ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಆರ್‌ಎಫ್‌ನಿಂದ 10 ಕಾರ್ಮಿಕರ ರಕ್ಷಣೆ

ಜಲಾವೃತ ಶೇಡ್‌ನಲ್ಲೇ ರಾತ್ರಿ ಕಳೆದರು; 15 ತಾಸು ಬಳಿಕ ಸುರಕ್ಷಿತ ಸ್ಥಳಕ್ಕೆ
Last Updated 8 ಆಗಸ್ಟ್ 2019, 15:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಲ್ಲೂಕಿನ ಇಂಗಳಹಳ್ಳಿಯಲ್ಲಿ ಬೆಣ್ಣೆಹಳ್ಳದ ಪ್ರವಾಹದಲ್ಲಿ ಬುಧವಾರ ರಾತ್ರಿಯಿಡೀ ಸಿಲುಕಿದ್ದ ಒಡಿಶಾ ಮತ್ತು ಕೋಲ್ಕತ್ತ ಮೂಲದ ಹತ್ತು ಕಾರ್ಮಿಕರನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ಗುರುವಾರ ರಕ್ಷಿಸಿದರು.

ಒಡಿಶಾದ ಶಿವರಾಂ ನಾಯಕ, ಮಾನಸ ಜೊಡಿಯಾ, ಸನ್ಯಾಸ್ ಜೊಡಿಯಾ, ಕೋಲ್ಕತ್ತದ ಅಜಿತ್ ಸಿಂಗ್, ದೇಬುರಾಯ್, ಗೋವಿಂದ ಮಂಡಲ್, ಕಾರ್ತೀಕ್ ಮಂಡಲ್, ಜುದಿಷ್ಠ ಮಂಡಲ್, ಸುಪಾಲ್ ಮಂಡಲ್ ಹಾಗೂ ಇಂಗಳಹಳ್ಳಿಯ ಹನುಮಂತಪ್ಪ ನಲೋಡಿಯನ್ನು ರಕ್ಷಿಸಲಾಗಿದೆ. ಎಲ್ಲರಿಗೂ ಇಂಗಳಹಳ್ಳಿಯ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಲಾಗಿದೆ.

ಶೆಡ್‌, ಜೆಸಿಬಿಯಲ್ಲಿದ್ದರು: ಇಂಗಳಹಳ್ಳಿ ಹಾಗೂ ಶಿಶುವಿನಹಳ್ಳಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ, ಬೆಣ್ಣೆಹಳ್ಳ ಮತ್ತು ಯರನಹಳ್ಳಕ್ಕೆ ಅಡ್ಡವಾಗಿ ನಿರ್ಮಿಸುತ್ತಿರುವ ಸೇತುವೆಯ ಕಾರ್ಮಿಕರಾದ ಎಲ್ಲರೂ ಅಲ್ಲೇ ತಾತ್ಕಾಲಿಕವಾಗಿ ನಿರ್ಮಿಸಿದ್ದ ಶೆಡ್‌ನಲ್ಲಿ ವಾಸವಾಗಿದ್ದರು. ವಾರವಿಡೀ ಸುರಿಯುತ್ತಿರುವ ಮಳೆಯಿಂದಾಗಿ, ಎರಡೂ ಹಳ್ಳಗಳ ನೀರು ಕಾರ್ಮಿಕರಿದ್ದ ಶೆಡ್‌ಗಳನ್ನು ಪೂರ್ಣವಾಗಿ ಆವರಿಸಿತ್ತು.

ಬುಧವಾರ ರಾತ್ರಿ 9ರ ಸುಮಾರಿಗೆ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಕಾರ್ಮಿಕರಿಗೆ ಹೊರಕ್ಕೆ ಬರಲು ಸಾಧ್ಯವಾಗಿಲ್ಲ. ಅಲ್ಲದೆ, ಆ ಪೈಕಿ, ಆರು ಮಂದಿ ಇದ್ದ ಶೆಡ್‌ ಎತ್ತರದ ಜಾಗದಲ್ಲಿತ್ತು. ಉಳಿದ ನಾಲ್ವರಿದ್ದ ಶೆಡ್‌ ಅರ್ಧದಷ್ಟು ಮುಳುಗಿದ್ದರಿಂದ ಅವರೆಲ್ಲರೂ ಪಕ್ಕದಲ್ಲೇ ಇದ್ದ ಜೆಸಿಬಿಯಲ್ಲಿ ಆಶ್ರಯ ಪಡೆದಿದ್ದರು. ಆಗ ಇಂಗಳಹಳ್ಳಿಯ ಹನುಮಂತಪ್ಪ ತಮ್ಮ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಗ್ರಾಮಸ್ಥರು ಕಾರ್ಮಿಕರನ್ನು ರಕ್ಷಿಸಲು ಯತ್ನಿಸಿದರೂ ರಾತ್ರಿಯಾಗಿದ್ದರಿಂದ ಸಾಧ್ಯವಾಗಿಲ್ಲ. ಹಾಗಾಗಿ, ಜಲಾವೃತ ಶೆಡ್ ಹಾಗೂ ಜೆಸಿಬಿಯಲ್ಲೇ ಕಾರ್ಮಿಕರು ರಾತ್ರಿ ಕಳೆಯಬೇಕಾಯಿತು.

ಒಂದು ತಾಸು ಕಾರ್ಯಾಚರಣೆ:ವಿಷಯ ತಿಳಿದು ಗ್ರಾಮೀಣ ಭಾಗದ ತಹಶೀಲ್ದಾರ್ ಸಂಗಪ್ಪ ಬಾಡದ ಹಾಗೂ ಸ್ಥಳೀಯ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಬೆಳಿಗ್ಗೆ 8ರ ಹೊತ್ತಿಗೆ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯ ಈಜುಗಾರರನ್ನು ಬಳಸಿಕೊಂಡು ಕಾರ್ಮಿಕರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ, ಎನ್‌ಡಿಆರ್‌ಎಫ್‌ ಸಿಬ್ಬಂದಿಗೆ ಸ್ಥಳಕ್ಕೆ ಬರುವಂತೆ ಮಾಹಿತಿ ನೀಡಲಾಯಿತು.

ಮಧ್ಯಾಹ್ನ 12ರ ಹೊತ್ತಿಗೆ ಸ್ಥಳಕ್ಕೆ ಬಂದ 12 ಮಂದಿಯ ಎನ್‌ಡಿಆರ್‌ಎಫ್ ತಂಡ, ಬಲೂನ್ ಬೋಟ್‌ನೊಂದಿಗೆ ಒಂದು ತಾಸು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಕರೆ ತಂದರು. ಕಾರ್ಮಿಕರೊಂದಿಗೆ ಎರಡು ನಾಯಿಗಳನ್ನು ಸಹ ರಕ್ಷಿಸಿದರು.

‘ನೀರಿನ ಮಧ್ಯೆ ಅಲ್ಲಲ್ಲಿ ಮಣ್ಣು, ಗಿಡಗಂಟಿ ಹಾಗೂ ಕಾಮಗಾರಿ ಸ್ಥಳದಲ್ಲಿದ್ದ ಕಬ್ಬಿಣದ ಸರಳುಗಳಿಂದಾಗಿ ಬೋಟ್‌ನಲ್ಲಿ ಕೂಡಲೇ ಸ್ಥಳಕ್ಕೆ ತಲುಪುವುದು ಸ್ವಲ್ಪ ಸವಾಲಾಗಿತ್ತು. ಹಾಗಾಗಿ, ಮೊದಲಿಗೆ ಆರು ಮಂದಿಯನ್ನು ಮತ್ತು ನಂತರ 4 ಮಂದಿಯನ್ನು ಪ್ರತ್ಯೇಕವಾಗಿ ರಕ್ಷಿಸಲಾಯಿತು’ ಎಂದು ವಿಜಯವಾಡದಿಂದ ಬಂದಿದ್ದ ಎನ್‌ಡಿಆರ್‌ಎಫ್‌ ತಂಡದ ಕಮಾಂಡರ್ ವಾಸುಧರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಊಹಿಸಿರಲಿಲ್ಲ:‘ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಸ್ವಲ್ಪ ನೀರು ಮಾತ್ರ ಸಂಗ್ರಹಗೊಂಡಿತ್ತು. ಇಷ್ಟೊಂದು ಪ್ರಮಾಣದಲ್ಲಿ ನೀರು ಏರಿಕೆಯಾಗುತ್ತದೆ ಎಂದು ಊಹಿಸಿರಲಿಲ್ಲ. ಆದರೆ, ಬುಧವಾರವಿಡೀ ಸುರಿದ ಮಳೆಗೆ ರಾತ್ರಿ ಒಮ್ಮೆಲೆ ನೀರಿನ ಪ್ರಮಾಣ ಹೆಚ್ಚಾಯಿತು. ಇದರಿಂದಾಗಿ ಹೊರಕ್ಕೆ ಬರಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಎಲ್ಲರೂ ನೀರಿನ ಮಧ್ಯೆ 15 ತಾಸು ಕಳೆಯಬೇಕಾಯಿತು. ಎನ್‌ಡಿಆರ್‌ಎಫ್‌ನವರು ದೇವರ ರೂಪದಲ್ಲಿ ಬಂದು ಕಾಪಾಡಿದರು’ ಎಂದು ಶೆಡ್‌ನಲ್ಲಿ ಸಿಲುಕಿದ್ದ ಕಾರ್ಮಿಕ ಹನುಮಂತಪ್ಪ ನಲೋಡಿ ಹೇಳಿದರು.

ಶೆಡ್‌ನಲ್ಲೇ ಅಡುಗೆ, ಜೆಸಿಬಿಯಲ್ಲೇ ನಿದ್ರೆ!
‘ನೀರಿನ ಮಧ್ಯೆ ಸಿಲುಕಿದ್ದ ಕಾರ್ಮಿಕರ ಪೈಕಿ ಶೆಡ್‌ನಲ್ಲಿದ್ದವರು ರಾತ್ರಿ ಹಾಗೂ ಬೆಳಿಗ್ಗೆ ಶೆಡ್‌ನಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾರೆ. ಆದರೆ, ಜೆಸಿಬಿಯಲ್ಲಿದ್ದವರು ಮಾತ್ರ ಊಟವಿಲ್ಲದ ಎರಡು ಹೊತ್ತು ಉಪವಾಸ ಇದ್ದರು’ ಎಂದು ತಹಶೀಲ್ದಾರ್ ಸಂಗಪ್ಪ ಬಾಡದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರಕ್ಷಣಾ ಕಾರ್ಯಾಚರಣೆ ಬಳಿಕ ಹತ್ತು ಕಾರ್ಮಿಕರು ಹಾಗೂ 12 ಎನ್‌ಡಿಆರ್‌ಎಫ್‌ ಸಿಬ್ಬಂದಿಗೂ ಇಂಗಳಹಳ್ಳಿಯ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು. ಸದ್ಯ ಕಾರ್ಮಿಕರಿಗೆ ಗ್ರಾಮದ ಸಮುದಾಯ ಭವನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT