ಭಾನುವಾರ, ಡಿಸೆಂಬರ್ 4, 2022
19 °C

ಪೇ ಮೇಯರ್ | ಕ್ಷಮೆಗೆ ರಜತ್ ನಿರಾಕರಣೆ: ಮೇಯರ್ ಕಚೇರಿ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ರಾಷ್ಟ್ರಪತಿ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ದುಂದುವೆಚ್ಚ ಮಾಡಿದೆ ಎಂದು ಆರೋಪಿಸಿ, ಮೇಯರ್ ಈರೇಶ ಅಂಚಟಗೇರಿ ವಿರುದ್ಧ ‘ಪೇ ಮೇಯರ್’ ಪೋಸ್ಟರ್ ಅಭಿಯಾನ ನಡೆಸಿದ್ದ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು, ಈ ಕುರಿತು ಮೇಯರ್ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ರಜತ್, ‘ಈರೇಶ ಅಂಚಟಗೇರಿ ಅವರೇ ನಾನು ಸಾವರ್ಕರ್ ಅಲ್ಲ, ರಜತ್. ಯಾವುದೇ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ನೀವು ಕೋಟಿ ಕೋಟಿ ಪರಿಹಾರಕ್ಕಾಗಿ ಮಾನನಷ್ಟ ಮೊಕದ್ದಮೆ ಹಾಕಿದರೂ, ನೀವು ಮಾಡಿರುವ ಕೋಟ್ಯಂತರ ರೂಪಾಯಿಗಳ ಅವ್ಯವಹಾರದ ಕೆಲಸವನ್ನು ಜನರ ಪರವಾಗಿ ನಾನು ಕೇಳೇ ಕೇಳುತ್ತೇನೆ. ಅದು ನಮಗೆ ಸಂವಿಧಾನ ಕೊಟ್ಟಿರುವ ಹಕ್ಕು’ ಎಂದು ಹೇಳಿದ್ದಾರೆ.

ಅಭಿಯಾನದ ವಿರುದ್ಧ ಕೆಂಡಾಮಂಡಲವಾಗಿದ್ದ ಮೇಯರ್ ಅವರು, ಉಳ್ಳಾಗಡ್ಡಿಮಠ ಸೇರಿದಂತೆ ಮೂವರು ಕಾಂಗ್ರೆಸ್ ಮುಖಂಡರಿಗೆ ಅ. 3ರಂದು ಮಾನಹಾನಿ ನೋಟಿಸ್ ಕಳಿಸಿದ್ದರು. ಪರಿಹಾರವಾಗಿ ಮೂವರೂ ತಲಾ ₹1 ಕೋಟಿಯನ್ನು ಪಾಲಿಕೆಗೆ ಸಂದಾಯ ಮಾಡಬೇಕು. 7 ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಪ್ರತಿಭಟನೆ: ನೋಟಿಸ್ ಖಂಡಿಸಿ, ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಆವರಣದಲ್ಲಿರುವ ಮೇಯರ್ ಕಚೇರಿ ಎದುರು ‘ಐ ಆ್ಯಮ್ ನಾಟ್ ಸಾವರ್ಕರ್, ಐ ಆ್ಯಮ್ ರಜತ್’ ಎಂಬ ಫಲಕಗಳನ್ನು ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು. ಮೇಯರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಡರಾದ ಸುನೀಲ ಮಠಪತಿ, ಪುಷ್ಟರಾಜ ಹಳ್ಳಿ, ಮಾಲತೇಶ ಕಂಬಾರ, ಜ್ಯೋತಿ ವಾಲಿಕಾರ, ಸೈಫ್ ಯರಗಟ್ಟಿ, ಪ್ರಕಾಶ ಮಾಯಕರ, ಲಕ್ಷ್ಮಣ ಗಡ್ಡಿ, ದೀಪಕ ಮೆಹರವಾಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು