ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೃಷಿ ವೆಚ್ಚ ಹೆಚ್ಚಳ

ರೈತಾಪಿ ಸಮುದಾಯಕ್ಕೆ ಕಹಿ ಸುದ್ದಿ
Published 17 ಜೂನ್ 2024, 5:36 IST
Last Updated 17 ಜೂನ್ 2024, 5:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆ, ಬರಗಾಲದಿಂದಾಗಿ ಕಂಗೆಟ್ಟ ರೈತ ಸಮುದಾಯಕ್ಕೆ ಇಂಧನ ದರ ಏರಿಕೆ ಎಂಬ ಮತ್ತೊಂದು ಕಹಿ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ.

ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಕೈಸೇರಿಲ್ಲ; ಬೆಳೆ ವಿಮೆ ಪರಿಹಾರ, ಬರ ಪರಿಹಾರವೂ ಎಲ್ಲರಿಗೂ ಬಂದಿಲ್ಲ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಆಗಿದ್ದರಿಂದ ಬಿತ್ತನೆಗೆ ಸಿದ್ಧವಾಗುವ ಹೊತ್ತಿನಲ್ಲೇ ಕೃಷಿಗೆ ಅತ್ಯಾವಶ್ಯಕವಾದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದೆ.

ಶನಿವಾರ ರಾತ್ರಿಯಿಂದಲೇ ಇಂಧನ ದರವನ್ನು ಸರಾಸರಿ ₹3 ಹೆಚ್ಚಿಸಲಾಗಿದೆ. ₹99.83 ಇದ್ದ ಪೆಟ್ರೋಲ್ ದರ ಇದೀಗ ₹102.85 ಹಾಗೂ ₹85.93 ಇದ್ದ ಡೀಸೆಲ್ ದರ ₹88.93 ಆಗಿದೆ.

ಉಳುಮೆ, ಕೀಟ ನಾಶಕ ಸಿಂಪಡಣೆ, ಕಟಾವು, ಹರಗುವುದು ಹೀಗೆ ಕೃಷಿಯ ಪ್ರತಿಯೊಂದು ಹಂತದಲ್ಲಿಯೂ ಬಹುತೇಕ ರೈತರು ಟ್ರ್ಯಾಕ್ಟರ್ ಮತ್ತಿತರ ಯಂತ್ರಗಳನ್ನೇ ಅವಲಂಬಿಸಿದ್ದಾರೆ.

‘ಉಚಿತ ಬಸ್ ಪ್ರಯಾಣ ಆರಂಭ ಆದಾಗಿನಿಂದ ಮಹಿಳೆಯರೂ ದುಡಿಯಲು ಹುಬ್ಬಳ್ಳಿಗೇ ಹೋಗುತ್ತಿದ್ದಾರೆ. ಕೃಷಿಗೆ ಕೂಲಿ ಕಾರ್ಮಿಕರು ಸಿಗುವುದೇ ಇಲ್ಲ. ಎಲ್ಲದಕ್ಕೂ ಯಂತ್ರವನ್ನೇ ಬಳಸಬೇಕಿದೆ. ಡೀಸೆಲ್ ದರ ಒಮ್ಮೆಲೆ ಜಾಸ್ತಿ ಮಾಡಿದ್ದು ಸಣ್ಣ ಹಿಡುವಳಿದಾರರಿಗೆ ಹೊರೆಯಾಗಿದೆ’ ಎನ್ನುತ್ತಾರೆ ಕುಂದಗೋಳ ತಾಲ್ಲೂಕು ಯರಗುಪ್ಪಿ ಗ್ರಾಮದ ರೈತ ಮೃತ್ಯುಂಜಯ ಶಲವಡಿ.

‘ಬಿತ್ತನೆ, ಹರಗುವ ಕಾರ್ಯಕ್ಕೆ ಪ್ರತಿ ಎಕರೆಗೆ ಕನಿಷ್ಠ ಮೂರು ಲೀಟರ್ ಇಂಧನ ಬೇಕು. ನೇಗಿಲು ಹೊಡೆಯುವುದಕ್ಕೆ 14–15 ಲೀಟರ್ ವರೆಗೂ ಬೇಕಾಗುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಸಹಜವಾಗಿಯೇ ಹೆಚ್ಚಳವಾಗುತ್ತದೆ’ ಎಂದು ನವಲಗುಂದದ ರೈತ ಶಿವಾನಂದ ಕೊಳಲಿನ ಇಂಧನದ ಮೇಲಿನ ಅವಲಂಬನೆಯನ್ನು ತೆರೆದಿಟ್ಟರು.

ಕುಟುಂಬದ ಜಮೀನು ಮಾತ್ರವೇ ಅಲ್ಲದೇ 230 ಎಕರೆಗೂ ಹೆಚ್ಚು ಭೂಮಿಯನ್ನು ಲಾವಣಿ ಪಡೆದಿರುವ ಶಿವಾನಂದ ಅವರು ಹತ್ತಿ, ಕಡಲೆ, ಹೆಸರು, ಗೋವಿನಜೋಳ ಬೆಳೆಯುತ್ತಾರೆ. ಇಂಧನ ದರ ಹೆಚ್ಚಳದಿಂದಾಗಿ ಕೃಷಿ ಚಟುವಟಿಕೆಗಳಿಗಾಗಿ ಅವರು ಈಗ ವಾರ್ಷಿಕ ಕನಿಷ್ಠ ₹35 ಸಾವಿರ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಏನೇ ಆದರೂ ಕೃಷಿ ಕಾಯಕವನ್ನಂತೂ ಬಿಡಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು.

ಎಲ್ಲ ಖರ್ಚು ಮಾಡಿಯೂ ರೈತರ ಬಾಳು ಹಸನಾಗುತ್ತದೆ ಎಂಬ ಖಾತ್ರಿ ಇಲ್ಲ. ಒಳ್ಳೆಯ ಫಸಲು ಬಂದಾಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ರೈತನಿಗೆ ಕಷ್ಟ ದುಡಿಮೆ ತಪ್ಪಿದ್ದಲ್ಲ
ಶಿವಾನಂದ ಕೊಳಲಿನ ರೈತ
ಎತ್ತುಗಳನ್ನು ಬಳಸುತ್ತಿದ್ದ ಕಾಲದಲ್ಲಿ ಖರ್ಚು ಕಡಿಮೆ ಇತ್ತು. ಯಂತ್ರಗಳ ಅವಲಂಬನೆಯಿಂದಾಗಿ ವೆಚ್ಚ ಹೆಚ್ಚಾಗಿದೆ. ಕೃಷಿ ಚಟುವಟಿಕೆ ಚುರುಕಾಗುವ ಹೊತ್ತಿನಲ್ಲೇ ಡೀಸೆಲ್ ಬೆಲೆ ಹೆಚ್ಚಳದಿಂದ ಹೊರೆ ಹೆಚ್ಚಾಗಿದೆ
ಮೈಲಾರೆಪ್ಪ ವೈದ್ಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT