ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ರೈತರಿಗೆ ಅನುಕೂಲ: ಕುಮಾರಸ್ವಾಮಿ

Published 18 ಜೂನ್ 2024, 14:17 IST
Last Updated 18 ಜೂನ್ 2024, 14:17 IST
ಅಕ್ಷರ ಗಾತ್ರ

ಧಾರವಾಡ: ‘ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನಾಲ್ಕು ತಿಂಗಳಿಗೊಮ್ಮೆ ರೈತ ಕುಟುಂಬಗಳಿಗೆ ತಲಾ ₹ 2 ಸಾವಿರ ನೀಡಲಾಗುತ್ತಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿಸಲು, ಕೃಷಿ ಉಪಕರಣಗಳನ್ನು ಬಾಡಿಗೆಗೆ ಪಡೆಯಲು ಅನುಕೂಲವಾಗುತ್ತದೆ’ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ನಿಧಿಯ 17ನೇ ಕಂತು ಬಿಡುಗಡೆ ಸಮಾರಂಭದ ನೇರಪ್ರಸಾರವನ್ನು ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವೀಕ್ಷಿಸಿ ಅವರು ಮಾತನಾಡಿದರು. 2019ರಲ್ಲಿ ಈ ಯೋಜನೆ ಪ್ರಾರಂಭವಾಯಿತು. 17ನೇ ಕಂತು ಬಿಡುಗಡೆ ಸಮಾರಂಭದಲ್ಲಿ ಸಾಂಕೇತಿಕವಾಗಿ ಈ ದಿನ ₹ 1458 ಕೋಟಿ ಹಣವನ್ನು ರೈತರಿಗೆ ಪ್ರಧಾನಿ ಮೋದಿ ‌ಬಿಡುಗಡೆ ಮಾಡಿದ್ದಾರೆ. 17ನೇ ಕಂತಿನಲ್ಲಿಒಟ್ಟು ₹ 20 ಸಾವಿರ ಕೋಟಿ ಹಣ ರೈ‌ತರ ಖಾತೆಗೆ ಜಮೆಯಾಗುತ್ತದೆ ಎಂದು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಈ ಯೋಜನೆಯಡಿ ಒಂದು ಲಕ್ಷಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ₹ ‌20 ಕೋಟಿ ಹಣ ಪಾವತಿಯಾಗುತ್ತದೆ. ಕರ್ನಾಟಕದಲ್ಲಿ 45 ಲಕ್ಷ ರೈತ ಕುಟುಂಬಗಳಿಗೆ ಸುಮಾರು 350 ಕೋಟಿ ಹಣ ಜಮೆಯಾಗುತ್ತದೆ. ದೇಶದಲ್ಲಿಒಟ್ಟು 9.58 ಕೋಟಿ ರೈತ ಕುಟುಂಬಗಳಿಗೆ ₹ 20 ಸಾವಿರ ಕೋಟಿ ಹಣ ಪಾವತಿಯಾಗುತ್ತದೆ ಎಂದರು.

ಈ ಯೋಜನೆಯಡಿ ಮೂರು ಕಂತುಗಳಲ್ಲಿ ವರ್ಷಕ್ಕೆ ₹ 6ಸಾವಿರ ರೈತ ಕುಟಂಬಕ್ಕೆ ಜಮೆಯಾಗುತ್ತದೆ. ನೇರ ನಗದು ವರ್ಗಾವಣೆ ( ಡಿಬಿಟಿ) ಮೂಲಕ ನೇರವಾಗಿ ರೈತರ ಖಾತೆಗೆ ಪಾವತಿಯಾಗುತ್ತದೆ. 2019ರಿಂದ 16 ಕಂತುಗಳಲ್ಲಿ ₹ 3.02 ಲಕ್ಷ ಕೋಟಿ ರೈತರ ಖಾತೆಗೆ ಜಮೆಯಾಗಿದೆ ಎಂದರು.

ರೇಣುಕಾ ಹುಬ್ಬಳ್ಳಿ, ಶಿಲ್ಪಾ ಹೊಸವಕ್ಕಲ, ಸಬಿಹಾ ಬೇಗಂ, ಹಾಗೂ ಉಮಾ ಫಿರೋಜ ಅವರಿಗೆ ಕೃಷಿ ಸಖಿ ಪ್ರಮಾಣ ಪತ್ರ ವಿತರಿಸಲಾಯಿತು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್‌.ಪಾಟೀಲ್‌, ಕ್ಷೇತ್ರ ವಿಸ್ತರಣಾಧಿಕಾರಿ ಎಸ್‌.ಎಸ್‌.ಅಂಗಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT