ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್, ಪ್ರಿಯಾಂಕ ಹೆಸರಿನಲ್ಲಿ ಮತ ಕೇಳಲಿ: ಕುಲಕರ್ಣಿಗೆ ಜೋಶಿ ಸವಾಲು

ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಗೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಸವಾಲು
Last Updated 4 ಏಪ್ರಿಲ್ 2019, 14:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಧಾನಿ ಮೋದಿ ಅವರ ಹೆಸರಿನಲ್ಲೇ ನಾನು ಮತ ಕೇಳುವೆ. ಅವರ ಅಲೆ ಹಾಗೂ ಆಶೀರ್ವಾದದಲ್ಲೇ ಗೆಲ್ಲುವೆ. ವಿನಯ ಕುಲಕರ್ಣಿ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಹೆಸರಿನಲ್ಲಿ ಮತ ಕೇಳಲು ಸಿದ್ಧರಿದ್ದಾರೆಯೇ?’ ಎಂದು ಸಂಸದ ಹಾಗೂ ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರಹ್ಲಾದ ಜೋಶಿ ಸವಾಲು ಹಾಕಿದರು.

ದೇಶಪಾಂಡೆನಗರದಲ್ಲಿ ಲೋಕಸಭಾ ಚುನಾವಣೆಯಬಿಜೆಪಿ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನಗೆ ವರ್ಚಸ್ಸು ಇಲ್ಲ ಎಂದು ಕುಲಕರ್ಣಿ ಹೇಳುತ್ತಾರೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗಿರಬೇಕಾದ ವರ್ಚಸ್ಸು ನನಗಿದೆ. ನನ್ನ ಬಗ್ಗೆ ಹೇಳಲು ಅವರಿಗೆ ಏನೂ ಇಲ್ಲದಿರುವುದರಿಂದ, ಹೀಗೆ ಮಾತನಾಡುತ್ತಿದ್ದಾರೆ. ಅವರ ಸ್ಥಿತಿ ಕಂಡರೆ ಅನುಕಂಪ ಬರುತ್ತದೆ’ ಎಂದು ವ್ಯಂಗ್ಯವಾಡಿದರು.

‘ಇಷ್ಟು ವರ್ಷ ಏನು ಮಾಡಿದರು?‘:‘ಐವತ್ತು ವರ್ಷ ದೇಶ ಆಳಿರುವ ಕಾಂಗ್ರೆಸ್ ಜನರನ್ನು ಬಡವರನ್ನಾಗಿಸಿದೆ. ಇದೀಗ, ಬಡತನ ನಿರ್ಮೂಲನೆಗಾಗಿ ಯೋಜನೆ ತರುವುದಾಗಿ ಪ್ರಣಾಳಿಕೆಯಲ್ಲಿ ಹೇಳುತ್ತಿದ್ದಾರೆ. ಹಾಗಾದರೆ, ಇಷ್ಟು ವರ್ಷ ಏನು ಮಾಡಿದರು?’ ಎಂದು ಜೋಶಿ ಪ್ರಶ್ನಿಸಿದರು.

‘ಎಎಫ್‌ಎಸ್‌ಪಿ (ಸಶಸ್ತ್ರ ಪಡೆಯ ವಿಶೇಷಾಧಿಕಾರ) ಕಾಯ್ದೆ ರದ್ದು ಮಾಡುವ ಭರವಸೆ ನೋಡಿದರೆ, ಇವರ ಪ್ರಣಾಳಿಕೆಯನ್ನು ನಕ್ಸಲರು, ಪಾಕಿಸ್ತಾನದ ಐಎಸ್‌ಐ, ಪ್ರತ್ಯೇಕತಾವಾದಿಗಳು ಸಿದ್ಧಪಡಿಸಿರುವಂತಿದೆ. ಗಡಿಭಾಗದ ರಾಜ್ಯಗಳು ಶಾಂತಿಯಿಂದ ಇರುವುದು ಕಾಂಗ್ರೆಸ್‌ಗೆ ಬೇಕಿಲ್ಲ. ಅಲ್ಪಸಂಖ್ಯಾತರ ಮತಕ್ಕಾಗಿ ಇಂತಹ ಅಪಾಯಕಾರಿ ಭರವಸೆ ನೀಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘370ನೇ ಕಲಂ ವಿರೋಧಿಸಿದ್ದ ಅಂಬೇಡ್ಕರ್’

