ಶುಕ್ರವಾರ, ಅಕ್ಟೋಬರ್ 22, 2021
21 °C
ಟ್ಯಾಬ್‌ಗಳಲ್ಲಿ ತಾಂತ್ರಿಕ ಸಮಸ್ಯೆ

‘ಆಧಾರ್’ ತಿದ್ದುಪಡಿಗೆ ನೆಟ್‌ವರ್ಕ್‌ ಸಮಸ್ಯೆ: ಗ್ರಾಮೀಣ ಭಾಗದಲ್ಲಿ ತೊಂದರೆ

ಕಲಾವತಿ ಬೈಚಬಾಳ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‌ಆಧಾರ್ ಕಾರ್ಡ್‌ನಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಧಾರವಾಡ ಜಿಲ್ಲೆಗೆ 22 ‘ಟ್ಯಾಬ್‌’ಗಳನ್ನು ನೀಡಿದೆ. ಕೆಲವು ಟ್ಯಾಬ್‌ಗಳಿಗೆ ತಾಂತ್ರಿಕ ಸಮಸ್ಯೆ ಕಾಡುತ್ತಿದ್ದರೆ, ಇನ್ನು ಕೆಲವನ್ನು ನೆಟ್‌ವರ್ಕ್‌ ಸಮಸ್ಯೆ ಕಾಡುತ್ತಿದೆ.

ರಾಜ್ಯದ 28 ಜಿಲ್ಲೆಗಳಿಗೆ ‘ಚೈಲ್ಡ್ ಎನ್‌ರೋಲ್‌ಮೆಂಟ್ ಲೈಫ್ ಕ್ಲೈಂಟ್’ (ಸಿ.ಇ.ಎಲ್.ಸಿ) ತಂತ್ರಾಂಶವಿರುವ 630 ಟ್ಯಾಬ್‌ಗಳನ್ನು ನೀಡಲಾಗಿದೆ. ಅದರೊಟ್ಟಿಗೆ ಆರು ತಿಂಗಳ ಅವಧಿಗೆ ರಿಚಾರ್ಜ್ ಮಾಡಿದ ಬಿಎಸ್ಎನ್ಎಲ್ ಸಿಮ್‌ ಕೊಡಲಾಗಿದೆ.

ಕೋವಿಡ್–19 ಲಸಿಕೆ ಪಡೆಯಲು ಆಧಾರ್‌ ಕಾರ್ಡ್‌ ಸಂಖ್ಯೆಯ ದೃಢೀಕರಣದ ಅಗತ್ಯವಿದೆ. ಅದಕ್ಕೆ ಮೊಬೈಲ್‌ಗೆ ಬರುವ ಒಟಿ‍ಪಿ ನೀಡಬೇಕಾಗುತ್ತದೆ. ಹಾಗಾಗಿ, ಬಹಳಷ್ಟು ಮಂದಿ ಹಳೆಯ ಮೊಬೈಲ್‌ ನಂಬರ್‌ ತೆಗೆದು, ಹೊಸ ನಂಬರ್‌ ಸೇರ್ಪಡೆಗೆ ಮುಂದಾಗಿದ್ದರು. ಆದರೆ, ಕೆಲಸ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

‘ಜಿಲ್ಲೆಯಲ್ಲಿ 252 ಆಧಾರ್ ಕೇಂದ್ರಗಳು ಇವೆ. ಟ್ಯಾಬ್, ತಂತ್ರಾಂಶ ಬಳಕೆಗೆ 22 ಗ್ರಾಮ ಪಂಚಾಯ್ತಿಗಳ ಆಪರೇಟರ್‌ಗಳಿಗೆ, ಅಂಚೆ ಕಚೇರಿಯ 290 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾ ಆಧಾರ್‌ ಸಮನ್ವಯಾಧಿಕಾರಿ ರುದ್ರೇಶ ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಳಾಸ ಬದಲಾವಣೆಗೆ ಜನರು ಆಧಾರ್‌ ಕೇಂದ್ರಗಳಿಗೆ ಬರಬೇಕು. ಮೊಬೈಲ್ ನಂಬರ್ ಅಪ್‌ಡೇಟ್‌ ಕೆಲಸವನ್ನು ಅಂಚೆ ಸಿಬ್ಬಂದಿ‌ ಮನೆ ಮನೆಗೆ ಹೋಗಿ ಮಾಡುತ್ತಿದ್ದಾರೆ. ಆದರೆ, ನೆಟ್‌ವರ್ಕ್‌ ಸಮಸ್ಯೆ ಇದಕ್ಕೆ ತೊಡಕಾಗುತ್ತಿದೆ’ ಎಂದು ವಿವರಿಸಿದರು.

ಬಳಕೆ ಮಾಡಿದ ಟ್ಯಾಬ್‌ ವಿತರಣೆ: ‘ಸಿಬ್ಬಂದಿಗೆ ಹೊಸ ಟ್ಯಾಬ್‌ ನೀಡಿಲ್ಲ. ಈಗಾಗಲೇ ಬಳಕೆ ಮಾಡಿದವು
ಗಳನ್ನು ವಿತರಿಸಲಾಗಿದೆ. ಅವುಗಳಲ್ಲಿ ತಾಂತ್ರಿಕ‌ ಸಮಸ್ಯೆ ಇರುವುದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಎಲ್ಲೆಡೆ ಸಿಗುವುದಿಲ್ಲ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆ ಅಥವಾ ಹೊಸ ಟ್ಯಾಬ್‌ ವಿತರಿಸಲು ಮನವಿ ಮಾಡಲಾಗಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪಿಡಿಒ ಒಬ್ಬರು ಹೇಳಿದರು.

‘ಐದು ವರ್ಷದೊಳಗಿನ ಮಕ್ಕಳ ಆಧಾರ್‌ ನೋಂದಣಿ ಕಡಿಮೆ’
‘ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾದ ಟ್ಯಾಬ್‌ಗಳಲ್ಲಿ ಐದು ವರ್ಷದ ಒಳಗಿನ ಮಕ್ಕಳ ‘ಬಾಲ ಆಧಾರ್’ ನೋಂದಣಿ ಮಾಡಲು ಅವಕಾಶವಿದೆ. 5 ವರ್ಷದೊಳಗಿನ ಮಕ್ಕಳ ಆಧಾರ್‌ ನೋಂದಣಿ ಆಗುವ ಸಂಖ್ಯೆ‌ ಕಡಿಮೆ ಇದೆ’ ಎಂದು ಜಿಲ್ಲಾ ಆಧಾರ್ ಸಮನ್ವಯಾಧಿಕಾರಿ ರುದ್ರೇಶ ಎಂ. ತಿಳಿಸಿದರು.

‘ಸುಧಾರಿತ ತಂತ್ರಾಂಶವಿರುವ ಈ ಟ್ಯಾಬ್‌ಗಳಲ್ಲಿ, ಮೊಬೈಲ್ ಸಂಖ್ಯೆ ಬದಲಾವಣೆ ಸಹ ಮಾಡಬಹುದು. ಐದು ವರ್ಷದ ಒಳಗಿನ ಮಕ್ಕಳ ನೋಂದಣಿ ಉಚಿತವಾಗಿದೆ. ಮೊಬೈಲ್ ಫೋನ್ ನಂಬರ್ ಬದಲಾವಣೆಗೆ ₹50 ಶುಲ್ಕ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.

**

ಅರಣ್ಯ ಪ್ರದೇಶ ಇರುವೆಡೆ, ಕೆಲವು ಗ್ರಾಮಗಳಲ್ಲಿ ನೆಟ್‌ವರ್ಕ್‌ ಸಮಸ್ಯೆ ಇದೆ. ನೆಟ್‌ವರ್ಕ್‌ ಇರುವ ಕಡೆ ಜನರನ್ನು ಸೇರಿಸಿ ಆಧಾರ್‌ ಸೇವೆ ನೀಡಲು ಸಿಬ್ಬಂದಿಗೆ ತಿಳಿಸಲಾಗಿದೆ.
-ರುದ್ರೇಶ ಎಂ.,ಜಿಲ್ಲಾ ಆಧಾರ್ ಸಮನ್ವಯಾಧಿಕಾರಿ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.