ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

315 ಮೊಬೈಲ್‌ ಹಸ್ತಾಂತರ; ಸಂತೃಪ್ತ ಭಾವ

ಒಂದು ವರ್ಷದಲ್ಲಿ 1526 ಮೊಬೈಲ್‌ ಕಳವು ದೂರು ದಾಖಲು, ಶೇ 20ರಷ್ಟು ಮೊಬೈಲ್‌ ಪತ್ತೆ
Published 19 ಜೂನ್ 2024, 15:57 IST
Last Updated 19 ಜೂನ್ 2024, 15:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದು ಹೋದ ಮೊಬೈಲ್‌ ಪತ್ತೆ ಹಚ್ಚುವಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸರು ಸಕ್ರಿಯವಾಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 315 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸ್ದಾರರಿಗೆ ಮರಳಿಸಿದ್ದಾರೆ.

ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳ 1,526 ಸಾರ್ವಜನಿಕರು ಒಂದು ವರ್ಷದ ಅವಧಿಯಲ್ಲಿ ಅವಳಿನಗರದಲ್ಲಿ ಮೊಬೈಲ್‌ ಕಳೆದುಕೊಂಡಿದ್ದರು. ಅವರಲ್ಲಿ ಬಹುತೇಕರು ಸಿಇಐಆರ್‌ (ಸೆಂಟ್ರಲ್‌ ಇಕ್ವಿಪ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌) ಪೋರ್ಟಲ್‌ನಲ್ಲಿ ಮೊಬೈಲ್‌ನ ಐಎಂಇಐ ನಂಬರ್‌ ಸಮೇತ ದೂರು ದಾಖಲಿಸಿದ್ದರು. ಕೆಲವರು ಸಮೀಪದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಸೈಬರ್‌ ಕ್ರೈಂ ಠಾಣೆಯ ನೋಡಲ್‌ ಅಧಿಕಾರಿ ನೇತೃತ್ವದ ತಾಂತ್ರಿಕ ಸಿಬ್ಬಂದಿ, ಪೋರ್ಟಲ್‌ ಸಹಾಯದಿಂದ ₹49 ಲಕ್ಷ ಮೌಲ್ಯದ ಶೇ 20ರಷ್ಟು ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ.

100 ಕ್ಕಿಂತ ಹೆಚ್ಚು ಮೊಬೈಲ್‌ಗಳನ್ನು ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೇಲಂಗಾಣ ರಾಜ್ಯಗಳಿಂದ ಕೂರಿಯರ್‌ ಮೂಲಕ ತರಿಸಿಕೊಂಡಿದ್ದರೆ, 35 ಮೊಬೈಲ್‌ಗಳನ್ನು ಸಾರ್ವಜನಿಕರೇ ಖುದ್ದಾಗಿ ಸೈಬರ್‌ ಕ್ರೈ ಠಾಣೆಗೆ ಹಾಗೂ ಕಮಿಷನರ್‌ ಕಚೇರಿಯಲ್ಲಿರುವ ತಾಂತ್ರಿಕ ಸಿಬ್ಬಂದಿ ವಿಭಾಗಕ್ಕೆ ತಂದು ಕೊಟ್ಟಿದ್ದಾರೆ. ಉಳಿದ ಮೊಬೈಲ್‌ಗಳನ್ನು ನಗರ ಸೇರಿದಂತೆ ಅಕ್ಕ–ಪಕ್ಕದ ಜಿಲ್ಲೆಗಳಲ್ಲಿ ಉಪಯೋಗಿಸುತ್ತಿದ್ದ ಸಾರ್ವಜನಿಕರಿಂದ ಮರಳಿ ಪಡೆದಿದ್ದಾರೆ.

ಪತ್ತೆ ಹಚ್ಚಿದ್ದ ಮೊಬೈಲ್‌ಗಳನ್ನು ವಾರಸ್ದಾರರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಬುಧವಾರ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿತ್ತು. ಮೊಬೈಲ್‌ ಕಳೆದುಕೊಂಡ ಬೆಂಗಳೂರು, ಹಾವೇರಿ, ಗದಗ ಜಿಲ್ಲೆಯ ಸಾರ್ವಜನಿಕರು ಬಂದು, ತಮ್ಮ ಮೊಬೈಲ್‌ಗಳನ್ನು ಪಡೆದರು.

ಕಣ್ಣಂಚಲ್ಲಿ ನೀರು: ಕೀ ಪ್ಯಾಡ್‌ ಮೊಬೈಲ್‌ ಬಳಸುತ್ತಿದ್ದ ಆಶಾ ಕಾರ್ಯಕರ್ತೆ ಲಕ್ಷ್ಮಿ ಹರಕುಣಿ ಅವರು, ಸಾಲ ಮಾಡಿ ಆ್ಯಂಡ್ರಾಯ್ಡ್‌ ಮೊಬೈಲ್‌ ಖರೀಸಿದ್ದರು. ಒಂದು ತಿಂಗಳಲ್ಲೇ ಅದು ಮಾರುಕಟ್ಟೆಯಲ್ಲಿ ಕಳೆದು ಹೋಗಿತ್ತು. ಹೊಸದಾಗಿ ಖರೀದಿಸಿದ್ದ ಆ ಮೊಬೈಲ್‌ ಮೇಲೆ ಭಾವನಾತ್ಮ ಸಂಬಂಧವಿತ್ತು. ಮೊಬೈಲ್‌ ಮರಳಿ ಅವರ ಕೈ ಸೇರಿದಾಗ, ಕಣ್ಣಂಚಿನಿಂದ ನೀರು ಜಿನುಗಿತ್ತು.

ಕಳೆದುಕೊಂಡ ಮೊಬೈಲ್‌ ಪಡೆದ ಪ್ರಾಚಾರ್ಯ ಎಸ್.ಎಸ್. ಶ್ರೀನಿವಾಸ, ‘ನವೆಂಬರ್ ತಿಂಗಳಲ್ಲಿ ಮೊಬೈಲ್ ಕಳೆದುಕೊಂಡಿದ್ದೆ. ಗೋಕುಲರಸ್ತೆ ಠಾಣೆಗೆ ಭೇಟಿ ನೀಡಿ, ಮೊಬೈಲ್‌ನ ಐಎಂಇಐ ನಂಬರ್ ನೀಡಿ ದೂರು ನೀಡಿದ್ದೆ. ಏಳು–ಎಂಟು ತಿಂಗಳಲ್ಲಿ ಮೊಬೈಲ್‌ ಸಿಗುವ ಭರವಸೆ ನೀಡಿದ್ದರು. ಐಎಂಎಐ ನಂಬರ್ ಇದ್ದರೆ ಮಾತ್ರ ಮೊಬೈಲ್‌ ಸಿಗುವ ಸಾಧ್ಯತೆ ಹೆಚ್ಚು. ಎಲ್ಲೋ ಕಳೆದುಕೊಂಡ ಮೊಬೈಲ್ ಅನ್ನು, ಇನ್ನೆಲ್ಲೆಯೋ ಪತ್ತೆ ಹಚ್ಚಿ ಮರಳಿ ಕೊಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

1930ಗೆ ಕರೆ ಮಾಡಿ: ‘ಪ್ರತಿಯೊಬ್ಬರೂ ಮೊಬೈಲ್‌ ಬಳಕೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚುತ್ತಿವೆ. ಅದಕ್ಕೆ ತಕ್ಕ ಹಾಗೆ ಸೈಬರ್‌ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ. ಆನ್‌ಲೈನ್‌ನಲ್ಲಿ ಹಣಕಳೆದುಕೊಂಡಾಗ ತಕ್ಷಣ 1930 ಗೆ ಕರೆ ಮಾಡಿದರೆ, ಹಣ ವರ್ಗಾಯಿಸಿಕೊಂಡ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಜಾಗೃತರಾಗಿರಬೇಕು’ ಎಂದು ಡಿಸಿಪಿ ಕುಶಾಲ್‌ ಚೌಕ್ಸಿ ಹೇಳಿದರು.

‘ಕಳೆದುಹೋದ ಮೊಬೈಲ್ ಮರಳಿ ಪಡೆದಿದ್ದೀರಿ ಎಂದರೆ, ನೀವು ಅದೃಷ್ಟವಂತರು. ಯಾಕೆಂದರೆ, ಕಳುವಾದ ಮೊಬೈಲ್‌ನ ಐಎಂಇಐ ನಂಬರ್‌ ಅನ್ನು ಅಳಸಿ, ನಕಲಿ ನಂಬರ್‌ ಸೇರಿಸುತ್ತಾರೆ. ಆಗ ಮೊಬೈಲ್‌ ಪತ್ತೆ ಹಚ್ಚುವುದು ಕಷ್ಟ. ಮೊಬೈಲ್‌ನಲ್ಲಿ ಸಾಕಷ್ಟು ದಾಖಲೆಗಳು, ಸಂಪರ್ಕ ಸಂಖ್ಯೆಗಳು ಇರುತ್ತವೆ. ಅವುಗಳನ್ನು ಮರಳಿ ಪಡೆಯಬೇಕೆಂದರೆ ಕಷ್ಟದ ಕೆಲಸ. ಮೊಬೈಲ್‌ ಕಳೆದುಕೊಂಡರೆ ತಕ್ಷಣ ಸಿಇಐಆರ್‌ ಪೋರ್ಟಲ್‌ನಲ್ಲಿ ಮಾಹಿತಿ ತುಂಬಿ, ದೂರು ದಾಖಲಿಸಬೇಕು’ ಎಂದು ಎಸಿಪಿ ಶಿವಪ್ರಕಾಶ ನಾಯ್ಕ ಸಲಹೆ ನೀಡಿದರು.

ಎಸಿಪಿಗಳಾದ ವಿನೋದ ಮುಕ್ತೇದಾರ, ಯಲ್ಲಪ್ಪ ಒಡೆಯರ, ಇನ್‌ಸ್ಪೆಕ್ಟರ್‌ಗಳಾದ ಬಿ.ಕೆ. ಪಾಟೀಲ, ರಾಘವೇಂದ್ರ ಹಳ್ಳೂರ, ಜಯಂತ ಘಂಟಿ, ಪಿಎಸ್‌ಐ ರಮೇಶ ಪಾಟೀಲ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

‘ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ’

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಸಾರ್ವಜನಿಕರು ಅವಳಿನಗರದಲ್ಲಿ ಕಳೆದುಕೊಂಡ ಸಾವಿರಾರು ಮೊಬೈಲ್‌ಗಳಲ್ಲಿ ಶೇ 20ರಷ್ಟು ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸ್ದಾರರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ತಿಳಿಸಿದರು. ‘ಮೊಬೈಲ್‌ ಅನ್ನೋದು ಪುಟ್ಟ ಜಗತ್ತು. ಅದರೊಳಗೆ ಎಷ್ಟೋ ದಾಖಲೆಗಳು ಮಾಹಿತಿಗಳು ಅಡಕವಾಗಿರುತ್ತವೆ. ಬೆರಳಂಚಿನಲ್ಲಿಯೇ ಅವು ನಮಗೆ ಲಭ್ಯವಾಗುತ್ತ ಇರುತ್ತವೆ. ಅಂತಹ ಸಾಧನ ಕಳೆದುಹೋಯ್ತು ಅಂದರೆ ದಿಕ್ಕು ತೋಚದಂತಾಗುತ್ತೇವೆ. ವಿವಿಧ ಸನ್ನಿವೇಶಗಳಲ್ಲಿ ಕಳೆದುಕೊಂಡ ಕೆಲವು ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ’ ಎಂದರು. ‘ಮೊಬೈಲ್‌ನಲ್ಲಿ ಬ್ಯಾಂಕ್‌ ಪಾಸ್‌ವರ್ಡ್‌ ವೈಯಕ್ತಿ ಮಾಹಿತಿಗಳು ಇರುತ್ತವೆ. ಅದು ಸಮಾಜ ಘಾತುಕ ಶಕ್ತಿಗಳಿಗೆ ಭಯೋತ್ಪಾದಕರಿಗೆ ಸಿಕ್ಕರೆ ಏನಾಗಬಹುದು? ಕಳೆದುಕೊಂಡ ತಕ್ಷಣ ಸಿಇಐಆರ್‌ ಪೋರ್ಟಲ್‌ನಲ್ಲಿ ದೂರು ದಾಖಲಿಸಿ ಸಂಭವನೀಯ ಅಪಾಯದಿಂದ ಪಾರಾಗಬೇಕು. ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿ ತಕ್ಷಣದ ಪರಿಹಾರ ಪಡೆಯಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT