ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್–ಲಾರಿ ಅಪಘಾತ: ಬಾರದ ಲೋಕಕ್ಕೆ ಮೊಮ್ಮಗ; ನಿವೃತ್ತಿಯಂಚಿನಲ್ಲಿ ದೂರಾದ ತಂದೆ

ಕರುಳು ಹಿಂಡಿದ ಮೃತರ ಸಂಬಂಧಿಕರ ಕಣ್ಣೀರು
Last Updated 25 ಮೇ 2022, 4:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಕಾಲೇಜು ಮೆಟ್ಟಿಲು ಹತ್ತಬೇಕಿದ್ದ ಮೊಮ್ಮಗ, ಊರು ಮುಟ್ಟುವ ಮುಂಚೆಯೇ ಬಾರದ ಲೋಕಕ್ಕೆ ಪಯಣ ಬೆಳೆಸಿದ. ಮನೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ ನಿವೃತ್ತ ಜೀವನವನ್ನು ಕುಟುಂಬದೊಂದಿಗೆ ಆರಾಮವಾಗಿ ಕಳೆಯಬೇಕೆಂದಿದ್ದ ತಂದೆಯ ಆಸೆ ಕೈಗೂಡಲು ಆ ವಿಧಿ ಬಿಡಲೇ ಇಲ್ಲ.

ನಗರದ ಹೊರವಲಯದ ಬೈಪಾಸ್ ರಸ್ತೆಯ ರೇವಡಿಹಾಳ ಸೇತುವೆ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ಮೈಸೂರಿನ ಮಂಡಿ ಮೊಹಲ್ಲಾದ 16 ವರ್ಷದ ಮೊಹಮ್ಮದ್ ದಯಾನ್ ಬೇಗ್ ಮತ್ತು ಬಸ್ ಚಾಲಕ ಬೆಂಗಳೂರಿನ ಬ್ಯಾಡರಹಳ್ಳಿಯ 65 ವರ್ಷದ ನಾಗರಾಜ ಆಚಾರ್ ಅವರ ಸಾವು ಎಂತಹವರಿಗೂ ಕಣ್ಣೀರು ತರಿಸುತ್ತದೆ.

ಕಮರಿದ ಕಾಲೇಜು ಕನಸು: ‘ವಾರದ ಹಿಂದೆಯಷ್ಟೇ ದಯಾನ್ ತನ್ನ ಅಜ್ಜಿಯೊಂದಿಗೆ ಕೊಲ್ಹಾಪುರದಲ್ಲಿರುವ ನನ್ನ ಮನೆಗೆ ಬಂದಿದ್ದ. ಏಕೈಕ ಪುತ್ರ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ಇಡೀ ಕುಟುಂಬದಲ್ಲಿ ಸಂಭ್ರಮ ಮೂಡಿಸಿತ್ತು. ಆದರೆ, ಆ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ’ ಎಂದು ದಯಾನ್ ಚಿಕ್ಕಪ್ಪ ಅಲ್ತಾಫ್ ಬೇಗ್ ಕಣ್ಣೀರು ಹಾಕಿದರು.

‘ಇನ್ನೂ ನಾಲ್ಕೈದು ದಿನ ಚಿಕ್ಕಪ್ಪನ ಮನೆಯಲ್ಲೇ ಇರುತ್ತೇನೆ ಎಂದು ಹೇಳಿದ್ದ ಮಗನನ್ನು, ಪಿಯುಸಿಗೆ ಸೇರಿಸುವ ಸಲುವಾಗಿ ಬೇಗನೆ ಕಳಿಸಿಕೊಡಿ ಎಂದು ತಾಯಿ ಹೇಳಿದ್ದರು. ಹಾಗಾಗಿ, ಬೆಂಗಳೂರಿನಲ್ಲಿರುವ ಆತನ ತಂದೆಯನ್ನು ಭೇಟಿ ಮಾಡಿ, ಅಲ್ಲಿಂದ ಇಬ್ಬರೂ ಮೈಸೂರಿಗೆ ಹೋಗಲಿ ಎಂದು ಸೋಮವಾರ ಸಂಜೆ ಬಸ್‌ಗೆ ಹತ್ತಿಸಿದ್ದೆವು. ಆದರೆ, ಮಾರ್ಗಮಧ್ಯೆಯೇ ವಿಧಿ ಮೊಮ್ಮಗನನ್ನು ದೂರ ಮಾಡಿತು’ ಎಂದು ದಯಾನ್ ಅಜ್ಜಿ ವಿಧಿಯನ್ನು ಶಪಿಸಿದರು.

ವಿಶ್ರಾಂತಿ ಬದಲು ಚಿರಚಿದ್ರೆಗೆ: ‘40 ವರ್ಷದಿಂದ ಕೆಲಸ ಮಾಡಿ ನನಗೂ ಸಾಕಾಗಿದೆ. ಇತ್ತೀಚೆಗೆ ಕಾಲು ನೋವು ಶುರುವಾಗಿದೆ. ಆದಷ್ಟು ಬೇಗ ನೀನು ಬೇಗ ಸೆಟ್ಲ್‌ ಆಗು. ಇಲ್ಲದಿದ್ರೆ, ಏನಾದರೂ ಬಿಸಿನೆಸ್ ಮಾಡು. ನಿವೃತ್ತನಾಗಿ ವಿಶ್ರಾಂತಿ ಪಡೆಯುವೆ’ ಎಂದು ಮಗ ಆಕಾಶ್‌ ಬಳಿ ಹೇಳಿದ್ದ ನಾಗರಾಜ ಆಚಾರ್ ಅವರು, ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಿರನಿದ್ರೆಗೆ ಜಾರಿದ್ದಾರೆ.

‘ನ್ಯಾಷನಲ್ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ತಂದೆ, ಎರಡು ತಿಂಗಳ ಹಿಂದೆಯಷ್ಟೇ ಅಣ್ಣನ ಮದುವೆ ಮಾಡಿದ್ದರು. ಇಡೀ ಕುಟುಂಬದ ಬೆನ್ನೆಲುಬಾಗಿದ್ದ ಅವರು, ಇಳಿ ವಯಸ್ಸಿನಲ್ಲೂ ಮನೆಯಲ್ಲಿ ಕೂರದೆ ದುಡಿಯುತ್ತಿದ್ದರು. ನಿವೃತ್ತಿ ನಂತರ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಕನಸು ನನಸಾಗಲೇ ಇಲ್ಲ’ ಎಂದು ಪುತ್ರ ಆಕಾಶ್ ಬಿಕ್ಕಿಬಿಕ್ಕಿ ಅತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT