ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 20 ಲಕ್ಷ ಸಾಲ ಪಡೆದವ ವಾಪಸ್ ಕೊಡಲಿಲ್ಲ ಎಂದು ವ್ಯಕ್ತಿ ಆತ್ಮಹತ್ಯೆ

Last Updated 24 ಜುಲೈ 2022, 4:32 IST
ಅಕ್ಷರ ಗಾತ್ರ

ಕಲಘಟಗಿ: ₹ 20 ಲಕ್ಷವನ್ನು ಸಾಲಗಾರ ಮರಳಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ದಾಸ್ತಿಕೊಪ್ಪ ಗ್ರಾಮದ ಜೋಂಡಿಗೆರೆಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಉಣಕಲ್ ಶ್ರೀನಗರ ನಿವಾಸಿ ಗುರುಶಿದ್ದಪ್ಪ ಬೆಂಡಿಗೇರಿ (65) ಆತ್ಮಹತ್ಯೆ ಮಾಡಿಕೊಂಡವರು. ಸಿ.ಸಿ. ಕಮ್ಮಾರ ಎಂಬಾತನಿಗೆ ₹ 20 ಲಕ್ಷ ಸಾಲ ನೀಡಿದ್ದರು, ಆದರೆ ಅವರು ವಾಪಸ್ ನೀಡಿರಲಿಲ್ಲ ಎನ್ನಲಾಗಿದೆ.

ಕಾರಿನಲ್ಲಿ ಬಂದಿದ್ದ ಅವರು ವಾಹನವನ್ನು ಕೆರೆಯ ಸಮೀಪ ನಿಲ್ಲಿಸಿದ್ದಾರೆ. ಆತ್ಮಹತ್ಯೆಗೆ ಮುನ್ನ ಅವರು ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಘಟಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.

ಐವರು ಬಂಧನ– ಹುಬ್ಬಳ್ಳಿ ವರದಿ: ಉಣಕಲ್‌ ಕೆರೆ ಉದ್ಯಾನಕ್ಕೆ ಬಂದಿದ್ದ ಪ್ರೇಮಿಗಳಿಗೆ ಬೆದರಿಸಿ, ಅವರಿಂದ ಹಣ ಸುಲಿಗೆ ಮಾಡುತ್ತಿದ್ದ ಐದು ಮಂದಿಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿ, ಬೈಕ್‌ ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ನಿವಾಸಿಗಳಾದ ಪವನ್‌, ಅಮೃತ್, ವಿಜಯ, ಸಂಜಯ್‌ ಮತ್ತು ಪಂಕಜ ಬಂಧಿತರು. ಉದ್ಯಾನಕ್ಕೆ ಬಂದ ಪ್ರೇಮಿಗಳಿಗೆ ಹೆದರಿಸಿ ಪೊಲೀಸ್‌ ಠಾಣೆಗೆ ಹೋಗೋಣ ಎಂದು ಹುಡುಗನಿಗೆ ಬೈಕ್‌ನಲ್ಲಿ ವಿಮಾನ ನಿಲ್ದಾಣದ ಹಿಂಭಾಗದ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅವನ ಮೇಲೆ ಹಲ್ಲೆ ನಡೆಸಿ ಹಣ ಕಿತ್ತುಕೊಂಡಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಒಬ್ಬಾತ ತಾನು ಶಹರ ಠಾಣೆ ಪೊಲೀಸ್‌ ಕಾನ್‌ಸ್ಟೆಬಲ್‌ ಎಂದು ಹೆದರಿಸಿದ್ದಾನೆ. ಮತ್ತೊಬ್ಬ ಪ್ರೀತಿಸಿದ ಹುಡುಗಿಯ ಮಾನ ತೆಗೆಯುವುದಾಗಿ ಹೇಳಿದ್ದ. ಪ್ರಕರಣ ಗೋಕುಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಟಿಪ್ಪರ್‌ ಚಾಲಕ ಸಾವು
ಹುಬ್ಬಳ್ಳಿ ವರದಿ:
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಸದ ಟಿಪ್ಪರ್‌ನಲ್ಲಿದ್ದ ಕಸ ಮೇಲೆತ್ತುವಾಗ, ಬೋಲ್ಟ್ ಕಳಚಿದ ಪರಿಣಾಮ ಚಾಲಕ ವಸಂತ ಇಳಕಲ್‌ ಮೃತಪಟ್ಟಿದ್ದಾರೆ.

ತಲೆಗೆ ತೀವ್ರ ಪೆಟ್ಟು ಬಿದ್ದು ಕಿಮ್ಸ್‌ಗೆ ದಾಖಲಾಗಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ನಗರದಲ್ಲಿನ ಕಸ ಸಂಗ್ರಹಿಸಿ, ಬೆಂಗೇರಿಯ ಕಸದ ಪಾಯಿಂಟ್‌ನಲ್ಲಿ ಕಸ ಹಾಕಲು ತೆರಳಿದ್ದರು. ಟಿಪ್ಪರ್‌ನಿಂದ ಕಸ ಮೇಲೆತ್ತುವ ವೇಳೆ ಅದರ ಬೋಲ್ಟ್ ತೆರದುಕೊಂಡಿತ್ತು. ಆಗ, ವಸಂತ ಅದನ್ನು ಸರಿಪಡಿಸಲು ಮುಂದಾದಾಗ ಅವಘಡ ನಡೆದಿದೆ. ಕಿಮ್ಸ್‌ ಶವಾಗಾರದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT