ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿ ಇಲ್ಲದಿದ್ದರೂ ಖಾಸಗಿ ಆಸ್ಪತ್ರೆಗಳಿಗೆ ಅನುಮತಿ

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ ಒಪ್ಪಿಗೆ, ವೈದ್ಯರಲ್ಲಿ ಆತಂಕ
Last Updated 24 ಜೂನ್ 2020, 15:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಅವಳಿ ನಗರಗಳ 22 ಆಸ್ಪತ್ರೆಗಳಿಗೆ ಅನುಮತಿ ನೀಡಿದೆ. ಆದರೆ, ಬಹಳಷ್ಟು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಮತ್ತು ಅಗತ್ಯ ಸೌಲಭ್ಯಗಳೇ ಇಲ್ಲ! ಇನ್ನೂ ಕೆಲವು ಸಣ್ಣ ಆಸ್ಪತ್ರೆಗಳಾಗಿದ್ದು, ಅಲ್ಲಿ ಚಿಕಿತ್ಸೆಗೆ ತಯಾರಿಯೇ ಆಗಿಲ್ಲ.

ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡುವ ಮುನ್ನ ರಾಜ್ಯ ಸರ್ಕಾರ ಆಸ್ಪತ್ರೆಗಳಲ್ಲಿ ಇರುವ ಸೌಲಭ್ಯಗಳನ್ನು ಪರಿಶೀಲಿಸಿಲ್ಲ. ಕಣ್ಣು ಮುಚ್ಚಿಕೊಂಡು ಅನುಮತಿ ನೀಡಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಸೌಲಭ್ಯಗಳ ಕೊರತೆಯಿಂದ ಸೋಂಕಿತ ವ್ಯಕ್ತಿ ಮೃತಪಟ್ಟರೆ ಆಸ್ಪತ್ರೆಗಳ ವೈದ್ಯರು ದಂಡನೆಗೆ ಗುರಿಯಾಗಬೇಕಾಗುತ್ತದೆ ಎಂದು ವೈದ್ಯರು ಆತಂಕದಿಂದ ಹೇಳುತ್ತಿದ್ದಾರೆ.

ಕಣ್ಣಿನ ಆಸ್ಪತ್ರೆಗಳಿಗೆ ಮತ್ತು ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಮತಿ ಕೊಡಲಾಗಿದೆ. ಇದರಿಂದ ಕಣ್ಣಿನ ಚಿಕಿತ್ಸೆಗೆ ಬರುವ ರೋಗಿಗಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ. ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಪಟ್ಟಿಯಲ್ಲಿರುವ ಪ್ರಮುಖ ಆಸ್ಪತ್ರೆಗಳಿಗೆ ಕೋವಿಡ್‌ ಚಿಕಿತ್ಸೆಗೆ ಅನುಮತಿ ಕೊಡಲಾಗಿದೆ. ಆದರೆ, ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳನ್ನು ಪರಿಶೀಲಿಸಿಯೇ ಇಲ್ಲ.

ಹೆಸರು ಹೇಳಲು ಬಯಸದ ವೈದ್ಯರೊಬ್ಬರು ಈ ಕುರಿತು ಪ್ರತಿಕ್ರಿಯಿಸಿ ‘ಕೋವಿಡ್‌ 19 ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಐಸಿಯು, ವೆಂಟಿಲೇಟರ್‌, ತಜ್ಞ ವೈದ್ಯರು ಮತ್ತು ಫಿಜಿಷಿಯನ್‌ ಅತ್ಯಗತ್ಯವಾಗಿ ಬೇಕಾಗುತ್ತದೆ. ಪ್ರಮುಖ ಆಸ್ಪತ್ರೆಗಳನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟರೆ ಬೇರೆ ರೋಗಿಗಳು ಚಿಕಿತ್ಸೆಯಿಲ್ಲದೆ ಸಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ’ ಎಂದರು.

‘ನಮ್ಮ ಆಸ್ಪತ್ರೆಗೆ ನಿತ್ಯ ಶೇ 30ರಷ್ಟು ಮಕ್ಕಳು, ಶೇ 50ರಿಂದ 60ರಷ್ಟು ಹಿರಿಯ ನಾಗರಿಕರು ಬರುತ್ತಾರೆ. ಇಲ್ಲಿ ಕೋವಿಡ್‌ಗೆ ಚಿಕಿತ್ಸೆ ನೀಡಿದರೆ ಮಕ್ಕಳು ಮತ್ತು ಹಿರಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಸಿಗುವುದು ಕೂಡ ದುಸ್ತರವಾಗುತ್ತದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಾಗಿ ನಾವು ಹಿಂದೇಟು ಹಾಕುವುದಿಲ್ಲ. ಆದರೆ, ವಾಸ್ತವವನ್ನುಸರ್ಕಾರ ಯೋಚಿಸಬೇಕಿತ್ತು’ ಎಂದುಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ– ಆಸ್ಪತ್ರೆಯ ವೈದ್ಯ ಶ್ರೀನಿವಾಸ ಜೋಶಿ ಹೇಳಿದರು.

ಎಚ್‌ಸಿಜಿ ಎನ್‌ಎಂಆರ್‌ ಕ್ಯಾನ್ಸರ್‌ ಆಸ್ಪತ್ರೆಯ ರೇಡಿಯೇಷನ್‌ ಅಂಕಾಲಜಿ ವಿಭಾಗದ ಮುಖ್ಯಸ್ಥ ಸಂಜಯ್ ಮಿಶ್ರಾ ಪ್ರತಿಕ್ರಿಯಿಸಿ ‘ನಮ್ಮ ಆಸ್ಪತ್ರೆಗಳಲ್ಲಿ ಸೀಮಿತ ಸೌಲಭ್ಯಗಳಿವೆ. ಕ್ಯಾನ್ಸರ್ ಸಂಬಂಧಿತ ಚಿಕಿತ್ಸೆ ಪಡೆಯುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊರೊನಾ ಸೋಂಕಿತರಿಗೂ ಚಿಕಿತ್ಸೆ ನೀಡಿದರೆ ಕಷ್ಟವಾಗುತ್ತದೆ’ ಎಂದರು.

***

ಎಬಿಆರ್‌ಕೆಯಲ್ಲಿ ನೋಂದಣಿಯಾಗಿರುವ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದೆ. ಆಸ್ಪತ್ರೆಗಳು ಒಪ್ಪಿದರೆ ಸೋಂಕಿತರನ್ನು ಕಳುಹಿಸಲಾಗುವುದು. ಇದುವರೆಗೆ ಯಾರೂ ಸಂಪರ್ಕಿಸಿಲ್ಲ.

- ಡಾ. ಯಶವಂತ್ ಮದಿನಕರ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

***

ಸೋಂಕಿತರ ಚಿಕಿತ್ಸೆಗೆ ಹೆಚ್ಚು ಸಲಕರಣೆಗಳು ಬೇಕಾಗುವುದಿಲ್ಲ. ಶಸ್ತ್ರಚಿಕಿತ್ಸೆ ಮಾಡುವಂಥದ್ದೂ ಇರುವುದಿಲ್ಲ. ಈ ಕುರಿತು ಚರ್ಚಿಸಲು ಗುರುವಾರ ವೈದ್ಯರ ಜೊತೆ ಸಭೆ ನಡೆಸುತ್ತೇನೆ.

- ದೀಪಾ ಚೋಳನ್‌,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT