ಮೊದಲ ವರದಿ ನೆಗೆಟಿವ್‌ ಬಂದಿದ್ದು, ಎರಡನೇ ಪರೀಕ್ಷೆ ಮುಗಿದು ಹತ್ತು ದಿನ ಕಳೆದರೂ ಫಲಿತಾಂಶ ಏನಾಗಿದೆ ಎಂಬುದೇ ಅವರಿಗೆ ಗೊತ್ತಾಗಿಲ್ಲ.

‘ದೆಹಲಿಯಿಂದ ಬಂದ ದಿನವೇ ಮೊದಲ ಪರೀಕ್ಷೆಗೆ ಒಳ‍ಪಡಿಸಲಾಯಿತು. ನನ್ನಲ್ಲಿ ಸೋಂಕಿನ ಯಾವ ಲಕ್ಷಣಗಳೂ ಇಲ್ಲವಾದರೂ, ಎರಡನೇ ವರದಿ ಬರುವುದನ್ನು ಎದುರು ನೋಡುತ್ತಿದ್ದೇನೆ. ಅಧಿಕೃತ ವರದಿ ಬರುವ ತನಕ ಆತಂಕವಿದ್ದೇ ಇರುತ್ತದೆ. ಕನಿಷ್ಠ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕವಾದರೂ ಫಲಿತಾಂಶ ಕಳುಹಿಸುವ ವ್ಯವಸ್ಥೆ ಮಾಡಬೇಕು’ ಎಂದು ಪ್ರಭಂಜನ್‌ ಹೇಳಿದರು.

ಶಕ್ತಿ ಮೀರಿ ಕೆಲಸ: ಅಂಟರತಾನಿ

ಬಾಕಿ ಉಳಿದ ಪರೀಕ್ಷೆಗಳನ್ನು‌ ಶೀಘ್ರವಾಗಿ ಮುಗಿಸಬೇಕು ಎನ್ನುವ ಕಾರಣಕ್ಕೆ ಕಿಮ್ಸ್‌ ಸಿಬ್ಬಂದಿ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕು ಪರೀಕ್ಷೆಗೆ ಇನ್ನೊಂದು ಯಂತ್ರ ಬಂದಿದ್ದು ಕೆಲ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಮ್ಯಾನುವಲ್‌ ಆಗಿಯೂ ಪರೀಕ್ಷೆ ಮಾಡಲಾಗುತ್ತಿದೆ. ವಿಜಯಪುರ, ಹಾವೇರಿಯಿಂದಲೂ ಹೆಚ್ಚು ಸ್ವಾಬ್ ಮಾದರಿಗಳು ಬರುತ್ತಿವೆ ಎಂದು ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು.

ಸ್ಥಳೀಯರ ಪರೀಕ್ಷೆಗೆ ಆದ್ಯತೆ: ದೇಸಾಯಿ

ನಮ್ಮಲ್ಲಿರುವ ಪರೀಕ್ಷಾ ಯಂತ್ರಗಳಿಗೆ ಹೆಚ್ಚು ಅನುಕೂಲವಾಗುವ ಕಿಟ್‌ಗಳಿದ್ದರೆ ದಿನಕ್ಕೆ ಒಂದು ಸಾವಿರದ ತನಕ ಸೋಂಕು ಪತ್ತೆ ಪರೀಕ್ಷೆ ಮಾಡಬಹುದು. ಸದ್ಯಕ್ಕೆ ಬೆಳಗಾವಿ, ಉತ್ತರ ಕನ್ನಡ, ಗದಗ ಮತ್ತು ಹಾವೇರಿ ಜಿಲ್ಲೆಗಳಿಂದ ಹೆಚ್ಚು ಸ್ವಾಬ್‌ ಮಾದರಿಗಳು ಬರುತ್ತಿವೆ. ಆದರೆ, ಸ್ಥಳೀಯರಿಗೆ ಆದ್ಯತೆ ನೀಡಿ ಪರೀಕ್ಷೆ ಮಾಡಲಾಗುತ್ತದೆ ಎಂದು ಡಿಮಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ತಿಳಿಸಿದರು.

ಹೊರ ರಾಜ್ಯಗಳಿಂದ ಬಂದವರ ಮೊದಲ ವರದಿ ನೆಗೆಟಿವ್‌ ಇದ್ದು, ಕ್ವಾರಂಟೈನ್‌ ಸಮಯ ಮುಗಿದರೂ ಅವರಲ್ಲಿ ಸೋಂಕಿನ ಲಕ್ಷಣಗಳಿದ್ದರೆ ಅವರನ್ನು ಎರಡು ವಾರಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಯೇ ಇರಿಸಲಾಗುವುದು. ಇತ್ತೀಚಿಗೆ ಮನೆಗೆ ಮರಳಿದ ಮಹಿಳೆಗೆ ಸೋಂಕು ದೃಢಪಟ್ಟ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು