ಗುರುವಾರ , ಫೆಬ್ರವರಿ 25, 2021
18 °C
ಪೋಷಕರೇ ಮೊಬೈಲ್ ಬದಿಗಿಡಿ, ಮಕ್ಕಳ ಕಡೆಗೆ ಗಮನ ಕೊಡಿ

ಫೋನ್‌ಇನ್ | ಲಾಕ್‌ಡೌನ್ ಕಾಲದಲ್ಲಿ ಮಕ್ಕಳ ನಿರ್ವಹಣೆಗೆ ಮನೋವೈದ್ಯರ ಟಿಪ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪೋಷಕರು ಎಲ್ಲ ಸನ್ನಿವೇಶಗಳಲ್ಲೂ ಆತಂಕಪಡದೆ ತಾಳ್ಮೆ ವಹಿಸಬೇಕು. ಮನೆಯವರ ಆರ್ಥಿಕ ಸಮಸ್ಯೆ, ಮಾನಸಿಕ, ದೈಹಿಕ ಬಳಲಿಕೆ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಮಕ್ಕಳ ಜತೆಗಿನ ವ್ಯವಹಾರ ನಮ್ಮ ಭಾವನೆಗಳ ಮೇಲೆ ಅವಲಂಬನೆಯಾಗಬಾರದು. ಸಂತಸವಿದ್ದರೂ, ಸಿಟ್ಟಿದ್ದರೂ ಮಕ್ಕಳೊಂದಿಗೆ ಶಾಂತವಾಗಿಯೆ ವ್ಯವಹರಿಸಬೇಕು...

ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯೆ ಡಾ. ಸುಜ್ಞಾನಿ ದೇವಿ ಪಾಟೀಲ ಅವರು ‘ಪ್ರಜಾವಾಣಿ’ ಹುಬ್ಬಳ್ಳಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಪೋಷಕರಿಗೆ ತಿಳಿಹೇಳಿದ ಮಾತುಗಳು.

‘ಮಕ್ಕಳೊಂದಿಗೆ ಗುಣಮಟ್ಟದ ಸಮಯ ಮೀಸಲಿಡಿ. ಧೈರ್ಯ, ವಿಶ್ವಾಸ, ಪ್ರಾಮಾಣಿಕ ನಡವಳಿಕೆ ಇರಲಿ. ಲಾಕ್‌ಡೌನ್‌ನಿಂದ ಹೆಚ್ಚು ಸಮಯ ಒಟ್ಟಿಗೆ ಇರಲು ಸಾಧ್ಯವಾಗಿದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳಿಗೆ ವಾರಿಯರ್ಸ್‌ಗಳ ಶ್ರಮ, ವಿಜ್ಞಾನಿಗಳು, ಔಷಧಗಳ ಪರಿಚಯ, ಅವರ ಬಗ್ಗೆ ಅಭಿಮಾನ ಮೂಡಿಸುವ ಸಂಗತಿಗಳನ್ನು ಹಂಚಿಕೊಳ್ಳಬೇಕು. ಇದರಿಂದ ಮಕ್ಕಳ ಜ್ಞಾನವೃದ್ಧಿಯೂ ಆಗುತ್ತದೆ. ವಿಡಿಯೊ ಕಾಲ್‌ ಮೂಲಕ ಸ್ನೇಹಿತರು, ಸಂಬಂಧಿಕರ ಜತೆ ಸಂಪರ್ಕದಲ್ಲಿರಿ. ಪತ್ರ ಬರೆಯುವ ಅಭ್ಯಾಸ ಬೆಳೆಸಿ. ಕತೆ, ಚಿತ್ರಕಲೆ, ಸಂಗೀತ, ನೃತ್ಯದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಮಕ್ಕಳೊಂದಿಗೆ ಚರ್ಚಿಸಿ, ಚಾರ್ಟ್‌ ತಯಾರಿಸಿ. ಬಹುಮಾನಗಳನ್ನು ನೀಡಿ ಪ್ರಶಂಸಿಸಿ’ ಎಂದು ವೈದ್ಯರು ಸಲಹೆ ನೀಡಿದರು.

20–20–20 ಸೂತ್ರ ಪಾಲಿಸಿ

ನಿತ್ಯ ಮೊಬೈಲ್‌, ಟಿವಿ ವೀಕ್ಷಿಸುವುದರಿಂದ ಮಕ್ಕಳಲ್ಲಿ ಶುಷ್ಕ ನೇತ್ರ ಸಮಸ್ಯೆ ಉಂಟಾಗಬಹುದು. ಅದಕ್ಕಾಗಿ ಪಾಲಕರು 20–20–20 ಸೂತ್ರ ಅಳವಡಿಸಿಕೊಳ್ಳಬೇಕು. ಅಂದರೆ 20 ನಿಮಿಷ ನಿರಂತರವಾಗಿ ನೋಡಿದ ಮೇಲೆ ಕಣ್ಣಿಗೆ 20 ಸೆಕೆಂಡ್‌ ವಿಶ್ರಾಂತಿ ನೀಡಬೇಕು. ಟೀವಿಯಂಥ ಸ್ಕ್ರೀನ್‌ಗಳಿಂದ 20 ಅಡಿ ದೂರದ ದೃಶ್ಯಗಳನ್ನು ನೋಡಬೇಕು.  

ಲಾಕ್‌ಡೌನ್‌ ಮಾಡಿ

ಪೋಷಕರು ಸ್ವಯಂಪ್ರೇರಿತರಾಗಿ ಮೊಬೈಲ್‌, ಟಿವಿ ಬಳಕೆಗೆ ಒಂದು ದಿನ ಲಾಕ್‌ಡೌನ್‌ ಘೋಷಿಸಬೇಕು. ಮಲಗುವ ಕೋಣೆ, ಡೈನಿಂಗ್‌ ಹಾಲ್‌ಗೆ ಯಾವುದೇ ಕಾರಣಕ್ಕೂ ಮೊಬೈಲ್‌ ತರದಂತೆ ನೋಡಿಕೊಳ್ಳಬೇಕು.

ಕೊರೊನಾ ಭಯ ತುಂಬಬೇಡಿ

ಕೊರೊನಾ ಸೋಂಕಿನ ಕುರಿತು ಮಕ್ಕಳಲಕ್ಲಿ ಅನಗತ್ಯ ಭಯ ತುಂಬಬಾರದು. ಸೋಂಕಿನ ಬಗ್ಗೆ ಹರಿಹರೆಯದವರು(11 ವರ್ಷದಿಂದ 20) ಅರ್ಥ ಮಾಡಿಕೊಳ್ಳುತ್ತಾರೆ. ಆದರೆ, ಸಣ್ಣ ಮಕ್ಕಳಲ್ಲಿ ಭಯ ಇರುತ್ತದೆ. ಅವರ ಸಂದೇಹಗಳಿಗೆ ಉತ್ತರಿಸಬೇಕು. ಟಿವಿ ಮಾಧ್ಯಮಗಳಿಂದ ಮಕ್ಕಳನ್ನು ದೂರ ಇರಿಸಬೇಕು. ಅವರಲ್ಲಿನ ಆತಂಕ ಕಡಿಮೆ ಮಾಡಿಸಿ, ಸುರಕ್ಷಿತ ಭಾವನೆ ಮೂಡಿಸಬೇಕು. ಮಕ್ಕಳಿಗೆ ಸುಳ್ಳು ಆಶ್ವಾಸನೆ ನೀಡಬಾರದು.

ಕೋಪ ನಿಯಂತ್ರಿಸಿ

ಲಾಕ್‌ಡೌನ್‌ ಅವಧಿಯಲ್ಲಿ ಮಕ್ಕಳ ತುಂಟಾಟ, ತಕರಾರುಗಳಿಂದ ಅತಿಯಾದ ಕೋಪ ಬಂದಾಗ ತಕ್ಷಣ ಬ್ರೇಕ್‌ ತೆಗೆದುಕೊಳ್ಳಬೇಕು. 20 ಸೆಕೆಂಡ್‌ಗಳಲ್ಲಿ ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು, ಬಿಡಬೇಕು. ರಿಲ್ಯಾಕ್ಸ್‌ ಆದ ಮೇಲೆ ಮಕ್ಕಳ ಪ್ರಶ್ನೆಗೆ ಉತ್ತರಿಸಬೇಕು.

ಮಕ್ಕಳಿಗಾಗಿ ದಿನಚರಿ ರಚಿಸಿ

ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳಿಗಾಗಿಯೇ ವಿಶೇಷ ದಿನಚರಿ ರಚಿಸಬೇಕು. ಇದರಲ್ಲಿ ಪೋಷಕರು ಮಕ್ಕಳಿಗಾಗಿ ಸಮಯ ಮೀಸಲಿಡಬೇಕು. ಪೋಷಕರು ತಮ್ಮ ಬಾಲ್ಯದ ನೆನಪುಗಳನ್ನು ಮಕ್ಕಳಿಗೆ ಆಸಕ್ತಿಕರವಾಗಿ ತಿಳಿಸಲು ಪ್ರಯತ್ನಿಸಬೇಕು. ಇದರಿಂದಾಗಿ ಮಕ್ಕಳಿಗೆ ಪೋಷಕರ ಬಾಲ್ಯ ತಿಳಿಯುತ್ತದೆ. ಕುತೂಹಲಗಳು ಹೆಚ್ಚುತ್ತವೆ. ಇಂತಹ ಸಮಯದಲ್ಲಿ ಅವರನ್ನು ಬೇರೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು.

ಗುಣಮಟ್ಟದ ಸಮಯ ಮೀಸಲಿಡಿ

ನಿತ್ಯದ ಮಾಮೂಲಿ ದಿನಚರಿಯಲ್ಲಿ ಮಕ್ಕಳಿಗಾಗಿ ಸಮಯ ಮೀಸಲಿಡಲು ಬಹುಪಾಲು ಸಾಧ್ಯವಾಗಿರುವುದಿಲ್ಲ. ಈಗ ಸಿಕ್ಕಿರುವ ಸಮಯದ ಸದಾವಕಶವನ್ನು ಪೋಷಕರು ಪಡೆದುಕೊಳ್ಳಬೇಕು. ಮಕ್ಕಳಿಗೆ ಯಾವುದೇ ಕೆಲಸವನ್ನು ಮಾಡಬೇಡ ಎಂದು ಹೇಳುವುದಕ್ಕಿಂತ, ಧನತ್ಮಕವಾಗಿ ಮಾಡಬೇಕಿರುವುದನ್ನು ಒತ್ತು ಕೊಟ್ಟು ಹೇಳಿ. ಮಕ್ಕಳು ಮಾಡಬೇಡ ಎಂಬುದನ್ನೇ ಮಾಡುತ್ತಾರೆ ಎಂಬುದು ಪೋಷಕರ ಗಮನದಲ್ಲಿರಲಿ.

ಮನೆಗೆಲಸ ಹಂಚಿಕೊಳ್ಳಿ

ಮಕ್ಕಳ ಜತೆ ಮನೆಗೆಲಸವನ್ನು ಹಂಚಿಕೊಳ್ಳಿ. ಇದರಿಂದ ಸಿಗುವ ಖುಷಿಯ ಕ್ಷಣಗಳನ್ನು ಎಲ್ಲರೂ ಅನುಭವಿಸಬಹುದು. ಚಿಕ್ಕ ಕೆಲಸಗಳನ್ನು ಮಕ್ಕಳಿಂದ ಹೇಳಿ ಮಾಡಿಸಿ. ಅವರಿಗೂ ಹೊಸತನದ ಅನುಭವ ಆಗುತ್ತದೆ. ಕೆಲಸದ ಬಗ್ಗೆ ಆಸಕ್ತಿ ಹುಟ್ಟುತ್ತದೆ.ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳೊಂದಿಗೆ ಬೆರೆಯಲೇಬೇಕು. ಇಲ್ಲದಿದ್ದರೆ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಇಲ್ಲವೇ ವ್ಯಸನಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ.

ಮೊಬೈಲ್‌ ಬಳಕೆಗೆ ವಯಸ್ಸಿನ ಮಿತಿ

2 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ ಕೊಡಬೇಡಿ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಮೂರರಿಂದ ಐದು ವರ್ಷದೊಳಗಿನ ಮಕ್ಕಳಿಗೆ 1 ಗಂಟೆ ಮಾತ್ರ ಮೊಬೈಲ್‌ಕೊಡಿ. ಐದು ವರ್ಷಕ್ಕಿಂತ ದೊಡ್ಡ ಮಕ್ಕಳು ಮೊಬೈಲ್‌ ಬಳಸುವಾಗ ಗಮನಹರಿಸಿ. ಮಕ್ಕಳ ತಪ್ಪುಗಳನ್ನು ಈ ಸಂದರ್ಭದಲ್ಲಿ ನಯವಾಗಿ ತಿದ್ದಬೇಕು. ಪೋಷಕರು ಕೊಡುವ ಆಶ್ವಾಸನೆಯು ಮಕ್ಕಳಿಗೆ ಧೈರ್ಯವನ್ನು ತುಂಬುವಂತಿರಬೇಕು.

ದೈಹಿಕ, ಮಾನಸಿಕ ಬದಲಾವಣೆಗಳು

ಲಾಕ್‌ಡೌನ್‌ನಿಂದ ಮಕ್ಕಳಲ್ಲಿ ದೈಹಿಕ, ಮಾನಸಿಕ ಬದಲಾವಣೆಗಳು ಆಗುತ್ತಿರುತ್ತವೆ. ಮಕ್ಕಳಲ್ಲಿ ನಿದ್ದೆ ಕೊರತೆ, ಬೊಜ್ಜು, ಕೈನೋವು, ಕತ್ತುನೋವು, ಕಣ್ಣಿನಲ್ಲಿ ನೀರು ಬರುವುದು ಇಂತಹ ದೈಹಿಕ ತೊಳಲಾಟಗಳು ಆರಂಭವಾದರೆ, ಖಿನ್ನತೆ, ಗಮನ ಶಕ್ತಿಯ ಕುಂದುವಿಕೆ, ಚಡಪಡಿಕೆ, ಚಟ, ಸಿಟ್ಟಿನಂತಹ ಮಾನಸಿಕ ವ್ಯಾದಿಗಳು ಮಕ್ಕಳನ್ನು ಬಾಧಿಸುವ ಮುನ್ನ ಪೋಷಕರು ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲಾಕ್‌ಡೌನ್‌ ಕಳೆಯಿರಿ.

ಪೋಷಕರಿಗೆ ಟಿಪ್ಸ್‌...

* ಪಾಲಕರು ಒತ್ತಡ ಮುಕ್ತರಾಗಿ ಮಕ್ಕಳಿಗೆ ಚಟುವಟಿಕೆ ಹೇಳಿಕೊಡಿ

* ಮೊಬೈಲ್‌, ಟಿವಿ ವೀಕ್ಷಣೆ ಹಾಗೂ ಇತರ ಚಟುವಟಿಕೆಗಳಿಗೆ ದಿನಚರಿ ಸಿದ್ಧಪಡಿಸಿಕೊಡಿ

* ಮಕ್ಕಳು ಇಷ್ಟಪಡುವಂಥ ಆಟ, ಪಾಠಗಳ ಕಲಿಕೆಗೇ ಆದ್ಯತೆ ನೀಡಿ

* ಸಹಪಾಠಿಗಳು ಹಾಗೂ ಶಿಕ್ಷಕರೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕ ಕಾಯ್ದುಕೊಳ್ಳಲು ಅನುವು ಮಾಡಿಕೊಡಿ

* ಮಕ್ಕಳೊಂದಿಗೆ ಸಕಾರತ್ಮಕವಾಗಿ ವರ್ತಿಸಬೇಕು. ಅತಿಯಾದ ನಿರ್ಬಂಧಗಳನ್ನು ಹೇರಬೇಡಿ.

* ಬೈಯುವುದು, ಹೊಡೆಯುವುದು, ಸಿಟ್ಟು ಪ್ರದರ್ಶಿಸುವುದರಿಂದ ಪಾಲಕರ ಈ ಗುಣಗಳು ಮಕ್ಕಳಿಗೆ ವರ್ಗಾವಣೆಯಾಗಲಿವೆ

 * ಮಕ್ಕಳಲ್ಲಿ ಕೆಟ್ಟ ನಡವಳಿಕೆ ಕಂಡು ಬಂದರೆ ತಕ್ಷಣ ಗುರುತಿಸಿ, ಅವರ ಗಮನ ಬೇರೆಡೆ ಸೆಳೆಯಿರಿ.

* ಮಗುವಿನ ಕೆಟ್ಟ ನಡವಳಿಕೆಗಳಿಗೆ ಹೆಚ್ಚು ಒತ್ತು ಕೊಡಬೇಡಿ, ಗಮನಕೊಡಿ

* ಮೊಬೈಲ್‌ ಬಳಕೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ, ವೈಯಕ್ತಿಕ ಮಾಹಿತಿ ಶೇರ್‌ ಮಾಡದಂತೆ ತಿಳಿವಳಿಕೆ ನೀಡಿ

* ಸೈಬರ್‌ ವಂಚನೆ, ಆ್ಯಪ್‌ಗಳ ಆಯ್ಕೆ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಚರ್ಚಿಸಿ, ತಿಳಿಸಿಕೊಡಿ

* ಲಾಕ್‌ಡೌನ್‌ ಅವಧಿಯಲ್ಲಿ ಮಕ್ಕಳನ್ನು ಕ್ರಿಯಾಶೀಲವಾಗಿರಿಸಲು ಪಾಲಕರೇ ಮಾದರಿಯಾಗಿರಬೇಕು

 

ಪ್ರಶ್ನೋತ್ತರ ಹೀಗಿವೆ...

* ಮಕ್ಕಳು ಟಿ.ವಿ ಮತ್ತು ಮೊಬೈಲ್‌ನಲ್ಲೇ ಹೆಚ್ಚು ಮುಳುಗಿರುತ್ತಾರೆ. ಬೇರೆ ಮಕ್ಕಳ ಜತೆ ಬೆರೆಯುವುದೇ ಇಲ್ಲ. ಇದನ್ನು ಸರಿಪಡಿಸುವುದು ಹೇಗೆ?

ಪಂಪನಗೌಡ, ಕಂಪ್ಲಿ; ರಾಘವೇಂದ್ರ, ಸುರಪುರ; ನಾಗರಾಜ ಮದ್ಗುಣಿ, ಯಲ್ಲಾಪುರ; ಮಂಜನಗೌಡ ಪಾಟೀಲ, ರಾಯಚೂರು.

– ಮೊಬೈಲ್ ಅಥವಾ ಟಿ.ವಿ ಮಕ್ಕಳನ್ನು ನೋಡಿಕೊಳ್ಳಲು ಇರುವ ಸಾಧನಗಳು ಅಲ್ಲ. ಈ ವಿಷಯದಲ್ಲಿ ಪಾಲಕರೇ ಮಕ್ಕಳಿಗೆ ಮಾದರಿಯಾಗಬೇಕು. ಆಧುನಿಕ ಯುಗದಲ್ಲಿ ಮಕ್ಕಳಿಗೆ ಟಿ.ವಿ ಮತ್ತು ಮೊಬೈಲ್ ಗೊತ್ತಿರಬೇಕು. ಅವುಗಳಿಗೆ ಕೊಡುವ ಸಮಯ ದಿನಕ್ಕೆ ಒಂದು ತಾಸು ಮೀರಬಾರದು. ಹೆಚ್ಚಾದರೆ, ಅದು ವ್ಯಸನವಾಗುತ್ತದೆ. ಇದನ್ನು ತಡೆಯಲು ಪಾಲಕರೆ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಟಿ.ವಿ ಮತ್ತು ಮೊಬೈಲ್‌ ವೀಕ್ಷಣೆಗೆ ಸಮಯ ನಿಗದಿಪಡಿಸಿ, ಪಾಲಕರೂ ಮಕ್ಕಳೊಂದಿಗೆ ವೀಕ್ಷಿಸಬೇಕು. ಆಗ ಅವರಲ್ಲಿರುವ ಒಂಟಿನತ ನಿವಾರಣೆಯಾಗುತ್ತದೆ. ಬಳಿಕ, ಪೋಷಕರು ಹೇಳಿದಂತೆ ಮಕ್ಕಳು ಕೇಳುತ್ತಾರೆ.

* ಲಾಕ್‌ಡೌನ್‌ನಿಂದ ಮಕ್ಕಳು ಎದುರಿಸುತ್ತಿರುವ ಮಾನಸಿಕ ಸಮಸ್ಯೆಗಳೇನು? ಮಕ್ಕಳಿಗೆ ಆನ್‌ಲೈನ್ ಕಲಿಕೆ ಎಷ್ಟು ಪರಿಣಾಮಕಾರಿ?

ಮಂಜುನಾಥ್, ಬೆಂಗಳೂರು. 

– ಸದಾ ಹೊರಗೆ ಒಳಗೆ ಓಡಾಡಿಕೊಂಡಿರುವ ಮಕ್ಕಳು, ನಾಲ್ಕು ಗೋಡೆಗಳ ಮಧ್ಯೆಯೇ ಇರಬೇಕಾದಾಗ ತಮ್ಮ ಸಹಜ ಸ್ವಾತಂತ್ರ್ಯ ಬಯಸುತ್ತಾರೆ. ಅದು ಸಿಗದಿದ್ದಾಗ ಒಂಟಿನತ, ಆತಂಕ ಹಾಗೂ ಭಯ ಮೂಡುತ್ತದೆ. ಹಾಗಾಗಿ, ಟಿ.ವಿ ಮತ್ತು ಮೊಬೈಲ್‌ನತ್ತ ಹೆಚ್ಚು ಆಸ್ಥೆ ವಹಿಸುತ್ತಾರೆ. ಪಾಲಕರ ಮಾತನ್ನು ಮೀರಿ ಸ್ನೇಹಿತರ ಜತೆ ಸುತ್ತಾಡಲು ಹೋಗುತ್ತಾರೆ. ಸಣ್ಣ ವಿಷಯಕ್ಕೂ ಜಗಳವಾಡುತ್ತಾರೆ. ಇದನ್ನು ತಡೆಯುವುದಕ್ಕಾಗಿ ಮಕ್ಕಳ ಬೇಕು–ಬೇಡಗಳನ್ನು ಅವರ ಜತೆಗೇ ಚರ್ಚಿಸಿ ದಿನಚರಿಯೊಂದನ್ನು ರಚಿಸಬೇಕು. ಅದನ್ನು ಪಾಲಿಸಲು ಪಾಲಕರೂ ನೆರವಾಗಬೇಕು. ಇದರಿಂದ ಇಬ್ಬರ ನಡುವಿನ ಸಂಬಂಧವೂ ಗಟ್ಟಿಯಾಗುತ್ತದೆ. ಆನ್‌ಲೈನ್ ಪಾಠ ತರಗತಿ ಪಾಠಕ್ಕೆ ಸಮವಲ್ಲ. ಪುನರ್‌ ಮನನಕ್ಕೆ ಅದು ಸಹಕಾರಿ. ತರಗತಿ ಪಾಠ ದೀರ್ಘಾವಧಿಯದ್ದಾಗಿದ್ದರೆ, ಆನ್‌ಲೈನ್ ಪಾಠ ನಿಗದಿತ ಅವಧಿಯದ್ದು. ಹೆಚ್ಚು ನೆನಪಿನಲ್ಲಿ ಉಳಿಯುವುದಿಲ್ಲ. ಆನ್‌ಲೈನ್ ಪಾಠದ ಜತೆಗೆ, ಓದು ಕೂಡ ಅಗತ್ಯ. ಆದರೆ, ತಂತ್ರಜ್ಞಾನ ಪ್ರೇರಿತ ಈ ಕಲಿಕೆಗೆ ಹೊಂದಿಕೊಳ್ಳಬೇಕಾದ ಅಗತ್ಯವೂ ಇದೆ. ಲಾಕ್‌ಡೌನ್ ಅಂತಹದ್ದೊಂದು ಹೊಸ ಕಲಿಕೆಗೆ ಸಿಕ್ಕಿರುವ ಅವಕಾಶ ಎಂದು ಭಾವಿಸಿ, ಹೊಸ ಅವಕಾಶಗಳ ಸದುಪಯೋಗಪಡಿಸಿಕೊಳ್ಳಬೇಕು.

* ನನ್ನ ಮಗ ಓದು–ಬರಹದ ವಿಷಯದಲ್ಲಿ ಸೋಮಾರಿಯಾಗಿದ್ದಾನೆ. ಇತ್ತೀಚೆಗೆ ಸುಳ್ಳು ಕೂಡ ಹೇಳುತ್ತಾನೆ. ಆತನನ್ನು ಸುಧಾರಿಸುವುದು ಹೇಗೆ?

ಗೋಪಾಲಗೌಡ ಪಾಟೀಲ, ಹುಬ್ಬಳ್ಳಿ. 

– ಮಕ್ಕಳಲ್ಲಿ ಕಲಿಕೆಗೆ ಸಂಬಂಧಿಸಿದ ತೊಂದರೆಗಳಿರುತ್ತವೆ. ಪಾಲಕರು ಅದನ್ನು ಸಾಮಾನ್ಯವಾಗಿ ಮೈಗಳ್ಳತನ ಎಂದು ಭಾವಿಸುತ್ತಾರೆ. ಕಲಿಕಾ ವಿಷಯ ಕಠಿಣ ಎನಿಸಿದಾಗ, ಕಲಿಕೆಗಿಂತಲೂ ಆಟದಲ್ಲೇ ಆಸಕ್ತಿ ಹೆಚ್ಚಾದಾಗ, ಮಕ್ಕಳು ಕಲಿಕೆಯತ್ತ ಹೆಚ್ಚು ಗಮನ ಕೊಡುವುದಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುವುದುಂಟು. ನೀವು ಹೆಚ್ಚು ಸಮಯವನ್ನು ಮಗನೊಂದಿಗೆ ಕಳೆಯಬೇಕು. ಆತನ ದಿನಚರಿಯನ್ನು ನಿತ್ಯ ಕೇಳಬೇಕು. ಕಠಿಣ ಎನಿಸುವ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಸಬೇಕು. ಕ್ರಮೇಣ, ಆತನಲ್ಲಿ ಬದಲಾವಣೆ ಉಂಟಾಗುತ್ತದೆ.

* ಮಗ ಓದಿನತ್ತ ಆಸಕ್ತಿ ತೋರುತ್ತಿಲ್ಲ. ಓದುವಂತೆ ಮಾಡುವುದು ಹೇಗೆ?

ಸದಾಶಿವ, ಬನಹಟ್ಟಿ.

– ಮಕ್ಕಳಿಗಾಗಿ ಆಕಾಶವಾಣಿ ಮತ್ತು ಟಿ.ವಿ.ಯಲ್ಲಿ ಶಾಲಾ ಪಠ್ಯದ ಪುನರ್‌ ಮನನ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಮಕ್ಕಳಿಗೆ ಅದನ್ನು ತೋರಿಸಿ. ನೀವು ಅವರ ಜತೆ ಕೆಲ ಹೊತ್ತು ಕುಳಿತುಕೊಂಡು ಕೇಳಿ. ಓದಿಗಾಗಿ ಮನೆಯಲ್ಲಿ ಸ್ಥಳವೊಂದನ್ನು ನಿಗದಿಪಡಿಸಿ. 30–45 ನಿಮಿಷಕ್ಕೊಮ್ಮೆ ವಿಶ್ರಾಂತಿ ನೀಡಿ. ಕ್ರಮೇಣ ಓದಿನತ್ತ ಆಸಕ್ತಿ ಬರುತ್ತದೆ.

* ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಇದರಿಂದ ಅನುಕೂಲವಾಗಿದೆಯೇ?

ಪ್ರಸಾದ್, ಕುಣಿಗಲ್, ತುಮಕೂರು. 

- ಆನ್‌ಲೈನ್‌ ತರಗತಿಗಳಿಂದ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಮೊಬೈಲ್‌ನಿಂದ ದೂರ ಇದ್ದು ಪಾಠ ಕೇಳಬೇಕು. ಇದರಿಂದ ಕಣ್ಣಿನ ಮೇಲೆ ಬೀರುವ ದುಷ್ಪರಿಣಾಮವನ್ನು ಕಡಿಮೆ ಮಾಡಬಹುದು. ಪ್ರತಿ 20ನಿಮಿಷಕ್ಕೊಮ್ಮೆ ಆನ್‌ಲೈನ್‌ ಪಾಠದಿಂದ ದೃಷ್ಟಿ ಬೇರೆಡೆ ಹರಿಸಿ ಕಣ್ಣುಗಳಿಗೆ ವಿರಾಮ ನೀಡಬೇಕು.

* ಮಕ್ಕಳು ಟಿವಿ, ಕಾರ್ಟೂನ್‌, ಮೊಬೈಲ್‌ಗಳ ಬಳಕೆ ಹೆಚ್ಚಾಗಿ ಮಾಡುತ್ತಿದ್ದಾರೆ. ಇದರ ಕಡಿವಾಣ ಹೇಗೆ?

ಮನೋಜ್‌, ದೇಶಪಾಂಡೆ ನಗರ, ಹುಬ್ಬಳ್ಳಿ. 

– ಮಕ್ಕಳು ಟಿವಿ ಹಾಗೂ ಮೊಬೈಲ್‌ನಲ್ಲಿ ಏನು ನೋಡಬೇಕು, ಎಷ್ಟು ನೋಡಬೇಕು ಎಂಬುದನ್ನು ಪಾಲಕರು ನಿರ್ಧರಿಸಬೇಕು. ಮೊಬೈಲ್‌ನಲ್ಲಿ ಗೇಮ್‌ಗಳು ಮಾತ್ರವಲ್ಲದೇ ಕಲಿಕಾ ಆ್ಯಪ್‌ಗಳಿವೆ. ಅವುಗಳ ಬಳಕೆಯನ್ನು ಹೇಳಿಕೊಡಿ. ಮಕ್ಕಳ ಮೊಬೈಲ್‌ ಬಳಕೆ ಬಗ್ಗೆ ಗಮನವಿರಲಿ ಆದರೆ ಅವರನ್ನು ಅನುಮಾನದಿಂದ ನೋಡಬೇಡಿ.

* ಟಿವಿ, ಮೊಬೈಲ್‌ ಹೊರತಾಗಿ ಮಕ್ಕಳನ್ನು ಬೇರೆಡೆ ಸೆಳೆಯಲು ಏನು ಮಾಡಬೇಕು ?

ಲತಾ, ಬಾಗಲಕೋಟೆ

– ಲಾಕ್‌ಡೌನ್‌ನಂತಹ ಕಷ್ಟಕರವಾದ ಈ ದಿನಗಳಲ್ಲಿ ಮಕ್ಕಳನ್ನು ಮನೆಯಲ್ಲೇ ಇಟ್ಟುಕೊಂಡು ನಿಭಾಯಿಸುವ ಒತ್ತಡ ಪೋಷಕರಿಗೂ ಇದೆ. ನಿಯಮಿತವಾಗಿ ಆಟವಾಡಿಸಲು ಪ್ರಯತ್ನಿಸಿ. ಒಂದೇ ತರಹದ ಚಟುವಟಿಕೆ ಬೇಡ. ಕ್ರಿಯಾತ್ಮಕವಾಗಿ ಅವರನ್ನು ಬೇರೆಡೆ ಸೆಳೆಯಿರಿ. ಊಟ, ನಿದ್ದೆಯ ಸಮಯವನ್ನು ಸ್ಥಿರವಾಗಿರುವಂತೆ ನೋಡಿಕೊಳ್ಳಿ.

* ಮಕ್ಕಳಿಗೆ ಬೇಸಿಗೆ ರಜೆಯ ಈ ಸಂದರ್ಭದಲ್ಲಿ ಆನ್‌ಲೈನ್‌ ತರಗತಿಗಳಿಂದ ಒತ್ತಡ ಆಗುತ್ತಿಲ್ಲವೇ?

ಪ್ರಮೋದ್, ಹುಬ್ಬಳ್ಳಿ.

– ಕೆಲವು ಮಕ್ಕಳಿಗೆ ಮಾತ್ರ ಆನ್‌ಲೈನ್‌ ತರಗತಿಗಳಿವೆ. ಈ ತರಗತಿಗಳು ಸ್ವಲ್ಪ ದಿನ ಮಾತ್ರ. ಶಾಲೆ, ಶಿಕ್ಷಕರೊಂದಿಗಿನ ಕೊಂಡಿ ಆಸಕ್ತಿಯನ್ನು ಉಳಿಸಿಕೊಳ್ಳಬೇಕಾದರೆ ಹೀಗೆ ಮಾಡಲೇಬೇಕು. ಇದು ತರಗತಿ ಶಿಕ್ಷಣಕ್ಕೆ ಪರ್ಯಾಯವಲ್ಲ. ಆದರೆ ಶಿಕ್ಷಣ ಇಲಾಖೆಗೆ ಸಹಾಯಕವಾಗಿ ಹಾಗೂ ಬೋಧನೆಗೆ ಪೂರಕವಾಗಿ ಮಾತ್ರ ಎಂಬುದನ್ನು ಅರ್ಥೈಸಿಕೊಳ್ಳಬೇಕು.

* ನಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬ ಬಿಎಸ್ಸಿ, ಮತ್ತೊಬ್ಬ ಎಸ್‌ಎಸ್‌ಎಲ್‌ಸಿ. ಪರೀಕ್ಷೆ ಗೊಂದಲ ಇರುವುದರಿಂದ ಓದುತ್ತಿಲ್ಲ. ಶೈಕ್ಷಣಿಕ ವರ್ಷ ಹಾಳಾಗುವ ಭೀತಿ ಕಾಡುತ್ತಿದೆ.

ಬಸವರಾಜ, ರಾಣೆಬೆನ್ನೂರು.

– ಪರೀಕ್ಷೆ ಬಗ್ಗೆ ಎಲ್ಲ ಮಕ್ಕಳಲ್ಲೂ ಗೊಂದಲವಿದೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಧೈರ್ಯ ತುಂಬಬೇಕು. ಸಮೀಪದಲ್ಲೇ ಶಿಕ್ಷಕರಿದ್ದರೆ ಅವರ ನೆರವು ಪಡೆಯಬೇಕು. ವರ್ತನೆಯಲ್ಲಿ ಸಮಸ್ಯೆಗಳು ಕಂಡು ಬಂದರೆ ಮನೋವೈದ್ಯರ ಸಲಹೆ ಪಡೆಯಿರಿ

* ಒಂದೂವರೆ ತಿಂಗಳಿಂದ ಮಕ್ಕಳು ಏನನ್ನೂ ಕಲಿಯುತ್ತಿಲ್ಲ. ಇದರಿಂದ ಸಮಸ್ಯೆ ಆಗಬಹುದೇ?

ಆದರ್ಶ, ಜಮಖಂಡಿ

–ಈಗ ಬೇಸಿಗೆ ರಜೆ ಇರುವುದರಿಂದ  ಮಕ್ಕಳ ಓದಿನ ಬಗ್ಗೆ ಚಿಂತೆ ಮಾಡಬೇಡಿ. ಆಟವಾಡಲು ಬಿಡಿ. ಪುನರ್ಮನನ ಮಾಡಿಸಿ. ಇಲ್ಲದಿದ್ದರೆ ಮರೆತು ಹೋಗುವುದು ಸಹಜ. ಮರೆತರೆಂದು ದಂಡಿಸಬೇಡಿ.

* ಮಕ್ಕಳನ್ನು ಮೊಬೈಲ್‌, ಟಿವಿ ವೀಕ್ಷಣೆ ಅಭ್ಯಾಸದಿಂದ ದೂರ ಇರಿಸೋದು ಹೇಗೆ?

ಹರ್ಷವರ್ದನ್‌, ಹುಬ್ಬಳ್ಳಿ

–ಮೊಬೈಲ್‌ಗೆ ದಾಸರಾದರೆ ಅವರನ್ನು ನಿಭಾಯಿಸುವುದು ಕಷ್ಟ. ಮೊಬೈಲ್‌ನಲ್ಲಿರುವ ಎಲೆಕ್ಟ್ರೋ ಮ್ಯಾಗ್ನೆಟಿಕ್‌ ವೇವ್ಸ್‌ಗಳಿಂದ ಮಿದುಳಿಗೂ ಹಾನಿಯಾಗುವ ಸಾಧ್ಯತೆ ಇದೆ. ಹಸಿವಿನ ಪರಿಜ್ಞಾನ ಇರುವುದಿಲ್ಲ. ಅವರಿಗೆ ಹಸಿವಾದಾಗಲೇ ಊಟ ಮಾಡಿಸಿ, ಊಟದ ಹೊತ್ತಿನಲ್ಲಿ ಟೀವಿ ನೋಡುವುದು, ಕುರುಕಲು ತಿಂಡಿ ಕೊಡುವುದು ಬೇಡ.

* ಕೊಳೆಗೇರಿಯಲ್ಲಿ ನಮ್ಮ ಶಾಲೆ ಇದೆ. ಹಿಂದುಳಿವರೇ ಓದುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಏನು ಮಾಡಬೇಕು.

ಶ್ರೀಧರ ಕಂಬಿ, ಜಮಖಂಡಿ

–ಮಕ್ಕಳಿಗೆ ಕಲಿಕಾ ಚಟುವಟಿಕೆಗಳನ್ನು ಹೇಳಿಕೊಡಿ. ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರ ಪಡೆದು, ಆನ್‌ಲೈನ್‌ ಪಾಠ ಹೇಳಿಕೊಡಲು ಪ್ರಯತ್ನಿಸಿ.

* ಮನೆಯಲ್ಲಿ ಇಬ್ಬರು ಮಕ್ಕಳಿದ್ದಾರೆ. ರಜೆಯಲ್ಲಿ ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ. ಟ್ಯೂಷನ್‌ ತರಗತಿಗಳು ಕೂಡ ಆರಂಭವಾಗಿಲ್ಲ. ಆದ್ದರಿಂದ ಮೊಬೈಲ್ ಗೇಮ್‌ಗಳಿಗೆ ಮಾರುಹೋಗುತ್ತಿದ್ದಾರೆ. ಹೇಗೆ ಸರಿಪಡಿಸಬೇಕು?

ಸುನೀಲ, ಜಮಖಂಡಿ.

-ಈ ಬೆಳವಣಿಗೆ ಕಲಿಕೆಗೆ ಬಹಳ ಸಮಸ್ಯೆ ಉಂಟುಮಾಡುತ್ತದೆ. ಪೋಷಕರು ಆಟದ ಮೂಲಕ ಕಲಿಕೆಗೆ ನೆರವಾಗುವಂತೆ ಯೋಜನೆ ರೂಪಿಸಿ. ಪುನರ್‌ಮನನ ಮಾಡಲು ಸಹಾಯ ಮಾಡಿ. 

* ಲಾಕ್‌ಡೌನ್‌ನಿಂದಲೇ ಮಕ್ಕಳಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಏನು ಮಾಡಬೇಕು?

ಸುನೀತಾ, ಬೆಳಗಾವಿ. 

– ಪೋಷಕರು ತಮ್ಮ ಕೆಲಸದಲ್ಲೇ ಮಗ್ನರಾದರೆ ಮಕ್ಕಳು ಏಕಾಂಗಿಯಾಗುತ್ತಾರೆ. ಬೇಸರ ಕಳೆಯಲು ಅನಿವಾರ್ಯವಾಗಿ ಮೊಬೈಲ್‌ನತ್ತ ಒಲವು ಬೆಳೆಸಿಕೊಳ್ಳುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಳಿ ಪ್ರಕಾರ ಯಾರಾದರೊಬ್ಬರು ಮಕ್ಕಳತ್ತ ಗಮನ ಹರಿಸಲೇಬೇಕು. ಒಂದೆಡೆ ಸುಮ್ಮನೆ ಕೂರುವುದು ಮಕ್ಕಳಿಂದ ಅಸಾಧ್ಯ. ಅದು ಸಹಜವೂ ಕೂಡ. ಆದ್ದರಿಂದ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ದೈಹಿಕ ಶ್ರಮ ಪಟ್ಟರೆ ಮೊಬೈಲ್‌, ಟಿವಿಗಳಿಂದ ದೂರ ಉಳಿಯುತ್ತಾರೆ.

* ಹದಿಹರೆಯದವರಲ್ಲಿ ಗಂಭೀರತೆಯೇ ಇಲ್ಲ. ಬೈಕ್‌ ತೆಗೆದುಕೊಂಡು ಅಡ್ಡಾಡುವುದು, ಪೋಷಕರ ಮಾತನ್ನು ಅಲ್ಲಗಳೆಯುತ್ತಾರೆ ಬಡ, ಮಧ್ಯಮ ಕುಟುಂಬಗಳಲ್ಲಿ ಆನ್‌ಲೈನ್‌ ಕಲಿಕೆಗೆ ವ್ಯವಸ್ಥೆ ಇಲ್ಲದ ಕಾರಣ, ಓದಿನತ್ತಲೂ ಗಮನ ಹರಿಸದೆ, ಕಾಲಾಹರಣ ಮಾಡುತ್ತಿದ್ದಾರೆ.

ಕುಶಾಲ್‌ ವಾಗ್ಮೋರೆ, ಜಮಖಂಡಿ. 

–ಇಂತಹ ಸಮಸ್ಯೆಗಳನ್ನು ಪರಿಗಣಿಸಿಯೇ ಸರ್ಕಾರ ಪಠ್ಯವನ್ನು ಆಕಾಶವಾಣಿ, ಟಿವಿ ಕಾರ್ಯಕ್ರಮಗಳ ಮೂಲಕ ಬೋಧಿಸುವ ಕಾರ್ಯ ಮಾಡಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ. ಮನೆಕೆಲಸಗಳನ್ನು ಹಂಚಿ, ಜವಾಬ್ದಾರಿ ಕೊಡಿ.

* ಮಕ್ಕಳು ಗೇಂ, ಕಾರ್ಟೂನ್‌ ಚಾನಲ್‌ಗಳನ್ನು ನೋಡುವ ಚಟ ಬೆಳೆಸಿಕೊಂಡಿದ್ದಾರೆ. ಊಟ ಬಿಡುವುದು, ಪ್ರಶ್ನಿಸಿದರೆ ಸಿಟ್ಟುಮಾಡಿಕೊಳ್ಳುತ್ತಾರೆ. ಹೇಗೆ ನಿಭಾಯಿಸಬೇಕು?

ಮಹಾಂತೇಶ, ಬೈಲಹೊಂಗಲ. 

ಮಕ್ಕಳಿಗೆ ಬೈಯ್ಯುವುದು, ಗದರಿಸುವುದು, ಒತ್ತಾಯ ಮಾಡುವುದರಿಂದ ಯಾವುದೇ ಪರಿಹಾರವಿಲ್ಲ. ಇದು ಮತ್ತಷ್ಟು ಸಮಸ್ಯೆಗೀಡು ಮಾಡುತ್ತದೆ. ಆದ್ದರಿಂದ ಮೊಬೈಲ್‌ಗಿಂತ ಹೆಚ್ಚು ಖುಷಿಕೊಡುವ ಕಾರ್ಯದಲ್ಲಿ ತೊಡಗಿಸಿ. ಮೊಬೈಲ್‌, ಟಿವಿ ಬಳಕೆಗೆ ಸಮಯ ನಿಗದಿ ಮಾಡಿ. ಹಠ ಮಾಡಿದರೆ ಮತ್ತೊಮ್ಮೆ ಮೊಬೈಲ್‌ ಕೊಡುವುದಿಲ್ಲ ಎಂದು ತಾಳ್ಮೆಯಿಂದಲೇ ಹೇಳಿ.

(ಫೋನ್‌ ಇನ್ ನಿರ್ವಹಣೆ: ರಶ್ಮಿ ಎಸ್, ಆರ್‌. ಮಂಜುನಾಥ್, ಎಂ. ಚಂದ್ರಪ್ಪ, ಓದೇಶ ಸಕಲೇಶಪುರ, ಸಬೀನಾ ಎ., ಸಂಧ್ಯಾರಾಣಿ ಎಚ್‌.ಎಂ.)

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು