ಸೋಮವಾರ, ಏಪ್ರಿಲ್ 19, 2021
31 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಆಸೆಗಂಟು ಹೊತ್ತು, ಹೊಸ ವರ್ಷ ಬಂತು

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

ಡಿಸೆಂಬರ್ ಚಳಿ, ಚರ್ಮ ಕೊರಿಯೂಮುಂದ ಸೂರ್ಯನೂ ಲಗೂನೆ ಮನಿಗೆ ಓಡ್ತಾನ. ಕೂಸಿನ ಕಣ್ಣಂಚಿನ ಕಾಡಗಿಯಷ್ಟು ಕಪ್ಪನೆಯ ಸಂಜಿ ಒಂದೀಟು ಲಗೂನೆ ಬರ್ತದ. ಹಂಗೇ ಡಿಸೆಂಬರ್‌ ತಿಂಗಳು ಲಗೂನೆ ಮುಗೀತದ. ಅದೀಗ ತಾನೆ ಕಾಲು ಬಂದು ಓಡೂದು ಕಲತ ಕೂಸುಗೋಳು ಓಡಿದ್ಹಂಗ ಮುಗದೇ ಹೋಗ್ತದ, ಹೋಗೆದ.

ಹೋಗಲಿ ಬಿಡ್ರಿ, ಎಲ್ಲಾ ತಿಂಗಳೂ ಹಂಗೇ ಅನ್ನೂ ಹಂಗಿಲ್ಲ! ಫೆಬ್ರುವರಿಯೊಳಗ 28 ದಿನಾ ಆದ್ರೂ ಇದರಷ್ಟು ಲಗೂ ಕಳಿಯೂದಿಲ್ಲ. ಇದು ತಾ ಹೋಗೂದಲ್ದೆ ತನ್ನ ಕೂಡ ಒಂದು ವರ್ಷ ತೊಗೊಂಡು ಹೋಗೇ ಬಿಡ್ತದ. ಈ ಡಿಸೆಂಬರ್‌ 31ರ ಮಧ್ಯರಾತ್ರಿಯ ಮಾದಕ ಕಣ್ಕಪ್ಪು, ಜನವರಿ ಒಂದರ ಬೆಳಗಿನ ಜಾವಕ್ಕ ಅದೇನೋ ಒಂಥರ ನಶೆ ಇದ್ದಂಗ. ಬಹುತೇಕ ಜನರೆಲ್ಲ ನಿಶಾಚರಿ ಆಗ್ತಾರ. 12 ಹೊಡಿಯೂತ್ಲೆ ಹ್ಯಾಪ್ಪಿ ನ್ಯೂ ಇಯರ್ ಅಂತ ಚೀರ್ಕೊಂತ ಅಡ್ಡಾಡ್ತಾರ.

ಈ ರಾತ್ರಿ ಮತ್ಮತ್ತ ಬರ್ತದ. ಮತ್ತೇ ಬರ್ತದ. ಅಪ್ಪ ಅಮ್ಮ ದೇವರ ಮುಂದ ದೀಪ ಬೆಳಗ್ತಾರ. ದೂರ ಇರುವ ಮಕ್ಕಳ ಫೋನಿಗೆ ಕರೆ ಮಾಡಿ, ಹೊಸವರ್ಷದ ಶುಭಾಶಯ ಅಂತಾರ. ಸ್ನೇಹಿತರ ನಡುವೆ ಇರುವ ಮಕ್ಕಳು ಸ್ಪೀಕರ್‌ ಆನ್‌ ಇಟ್ಟು, ಎಲ್ಲಾರಿಗೂ ಆ ಶುಭಾಶಯ ಕೇಳಿಸೋರು ಒಂದಷ್ಟು ಮಂದಿಯಾದ್ರ, ಇನ್ನಷ್ಟು ಮಂದಿ ಈ ಖುಷಿಗೆ ಕರೆಯ ಕಿರಿಕಿರಿ ಬ್ಯಾಡಂತ ಸೈಲೆಂಟ್‌ ಮೋಡಿಗೆ ಹಾಕ್ತಾರ. ಒಮ್ಮೆ ಹೊಸವರ್ಷದ ಉನ್ಮಾದ ಕಳದ ಮ್ಯಾಲೆ ಎಲ್ಲಾರಿಗೆ ಫೋನ್‌ ಮಾಡ್ತಾರ.

ಈ ಸಲ ಈ ಖುಷಿಗೆ ಒಂದೀಟು ದುಃಖ ಬೆರತದ. ನಮ್ಮ ನಡುವಿನ ಸಂತರೊಬ್ಬರು ಈ ಸಹಸ್ರಮಾನದ ಎರಡನೇ ದಶಮಾನ ನೋಡದೇ ಕೃಷ್ಣನತ್ತ ಹೊರಟೇ ಹೋದ್ರು. ಆ ದುಃಖ ಕವಿಯೂಮುನ್ನ ಹೊಸ ವರ್ಷ ಬಂದದ. ಪ್ರತಿ ವರ್ಷನೂ ಕಳೆದ ವರ್ಷ ಕಳಕೊಂಡೋರನ್ನ ಪಟ್ಟಿ ಮಾಡ್ಕೊಂತ, ಆ ವರ್ಷ ಮೆಸೇಜು ಮಾಡಿದ್ರು, ವಿಷ್‌ ಮಾಡಿದ್ರು, ಫೋನ್‌ ಮಾಡಿದ್ರು, ಮನೆಗೆ ಬಂದಿದ್ರು, ಒಟ್ಟಿಗೆ ಊಟ ಮಾಡಿದ್ವಿ ಇಂಥ ನೆನಕೆಗಳ ನಡುವೆನೂ ಮುಂದಿನ ವರ್ಷ ನಾವಿದ್ದೇ ಇರ್ತೀವಿ ಅನ್ನೂ ಖಾತ್ರಿಯೊಳಗ ಮಾತಾಡ್ತೇವಿ. ಕಾಲನ ಹೊಟ್ಟೆಯೊಳಗ ನಮಗೆಷ್ಟು ದಿನಗಳೋ..?

ಹೊಸತನದ ತಯಾರಿ ಕೇಕು ಕಟ್‌ ಮಾಡೂದ್ರೊಳಗ, ಮಾರಿಗೆ ಬಳಕೊಳ್ಳೂದ್ರೊಳಗ ಮತ್ತ ಮನಿಯೊಳಗಿನ ಕ್ಯಾಲೆಂಡರ್‌ ಬದಲಿ ಮಾಡೂದ್ರೊಳಗ ಖುಷಿ ಇರ್ತದ. ಬಳಸ್ತಾರೋ ಇಲ್ಲೋ.. ಆದ್ರ ಯಾರರೆ ಹೊಸಾ ಕ್ಯಾಲೆಂಡರ್‌ ಕೊಟ್ರಂತೂ ಭಾರಿ ಖುಷಿ ಆಗ್ತದ. ಲಕ್ಷ್ಮಿ ಚಿತ್ರ ಇದ್ರ, ವರ್ಷ ಮುಗದ ಮ್ಯಾಲೂ ಅಲ್ಮಾರಿ ಮ್ಯಾಲೆ, ಬೆಡ್‌ರೂಮ್‌ ಬಾಗಲಮ್ಯಾಲೆ ಅಂಟಿಸಿಬಿಡ್ತೀವಿ. ಲಕುಮಿ, ನೀ ಎಲ್ಲೀ ಹೋಗೂದು ಬ್ಯಾಡ ಅನ್ನೂಹಂಗ. ಗಣಪ್ಪನ ಚಿತ್ರ ಇದ್ರ, ಕಾಯಂ ಮಕ್ಕಳ ಓದೂ ಟೇಬಲ್‌ ಮ್ಯಾಲೆ ಅಂಟಸೂದು. ಪಂಚಾಂಗದ ಜೊತಿಗೆ ಇದ್ರ, ದೇವರ ಮನಿ ಹತ್ರ. ಬೆಳ್ಳನೆಯ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಕ್ಯಾಲೆಂಡರ್‌ ಮಾತ್ರ ಎಲ್ಲಾರಿಗೂ ಪ್ರೀತಿ. ಬಿಳೀಜಾಗ ಭಾಳಿರ್ತದ. ಹಾಲ್ನವ ಬರಲಿಲ್ಲ, ಕೆಲಸದೋರು ಬರಲಿಲ್ಲ, ಗ್ಯಾಸ್‌ ಖಾಲಿಯಾಗಿದ್ದು, ಕರೆಂಟ್‌ ಬಿಲ್‌ ತುಂಬಿದ್ದು, ಮಕ್ಕಳ ವ್ಯಾಕ್ಸೀನು, ಬಳಗದವರ ಬರ್ತ್‌ ಡೇ ಎಲ್ಲಾ ಮಾರ್ಕ್‌ ಮಾಡಾಕ ಜಾಗ ಇರ್ತದ. 

ಯಾರು ಎಷ್ಟೇ ಬಣ್ಣಬಣ್ಣದ ಕ್ಯಾಲೆಂಡರ್ ಕೊಟ್ರೂ ಪ್ರತಿ ಮನಿಯೊಳಗೂ ಹಿಂಗ ಬಿಳಿ ಹಿನ್ನೆಲೆಯ ಕ್ಯಾಲೆಂಡರ್ ಒಂದು ಇದ್ದೇ ಇರ್ತದ. ಈ ಕ್ಯಾಲೆಂಡರ್‌ನಾಗರೆ ಜಾಸ್ತಿ ಸಂಡೆ ಬರಲಿ ಅಂತ ಮಕ್ಕಳು ಕೇಳ್ಕೊಂಡ್ರ, ಹದಿನೈದು ದಿನಕ್ಕ ಒಮ್ಮೆ ಪೈಲಿ ಬರಲಿ ಅಂತ ನೌಕರಿದಾರರು ಕೇಳ್ಕೊತಾರ. ಇನ್ನು ವಾರ್ಷಿಕ, ಅರ್ಧವಾರ್ಷಿಕ ವಿಮೆ ತುಂಬುಹಂಗಿದ್ದಾಗಂತೂ.. ಆ ತಿಂಗಳು ಇನ್ನಾ ದೂರದ ಅಂದ್ಕೊಂಡ್ರೂ ಧಡಕ್ಕಂತ ಬಂದು ನಿಂತೇ ಬಿಡ್ತದ. 

ಜೀವನ ಸರಳಲ್ಲ. ಎಲ್ಲಾರ ಖಾತೆಯೊಳಗೂ ಒಂದಷ್ಟು ಕಪ್ಪು, ಬಿಳಿ, ಕೆಂಪು ಬಣ್ಣ ಬಳದೇ ಇರ್ತದ. ಹೋಗುವ ವರ್ಷದೊಳಗಿನ ಕಹಿ ಮರತು, ಬರುವ ವರ್ಷರೆ ಸಿಹಿ ತರಲಿ ಅನ್ನೂ ನಿರೀಕ್ಷೆನೂ ಇರ್ತದ. ಕಳೆದುಕೊಂಡವರ ನೆನಪು, ಇದ್ದವರ ನಿರೀಕ್ಷೆ, ಮಕ್ಕಳ ಪರೀಕ್ಷೆ, ಮದಿವಿ, ಮಕ್ಕಳು ಹಿಂಗ ತನ್ನ ಒಡಲೊಳಗ ಇಟ್ಕೊಂಡೇ ಹೊಸ ವರ್ಷ ಬರ್ತದ. 

ಎಳೀ ಮಕ್ಕಳಿಗೆ 12ರ ತನಾ ನಿದ್ದಿತಡಿಯೂದು, ಯುವ ಜನರಿಗಂತೂ ನಿದ್ದಿನೇ ಮಾಯ. ಮಧ್ಯವಯಸ್ಕರು ಎಷ್ಟು ಹೊತ್ತಿಗೆ ಉಂಡು, ಯಾವಾಗ ಮಾತ್ರೆ ತೊಗೊಂಡ್ರ, ಮಧ್ಯರಾತ್ರಿ ತನ ಎಚ್ಚರ ಇರಬಹುದು ಅಂತೆಲ್ಲ ನಿರ್ಧಾರ ಮಾಡಿ ತಯಾರ ಆಗ್ತಿರ್ತಾರ. ಒಟ್ನಾಗ ಹೊಸ ವರ್ಷ ಬರ್ತದ. ಮತ್ಮತ್ತ ಬರ್ತದ.
ಮತ್ತೇ ಬರ್ತದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು