ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಚೌರ್ಯ ಆರೋಪ: ವಿವರ ನೀಡುವಂತೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪತ್ರ

Published 12 ಆಗಸ್ಟ್ 2023, 16:37 IST
Last Updated 12 ಆಗಸ್ಟ್ 2023, 16:37 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ಕೃತಿಚೌರ್ಯ ಮಾಡಿದ್ದಾರೆ ಎಂದು ಪ್ರೊ.ಓ.ಕೊಟ್ರೇಶ, ಪ್ರೊ.ಕೆ.ಎಸ್‌.ಕಟಗಿ ಎಂಬುವರಿಗೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ದೂರಿಗೆ ಸಂಬಂಧಿಸಿದಂತೆ ವಿವರ ನೀಡುವಂತೆ ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ.

ವಿಶ್ವವಿದ್ಯಾಲಯದ ರಾಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ (ಹಾಲಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ) ಎಸ್‌.ಎಂ.ತುವಾರ, ಪ್ರಾಧ್ಯಾಪಕಿ (ಹಾಲಿ ಧಾರವಾಡ ಕರ್ನಾಟಕ ವಿಜ್ಞಾನ ವಿದ್ಯಾಲಯದ ಪ್ರಾಚಾರ್ಯೆ) ಎಸ್‌.ಎಂ.ಸಾಳುಂಕೆ ಹಾಗೂ ರಾಸಾಯನ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ಜಿ. ಕಲಾಖಾಂಬಕರ ವಿರುದ್ಧ ಆರು ಪುಟಗಳ ವಿಸ್ತೃತ ದೂರು ಸಲ್ಲಿಸಿದ್ದಾರೆ.

‘ಈ ಮೂವರೂ ಪ್ರಾಧ್ಯಾಪಕರು ‘ಕೆಮ್‌ ಫೋರಂ–2018’ (Chem Forum-2018 ) ಪುಸ್ತಕದಿಂದ ಹಲವು ಭಾಗಗಳನ್ನು ನಕಲು ಮಾಡಿ ‘ಎಕ್ಸ್‌ಪೆರಿಮೆಂಟ್ಸ್‌ ಇನ್‌ ಕೆಮಿಸ್ಟ್ರಿ’ (Experiments In Chemistry) ಪುಸ್ತಕ ಪ್ರಕಟಿಸಿದ್ಧಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸರಾಂಗದಿಂದ ಹಣಕಾಸಿನ ನೆರವು ಪಡೆದು, ಈ ಪುಸ್ತಕ ಪ್ರಕಟಿಸಿದ್ದಾರೆ. ಪುಸ್ತಕದ ಹಸ್ತಪ್ರತಿಯನ್ನು ಪರಿಣಿತರ ಪರಿಶೀಲನೆಗೆ ಕಳುಹಿಸದೆ, ಅವರ ಶಿಫಾರಸು ಪಡೆಯದೆ ಸಭೆಯಲ್ಲಿ ಪ್ರಕಟಣೆಗೆ ತೀರ್ಮಾನಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಸಾರಾಂಗದ ನಿಯಮವನ್ನು ಗಾಳಿಗೆ ತೂರಿ ಸ್ವಜನಪಕ್ಷಪಾತ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

‘ಕೆಮ್‌ ಫೋರಂ–2018’ ಪುಸ್ತಕದ ಸಂಪಾದಕೀಯ ಮಂಡಳಿಯಲ್ಲಿದ್ದ 18 ಪ್ರಾಧ್ಯಾಪಕರ ಪೈಕಿ 6 ಪ್ರಾಧ್ಯಾಪಕರು ಪುಸ್ತಕದ ಕೃತಿ ಚೌರ್ಯಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳೊಂದಿಗೆ 2022 ಮಾರ್ಚ್‌ 21ರಂದು ವಿಶ್ವವಿದ್ಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಪರಿಶೀಲನಾ ಸಮಿತಿ ರಚಿಸದೆ, ದೂರನ್ನು ಕಡೆಗಣಿಸಿದೆ. ಕರ್ನಾಟಕ ವಿ.ವಿ ಕುಲಪತಿ ಕೆ.ಬಿ.ಗುಡಸಿ, ಕುಲಸಚಿವ ಯಶಪಾಲ್‌ ಕ್ಷೀರಸಾಗರ್‌ ಅವರು ಕೃತಿ ಚೌರ್ಯ ಆರೋಪ ಎದುರಿಸುತ್ತಿರುವವರನ್ನು ರಕ್ಷಣೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ನಿಯಮಗಳಂತೆ ಕೃತಿಚೌರ್ಯ ಪರಿಶೀಲನಾ ಸಮಿತಿಯಿಂದ ಪರಿಶೀಲನೆ ಮಾಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT