ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೇಹಾ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಶಾಸಕ ಶ್ರೀನಿವಾಸ ಮಾನೆ

Published 21 ಏಪ್ರಿಲ್ 2024, 8:19 IST
Last Updated 21 ಏಪ್ರಿಲ್ 2024, 8:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ನೇಹಾ ಕೊಲೆ ಪ್ರಕರಣದ ಆರೋಪಿ ಅನ್ಯ ಕೋಮಿನವನಾಗಿದ್ದಾನೆ. ಲೋಕಸಭಾ ಚುನಾವಣೆ ಸಮಯ ಆಗಿರುವುದರಿಂದ ಕೆಲವರು ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ' ಎಂದು ಹಾನಗಲ್ ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಅಸಮಾಧಾನ ವ್ಯಕ್ತಪಡಿಸಿದರು.

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಹೆಣ್ಣುಮಗಳ ಕೊಲೆ ಪ್ರಕರಣದಲ್ಲಿ ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸಿ, ಹೇಳಿಕೆಗಳನ್ನು ನೀಡಬೇಕು. ಅವಳ ಕುಟುಂಬ ದುಃಖದಲ್ಲಿದೆ. ನಾವೆಲ್ಲರೂ ಮಾನವೀಯತೆಯಿಂದ ಧೈರ್ಯ ತುಂಬುವ ಕೆಲಸ ಮಾಡಬೇಕೆ ಹೊರತು, ಕುಟುಂಬ ದುಃಖವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು' ಎಂದು ವಿನಂತಿಸಿದರು.

'ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ. ಇವುಗಳಿಗೆ ಕಡಿವಾಣ ಹಾಕಲು ಕಾನೂನು ತಿದ್ದುಪಡಿ ಮಾಡಿ, ಸೂಕ್ತ ಕಾನೂನು ಜಾರಿಯಾಗಬೇಕು. ಅಪರಾಧ ಮಾಡುವ ಮನಸ್ಸುಗಳನ್ನು ಅಧೈರ್ಯಗೊಳಿಸುವ ಕಠಿಣ ಕಾನೂನು ಬರಬೇಕು. ಈ ಕುರಿತು ಸೂಕ್ತ ವೇದಿಕೆಯಲ್ಲಿ ಪ್ರಸ್ತಾವ ಮಾಡುತ್ತೇನೆ' ಎಂದರು.

'ಆರೋಪಿ ಫಯಾಜ್ ಪರ ಯಾವೊಬ್ಬ ವಕೀಲರು ವಾದ ಮಂಡಿಸಬಾರದು. ಅಪರಾಧ ಮಾಡಿದರೆ ಉಳಿಸುವವರು ಯಾರೂ ಇಲ್ಲಾ ಅನ್ನುವ ಮನೋಭಾವನೆ ಮೂಡಬೇಕು' ಎಂದರು.

'ವೈಯಕ್ತಿಕ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತವೆ ಎಂದು ಸಿಎಂ ಹೇಳಿರುವುದರಲ್ಲಿ ಯಾವ ತಪ್ಪಿಲ್ಲ. ವೈಯಕ್ತಿಕ ಎಂದರೆ, ಒಬ್ಬ ವ್ಯಕ್ತಿಯ ಕಡೆಯಿಂದ ಆಗಿರಬಹುದು, ವ್ಯಕ್ತಿ ತನ್ನ ಆಸೆ ಈಡೇರಿಸಿಕೊಳ್ಳಲು ಆಗದಿದ್ದಾಗ ಹೀಗೆ ಆಗಿರಬಹುದು. ಸಿಎಂ ಹೇಳಿಕೆ ವಿರೋಧಿಸುವವರು ಸರಿಯಾಗಿ ಅರ್ಥೈಸಿಕೊಳ್ಳಬೇಕು' ಎಂದರು.

'ತುಷ್ಟೀಕರಣ ರಾಜಕಾರಣದಿಂದ ಇಂತಹ ಘಟನೆ ಹೆಚ್ಚುತ್ತಿವೆ' ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಮಾನೆ, 'ಕಾಂಗ್ರೆಸ್'ನಲ್ಲಿ ಇರುವ ಪ್ರತಿಯೊಬ್ಬರ ರಕ್ತದ ಪ್ರತಿ ಕಣದಲ್ಲಿಯೂ ಬಸವ ತತ್ವವಿದೆ. ವಿಕೃತ ಮನಸ್ಸು ಇರುವವರು ಪಕ್ಷದಿಂದ ಹೊರಗೆ ಇರುತ್ತಾರೆ. ನಮ್ಮದು ಬಿಡಿ, ಅಂಜುಮನ್ ಸಂಸ್ಥೆ ಸೇರಿದಂತೆ, ಇಡೀ ಮುಸ್ಲಿಂ ಸಮುದಾಯವೇ, ನೇಹಾ ಕುಟುಂಬದ ಪರವಾಗಿ ನಿಂತಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT