ಭಾನುವಾರ, ಆಗಸ್ಟ್ 14, 2022
21 °C
ಉಮಚಗಿ ಗ್ರಾಮ ಪಂಚಾಯಿತಿಯಲ್ಲೊಂದು ಎಡವಟ್ಟು: ನಡೆಯದ ಸಾಮಾನ್ಯ ಸಭೆ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಅಧಿಕಾರ ಚಲಾಯಿಸುವ ಮುನ್ನವೇ ಹೋಯಿತು ಸದಸ್ಯತ್ವ!

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ತಾಲ್ಲೂಕಿನ ಉಮಚಗಿ ಗ್ರಾಮ ಪಂಚಾಯಿತಿ ಐವರು ಸದಸ್ಯರ ಆಯ್ಕೆ ಅವಧಿ ಆರಂಭವಾಗದಿದ್ದರೂ, ಅವರ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ, ಚುನಾವಣಾ ಆಯೋಗದ ಎಡವಟ್ಟಿನಿಂದ ಸದಸ್ಯರಾಗಿ ಪ್ರಮಾಣ ತೆಗೆದುಕೊಳ್ಳುವ ಮುನ್ನವೇ ಸದಸ್ಯತ್ವಕ್ಕೆ ಕುತ್ತು ಬಂದಿದೆ.

2015ರಲ್ಲಿ ಉಮಚಗಿ ಗ್ರಾಮ ಪಂಚಾಯಿತಿಯ 11 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಉಮಚಗಿ ಗ್ರಾಮದ ಐದು ಸ್ಥಾನಗಳಿಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿದ್ದರು. ಆದರೆ, ಅದೇ ಗ್ರಾ.ಪಂ. ವ್ಯಾಪ್ತಿಯ ಮಲ್ಲಿಗವಾಡ ಗ್ರಾಮದ ಆರು ಸ್ಥಾನಗಳ ಚುನಾವಣೆಯನ್ನು ಆ ಗ್ರಾಮದ ಜನರು ಬಹಿಷ್ಕರಿಸಿದ್ದರು. ಅರ್ಧಕ್ಕಿಂತ ಕಡಿಮೆ ಸದಸ್ಯರು ಆಯ್ಕೆಯಾಗಿದ್ದಾರೆಂದು ಪಂಚಾಯಿತಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿತ್ತು.

‘ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಿಲ್ಲ. ಒಂದೇ ಒಂದು ಸಾಮಾನ್ಯಸಭೆ ನಡೆದಿಲ್ಲ. ಹೀಗಾಗಿ, ನಮ್ಮ ಸದಸ್ಯತ್ವ‌ದ ಅವಧಿ ಆರಂಭವಾಗಿಯೇ ಇಲ್ಲ. ಆದರೂ, ಚುನಾವಣೆ ನಡೆಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳನ್ನು ಕೇಳಿದರೆ, ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಅರಳಿ ದೂರಿದರು. 

ಬಹಿಷ್ಕಾರ ಯಾಕೆ?: ಕೋಳಿವಾಡ ಗ್ರಾಮ ಪಂಚಾಯಿತಿಯಲ್ಲಿದ್ದ ಉಮಚಗಿಯನ್ನು 2015ರಲ್ಲಿ ಹೊಸ ಗ್ರಾಮ ಪಂಚಾಯಿತಿಯನ್ನಾಗಿ ಘೋಷಿಸಲಾಯಿತು. ಆ ಪಂಚಾಯಿತಿ ವ್ಯಾಪ್ತಿಗೆ ಮಲ್ಲಿಗವಾಡ ಗ್ರಾಮವನ್ನು ಸೇರಿಸಿ 11 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.

ಉಮಚಗಿ ಗ್ರಾಮ ಪಂಚಾಯಿತಿ ಸೇರ್ಪಡೆಗೆ ವಿರೋಧಿಸಿದ ಮಲ್ಲಿಗವಾಡ ಗ್ರಾಮಸ್ಥರು, ಪ್ರತ್ಯೇಕ ಪಂಚಾಯಿತಿ ಮಾಡಬೇಕು. ಇಲ್ಲದಿದ್ದರೆ, ಕೋಳಿವಾಡ ಪಂಚಾಯಿತಿಗೇ ಮರಳಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಚುನಾವಣೆ ಬಹಿಷ್ಕರಿಸಿದರು.

ಉಮಚಗಿ ಗ್ರಾಮ ಪಂಚಾಯಿತಿ 11 ಸದಸ್ಯರ ಪೈಕಿ ಐವರು ಮಾತ್ರ ಆಯ್ಕೆಯಾಗಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ನಂತರದಲ್ಲಿ ಚುನಾವಣಾ ಆಯೋಗ ಮಲ್ಲಿಗವಾಡ ಗ್ರಾಮದ ಆರು ಸ್ಥಾನಗಳಿಗೆ ಐದಕ್ಕೂ ಹೆಚ್ಚು ಬಾರಿ ಚುನಾವಣೆ ಘೋಷಿಸಿದರೂ ಬಹಿಷ್ಕಾರ ಮುಂದುವರೆಸಿದ್ದರಿಂದ ಚುನಾವಣೆ ನಡೆಯಲಿಲ್ಲ.

ನಿಯಮದಲ್ಲಿ ಏನಿದೆ?

ಪಂಚಾಯಿತಿಯಲ್ಲಿ ಚುನಾಯಿತರಾದ ದಿನಾಂಕವನ್ನು ಪರಿಗಣಿಸುವುದಿಲ್ಲ. ಆ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆಯುವ ಮೊದಲ ಸಭೆಯಿಂದ ಅವರ ಸದಸ್ಯತ್ವ ಅವಧಿ ಆರಂಭಗೊಳ್ಳುತ್ತದೆ. ಅಲ್ಲಿಂದ ಐದು ವರ್ಷಕ್ಕೆ ಪೂರ್ಣಗೊಳ್ಳುತ್ತದೆ.

ನಮಗೇಕೆ ಹೀಗೆ?

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಾಂಪುರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಗ್ರಾಮದ ಜನರು ಇದೇ ರೀತಿ ಚುನಾವಣೆ ಬಹಿಷ್ಕರಿಸಿದ್ದರು. ಹಾಗಾಗಿ ಉಳಿದವರ ಅಧಿಕಾರವಧಿ ಪೂರ್ಣಗೊಂಡಿಲ್ಲವೆಂದು ಚುನಾವಣೆ ಘೋಷಿಸಿಲ್ಲ. ಆದರೆ, ಇಲ್ಲಿ ಮಾತ್ರ ಘೋಷಿಸಲಾಗಿದೆ. ಇಲ್ಲಿ ಮಾತ್ರ ಹೀಗೇಕೆ ಎಂಬುದು ಗ್ರಾಮ ಪಂಚಾಯಿತಿ ಸದಸ್ಯರ ಪ್ರಶ್ನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.