‘ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರೋಧದ ನಡುವೆಯೂ ಪ್ರಧಾನಿ ಜವಾಹರಲಾಲ್ ನೆಹರೂ, ತಮ್ಮ ವಿಶೇಷಾಧಿಕಾರ ಬಳಸಿ ಸಂವಿಧಾನದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ಕಲಂ ಸೇರಿಸಿದ್ದರು. ಇದೀಗ ಅವರ ಮರಿಮೊಮ್ಮಗ ರಾಹುಲ್ ಗಾಂಧಿ ಮುಸಲ್ಮಾನರ ಮತಕ್ಕಾಗಿ 370ನೇ ವಿಧಿಯನ್ನು ಶಾಶ್ವತಗೊಳಿಸುವ ಭರವಸೆ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿದರು.

‘ದೇಶದ್ರೋಹಿಗಳ ಕೈಗೆ ದೇಶ ಕೊಡಬೇಡಿ'
‘ಸ್ವಾತಂತ್ರ್ಯ ನಂತರ ನಮ್ಮ ಹಿರಿಯರು 52 ವರ್ಷ ಈ ದೇಶವನ್ನು ದೇಶದ್ರೋಹಿ ಕಾಂಗ್ರೆಸ್‌ ಕೈಗೆ ಕೊಟ್ಟಿದ್ದರು. ಮತ್ತೆ ಅವರ ಕೈಗೆ ದೇಶ ಕೊಟ್ಟರೆ, ನಮಗೆ ನಾವೇ ಸಮಾಧಿ ಕಟ್ಟಿಕೊಂಡಂತೆ’ ಎಂದು ಬಿಜೆಪಿ ಮುಖಂಡ ವಿಜಯ ಸಂಕೇಶ್ವರ ಹೇಳಿದರು.

‘ಇಂದಿರಾ ಗಾಂಧಿಯಾದಿಯಾಗಿ ಕಾಂಗ್ರೆಸ್‌ನ ಎಲ್ಲಾ ನಾಯಕರನ್ನೂ ನೋಡಿದ್ದೇನೆ. ಓಟಿಗಾಗಿ ಹಿಂದೂಗಳಿಗೆ ಜನಿವಾರ ತೋರಿಸುವ ರಾಹುಲ್, ನಾಳೆ ಸ್ವಸ್ತಿಕ್‌ನವರು ಭೇಟಿಯಾದರೆ ಸ್ವಸ್ತಿಕ್ ಕೂಡ ತೋರಿಸುತ್ತಾರೆ. ದೇಶದ ಕಡುವೈರಿಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಾರೆ’ ಎಂದು ಹರಿಹಾಯ್ದರು.

‘ಕಾಂಗ್ರೆಸ್‌ನವರು ಹೇಳುವಂತೆ ಚೌಕೀದಾರ್ ಮೋದಿ ಚೋರ್ ಎಂಬುದಕ್ಕೆ ನನ್ನ ಸಹಮತವಿದೆ. ಯಾಕೆಂದರೆ, ಅವರು ದೇಶದ ಜನರ ಹೃದಯ ಕದ್ದಿರುವ ದೊಡ್ಡ ಕಳ್ಳ. ಮೋದಿ ಈ ಸಲವಷ್ಟೇ ಅಲ್ಲ, 2024ರಲ್ಲೂ ಮತ್ತೆ ಪ್ರಧಾನಿಯಾಗಲಿದ್ದಾರೆ’ ಎಂದರು.

ಗಮನ ಸೆಳೆದ ಪೂಜೆ
ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಭಾರತ ಮಾತೆ, ಲಕ್ಷ್ಮಿ–ಸರಸ್ವತಿ–ಗಣಪತಿ, ಉಗ್ರ ನರಸಿಂಹ ದೇವರ ಫೋಟೊಗಳ ಜತೆಗೆ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಪ್ರಹ್ಲಾದ ಜೋಶಿ ಸಾಧನೆಯನ್ನೊಳಗೊಂಡ ಕರಪತ್ರಗಳಿಗೆ ಪಕ್ಷದ ಮುಖಂಡರು ಪೂಜೆ ಸಲ್ಲಿಸಿದರು.

ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಎಸ್‌.ಐ. ಚಿಕ್ಕನಗೌಡರ, ಮಲ್ಲಿಕಾರ್ಜುನ ಸಾವಕಾರ, ಶಿವು ಮೆಣಸಿನಕಾಯಿ, ಡಾ. ಮಹೇಶ ನಾಲವಾಡ, ದತ್ತಮೂರ್ತಿ ಕುಲಕರ್ಣಿ, ಹನುಮಂತಪ್ಪ ದೊಡ್ಡಮನಿ ಇದ್ದರು.

ಟಿಕೆಟ್ ಪಡೆಯುವುದಕ್ಕೇ ಹೈರಾಣ: ಶೆಟ್ಟರ್
‘ಕೆಲವರಿಗೆ ಮನೆ ಬಾಗಿಲಿಗೆ ಲೋಕಸಭಾ ಚುನಾವಣೆಯ ಟಿಕೆಟ್ ಹುಡುಕಿಕೊಂಡು ಬರುತ್ತದೆ. ಆದರೆ, ಧಾರವಾಡ ಅಭ್ಯರ್ಥಿ ಟಿಕೆಟ್ ಪಡೆಯುವಷ್ಟರಲ್ಲಿ ಹೈರಾಣಾಗಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್, ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರನ್ನು ಪರೋಕ್ಷವಾಗಿ ಕುಟುಕಿದರು.

‘ಕಾಂಗ್ರೆಸ್‌ನ ಹಿರಿಯ ಮುಖಂಡ ಜನರ್ದಾನ ಪೂಜಾರಿ ಅವರು, ಮೋದಿಯೇ ಮುಂದಿನ ಎರಡು ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ. ಚುನಾವಣೆಯಲ್ಲಿ ಹೊರ ಹೊಡೆತ ಹಾಗೂ ಒಳ ಹೊಡೆತ ಸಾಮಾನ್ಯ. ಈ ಬಾರಿ ಮತದಾರರು ಕಾಂಗ್ರೆಸ್‌ಗೆ ನೀಡುವ ಒಳ ಹೊಡೆತ, ಫಲಿತಾಂಶದಲ್ಲಿ ಪ್ರತಿಫಲಿಸಲಿದೆ. ದೇಶದಲ್ಲಿ ಬಿಜೆಪಿ 300ಕ್ಕೂ ಅಧಿಕ ಹಾಗೂ ರಾಜ್ಯದಲ್ಲಿ 24 ಸೀಟು ಗೆಲ್ಲುವುದರಲ್ಲಿ ಅನುಮಾನವಿಲ್ಲ’ ಎಂದರು.

ಜಾತಿ ಒಡೆದು ಸೋತ ಕುಲಕರ್ಣಿ: ಸಂಕೇಶ್ವರ
‘ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಿನಲ್ಲಿ ಲಿಂಗಾಯತರನ್ನು ಒಡೆದಿದ್ದರು. ಈ ಚುನಾವಣೆಯಲ್ಲಿ ಆ ವಿಷಯ ಅಪ್ರಸ್ತುತ ಎನ್ನುತ್ತಿರುವ ಇವರಿಗೆ ಎಷ್ಟು ನಾಲಿಗೆ ಇರಬೇಕು?’ ಎಂದು ಬಿಜೆಪಿ ಮುಖಡ ವಿಜಯ ಸಂಕೇಶ್ವರ ಟೀಕಿಸಿದರು.

‘ವಿನಯ ಅವರ ‘ಜಾತಿ ಒಡೆದಾಳುವ ನೀತಿಗೆ ಮತದಾರರು ಸೋಲಿನ ರುಚಿ ತೋರಿಸಿದರು. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ನಿಚ್ಚಳ ಬಹುಮತದೊಂದಿಗೆ ಅಮೃತ ದೇಸಾಯಿ ಅವರನ್ನು ಗೆಲ್ಲಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT