ಶನಿವಾರ, ಫೆಬ್ರವರಿ 4, 2023
17 °C
ಪೂಜೆಗೆ ಮೊದಲೇ ಕರಗಿದ ಗಣೇಶ!

ಗಣೇಶನ ಹಬ್ಬಕ್ಕೆ ಮಳೆ ತಂದಿಟ್ಟ ಅವಾಂತರ; ಮಣ್ಣಿನ ಮೂರ್ತಿ ತಯಾರಿಕೆಗೆ ನಷ್ಟ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಮನೆಮನೆಗೆ ಗಣೇಶ ಬರಲು ಮೂರೇ ವಾರಗಳುಳಿದಿವೆ. ಆದರೆ ನಿರಂತರ ಮಳೆ ಗಣೇಶನ ಹಬ್ಬದ ಮೇಲೆ ಪರಿಣಾಮ ಬೀರುತ್ತಿದೆ. ಗಣೇಶ ಹಬ್ಬಕ್ಕೆ ಸಿದ್ಧಪಡಿಸಿಟ್ಟಿರುವ ಮಣ್ಣಿನ ಗಣೇಶ ಮೂರ್ತಿಗಳು ಮಳೆಯ ತೇವಾಂಶ ಹೀರಿಕೊಂಡು ಕುಸಿಯುವುದರ ಜೊತೆಗೆ, ಮಳೆ ನೀರಿಗೆ ಸಿಲುಕಿ ಕುಂತಲ್ಲೇ ಕರಗಿ ಹೋಗುತ್ತಿವೆ. ಅವಳಿನಗರದ ಗಣೇಶ ಮೂರ್ತಿ ತಯಾರಕರಿಗೆ ನಷ್ಟವನ್ನು ತಂದಿಟ್ಟಿದೆ.

ಮೂರ್ತಿ ತಯಾರಿಕೆಗೆ ವರ್ಷವಿಡೀ ಮನೆಮಂದಿ ಜೊತೆಗೂಡಿ ಹಾಕಿದ ಶ್ರಮ ನೀರಲ್ಲಿ ಕರಗಿದೆ. ಗಣೇಶ ಮೂರ್ತಿಗಳು ಮೊದಲ ಹಂತದ ಕೋಟಿಂಗ್‌ ಹೊದ್ದು, ಅಂತಿಮ ಹಂತದ ಬಣ್ಣ ಹಾಗೂ ಅಲಂಕಾರ ಮಾತ್ರ ಬಾಕಿ ಉಳಿಸಿಕೊಂಡಿದ್ದವು. ಆದರೆ ಮಳೆಯ ತೇವಾಂಶಕ್ಕೆ ಮೆತ್ತಗಾಗಿ ಕೈ, ಕಾಲು ಕಳಚಿಕೊಳ್ಳುತ್ತಿವೆ. ಮಳೆ ನೀರು ನುಗ್ಗಿ ಮೂರ್ತಿಗಳು ಕುಸಿದು ಬೀಳುತ್ತಿದೆ. ಹೆಚ್ಚಿನವು ಸರಿಪಡಿಸಲಾಗದಷ್ಟು ಹಾನಿಗೊಳಗಾಗಿವೆ. ಕೈ, ಕಾಲು ಕಳಚಿದ ಮೂರ್ತಿಗಳ ದುರಸ್ತಿಗಾಗಿ ಕಲಾವಿದರು ಮತ್ತೆ ಶ್ರಮ, ಸಮಯ ನೀಡುವಂತಾಗಿದೆ. ಹಬ್ಬಕ್ಕೆ ಮೂರು ವಾರಗಳು ಅವರ ಪಾಲಿಗೆ ಅಮೂಲ್ಯವೆನಿಸಿರುವಾಗ ದೊಡ್ಡ ಹೊಡೆತವನ್ನೇ ನೀಡಿದೆ. ಮತ್ತೆ ಕೋಟಿಂಗ್‌ ಮಾಡಿ, ಬಣ್ಣ ಬಳಿದು, ಅಲಂಕಾರ ಮಾಡಬೇಕಿರುವುದರಿಂದ ಮೂರ್ತಿ ತಯಾರಿಕೆ ವೆಚ್ಚ ದುಪ್ಪಟ್ಟಾಗುತ್ತಿವೆ. ಈ ಖರ್ಚನ್ನು ಗ್ರಾಹಕರು ಪರಿಗಣಿಸದಿರುವುದರಿಂದ ಕಲಾವಿದರ ಪಾಲಿಗೆ ದೊಡ್ಡ ನಷ್ಟವಾಗಿ ಪರಿಣಮಿಸಲಿದೆ.

’25 ವರ್ಷದ ಮೂರ್ತಿ ತಯಾರಿಕಾ ಅನುಭವದಲ್ಲಿ ಮಳೆಯಿಂದ ಹಾನಿಯಾದ ಅನುಭವ ಇದೇ ಮೊದಲು. ಥಂಡಿ ಹಿಡಿದ ಮೂರ್ತಿಗಳ ಒಣಗಿಸಲು ಅಡುಗೆ ಅನಿಲ ಹೀಟರ್‌, ಇದ್ದಲು ಬಳಸಲಾಗುತ್ತಿದೆ. ತಮ್ಮಲ್ಲಿರುವ ಮೂರ್ತಿಗಳನ್ನು ಒಣಗಿಸಲು 30 ಸಿಲಿಂಡರ್‌ಗಳೇ ಬೇಕಾಗಲಿದೆ. 500 ಕೆ.ಜಿ. ಇದ್ದಿಲು ಬೇಕಾಗಬಹುದು. ತೇವಾಂಶದಿಂದ ಕಳೆಗುಂದುವ ಕೋಟಿಂಗ್‌ ಮತ್ತು ಬಣ್ಣವನ್ನು ಮತ್ತೆ ಬಳಿಯಬೇಕಿದೆ‘ ಎಂದು ಪರಿಸರಸ್ನೇಹಿ ಗಣೇಶ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ತಮ್ಮ ಅಳಲನ್ನು ವ್ಯಕ್ತಪಡಿಸಿದರು.

’ಕೃಷಿಯಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾದಾಗ ಸರ್ಕಾರದಿಂದ ಪರಿಹಾರ ಸಿಗಲಿವೆ. ನಾವೂ ಹೆಚ್ಚಿನ ಲಾಭವನ್ನು ನಿರೀಕ್ಷಿಸದೇ ಪರಿಸರ ಕಾಳಜಿಗಾಗಿ ಪರಿಸರಸ್ನೇಹಿ ಮಣ್ಣಿನ ಮೂರ್ತಿ ತಯಾರಿಸುತ್ತಿದ್ದೇವೆ. ನಮಗಾದ ನಷ್ಟವನ್ನೂ ಅತಿವೃಷ್ಟಿ ಹಾನಿಯಲ್ಲಿ ಪರಿಗಣಿಸಿ, ಸರ್ಕಾರದಿಂದ ಪರಿಹಾರ ನೀಡುವಂತಾಗಬೇಕು‘ ಎಂಬುದು ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಮಣ್ಣಿನ ಮೂರ್ತಿ ತಯಾರಕರ ಒತ್ತಾಯವಾಗಿದೆ.

*
ಎರಡು ದಿನಗಳಲ್ಲಿ ಎರಡೆರಡು ಬಾರಿ ಕೆರೆ ನೀರು ನುಗ್ಗಿ 50ರಷ್ಟು ಗಣೇಶ ಮೂರ್ತಿಗಳು ಕರಗಿಹೋಗಿವೆ. ಥಂಡಿ ಹಿಡಿದಿದ್ದವನ್ನು ಕೃತಕವಾಗಿ ಒಣಗಿಸುವುದರಿಂದ ಮೂರ್ತಿಗಳಲ್ಲಿ ಬಿರುಕು ಮೂಡಲಿದೆ.
- ಮೌನೇಶ ಕಮ್ಮಾರ ನವಲೂರ, ಮೂರ್ತಿ ತಯಾರಕ ಕಲಾವಿದ

*
ಹಗಲಿರುಳು ಕಷ್ಟಪಟ್ಟು ಮಾಡಿದ್ದ 40 ಗಣಪತಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಪಾಲಿಕೆ ಮೊದಲೇ ಎಚ್ಚರಿಕೆ ವಹಿಸಿದ್ದರೆ ಉಣಕಲ್‌ ಕೆರೆಯ ಕೋಡಿ ಬಿದ್ದ ನೀರು ನಮ್ಮ ಮನೆ ಒಳಗೆ ಬರುತ್ತಿರಲಿಲ್ಲ.
-ಪರಶುರಾಮ ಗಂಗಾಧರ ಕಾಂಬ್ಳೆ, ಮೂರ್ತಿ ತಯಾರಕರು, ಲಿಂಗರಾಜನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು