ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಕೃತ ಹಾಸಿಗೆ ಹಂಚಿಕೆ ವ್ಯವಸ್ಥೆಗೆ ಸೂಚನೆ

ಕೋವಿಡ್‌ ನಿಯಂತ್ರಣ ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್‌; ವೈದ್ಯರ ವಿರುದ್ಧ ಸಚಿವ ಜೋಶಿ ಅಸಮಾಧಾನ
Last Updated 23 ಮೇ 2021, 7:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರು ಮಾದರಿಯಲ್ಲಿ ಧಾರವಾಡ ಜಿಲ್ಲೆಯಲ್ಲೂ ತಂತ್ರಾಂಶ ಆಧಾರಿತಕೇಂದ್ರೀಕೃತ ಹಾಸಿಗೆ ಹಂಚಿಕೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೂಚಿಸಿದರು.

ನಗರದ ಇಂದಿರಾಗಾಜಿನ ಮನೆಯಲ್ಲಿ ಶನಿವಾರ ನಡೆದ ಜಿಲ್ಲಾ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌ಗೆ ಸಂಬಂಧಿಸಿ ಪ್ರತ್ಯೇಕವಾದ ನಾಲ್ಕು ಸಂಖ್ಯೆಗಳ ಸಹಾಯವಾಣಿ ಆರಂಭಿಸಿ ಅದನ್ನು ಕ್ಲೌಡ್ ವ್ಯವಸ್ಥೆಗೆ ಸಂಯೋಜಿಸ
ಬೇಕು’ ಎಂದು ಸೂಚನೆ ಕೊಟ್ಟರು.

‘ನಗರದ ಕಿಮ್ಸ್‌ನಲ್ಲಿ‌ 160 ವೆಂಟಿಲೇಟರ್‌ಗಳಿದ್ದು, ಸದ್ಯಕ್ಕೆ 80 ಮಾತ್ರ ಬಳಕೆಯಾಗುತ್ತಿವೆ.‌ ಕೋವಿಡ್ ರೋಗಿಗಳ ಚಿಕಿತ್ಸೆಗೆ 125 ವೆಂಟಿಲೇಟರ್ ಬಳಕೆಯಾಗಬೇಕು. ವೆಂಟಿಲೇಟರ್‌ಗಳ ಕೊರತೆಯಿಂದ ಯಾರೂ ಸಾಯಬಾರದು’ ಎಂದರು.

‘ಕಲಘಟಗಿ ತಾಲ್ಲೂಕು ಆಸ್ಪತ್ರೆಗೆ ಮೂರು ದಿನಗಳಲ್ಲಿ ಅರಿವಳಿಕೆ ತಜ್ಞರನ್ನು ನೇಮಿಸಲಾಗುವುದು. ನವಲಗುಂದಕ್ಕೆ ಅಗತ್ಯ ಇರುವ ತಜ್ಞ ವೈದ್ಯರನ್ನು ಕಿಮ್ಸ್‌ನಿಂದ ನೇಮಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ತಾಲ್ಲೂಕು ಆಸ್ಪತ್ರೆಗೆ ಹೆಚ್ಚುವರಿಯಾಗಿ‌ ಮೂರು ವೆಂಟಿಲೇಟರ್‌ಗಳನ್ನು ಪೂರೈಸಲಾಗುವುದು. ಔಷಧ ತಂತ್ರಾಂಶದಲ್ಲಿ ಜಿಲ್ಲೆಗೆ ಅಗತ್ಯ ಇರುವ ಔಷಧಗಳ ಪಟ್ಟಿಯನ್ನು ಅಪ್‌ಲೋಡ್ ಮಾಡಬೇಕು’ ಎಂದರು.

‘ಕೋವಿಡ್ ವಾರ್ಡ್‌ಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲು ಹಣ ಮಂಜೂರು ಮಾಡಲಾಗಿದೆ.‌ ಕ್ಯಾಮೆರಾಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರೆ, ರೋಗಿಗಳ ಸಂಬಂಧಿಗಳಿಗೆ ಚಿಕಿತ್ಸೆ ಹಾಗೂ ರೋಗಿಯ ಸ್ಥಿತಿಗತಿಗಳ ಮಾಹಿತಿ ದೊರೆಯುತ್ತದೆ’ ಎಂದು ಹೇಳಿದರು.

ಅಸಮಾಧಾನ: ‘ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು 48 ಗಂಟೆಯಾದರೂ ವರದಿ ಬರುವುದಿಲ್ಲ. ಕಳೆದ ಬಾರಿಯೂ ಇದೇ ವಿಷಯದ ಕುರಿತು ಚರ್ಚಿಸಿ, ಸಿಬ್ಬಂದಿ ಕೊರತೆಯಿದ್ದರೆ ಅವರನ್ನು ನೀಡಲಾಗುವುದು ಎಂದು ತಿಳಿಸಲಾಗಿತ್ತು. ಪಾಸಿಟಿವ್‌ ಬಂದವರಿಗೆ ಶೀಘ್ರ ವರದಿ ನಿಡುವಂತೆಯೂ ಸೂಚಿಸಲಾಗಿತ್ತು. ಆದರೆ, ಯಾವ ಕಾರಣಕ್ಕಾಗಿ ವಿಳಂಬವಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಸಚಿವ ಜಗದೀಶ ಶೆಟ್ಟರ್‌, ಶಾಸಕ ಪ್ರಸಾದ ಅಬ್ಬಯ್ಯ ದನಿಗೂಡಿಸಿದರು.

ಪ್ರಯೋಗಾಲಯದ ನೋಡಲ್‌ ಅಧಿಕಾರಿ ಡಾ. ಮಹೇಶ, ‘ಕಿಮ್ಸ್‌, ಡಿಮಾನ್ಸ್‌ ಮತ್ತು ಎಸ್‌ಡಿಎಂ ಆಸ್ಪತ್ರೆಗಳಲ್ಲಿ ದಿನಕ್ಕೆ ತಲಾ ಎರಡು ಸಾವಿರ ಮಾದರಿ ಪರೀಕ್ಷಿಸಬಹುದು. ಮೂರು ಪಾಳಿಯಲ್ಲಿ ಡಾಟಾ ಎಂಟ್ರಿ ಆಪರೇಟರ್‌ ಕೆಲಸ ನಿರ್ವಹಿಸುತ್ತಿದ್ದಾರೆ. ವರದಿ ವಿಳಂಬಕ್ಕೆ ನಿಖರ ಕಾರಣ ತಿಳಿಯಲಾಗುವುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್‌, ‘ಕೋವಿಡ್ ನಿಯಂತ್ರಣದಲ್ಲಿ ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ಮುಖ್ಯವಾಗಿದೆ. ವರದಿ ನೀಡಲು ವಿಳಂಬವಾದರೆ ಚಿಕಿತ್ಸೆಗೆ ಸಮಸ್ಯೆಯಾಗುತ್ತದೆ. ರೋಗಿಗೆ ಒಮ್ಮೆಲೆ ಆಮ್ಲಜನಕದ ಮಟ್ಟ ಕುಸಿದು ತೊಂದರೆ ಅನುಭವಿಸುವಂತಾಗುತ್ತದೆ. ಇನ್ನುಮುಂದೆ 24 ಗಂಟೆ ಒಳಗಡೆ ವರದಿ ನೀಡಬೇಕು’ ಎಂದು ತಾಕೀತು ಮಾಡಿದರು.

ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್‌, ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ. ಸುಶೀಲಾ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಉಪವಿಭಾಗಾಧಿಕಾರಿ ಗೋಪಾಲಕೃಷ್ಣ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ್ ಇದ್ದರು.

‘ಸಹಿ ಹಾಕಿ ಹೋಗುವವರು ಬೇಕಿಲ್ಲ’

‘ಕಿಮ್ಸ್‌ನಲ್ಲಿ ವೈದ್ಯ ಸಿಬ್ಬಂದಿ ಸಂಖ್ಯೆ 1,000, ಇತರೆ ಸಿಬ್ಬಂದಿ 1,000 ಇದ್ದಾರೆ. ಇಷ್ಟೊಂದು ಸಿಬ್ಬಂದಿ ಇರುವ ಆಸ್ಪತ್ರೆಯ ಪ್ರಮುಖ ವಿಭಾಗದ ಅನೇಕ ವೈದ್ಯರು ಬೆಳಿಗ್ಗೆ ಬಂದು ಹಾಜರಿ ಹಾಕಿ, ಹೊರಗಿಂದಲೇ ಖಾಸಗಿ ಆಸ್ಪತ್ರೆಗೆ ತೆರಳುತ್ತಾರೆ. ವಾರ್ಡ್‌ಗೂ ಭೇಟಿ ನೀಡುವುದಿಲ್ಲ. ಅಂಥವರನ್ನು ಸೇವೆಯಿಂದ ಕಿತ್ತುಹಾಕಿ’ ಎಂದು ಪ್ರಲ್ಹಾದ ಜೋಶಿ ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಅವರಿಗೆ ಸೂಚಿಸಿದರು.

‘ಕೆಲವು ವೈದ್ಯರು ₹ 2 ರಿಂದ ₹4 ಲಕ್ಷದವರೆಗೆ ವೇತನ ಪಡೆಯುತ್ತಾರೆ. ಇಂತಹ ಕಠಿಣ ಸಂದರ್ಭದಲ್ಲಿಯೂ ಅಮಾನವೀಯವಾಗಿ ವರ್ತಿಸಿದರೆ ಅವರ ಸೇವೆ ಯಾಕೆ ಬೇಕು. ಎರಡ್ಮೂರು ಮಂದಿಯನ್ನು ಅಮಾನತು ಮಾಡಿ. ಅವರ ಬದಲು ಬೇರೆಯವರು ಬರುತ್ತಾರೆ’ ಎಂದರು.

ಸಿಬ್ಬಂದಿ ಕಾರ್ಯವೈಖರಿಗೆ ಬೇಸರ

ಕಿಮ್ಸ್‌ನಲ್ಲಿ ಕೋವಿಡ್‌ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸಂಸ್ಥೆಯ ಕಾರ್ಯ ನಿರ್ವಹಣೆ ಪರಿಶೀಲಿಸಿದ ಬಳಿಕ ಸಚಿವ ಸುಧಾಕರ್‌, ‘ಸಂಸ್ಥೆಯಲ್ಲಿ ಒಂದು ಸಾವಿರ ಮಂದಿ ವೈದ್ಯರು ಇದ್ದಾರೆ. 1,030 ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಮಾಣದಲ್ಲಿ ವೈದ್ಯರ–ರೋಗಿಗಳ ಅನುಪಾತ ಯಾವ ದೇಶದಲ್ಲೂ ಇಲ್ಲ. ಎಷ್ಟು ಪರಿಣಾಮಕಾರಿಯಾಗಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂಬುದನ್ನು ನೀವೇ ಪ್ರಶ್ನೆ ಮಾಡಿಕೊಳ್ಳಬೇಕು‌. ಇತರೆ, ಸಿಬ್ಬಂದಿಯನ್ನು ಲೆಕ್ಕ ಹಾಕಿದರೆ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದೀರಿ. ಆದರೆ, ನಿರೀಕ್ಷಿತ ಪ್ರಮಾಣದ ಆರೋಗ್ಯ ಸೇವೆ ದೊರಕುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶೀಘ್ರ ನೇಮಕಾತಿ ಆದೇಶ

‘ರಾಜ್ಯ ಸರ್ಕಾರದಿಂದ 2,150 ವೈದ್ಯರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ 780 ತಜ್ಞ ವೈದ್ಯರು ಇದ್ದಾರೆ. ಉಳಿದ ಅಭ್ಯರ್ಥಿಗಳು ಎಂ.ಬಿ.ಬಿ.ಎಸ್ ಪದವಿ ಪಡೆದವರು. ಇವರೆಲ್ಲರಿಗೂ ಸ್ಥಳ ನಿಯೋಜನೆ ಮಾಡಿ ಕರ್ತವ್ಯ ಹಾಜರಾಗಲು ನೇಮಕಾತಿ ಆದೇಶ ನೀಡಲಾಗುವುದು’ ಎಂದು ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT