ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: 89 ವರ್ಷದ ಅಜ್ಜನಿಗೆ ಪಿಎಚ್‌.ಡಿ ಪದವಿ

Published 10 ಫೆಬ್ರುವರಿ 2024, 19:09 IST
Last Updated 10 ಫೆಬ್ರುವರಿ 2024, 19:09 IST
ಅಕ್ಷರ ಗಾತ್ರ

ಧಾರವಾಡ: ಬರೋಬ್ಬರಿ 89 ವರ್ಷದ ದೊಡಮನಿ ಮಾರ್ಕಂಡೇಯ ಯಲ್ಲಪ್ಪ ಮಂಡಿಸಿದ ‘ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ’ ಮಹಾಪ್ರಬಂಧ‌ಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿಗೆ ಅಂಗೀಕರಿಸಿದೆ. ಇಳಿ ವಯಸ್ಸಿನಲ್ಲಿ ಅವರು 18 ವರ್ಷ ಅಧ್ಯಯನ ನಡೆಸಿದ್ದಾರೆ.

2006 ನವೆಂಬರ್‌ನಲ್ಲಿ ಪಿಎಚ್‌.ಡಿ ಅಧ್ಯಯನಕ್ಕೆ ಮಾರ್ಕಂಡೇಯ ಅವರು ನೋಂದಣಿ ಮಾಡಿಸಿದರು. ಆದರೆ, ಮಾರ್ಗದರ್ಶಕರಾಗಿದ್ದ ಕರ್ನಾಟಕ ಕಾಲೇಜಿನ ಪ್ರೊ.ತಳವಾರ ನಿಧನರಾದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್‌.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಎನ್‌.ಹಳ್ಳಿ (ನಿಂಗಪ್ಪ ಮುದೇನೂರು) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಂದುವರಿಸಿದರು.

ಮಾರ್ಕಂಡೇಯ ಅವರು ಮಹಾಪ್ರಬಂಧ ಸಿದ್ಧಪಡಿಸಿ ಕಳೆದ ವರ್ಷ ನವೆಂಬರ್‌ 9ರಂದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಮೌಖಿಕ ಪರೀಕ್ಷೆ ಈಚೆಗೆ ನಡೆದು, ಫೆಬ್ರುವರಿ 8ರಂದು ಪದವಿಗೆ ಅಂಗೀಕರಿಸಲಾಯಿತು.

‘ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ನನಗೆ ನಂತರ ಧಾರವಾಡಕ್ಕೆ ವರ್ಗಾವಣೆಯಾಯಿತು. ಧಾರವಾಡದಲ್ಲಿ ಪಿಯುಸಿ, ಬಿ.ಎ, ಎಂ.ಎ, ಬಿ.ಇಡಿ ಅಧ್ಯಯನ ಮಾಡಿದೆ. ಡಯೆಟ್‌ ಪ್ರಶಿಕ್ಷಕನಾಗಿ ಕಾರ್ಯನಿರ್ವಹಿಸಿ 1994ರಲ್ಲಿ ನಿವೃತ್ತನಾದೆ. ಈವರೆಗೆ 26 ಕೃತಿಗಳನ್ನು ಬರೆದಿದ್ದೇನೆ. ‘ಸಮಗಾರ ಹರಳಯ್ಯ’ ಕುರಿತು ಪತ್ರಿಕೆಯೊಂದನ್ನು ನಿರ್ವಹಿಸುತ್ತಿದ್ದೇನೆ’ ಎಂದು ದೊಡಮನಿ ಮಾರ್ಕಂಡೇಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನಗಿಂತ 36 ವರ್ಷ ಹಿರಿಯರಾದ ಮಾರ್ಕಂಡೇಯ ಅವರಿಗೆ ಮಾರ್ಗದರ್ಶನ ನೀಡಿದ್ದು ಮರೆಯಲಾಗದ ಕಾರ್ಯ. ಡೋಹರ ಕಕ್ಕಯ್ಯ ಅವರದ್ದು ಆರು ವಚನಗಳು ಮಾತ್ರ ಇವೆ. ಶರಣ ಚಳವಳಿಯಲ್ಲಿ ಕಕ್ಕಯ್ಯ ಅವರು ವಚನ ಸಾಹಿತ್ಯವನ್ನು ಕಾಪಿಟ್ಟು ಸಂರಕ್ಷಿಸಿದರು. ಮಾರ್ಕಂಡೇಯ ಅವರು ಕ್ಷೇತ್ರ ಕಾರ್ಯದಲ್ಲಿ ಇಡೀ ರಾಜ್ಯವನ್ನು ಸುತ್ತಾಡಿ ಎಲ್ಲ ಮಾಹಿತಿ ಕಲೆ ಹಾಕಿ ಮಹಾಪ್ರಬಂಧ ಸಿದ್ಧಪಡಿಸಿದ್ದಾರೆ’ ಎಂದು ನಿಂಗಪ್ಪ ಮುದೇನೂರು ‘ಪ್ರಜಾವಾಣಿ’ಗೆ ತಿಳಿಸಿದರು.

ದೊಡಮನಿ ಮಾರ್ಕಂಡೇಯ ಅವರ ಪಿಎಚ್‌.ಡಿ ಮಹಾಪ್ರಬಂಧ ಅಂಗೀಕಾರವಾಗಿದೆ. 89 ವರ್ಷ ವಯಸ್ಸಿನಲ್ಲಿ ಪಿಎಚ್‌.ಡಿ ಪಡೆದವರು ರಾಜ್ಯದ ಇತರ ಯಾವ ವಿಶ್ವವಿದ್ಯಾಲಯದಲ್ಲೂ ಇರಲಿಕ್ಕಿಲ್ಲ.

ಪ್ರೊ.ಕೆ.ಬಿ.ಗುಡಸಿ ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ

- ಪಿಎಚ್‌.ಡಿ ಮಾಡಬೇಕು ಎಂಬ ಗುರಿ ಇತ್ತು. 4 ವರ್ಷಗಳಲ್ಲಿ ಪೂರೈಸಬೇಕಿತ್ತು. ಕೆಲ ತೊಡಕುಗಳಿಂದ ತಡವಾಯಿತು. ಅಧ್ಯಯನ ಕಾರ್ಯ ಪೂರ್ಣಗೊಳಿಸಲು ವಿಶ್ವವಿದ್ಯಾಲಯದ ಸಹಕಾರ ಸಿಕ್ಕಿತು.

ದೊಡಮನಿ ಮಾರ್ಕಂಡೇಯ ಸಂಶೋಧನಾ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT