ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: 22ರಂದು 10 ಜನರಿಗೆ ಸನ್ಯಾಸ ದೀಕ್ಷೆ

ಜೈನ ಸಮಾಜದಿಂದ 19ರಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ
Last Updated 17 ಫೆಬ್ರುವರಿ 2021, 3:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿ.ಕಾಂ. ಪದವಿ ಪೂರ್ಣಗೊಳಿಸಿದ ಮೂವರು ಸೇರಿದಂತೆ 10 ಜನ ಫೆ.22ರಂದು ಇಲ್ಲಿನ ಅರಿಹಂತ ನಗರದ ಪ್ರೇಮ ಯಶೋದೇವ ಭುವನಭಾನು ಸಂಯಮ ಉದ್ಯಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಒಂದೇ ದಿನ ಇಷ್ಟೊಂದು ಜನ ದೀಕ್ಷೆ ಸ್ವೀಕರಿಸುತ್ತಿರುವುದು ದಕ್ಷಿಣ ಭಾರತದಲ್ಲಿ ಇದೇ ಮೊದಲು ಎಂದು ಜೈನ ಮುನಿ ಶ್ರಮಣಿಗಣನಾಯಕ ಅಭಯಶೇಖರ ಸೂರೀಶ್ವರ ಮಹಾರಾಜ ತಿಳಿಸಿದರು.

ಜೈನ ಮರುಧರ ಸಂಘದ ವತಿಯಿಂದ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೀಕ್ಷೆ ಸ್ವೀಕರಿಸಿದವರು ಸಂಪೂರ್ಣ ಬ್ರಹ್ಮಚರ್ಯೆ ಪಾಲನೆ ಮಾಡಬೇಕು. ಅಂದಿನ ಆಹಾರವನ್ನು ಅಂದೇ ಸಂಗ್ರಹಿಸಿ ಊಟ ಮಾಡಬೇಕು. ಕೂಡಿಡುವ ಆಸೆಗೆ ಹೋಗಬಾರದು. ಮೊಬೈಲ್ ಫೋನ್‌ ಬಳಸುವಂತಿಲ್ಲ. ಕಾಲ್ನಡಿಗೆ ಮೂಲಕವೇ ಸಂಚರಿಸಬೇಕು. 22ರಂದು ಬೆಳಿಗ್ಗೆ 6 ಗಂಟೆಯಿಂದ ದೀಕ್ಷಾ ಕಾರ್ಯಕ್ರಮಗಳು ಆರಂಭವಾಗಲಿವೆ’ ಎಂದರು.

‘ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸೃಷ್ಟಿ ಜೈನ್ ದೀಕ್ಷೆ ಸ್ವೀಕರಿಸಿದರು. ದೀಕ್ಷೆ ಸ್ವೀಕರಿಸಲಿರುವ ಉಳಿದ 10 ಜನರ ಪೈಕಿ 9 ಜನ ಹುಬ್ಬಳ್ಳಿಯವರು. ದೀಕ್ಷೆ ಪೂರ್ಣಗೊಂಡ ಬಳಿಕ ಬೇರೆ ಹೆಸರು ನಾಮಕಾರಣ ಮಾಡಲಾಗುವುದು’ ಎಂದರು.

72 ವರ್ಷದ ಮೋಕ್ಷರೂಚಿಭಾಯಿ ಜವೇರಿ, ರೇಖಾ ಮುಥಾ, ಅಭಿಷೇಕ ಕಾಂಕರಿಯಾ, ಹರ್ಷ ಕೊಠಾರಿ, ಚೇತನ ಕೊಠಾರಿ, ಕರಿಷ್ಮಾ ಬೋಹರಾ, ಅದಿತಿ ಬಂಧಾಮುಥಾ, ವಿನೀತ್ ಚೌಹಾನ, ವಿನಿತಾ ಧಾರಿವಾಲ, ಸಿಮ್ರನ್ ಮಾಂಡೋತ ಸ್ವೀಕರಿಸುವರು.

ದೀಕ್ಷೆಯ ಪೂರ್ವಭಾವಿಯಾಗಿ ಕಾರ್ಯಕ್ರಮಗಳು ನಡೆಯಲಿದ್ದು, ಫೆ. 19ರಂದು ಬೆಳಿಗ್ಗೆ 9 ಗಂಟೆಗೆ ಪ್ರವಚನ, 11ಕ್ಕೆ ಪಂಚಕಲ್ಯಾಣ ಹಾಗೂ ಸಿದ್ದಚಕ್ರ ಮಹಾಪೂಜೆ, 12ಕ್ಕೆ ಮದರಂಗಿ ವಿತರಣೆ, ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

20ರಂದು ಗಿರಿನಾರ ಭಾವಯಾತ್ರೆ, ವಸ್ತ್ರಗಳಿಗೆ ಬಣ್ಣಹಾಕುವ ಹಾಗೂ ದೀಕ್ಷೆ ತೆಗೆದುಕೊಳ್ಳುವ ಕುಟುಂಬದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಹಾಆರತಿ, 21ರಂದು ಕಂಚಗಾರ ಗಲ್ಲಿಯ ಶಾಂತಿನಾಥ ಜೀನಾಲಯದಿಂದ ಕೇಶ್ವಾಪುರದ ದೀಕ್ಷಾ ಮಂಟಪದ ತನಕ ಮೆರವಣಿಗೆ, ದೀಕ್ಷಾರ್ಥಿಗಳ ಪೋಷಕರಿಂದ ವಿದಾಯ ಸಮಾರಂಭ ಜರುಗಲಿವೆ. 23ರಿಂದ ದೀಕ್ಷೆ ಪಡೆದ ಮುನಿಗಳೊಂದಿಗೆ ಆಚಾರ್ಯ ಭಗವಂತರ ದೀಕ್ಷಾರ್ಥಿ ಪರಿವಾರದವರ ಮನೆಗೆ ಪಾದಯಾತ್ರೆ ನಡೆಯಲಿವೆ.

ಜೈನ ಮುರುಧರ ಸಂಘದ ಅಧ್ಯಕ್ಷ ಫೋಕರಾಜ ಸಿಂಘಿ, ಸಮಾಜದ ಪ್ರಮುಖರಾದ ಸುರೇಶ ಜೈನ್‌, ದಿನೇಶ ಸಿಂಘ್ವಿ, ಅಮೃತಲಾಲ್‌ ಜೈನ್‌, ಗಿರೀಶ್‌ ಕೊಠಾರಿ, ವಿನಯ್‌ ಶಾ ಮತ್ತು ಮಾಂಫಿಲಾಲ್‌ ಬಂಧಾಮುಥಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT